ಪುಸ್ತಕ ವಿಮರ್ಶೆ

ವಿರಹಿ ದಂಡೆ

ವಿರಹಿ ದಂಡೆ ( ಕವನ ಸಂಕಲನ )
ಲೇಖಕ: ನಾಗರಾಜ್ ಹರಪನಹಳ್ಳಿ
ನೌಟಂಕಿ ಪ್ರಕಾಶನ
ಬೆಲೆ – 80

ವಿರಹಿ ದಂಡೆಯ ವಿಹಾರವ ಹೊತ್ತು….

ಪ್ರಕೃತಿಯನ್ನು ತನ್ನೊಳಗೆ ಆವಾಹಿಸಿಕೊಂಡು ಆ ಆವಾಹನೆಯಲ್ಲಿ ವಿವಿಧ ತೆರನಾದ ತುಮುಲಗಳನ್ನು ಅನುಭವಿಸಿ ಕೊಳ್ಳುವುದು ಒಂದು ಅಪರೂಪದ ಪ್ರಕ್ರಿಯೆ. ಅದು ಜಗತ್ತಿನಲ್ಲಿ ವಿಜ್ಞಾನಿ ಗಳಿಗಿಂತ ಕವಿಗಳಿಗೆ ಸುಲಭವಾಗಿ ಸಾಧ್ಯವಾಗುವಂತದ್ದಾಗಿದೆ. ಪ್ರಕೃತಿ ತನ್ನೊಳಗೆ ಅಡಗಿಸಿಕೊಂಡಿರುವಂತಹ ಸರ್ವ ಪರಿಕರಗಳೂ ಕೂಡ ಕವಿಯ ಆಸ್ತಿಯಂತೆ. ತನ್ನ ಕಲ್ಪನೆಗೆ ಅನುಭವಕ್ಕೆ ಬೇಕಾದಾಗ ಪ್ರಕೃತಿಗೆ ಹಾಗೂ ಪ್ರಕೃತಿಯ ವಸ್ತುಗಳಿಗೆ ಬಣ್ಣ ಕೊಟ್ಟಿಕೊಳ್ಳುವ ಕವಿ ಅಸಮಾನ್ಯನೇ ಸರಿ. ಆದರೂ ಎಲ್ಲರಿಗೂ ಪ್ರಕೃತಿಯೊಡನೆ ಒಂದಾಗುವುದು, ವರ್ಷಾನುಗಟ್ಟಲೆ ಮಾತಿಗಿಳಿಯುವುದು ಕಷ್ಟಕರವೇ. ಅಂತಹ ಕಷ್ಟಪರರ ಆಚೆ ನಿಂತು ತನ್ನ ಐಚ್ಛಿಕದ ಪ್ರಪಂಚದಲ್ಲಿ ಆಪ್ತ ಭಾವಗಳ ಬಲೆಯೊಳಗೆ ತನ್ನನ್ನೂ, ತನ್ನದನ್ನೂ ಹಾಗೂ ತನ್ನವರನ್ನು ಬರಸೆಳೆದ ಕವಿ ನಾಗರಾಜ ಹರಪನಹಳ್ಳಿಯವರು. ಅವರ ಎರಡನೇ ಕವನ ಸಂಕಲನ ವಾದ “ವಿರಹಿ ದಂಡೆ” ಯೊಂದಿಗೆ ವಿಹಾರದ ವಿವರಗಳ ಹೊತ್ತು ನಲಿದ ಸಂತ್ರಪ್ತ ಕ್ಷಣವಿದು ಚಂದ.

ಕವನ ಸಂಕಲನದ ” ವಿರಹಿ ದಂಡೆ” ಶೀರ್ಷಿಕೆಯೇ ಆಕರ್ಷಣೀಯ. ‘ವಿರಹ ನೂರು ತರಹ’ ಎಂಬ ಸಿನಿಮಾದ ಹಾಡಿನ ಸಾಲಿನಂತೆ ಜಗದ ಎಲ್ಲರನ್ನೂ ಬೆಂಬಿಡದೆ ಒಮ್ಮೆಯಾದರೂ ಕಾಡುವ ವಿರಹಿತನದ ಸುಂದರವಾದ ಗುಟುಕನ್ನು ಮೆದುವಾಗಿ ಗಂಟಲಿಗಿಳಿಸಿಕೊಂಡಿದ್ದಾನೆ ಕವಿ. ಪ್ರಕೃತಿಯನ್ನೇ ಹೆಣ್ಣಾಗಿಸಿ, ಹೆಣ್ಣನ್ನೇ ಪ್ರಪಂಚದ ಸುಂದರ ಜೀವರೂಪಿಯಾಗಿ ಆರಾಧಿಸುವ ಕವಿತ್ವಕ್ಕೊಂದು ಸಲಾಂ ಸಲ್ಲಿಸಲೇಬೇಕು. ಆ ಮಗ್ಗಲು ಬದಲಿಸಿ ಪ್ರಕೃತಿಯನ್ನು ಬೊಗಸೆಯಲ್ಲಿ ಹಿಡಿದು ಗಾಳಿ, ಮಳೆ, ಬೆಳಕು, ಸಮುದ್ರದ ದಂಡೆಗಳೆಲ್ಲವನ್ನೂ ಆಟಿಕೆಯಂತೆ ಅನುಭವಿಸುವ ಕವಿಯ ತುಂಟತನ, ಪ್ರೀತಿಯನ್ನು ಬರೀ ಕಣ್ಣುಗಳಿಗೆ ಮಾತ್ರ ಸೀಮಿತವಾಗಿಸದೆ, ಕನಸುಗಳಲ್ಲಿ ಮಾತಾಡುವ ಪ್ರೀತಿ, ಪ್ರಣಯವನ್ನು ಪಕ್ಕಕ್ಕಿಟ್ಟು, ನಿಸರ್ಗ ಸಿದ್ಧವಾದ ಮಿಲನ ಮೈಥುನವನ್ನು ಬರೀ ಹೆಣ್ಣು-ಗಂಡಿಗೆ ಮಾತ್ರ ಸೀಮಿತವಾಗಿಸದೇ ಗಿಡ- ಮರಗಳಿಗೂ, ದಂಡೆ -ಕಡಲಿಗೂ ಕಂಡಲ್ಲಿ ಕಂಡಷ್ಟು ಪ್ರಕೃತಿಗೆ ಮಿಲನದ ಕಾತುರವಾಗುವ ಪುಣ್ಯಕಾಲವನ್ನು ಕವಿ ಎದೆಯೊಳಗೆ ತುಂಬಿಕೊಂಡಿದ್ದಾನೆ. ತನ್ನ ಪ್ರೀತಿಯ ಪರಾಕಾಷ್ಠೆಯನ್ನು ತುಂಬಾ ವಿಸ್ತಾರವಾಗಿ, ಬಾಹ್ಯವಾಗಿ ಅವಲತ್ತು ಕೊಂಡಿದ್ದು ಪ್ರೀತಿಯನ್ನು ಸದಾ ರಸಿಕತೆಯಲ್ಲಿ ಕಂಡ ಕವಿಗೆ ವಿರಹವನ್ನ ಸರಳ ಸುಲಭವಾಗಿ ಅನುಭವಿಸಲಾಗದು. ಸಾನಿಧ್ಯಕ್ಕೆ ಮುದ್ದಾಡಿದ, ಹೊರಳಾಡಿದ ಸುಖದ ತುತ್ತ ತುದಿಯ ಕೂಗಾಟ, ಬಿಸಿಯುಸಿರ ಉನ್ಮಾದದ ಯಾವುದೋ ಸುಖದಲ್ಲಿ ಕಳೆದುಹೋಗುವ ಕವಿಗೆ ವಿರಹ ಎಂಬುದೊಂದು ಮರೀಚಿಕೆಯೇ ಆಗಿರುವಾಗ ಒಮ್ಮೊಮ್ಮೆ ಕ್ಷಣಿಕ ವಿರಹವನ್ನು ಎದುರಿಸುವುದು ಕೂಡಾ ಅಸಾಧ್ಯವಾದ ಮಾತೇ ಆಗಿದೆ.

“ಭೂಮಿಯ ಬಿರುಕಿಗೆ ಬೆರಳಿಡುವೆ” ಕವಿತೆ ಸಾಕೆನಿಸುವಷ್ಟು ಶೃಂಗಾರವನ್ನು ತುಂಬಿಕೊಂಡಿದ್ದು, ರಸಿಕತೆಯ ಅನುಭವಿಸಿದ ಅವಕಾಶವಾದಿಗಳಿಗೆ ಏನೇನನ್ನೋ ಒಳಗೊಳಗೆ ಅನಿಸುವಷ್ಟು , ನಿರೀಕ್ಷಿಸುತ್ತಿರುವವರಿಗೆ ಆಸೆ ಹುಟ್ಟಿಸುವಂತಹ ಗಟ್ಟಿತನದ ಕವಿತೆ. ಸೃಷ್ಟಿಯ ಒಂದು ಮಿಲನದ ನೋಟವನ್ನು ಆಪ್ತ ಪದಗಳಿಂದ ಔಚಿತ್ಯ ಪೂರ್ಣವಾಗಿ ಓದುವವರಿಗೆ ಉಣಬಡಿಸುವ ಕಲೆಯೊಂದು ಕವಿಗೆ ಕರಗತವಾದಂತಿದೆ. ಕವಿತೆಯ ಕೊನೆಯಲ್ಲಿ

“ಭೂಮಿಯ ಬಿರುಕಿಗೆ ಬೆರಳಿಡುವುದೆಂದರೆ
ಗೆಲ್ಲುವುದು ಸೋಲುವುದು ಶರಣಾಗುವುದು ಒಂದಾಗುವುದು
ಉಳಿದದ್ದು?
ಉಳಿದದ್ದು ಏನು ಇಲ್ಲ…!!
ಭೂಮಿಯ ಎದುರು ಮತ್ತೆ ಮತ್ತೆ ಧ್ಯಾನಿಸುವುದು….”

ಕವಿಯ ಈ ಕಲ್ಪನೆಯು ತೀರಾ ಆಪ್ತವಾಗಿ ಮನತಟ್ಟುತ್ತದೆ.

ದೈನಿಕದಲ್ಲಿ ಬಹುತೇಕರು ರಾತ್ರಿ ಕನಸಿನಲ್ಲಿ ಕಾಣುವ ವಾಸ್ತವವಲ್ಲದಾದರೂ ಕ್ಷಣಿಕ ವಾಸ್ತವ ಎನಿಸುವ, ಆಪ್ತವೂ ದೂರವೂ ಆದಂತಹ ಕನಸು ಮತ್ತು ಮನಸ್ಸಿನ ತೊಯ್ದಾಟಗಳು, ಮಲಗಿದ್ದಾಗ ಕನಸು ಅನಾವರಣವಾಗುವ ಬಗೆ, ಅದರಲ್ಲಿ ದನಿಯೊಂದು, ಮುಖವೊಂದು, ಸ್ಥಳ ಇನ್ನೊಂದು ಆದರೆ ಆ ಕನಸಿನಲ್ಲಿ ನಾವು ಮಾತ್ರ ಪಕ್ಕಾ. ಕನಸೇ ಹೀಗೆ ಎಂಬುದು ನನ್ನ ವಾಸ್ತವಕ್ಕೂ ಬರುವಹಾಗೆ ಕಟ್ಟಿಕೊಟ್ಟ ಕವಿತೆಯು ಸಹ ಆಪ್ತವಾಗಿ ಕೈ ಹಿಡಿದುಬಿಡುತ್ತದೆ.

“ಕಣಿವೆ ತೋಳುಗಳಲಿ
ರಭಸದಿ ಹರಿವ ನದಿಗೆ
ಎದೆ ಕೊಟ್ಟ ಪರ್ವತ ಶೃಂಗಾರೋನ್ಮತ್ತ
ಕಾಮೋನ್ಮಾದದಿ ಮಿಂದ ನಗ್ನ ಭೂಮಿ
ನಗುನಗುತ್ತಾ ನಿದ್ದೆ ಹೋಗಿರಲು”

ರಾತ್ರಿ ಸುರಿದ ಮಳೆ ಕವಿಯ ಕಾವ್ಯ ಪ್ರಪಂಚಕ್ಕೆ ವಿಶಿಷ್ಟವಾಗಿದೆ. ಮಳೆ ಮತ್ತು ಪ್ರಥ್ವಿಯ ಬರಪೂರಿ ಮಿಲನವನ್ನು ಕವಿ ಕಂಡು ಉಂಡು ತೇಗಿದ್ದಾನೆ ತೇಗುತ್ತಿದ್ದಾನೆ. ಭೂಮಿ ಮತ್ತು ಮಳೆಯ ನಡುವಿನ ನಂಟು ಭೂಮಂಡಲದ ಚರಾಚರ ಜೀವರಾಶಿಗಳಿಗೆ ಅವಶ್ಯಕ. ಅದಕ್ಕೆ ಗಂಡು ಹೆಣ್ಣಿನ ಮಿಲನದಂತೆ ಹೋಲಿಕೆ ನೀಡಿ ಕವಿತೆಯ ಕೊನೆಯಲ್ಲಿ

“ಬೆವರುಂಡ ಗದ್ದೆಗಳು ಹಸಿರಾದವು”

ಎಂದು ಸತ್ಯವನ್ನೇ ಅರುಹಿದರೂ ಆ ತುಂಟತನದ ಸಾಲುಗೊಂದು ಸೋಜಿಗದ ಚಪ್ಪಾಳೆ ಸೇರಲೇ ಬೇಕು.

“ಸುಳಿವ ಗಾಳಿ ಯಲಿ
ಎರಡು ನಿಟ್ಟಿಸಿರುಗಳಿವೆ
ಅವು ಪ್ರೇಮದ ಪಲ್ಲವಿಗಳಾಗಿ ಬದಲಾಗಿ ಬಿಡಲಿ “

ಈ ಸಾಲುಗಳು “ಮೌನ” ಕವಿತೆಯಲ್ಲಿ ಮಿಂದೆಳುವಾಗ ವಿರಹದ ಆಳ ಅನುಭವಕ್ಕೆ ಬರುತ್ತದೆ.” ನಿನ್ನ ದನಿ ಕೇಳದ ಭೂಮಿಗೆ ಆಕಳಿಕೆಯ ಸಮಯ” ಹೀಗೆ ವಿರಹದ ವಾರ್ತೆ ಎದೆಯೊಳಗೆ ಆರಿದ ಕೆಂಡದಲಿ ಹಸಿ ಜೋಳದ ತೆನೆಗಳನಿಟ್ಟು ಬಿಸಿ ಜೋಳದ ತೆನೆಯ ತಿನ್ನಲಾಗದ ನಿರಾಶೆಯಂತೆ ವಿರಹ ಹಾದುಹೋಗುತ್ತದೆ.

ಕವನ ಸಂಕಲನದ ಪುಟಗಳಿಗೆ ಮೈಗಂಟಿಕೊಂಡ ರಾಶಿರಾಶಿ ಹನಿಗಳು ಓದುಗನ ಎದೆಯಮೇಲೆ ಇಬ್ಬನಿಯಂತೆ ಭಾಸವಾಗುತ್ತವೆ. ಅವು ಪದಕ್ಕೆ ಪದ ಸೇರಿ ಎದೆ ತಾಕಿಸಿ ಮೆಲ್ಲಗೆ ಮಾಯವಾದರೂ ಮತ್ತೆ ಬೇಕೆನಿಸುವಷ್ಟು ಸಂಜೆಯ ಕಾಂದಾ ಬಜಿಗಳಂತೆ ಅನಿಸುವವು.

“ಬಯಲ ಗಾಳಿ
ಮನೆ-ಮನಗಳ ಸುಖ-ದುಃಖ ಮಾತಾಡಿಸಿ ಹೋಯಿತು”

ಯಾರದೋ ಮನೆವಾರ್ತೆಗೆ ಸಾಕ್ಷಿಯಾಗುವ ಗಾಳಿ ಕವಿಯೊಳಗೆ ಸಜೀವ ಸಹೃದಯ ವ್ಯಕ್ತಿಯಂತೆ ಭಾಸವಾಗುವ ಪರಿ ಅದ್ಭುತವಾದದ್ದು. ಒಂದು ತುಂಟತನ, ಅವ್ಯಕ್ತ ಭಾವ, ಸೂಕ್ಷ್ಮತೆಯ ಅನಾವರಣಗಳ ಅಭಿವ್ಯಕ್ತತೆಯನ್ನು ಕ್ಷಣದಲ್ಲೇ ಮೈಮನಕ್ಕೆ ಹಾಯಿಸಿ ನಿರಾಳವಾಗುವ ನಾಗರಾಜರವರ ಹನಿಗಳು ಮೋಡಿ ಮಾಡುವಂಥವುಗಳಾಗಿವೆ.

“ಚಂದ್ರ ಮೈತುಂಬಿ ಬಳುಕಿದ ನಿನ್ನ ನೆನಪಾಯಿತು”

” ಬಣ್ಣದ ಸೀರೆ ತೊಟ್ಟು ಮಧುಮಗಳಂತೆ ಕಾದದ್ದೇ ಆತು ವಿರಹ ವಿರಹಕ್ಕೆ ಪ್ರೇಮ ಬರೆಯುವುದುಂಟೇ? “

ಪ್ರೇಮದ ಫಲಿತಾಂಶಗಳಲ್ಲಿ ವಿರಹವು ಒಂದು ಭಾಗ. ಕೆಲವೊಮ್ಮೆ ಅದು ಸಂಪೂರ್ಣವಾಗುವುದೂ ಕೂಡ ಇದೆ. ಆದರೆ ಇಂತಹದೇ ವಿರಹಗಳ ಒಳಗೆ ಮತ್ತೆ ಪ್ರೇಮ ವಾಗಬೇಕೆಂದು ಕಾಯುವುದು ಹೊಸತನ.

ಹೀಗೆ ‘ವಿರಹಿ ದಂಡೆ’ ಕವನ ಸಂಕಲನದುದ್ದಕ್ಕೂ ಪ್ರಕೃತಿ, ಪ್ರೇಮ, ವಿರಹ, ಕನಸು, ನಿರೀಕ್ಷೆ , ಆಸೆ-ಆಕಾಂಕ್ಷೆ , ಅಮಲು, ತುಮುಲ, ಬಲ,ಸಕಲಗಳನ್ನು ತನ್ನದಾಗಿಸಿಕೊಂಡು ವಿಶೇಷ ಪದಪುಂಜದಲಿ ಅವುಗಳನ್ನು ಅಚ್ಚಾಗಿಸಿ ತನ್ನೆದೆಯ ಒಳಗೆ ವಿಶೇಷ ಇತಿಹಾಸವನ್ನೇ ಸೃಷ್ಟಿ ಮಾಡಿಕೊಂಡು ಜಾಗೃತವಾದ ಸಾಹಿತ್ಯ ಆಸಕ್ತಿಯನ್ನು ಬೆಳೆಕಾಗಿಸಬೇಕೆಂಬ ಕವಿಯ ಪ್ರಯತ್ನ ಸಫಲವಾಗಿದೆ. ತೀರಾ ಗಂಭೀರ ಶೈಲಿಯಲ್ಲಿ ಓದಿದಾಗ ಕವಿತೆಗಳು ಮುಖ ಊದಿಸಿಕೊಂಡು ಸಿಟ್ಟುಗೊಳ್ಳುತ್ತವೆ. ತೀರಾ ಒಳಗಣ್ಣಿನಿಂದ ಬಾಲ್ಯ, ಹರೆಯಗಳ ತುಂಟಾಟಗಳಿಗೆ ಅವಕಾಶವಿತ್ತು ಕವಿತೆಗಳನ್ನು ಆಸ್ವಾದಿಸುವಾಗ ಹೊಸ ತರದ ಪ್ರೇಮ, ವಿರಹ, ಪ್ರಣಯ ಇತ್ಯಾದಿಗಳ ಹಿತವಾದ ಪರಿಧಿಯೊಂದು ಮನಸ್ಸಿನ ಪರದೆ ಸರಿಸಿ ನಸುನಗುತ್ತದೆ. ಒಟ್ಟಾರೆಯಾಗಿ ಕಾವ್ಯ ಪ್ರಪಂಚಕ್ಕೆ ವಿರಹವನ್ನೂ ಸಲಿಗೆಯಾಗಿ ಒಲವಾಗಿ ಉಣಬಡಿಸುವ ಕವಿಯ ಪ್ರಯತ್ನ ಅದ್ಬುತವಾದಂತದ್ದು.

*******

ಮೋಹನ್ ಗೌಡ ಹೆಗ್ರೆ

3 thoughts on “ಪುಸ್ತಕ ವಿಮರ್ಶೆ

  1. ವಿರಹಿ ದಂಡೆಯನ್ನು ನವಿರು ದಂಡೆಯಾಗಿಸಿ ಮುಡಿಗಿಟ್ಟಂತ ಬರಹ. ಅಭಿನಂದನೆ ಕವಿ ಗೆಳೆಯ ನಾಗರಾಜ್ ಹರಪನಹಳ್ಳಿಯವರಿಗೂ ಮತ್ತು ಕವಿಯ ಕವಿತೆಗಳ ಒಳಹೊಕ್ಕು ಕನ್ನಡಿ ಹಿಡಿದ ಮತ್ತೊಂದು ಕವಿಮನ ಮೋಹನ ಗೌಡ ರವರಿಗೂ..

    1. ಕವನಗಳಷ್ಟೆ ರಸಿಕತೆ,ಲವಲವಿಕೆಯಿಂದ ತುಂಬಿದೆ ವಿಮರ್ಶೆ.

Leave a Reply

Back To Top