‘ವಾಲ್ಮೀಕಿಯ ಸೀತಾಯಾಮ ಇಂದಿಗೆ’ವಿಶೇಷ ಲೇಖನ ಲೋಹಿತೇಶ್ವರಿ ಎಸ್ ಪಿ

ವಾಲ್ಮೀಕಿಯ ರಾಮಾಯಣ ಹಿಂದೂ ಧರ್ಮದಲ್ಲಿ ಪವಿತ್ರಗ್ರಂಥವಾಗಿ ಪರಿಗಣಿಸಲ್ಪಟ್ಟಿದೆ. ಅಂತೆಯೇ ನಮ್ಮ ಪ್ರಾಚೀನ ಕವಿಗಳು ಅನೇಕ ಆಯಾಮಗಳಿಂದ ರಾಮಾಯಣವನ್ನು ಗ್ರಹಿಸುವ ಮಾದರಿಯನ್ನು ರೂಪಿಸಿಕೊಟ್ಟಿದ್ದಾರೆ. ವಾಲ್ಮೀಕಿಯ ರಾಮಾಯಣಕ್ಕೂ, ನಾಗಚಂದ್ರನ ರಾಮಾಯಣಕ್ಕೂ ಬಹಳ ವ್ಯತ್ಯಾಸವಿದೆ. ಹಾಗೆಯೇ, ನಾಗಚಂದ್ರ, ಲಕ್ಷ್ಮೀಶ, ಕುವೆಂಪು ಮೊದಲಾದ ಕವಿಗಳು ರಾಮಾಯಣದ ವಿಚಾರಗಳನ್ನು ಅನುಸರಿಸಿ ರಚಿಸಿರುವ ಬರೆಹಗಳು ಸಹೃದಯರಲ್ಲಿ ಭಿನ್ನ ಅಭಿಪ್ರಾಯ ಮೂಡಿಸಿವೆ. ಕೆಲವು ಪಾತ್ರಗಳು ಮನಸಿಗೆ ಹಿಡಿಸಿದಾಗ ಅವುಗಳ ಬಗೆಗಿನ ಕತೆಗಳು ರಾಮಾಯಣದ ಛಾಯೆಯನ್ನೇ ಬದಲಿಸುವಂತೆ ಪರಿಣಮಿಸುತ್ತದೆ (ಓದಿದಾಗ ಮಾತ್ರ). ವಾಲ್ಮೀಕಿಯ ರಾಮಾಯಣ ಪದೇಪದೇ ಮರುನಿರೂಪಣೆಗೊಳ್ಳುತ್ತಾ ಓದುಗರಿಗೆ ಹೊಸಹೊಸ ಚಿಂತನೆಯ ಆಯಾಮಗಳನ್ನು ಒದಗಿಸುತ್ತಿದೆ.

ರಾಮಾಯಣದಲ್ಲಿ ಶ್ರೀರಾಮಚಂದ್ರನೇ ಪ್ರಮುಖ ಎಂದು ಈಗಾಗಲೇ ಎಲ್ಲರೂ ಪರಿಗಣಿಸಿದ್ದಾರೆ. ಲಕ್ಷ್ಮಣ, ಸೀತೆ, ದಶರಥ, ಕೈಕೆ, ಮಂಥರೆ, ಹನುಮಂತ ಮೊದಲಾದ ಪಾತ್ರಗಳೂ ಪ್ರಮುಖವೇ. ಒಂದೊಂದು ಪಾತ್ರಗಳು ಒಂದೊಂದು ಕತೆಯನ್ನು ಹೇಳುತ್ತವೆ. ಒಂದೊಂದು ಪಾಠವನ್ನು ಕಲಿಸುತ್ತವೆ. ತಂದೆಯ ಮಾತನ್ನು ಪಾಲಿಸುವ, ಅಣ್ಣನಿಗೆ ಜೊತೆಯಾಗಿರುವ, ಗಂಡನ ಸುಖದುಃಖದಲ್ಲಿ ಭಾಗಿಯಾಗುವ, ಭಕ್ತಿ, ದುರಾಸೆ ಈ ಎಲ್ಲದರ ಪರಿಣಾಮವನ್ನು ಒಂದೊಂದು ಪಾತ್ರಗಳು ಅದ್ಭುತವಾಗಿ ವಿವರಿಸುತ್ತವೆ. ಆದರೂ ಕೊಂಚ ಗಮನ(ನನ್ನ)ಸೆಳೆದ ಪಾತ್ರವೆಂದರೆ ಸೀತೆಯದು. ಮಾತು ಎಂದರೆ ಮಾತೆಯರು ಎಂದು ನಕಾರಾತ್ಮಕ ದೃಷ್ಟಿಯಲ್ಲಿ ಕಾಣುವ ಇಂದಿನ ಕಾಲದಲ್ಲಿ ಮಾತಿನ ಪರಿಣಾಮ, ಮಹತ್ವ ತಿಳಿಯುವುದು ಇಂತಹ ಕೆಲವು ಸಂಗತಿಗಳನ್ನು ನೆನಪಿಸಿಕೊಂಡಾಗಲೆ. ಮಾತಿಗಿರುವ ಮಹತ್ವವೇ ಅಂತಹದೇ ಮಾತನಾಡದೆ ಹೋದರೆ ಏನೆಲ್ಲಾ ಅನರ್ಥಗಳು ಉಂಟಾಗುತ್ತವೆ. ಏನೆಲ್ಲಾ ಪರಿಣಾಮಗಳು ಬೀರುತ್ತವೆ. ಬದುಕಿನ ಪಥ ಎತ್ತಲಿಂದ ಎತ್ತ ಸಾಗುತ್ತದೆ ಎಂಬ ಎಲ್ಲಾ ವಿಷಯಗಳು
ನಮ್ಮ ಗಮನಕ್ಕೆ ಬರುತ್ತದೆ. ಇಲ್ಲಿ ಯಾವ ಪಾತ್ರಗಳನ್ನು ಕಡಿಮೆ ಮಾಡಿ ಮಾತನಾಡುವ ಉದ್ದೇಶವಿಲ್ಲ. ಸೀತೆಯ ಪಾತ್ರದ ಮೂಲಕ ಇಂದಿನ ದಿನಮಾನದಲ್ಲಿ ಮಾತಿನ ಮಹಿಮೆ ಅದರಲ್ಲೂ ಹೆಣ್ಣುಮಕ್ಕಳು ಮಾತನಾಡುವ ಅವಶ್ಯಕತೆ ಎಷ್ಟಿದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.

೨೪೦೦೦ ಶ್ಲೋಕಗಳು ಹಾಗೂ ೭ ಕಾಂಡಗಳಿಂದ ಕೂಡಿರುವ ಈ ಗ್ರಂಥದಲ್ಲಿ ಹೆಣ್ಣನ್ನ ಹೆಂಡತಿಯ ಪಾತ್ರದಲ್ಲಿ ಕವಿ ತುಂಬಾ ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ. ಅರಣ್ಯಕಾಂಡದಲ್ಲಿ ವನವಾಸದಲ್ಲಿ ರಾಮನ ಜೀವನ, ಸೀತೆಯ ಅಪಹರಣವನ್ನು, ಉತ್ತರಕಾಂಡದಲ್ಲಿ ರಾಮ, ಸೀತೆ ವನವಾಸದಲ್ಲಿ ನಂತರ ಅಯೋಧ್ಯೆಯಲ್ಲಿ ಕಳೆದ ದಿನಗಳು. ಅಗಸನ ಮಾತಿನ ಕಾರಣದಿಂದಾಗಿ ಸೀತೆಯನ್ನು ರಾಮ ಕಾಡಿಗಟ್ಟುವುದು, ಕಾಲಾಂತರದಲ್ಲಿ ರಾಮಾವತಾರ ಸಮಾಪ್ತಿಗೊಂಡ ವಿವರಗಳಿವೆ. ಇಲ್ಲಿ ಪತಿಯನ್ನೆ ದೇವರು ಎಂದು ಆರಾಧಿಸುವ, ಪತಿಯೇ ಸರ್ವಸ್ವವೆಂದು ಪರಿಭಾವಿಸುವ, ಪತಿಯ ಆಜ್ಞೆಗೆ ತಲೆಬಾಗುವ, ಪತಿವ್ರತೆಯಾಗಿ ಸೀತೆ ಇಂದಿನ ದಿನಗಳಲ್ಲಿಯೂ ಸಹ ಪ್ರಸ್ತುತವಾಗಿದ್ದಾಳೆ. ಇದ್ದರೆ ಸೀತೆಯಂತೆ ಇರಬೇಕು, ಸೀತಾಮಾತೆಯಂತೆ ಗಂಡನನ್ನು ಅನುಸರಿಸಬೇಕೆಂದು ಹಿರಿಯರು ದಿನನಿತ್ಯ ಹೇಳುವುದುಂಟು. ಆದರೆ, ಸೀತಾ ಮಾತೆ ಯಾವ ಸ್ಥಿತಿಯಲ್ಲಿ ಇದ್ದಳು. ಏನೆಲ್ಲಾ ನೋವು-ಸಂಕಟ ಎದುರಿಸಿದಳು ಎಂಬುದರ ತಿಳಿವಿದ್ದರೂ ಈ ಮಾತುಗಳನ್ನು ಯಾಕೆ ಹೇಳುತ್ತಾರೆ ಎಂಬ ಪ್ರಶ್ನೆ ಬಹುದಿನಗಳಿಂದ ಕಾಡುತ್ತಿದೆ.

ಪ್ರತಿದಿನ ಹಿಂಸೆಮಾಡುವ ಗಂಡ, ಅದನ್ನು ಅನುಭವಿಸುವ ಹೆಂಡತಿ ಇಬ್ಬರ ನಡುವೆ ನಿತ್ಯವೂ ಕಲಹ ಆದರೂ ಸೀತೆಯಂತೆ ಹೆಣ್ಣು ಸಹಿಸಿಕೊಳ್ಳಬೇಕು. ಹೆಂಡತಿಯನ್ನು ಗಂಡ ತೊರೆದರು ಸೀತೆಯಂತೆ ಹೆಣ್ಣು ಇರಬೇಕು ಎನ್ನುವಂತಹ ಅನೇಕರು ಇಂದಿಗೂ ಇದ್ದಾರೆ. ಹಿರಿಯರ ಮಾತಿಗೆ ಬೆಲೆಕೊಡಬೇಕು ನಿಜ, ಗಂಡನ ಸುಖದುಃಖಗಳಲ್ಲಿ ಭಾಗಿಯೂ ಆಗಬೇಕು ನಿಜ ಹಾಗೆಂದು ಗಂಡ ಏನೇ ಮಾಡಿದರೂ ಅದನ್ನು ಮೌನವಾಗಿ ಸಹಿಸಿಕೊಳ್ಳುವ ಅಗತ್ಯವಿಲ್ಲ. ಮಾತು ನಮ್ಮ ಭಾವನೆಗಳನ್ನು ಹೊರಹಾಕಲು ಇರುವ ಉತ್ತಮ ಸಾಧನ. ನಮ್ಮಲ್ಲಿ ಅನೇಕರು ಅದರ ಸದುಪಯೋಗವನ್ನು ಅರಿಯದೇ ಮೌನವೆಂಬ ಮುಖವಾಡವನ್ನು ಧರಿಸಿರುತ್ತಾರೆ. ಅದು ಕೇಲವ ಇನ್ನೊಬ್ಬರನ್ನ ಮೆಚ್ಚಿಸುವ ಸಲುವಾಗಿ. ಇತರರನ್ನು ಮೆಚ್ಚಿಸುವಲ್ಲಿ ನಮ್ಮ ಬದುಕನ್ನು ಸಂಕಟಕ್ಕೆ ಒಳಪಡಿಸುವ ಅಗತ್ಯವಿಲ್ಲ.

ಸೀತೆ ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದರು ಕಲ್ಲು ಕರಗುವಂತೆ ಅಳುವಳು ಎಂಬ ಸಂಗತಿ ಅವಳಿಗೆ ಆ ವಿಷಯದ ಬಗ್ಗೆ ಇದ್ದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ. ಲಕ್ಷ್ಮೀಶ ತನ್ನ ಕಾವ್ಯದಲ್ಲಿ ಹಲುಬಿದಳ್ ಕಲ್ಮರಂ ಕರಗುವಂತೆ ಎನ್ನುವಲ್ಲಿ ವಿವರಿಸಿರುವ ಅವಳ ಸ್ಥಿತಿ ಅವಳಿಗೆ ಆ ಸಂಗತಿಯ ಬಗ್ಗೆ ಇದ್ದ ಅಸಮಧಾನವನ್ನು ಪ್ರತಿನಿಧಿಸುತ್ತದೆ. ರಾವಣ ಲಂಕೆಯಲ್ಲಿ ಬಂಧಿಸಿಟ್ಟಾಗ, ಶ್ರೀ ರಾಮ ಪರೀಕ್ಷೆಗೆ ಒಳಪಡಿಸಿದಾಗ, ಕಾಡಿಗೆ ಕಳುಹಿಸಿದಾಗ, ಪುನಃ ಪರೀಕ್ಷೆಗೆ ಒಳಪಡಿಸಿದಾಗ ಅವಳಲ್ಲಿದ್ದ ಭಾವನೆಯನ್ನು ಒಬ್ಬೊಬ್ಬ ಕವಿಗಳು ಒಂದೊಂದು ರೀತಿಯಲ್ಲಿ ಹಿಡಿದಿಡುವ ಕೆಲಸ ಮಾಡಿದ್ದಾರೆ. ಹೆಣ್ಣಿನ ಭಾವನೆಯನ್ನು ಹೆಣ್ಣಾಗಿಯೂ, ಗಂಡಾಗಿಯೂ ಅರ್ಥೈಸಿಕೊಳ್ಳುವಲ್ಲಿ ಅನೇಕ ವ್ಯತ್ಯಾಸಗಳಿವೆ. ಬಹುಶಃ ಕೆಲವು ಸ್ವಾಭಾವಿಕ ಮಿತಿಗಳ ಕಾರಣವೂ ಸೀತೆಯನ್ನು ಅರ್ಥೈಸುವಲ್ಲಿ, ಅಭಿವ್ಯಕ್ತಿಸುವಲ್ಲಿ ಕೆಲಸಮಾಡಿವೆ ಎಂದೆನಿಸುತ್ತದೆ. ಸಮಸ್ಯೆಯನ್ನು ಅರ್ಥಮಾಡಿಸುವ ಮೂಲಕ ಹೋರಾಡಬೇಕು ಎಂಬ ಗುಣಪಾಠವನ್ನು ಕಲಿಸುತ್ತಲೇ ಸಹಿಸಿಕೊಳ್ಳುವಿಕೆಯ ಪಥವನ್ನು ತೋರುವ ಇಂದಿನ ಸಮಾಜದಲ್ಲಿ ಮೌನದ ಜಾಗವನ್ನು ಮಾತು ಆವರಿಸಬೇಕಿದೆ. ಸೀತೆಯಂತೆ ಇರಬೇಕು ಎಂಬುದರ ಅರ್ಥ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳಬೇಕು, ಸಮಸ್ಯೆಗೆ ತಲೆಯೊಡ್ಡಬೇಕು, ಪ್ರಶ್ನೆಮಾಡಬಾರದು ಎಂದಲ್ಲ. ಕೆಲವು ಸಕಾರಾತ್ಮಕ ವಿಷಯಗಳಲ್ಲಿ ಸೀತೆಯನ್ನು ಅನುಸರಿಸುತ್ತಾ, ನಕಾರಾತ್ಮಕ ಅಂಶಗಳನ್ನು ಕಡೆಗಣಿಸಿ ಸೂಕ್ತದಾರಿಯನ್ನು ಆಯ್ಕೆಮಾಡಿಕೊಳ್ಳಬೇಕು. ಪ್ರಶ್ನಿಸುವ, ಪರಾಮರ್ಶಿಸುವ, ಪರಿಶೀಲಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಅದರಿಂದಾಗುವ ಎಲ್ಲಾ ಆಗುಹೋಗುಗಳಿಗೂ ನಾವೇ ಹೊಣೆಯಾಗುತ್ತೇವೆ…


Leave a Reply

Back To Top