ವಾಣಿ ಭಂಡಾರಿ ಅವರ ಗಜಲ್

ನೀನು ಚುಚ್ಚುವೆ ಎಂದು ಮೊದಲೆ ಗೊತ್ತಿದ್ದರೆ ಎದೆಯನ್ನೆ ಕೊಡುತ್ತಿದ್ದೆ ಗೆಳೆಯ.
ನೀನು ಕೊಚ್ಚುವೆ ಎಂದು ಮೊದಲೆ ತಿಳಿದಿದ್ದರೆ ಕುತ್ತಿಗೆಯನ್ನೆ ನೀಡುತ್ತಿದ್ದೆ ಗೆಳೆಯ.

ಬದುಕಿನ ಬಣ್ಣ ರಂಗಾಗದೆ ನಿನ್ನದೆ ಗುಂಗಾದ ಮೇಲೇನಿದೆ ಪಾಡು
ನೀನು ತಳ್ಳುವೆ ಎಂದು ಮೊದಲೇ ತಿಳಿದಿದ್ದರೆ ಛಲವನ್ನೆ ಬಿಡುತ್ತಿದ್ದೆ ಗೆಳೆಯ

ಸಂತೆಯಲಿ ಕೊಳೆತ ಹಣ್ಣುಗಳ ಕಡೆಯೇಕೆ ಈ ಪಾಟಿ ನೋಟ
ನೀನು ದೂರುವೆ ಎಂದು ಮೊದಲೇ ತಿಳಿದಿದ್ದರೆ ದೂರವೇ ಇರುತ್ತಿದ್ದೆ ಗೆಳೆಯ.

ಹೋಗಲಿ ಬಿಡು ನಸೀಬಿಗೆ ಗೆದ್ದಲು ಹಿಡಿದಾಗ ನನ್ನದೆಂತ ಪುಕ್ಕಟ್ಟೆ ಮಾತು
ನೀನು ದೂಡುವೆ ಎಂದು ಮೊದಲೇ ತಿಳಿದಿದ್ದರೆ ದಡ್ಡಿಯಂತೆ ಬಾಳುತ್ತಿದ್ದೆ ಗೆಳೆಯ.

ಆರಕ್ಕೇರದ ದಾರಿಯಲ್ಲಿ ವಾಣಿಗೇನಿದೆ ಹೇಳು ಮಾತಿಲ್ಲಿ ಸತ್ತಿವೆ
ನೀನು ಇರಿಯುವೆ ಎಂದು ಮೊದಲೇ ತಿಳಿದಿದ್ದರೆ ಮಸಣ ಸೇರುತ್ತಿದ್ದೆ ಗೆಳೆಯ.


Leave a Reply

Back To Top