ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ತಿರುಗುತ ತಿರುಗುವ ಈ ಭೂಮಿಯ ಮೇಲಿರುವ ಮನುಜನೊಂದು ಬುಗುರಿ
ನಗುತ ನೋವನುಣಿಸಿ ಆಟವಾಡಿಸುವ ಬದುಕೊಂದು ಬುಗುರಿ
ಹಗಲಿರುಳುಗಳ ಪರಿವೆ ಇಲ್ಲದೆ ಸುತ್ತುತಿದೆ ಕಾಲಚಕ್ರ ಏತಕೆ ಗೊತ್ತೇ
ಸುಖದ ಮೆದು ಪದರಿನಲಿ ಅಡಗಿ ಕುಳಿತಿರುವ ಕಳ್ಳ ದುಃಖವೊಂದು ಬುಗುರಿ
ಒಡಲ ಕಿಚ್ಚಿಗಾಗಿ ಬವಣೆಗಳ ಹೊತ್ತು ಹೋಗಬೇಕಾದ ಕರ್ಮವಿದು
ಮಡಿಲು ತುಂಬದೆ ಉಡಿಯೊಡ್ಡಿ ಬೇಡುವ ಕಷ್ಟವೊಂದು ಬುಗುರಿ
ಉರಿಬಿಸಿಲು ನೆತ್ತಿಯ ಸುಟ್ಟರೂ ಬಾಳಬೇಕಿದೆ ಉಸಿರು ಬಿಗಿ ಹಿಡಿದು
ರಕುತ ಹೀರುವ ಸಿರಿವಂತ ಪಿಶಾಚಿಯ ಕರಿಯ ನೆರಳೊಂದು ಬುಗುರಿ
ಮಾನ ಪ್ರಾಣಗಳಿಗೆಂದೂ ಬೆಲೆಯೇ ಇಲ್ಲ ಕ್ರೂರ ಸಮಾಜದಲಿ ಬೇಗಂ
ಹೆಣ್ಣುಗಳ ಸೆರಗು ಎಳೆದು ಕೇಕೆ ಹಾಕುವ ನೀಚ ಕೈಯೊಂದು ಬುಗುರಿ
ಹಮೀದಾ ಬೇಗಂ ದೇಸಾಯಿ
ಸತ್ಯಾಸತ್ಯತೆಯನ್ನು ಬೆತ್ತಲುಗೊಳಿಸಿದ ಅರ್ಥಪೂರ್ಣ ಗಜಲ್.
ಸ್ಪಂದನೆಗೆ ಧನ್ಯವಾದಗಳು ತಮಗೆ.