‘ಸಂವಿಧಾನ ಆಶಯದ ಘನತೆಯ ಬದುಕು ಮಹಿಳೆಯ ಹಕ್ಕಾಗಲಿ’ ಲೇಖನ-ಮೇಘ ರಾಮದಾಸ್ ಜಿ

ಸಂವಿಧಾನ ಆಶಯದ ಘನತೆಯ ಬದುಕು ಮಹಿಳೆಯ ಹಕ್ಕಾಗಲಿ

ನಾನು ಒಂದು ಸಮುದಾಯದ ಪ್ರಗತಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ಅಳೆಯುತ್ತೇನೆ.
ಡಾ ಬಿ ಆರ್ ಅಂಬೇಡ್ಕರ್

ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿಯೂ ಯಾವುದೇ ಅಡೆತಡೆ ಇಲ್ಲದೆ ತನ್ನ ಸ್ಥಾನವನ್ನು ಗಳಿಸಿ ಸಾಧಿಸಿದಾಗ ಮಾತ್ರ ಒಂದು ದೇಶ ನಿಜವಾದ ಪ್ರಗತಿ ಸಾಧಿಸಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಆದರೆ ಮಾನವ ಅನ್ಯಗ್ರಹಗಳ ಮೇಲೆ ಹೋಗುವಷ್ಟು ಮುಂದುವರೆದಿದ್ದರೂ ಸಹ ಮಹಿಳೆಯನ್ನು ಕೀಳಾಗಿ ನೋಡುವ ಭಾವ ಇನ್ನೂ ಮಾಸಿಲ್ಲ. ಆದರೆ ಮಹಿಳೆಗೆ ಎಲ್ಲಾ ಕ್ಷೇತ್ರದಲ್ಲಿಯೂ ಸಮಾನತೆ ದೊರೆಯಬೇಕು ಎಂಬುದು ಶತಮಾನಗಳಿಂದ ಇರುವ ಬೇಡಿಕೆ. ಈಗ ಈ ಬೇಡಿಕೆಗೆ ಗಮನಾರ್ಹ ಫಲವಂತು ಸಿಕ್ಕಿದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಆಸ್ತಿ ಹೀಗೆ ಎಲ್ಲದರಲ್ಲಿಯೂ ಮಹಿಳೆಗೆ ಸಮಾನ ಹಕ್ಕು ಲಭಿಸಿದೆ. ಈ ಪ್ರಗತಿಯನ್ನು ಗುರುತಿಸಿ ಸಂಭ್ರಮಿಸಲು ಪ್ರತಿ ವರ್ಷ ಆಗಸ್ಟ್ 26ನೇ ದಿನಾಂಕದಂದು ” ಮಹಿಳಾ ಸಮಾನತೆ ದಿನ ” ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ಅಮೆರಿಕ ಆಗಸ್ಟ್ 26 1920 ರಂದು ತನ್ನ ಸಂವಿಧಾನದ 19ನೇ ತಿದ್ದುಪಡಿಯ ಮುಖಾಂತರ ಮಹಿಳೆಯರಿಗೆ ಸಾಂವಿಧಾನಿಕ ಮತದಾನದ ಹಕ್ಕನ್ನು ನೀಡಿತ್ತು. ಇದರ ನಂತರ 1971ರಲ್ಲಿ ಮಹಿಳೆಯರ ಸಮಾನತೆಗಾಗಿ ನಡೆದ ಚಳುವಳಿಯ ತರುವಾಯ ಕಾಂಗ್ರೆಸ್ ಮಹಿಳೆ ಬೆಲ್ಲ ಅಬ್ಸುಗ್ ಈ ದಿನವನ್ನು ಮಹಿಳಾ ಸಮಾನತೆಯ ದಿನವನ್ನಾಗಿ ಘೋಷಿಸುವಂತೆ ತಿಳಿಸಿದರು. ಅಧ್ಯಕ್ಷ ರಿಚರ್ಡ್ ನಿಕ್ಸನ್ 1972ರಲ್ಲಿ ಆಗಸ್ಟ್ 26ನೇ ದಿನಾಂಕವನ್ನು ಅಧಿಕೃತವಾಗಿ ಮಹಿಳಾ ಸಮಾನತೆಯ ದಿನವೆಂದು ಗುರುತಿಸಿ ಘೋಷಣೆ ಹೊರಡಿಸಿದರು. 1973ರ ಆಗಸ್ಟ್ 26ರಂದು ಮೊದಲ ಬಾರಿಗೆ ಅಮೇರಿಕಾದಲ್ಲಿ ಈ ದಿನವನ್ನು 19ನೇ ತಿದ್ದುಪಡಿಯ ವಾರ್ಷಿಕೋತ್ಸವದ ಅಂಗವಾಗಿ ಆಚರಿಸಲಾಯಿತು.

ಈ ನಿಟ್ಟಿನಲ್ಲಿ ಭಾರತದಲ್ಲಿ ನಮ್ಮ ಮಹಿಳೆಯರ ಸಮಾನತೆಯ ಸ್ಥಿತಿಗತಿಗಳನ್ನು ನೋಡುವುದಾದರೆ ಅದು ಉತ್ತಮವಾಗಿಯೇ ಇದೆ ಎಂದು ಮೇಲ್ನೋಟಕ್ಕೆ ಎಲ್ಲರಿಗೂ ಕಾಣಿಸುತ್ತದೆ. ಆದರೆ ವಾಸ್ತವದಲ್ಲಿ ಮಹಿಳೆ ಈಗಲೂ ಭೋಗದ ವಸ್ತುವಾಗಿಯೇ ಇದ್ದಾಳೆ. ಶಿಕ್ಷಣ ಪಡೆದು ಉನ್ನತ ಉದ್ಯೋಗಗಳಿಸಿ ಗಂಡಿಗೆ ಸರಿಸಮವಾಗಿ ಸಂಪತ್ತು ಸಂಪಾದಿಸಿದರು ಆಕೆಯ ಸ್ಥಾನ ಮಾತ್ರ ಸದಾ ಕೀಳಾಗಿಯೇ ಇರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ವರದಿಗಳು ಭಾರತದಲ್ಲಿ ಮಹಿಳೆಯರ ಹೀನ ಪರಿಸ್ಥಿತಿಗಳ ಕುರಿತು ಬೆಳಕು ಚೆಲ್ಲಿವೆ. ಅದರಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳ ಶಾಲೆ ಬಿಡುತ್ತಿರುವುದು, ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರಿಗಳು ದೇಶದಲ್ಲಿ ಮಹಿಳೆಯರ ವಿಷಯದಲ್ಲಿ ಆಗುತ್ತಿರುವ ದೊಡ್ಡ ಅಪರಾಧಗಳಾಗಿವೆ. ಇದರಿಂದ ಮಹಿಳೆಯ ಸಬಲೀಕರಣ ಮಾತ್ರವಲ್ಲದೆ ದೇಶದ ಸುಸ್ತಿರ ಅಭಿವೃದ್ಧಿಗೆ ದೊಡ್ಡ ಹೊಡೆತ ಬೀಳುತ್ತಿದೆ.

ಶಿಕ್ಷಣ
ಸಮಗ್ರ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಶಿಕ್ಷಣ ನೀತಿ, ಭೇಟಿ ಬಚಾವ್ ಭೇಟಿ ಪಡಾವೋ ಎನ್ನುವ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದರೂ ಸಹ ಶಾಲೆ ಬಿಟ್ಟ ಹೆಣ್ಣು ಮಕ್ಕಳ ಸಂಖ್ಯೆ ಇನ್ನೂ ಕಂಡು ಬರುತ್ತಿರುವುದು ವಿಪರ್ಯಾಸವೇ ಸರಿ. ದಿ ಹಿಂದು ಪತ್ರಿಕೆಯ ಒಂದು ಲೇಖನದ ಪ್ರಕಾರ 2023ರ ಯೂನಿಸೆಫ್ ನ ಸರ್ವೆಯ ಅನುಸಾರ ಭಾರತದಲ್ಲಿ ಈಗಲೂ 33% ರಷ್ಟು ಹೆಣ್ಣುಮಕ್ಕಳು ಮನೆ ಕೆಲಸದ ಕಾರಣದಿಂದಾಗಿ ಶಾಲೆ ಬಿಡುತ್ತಿದ್ದಾರೆ. 2021 22ರ ಅಧಿಕೃತ ಅಂಕಿ ಅಂಶಗಳ ಅನುಸಾರ ಶಾಲೆ ಬಿಟ್ಟ ಹೆಣ್ಣು ಮಕ್ಕಳ ಸಂಖ್ಯೆ 12.6 ಇತ್ತು. ಇವರೆಲ್ಲರೂ ಸಾಮಾನ್ಯವಾಗಿ ಪ್ರೌಢಶಾಲಾ ಮಟ್ಟದಲ್ಲಿ ಶಾಲೆಗಳಿಂದ ದೂರ ಉಳಿಯುತ್ತಿದ್ದಾರೆ. ಗುಜರಾತ್, ಬಿಹಾರ್, ಕರ್ನಾಟಕ, ಅಸ್ಸಾಂ ಮತ್ತು ಪಂಜಾಬ್ ರಾಜ್ಯಗಳು ದೇಶದಲ್ಲಿ ಅತಿ ಹೆಚ್ಚು ಶಾಲೆಬಿಟ್ಟ ಹೆಣ್ಣು ಮಕ್ಕಳು ಇರುವ ರಾಜ್ಯಗಳಾಗಿವೆ.

 ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ
ಮಹಿಳೆ ಅಬಲೆಯಲ್ಲಾ ಸಬಲೆ, ತನ್ನ ಸ್ವಂತ ಶಕ್ತಿಯಿಂದ ಬದುಕುವ ಅಂತ ತಲುಪುತ್ತಾಳೆ. ಮನೆ ಕೆಲಸ ಕಚೇರಿ ಕೆಲಸ ಎರಡನ್ನು ಅತ್ಯುತ್ತಮವಾಗಿ ನಿಭಾಯಿಸುವ ತಾಕತ್ತು ಹೊಂದಿದ್ದಾಳೆ ಎಂದೆಲ್ಲ ಸಮಾಜ ಆಕೆಯನ್ನು ಹೊಗಳುತ್ತದೆ. ಆದರೆ ಆಕೆಗೆ ಉದ್ಯೋಗದ ಸ್ಥಳದಲ್ಲಿ ಆಗುತ್ತಿರುವ ದೈಹಿಕ ಹಾಗೂ ಮಾನಸಿಕ ಹಿಂಸೆಗಳ ಬಗ್ಗೆ ನಾವೆಂದು ತುಟಿ ಬಿಚ್ಚುವುದೇ ಇಲ್ಲ. ದೌರ್ಜನ್ಯ ಮಾಡುವವರನ್ನು ದಂಡಿಸುವ ಬದಲು ಈಕೆಯನ್ನೇ ತಲೆತಗ್ಗಿಸಿ ನಡೆಯಲು, ಉದ್ಯೋಗ ಬಿಡಲು, ಯಾರೊಂದಿಗೂ ಸ್ನೇಹ ಮಾಡದಿರಲು, ಇನ್ನು ಹಲವು ನಿರ್ಬಂಧಗಳನ್ನು ಹಾಕುತ್ತೇವೆ. ತನ್ನ ಉದ್ಯೋಗ ಇಲ್ಲವಾಗುತ್ತದೆ ಎನ್ನುವುದರಿಂದಲೇ ಎಷ್ಟೋ ಮಹಿಳೆಯರು ತಮಗೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿಕೊಳ್ಳದೆ ಮರೆಮಾಚುತ್ತಾರೆ. ಇದು ಕೊನೆಗೆ ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ. ಇಂತಹ ದುರಂತಗಳೇ ಇಂದು ದೇಶದಲ್ಲಿ ಅಂಕಿ ಅಂಶಗಳಾಗಿ ಹೊರ ಬೀಳುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿ (National Crime Record Bureau) ನ ಅಂಕಿ ಅಂಶಗಳ ಪ್ರಕಾರ 2018 ರಲ್ಲಿ 445 ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇತ್ತೀಚಿನ 2022ರ ವರದಿಯ ಅನುಸಾರ ಪ್ರತಿ ತಿಂಗಳು 35 ಪ್ರಕರಣಗಳು ದಾಖಲಾಗುತ್ತಿವೆ. ಹಿಮಾಚಲ್ ಪ್ರದೇಶ, ಕೇರಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ಈ ಪ್ರಕರಣಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯಗಳಾಗಿವೆ.

ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು
ದೇಶದಲ್ಲಿ ಭೇಟಿ ಬಚಾವ್ ಭೇಟಿ ಪಡಾವೋ ಎನ್ನುವ ದೊಡ್ಡ ಅಭಿಯಾನ ಎಲ್ಲೆಡೆ ಅಧಿಕೃತವಾಗಿ ಚಾಲ್ತಿಯಲ್ಲಿದೆ. ಕೆಲವರಿಗೆ ಅಭಿಯಾನದಿಂದ ಹೆಣ್ಣು ಮಕ್ಕಳು ಶಾಲೆಗೆ ಹೋಗಿ ಕಲಿಯುವಂತಹ ದೊಡ್ಡ ವ್ಯವಸ್ಥೆಯೂ ಕೂಡ ಆಗಿದೆ. ಆದರೆ ಪಡಾಯಿ ಮಾಡಿದ ಬೇಟಿಯನ್ನು ಬಚಾವ್ ಮಾಡುವ ವ್ಯವಸ್ಥೆ ನಮ್ಮಲ್ಲಿ ಕ್ಷೀಣಿಸಿದೆ. ಅತ್ಯಾಚಾರ ಭಾರತ ದೇಶದ ಅತೀ ಪ್ರಮುಖ ಅಪರಾಧವಾಗಿದೆ. ಈ ವಿಚಾರದಲ್ಲಿಯೂ ನಾವು ಹೆಣ್ಣು ಮಕ್ಕಳನ್ನು ಹಿಡಿತದಲ್ಲಿ ಇರಿಸಲು ಪ್ರಯತ್ನಿಸುತ್ತೇವೆ. ಅವರಿಗೆ ಹೀಗೆ ಇರಬೇಕು ಎನ್ನುವ ಕಡಿವಾಣ ಹಾಕುತ್ತೇವೆ. ಅವರ ಆತ್ಮ ರಕ್ಷಣೆಗಾಗಿ ಹಲವಾರು ವಿದ್ಯೆಗಳನ್ನು ಕಲಿಸುತ್ತೇವೆ. ಆದರೆ ನಿಜವಾಗಿ ಆಗಬೇಕಾಗಿರುವುದು ಅದಲ್ಲ. ನಾವು ನಮ್ಮ ಮನೆಯ ಗಂಡು ಮಕ್ಕಳಿಗೆ ಹೆಣ್ಣಿನ ಕುರಿತಾಗಿ ಒಂದಷ್ಟು ಸಕಾರಾತ್ಮಕ ಅಂಶಗಳನ್ನ ಕಲಿಸುವ ಅಗತ್ಯವಿದೆ. ಅವರು ಹೆಣ್ಣಿನ ವಿಷಯದಲ್ಲಿ ಯಾವುದೇ ಸಣ್ಣಪುಟ್ಟ ತಪ್ಪು ಮಾಡಿದರು ಆಗಲಿ ಕಿವಿ ಹಿಂಡಿ ಬುದ್ದಿ ಹೇಳುವುದನ್ನು ಮಾಡಬೇಕಿದೆ. ಇಂತಹ ಪರಿವರ್ತನೆಗಳು ಗಂಡು ಮಕ್ಕಳಿಗೆ ಆಗದಿದ್ದಲ್ಲಿ ಈ ಪ್ರಕರಣಗಳು ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. 2019ರ ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿ (National Crime Record Bureau) ನ ಅಂಕಿ ಅಂಶಗಳ ಅನುಸಾರ ದೇಶದಲ್ಲಿ ಒಟ್ಟು 32033 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 18 ವರ್ಷದ ಮೇಲ್ಪಟ್ಟು 27093 ಹಾಗೂ 18 ವರ್ಷದ ಕೆಳಗೆ 4940 ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನ (5997) ಉತ್ತರ ಪ್ರದೇಶ (3065) ಮಧ್ಯಪ್ರದೇಶ (2485) ಮಹಾರಾಷ್ಟ್ರ (2299) ಕೇರಳ (2023) ಇವು ಅತ್ಯಾಚಾರ ಪ್ರಕರಣಗಳಲ್ಲಿ ದಾಖಲೆ ಮಾಡಿರುವ ಮೊದಲ ಐದು ರಾಜ್ಯಗಳಾಗಿವೆ.

ನಮ್ಮ ದೇಶದಲ್ಲಿ ಹೆಣ್ಣಿಗೆ ನೀಡುವ ಸ್ವತಂತ್ರ ಸಮಾನತೆ ಗೌರವಗಳೆಲ್ಲವೂ ಕೇವಲ ಉತ್ಪ್ರೇಕ್ಷೆಯಾಗದೆ ವಾಸ್ತವದಲ್ಲಿ ನೈಜವಾಗಿದ್ದರೆ ಈ ಮೇಲಿನ ಎಲ್ಲಾ ಸಮಸ್ಯೆಗಳು ಭಾಗಶಃ ನಿಲ್ಲುತ್ತಿದ್ದವು. ಹೆಣ್ಣಿಗೆ ಎಲ್ಲಾ ರೀತಿಯ ಕಡಿವಾಣಗಳನ್ನು ಹಾಕುವ ಬದಲಿಗೆ ಗಂಡಿಗೆ ಹೆಣ್ಣನ್ನು ಹೇಗೆ ಘನತೆಯಿಂದ ನೋಡಬೇಕು ಎಂಬುದನ್ನು ಕಲಿಸುವ ಅಗತ್ಯವಿದೆ. ಹೆಣ್ಣನ್ನು ಶೋಷಿಸುವುದಲ್ಲ ಬದಲಿಗೆ ಹೆಣ್ಣಿನ ಗೌರವಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುವುದು ನಿಜವಾದ ಗಂಡ ಎನ್ನುವುದನ್ನು ಅರ್ಥ ಮಾಡಿಸಬೇಕಿದೆ. ಅಮೇರಿಕಾದಂತಹ ದೇಶದಲ್ಲಿಯೇ ಹೆಣ್ಣಿಗೆ ಗಂಡಿನ ನಂತರ ಮತದಾನದ ಹಕ್ಕು ಲಭಿಸಿದೆ. ಅದೂ ಹೋರಾಟದ ಫಲವಾಗಿ ಸಿಕ್ಕಿದೆ. ಆದರೆ ನಮ್ಮ ದೇಶದ ಹೆಣ್ಣಿಗೆ ಗಂಡಿನ ಜೊತೆ ಜೊತೆಗೆ ಸಂವಿಧಾನದ ಭಾಗವಾಗಿಯೇ ಎಲ್ಲಾ ರೀತಿಯ ಸಮಾನ ಹಕ್ಕುಗಳು ಸಿಕ್ಕಿವೆ. ಹಾಗಾಗಿ ನಮ್ಮ ಸಂವಿಧಾನವೇ ಹೆಣ್ಣು ಗಂಡು ಇಬ್ಬರು ಸಮಾನರು ಎನ್ನುವುದನ್ನು ಸಾರುತ್ತದೆ. ಆಗಲೇ ನಮ್ಮ ದೇಶದಲ್ಲಿ ಹೆಣ್ಣಿಗೆ ಹೆಚ್ಚಿನ ಗೌರವ ಇದೆ ಎಂಬುದು ಇದರಿಂದ ತಿಳಿಯುತ್ತದೆ. ಈ ಸಂವಿಧಾನದ ಆಶಯವನ್ನು ನಿಜವಾಗಿಸುವುದು ನಮ್ಮೆಲ್ಲರ ಕೈಯಲ್ಲಿದೆ. ಸಂವಿಧಾನದ ಆಶಯದಂತೆ ಹೆಣ್ಣು ಸಂಪೂರ್ಣ ಸ್ವತಂತ್ರ ಆದಾಗ ಮಾತ್ರ ಗಾಂಧೀಜಿಯವರ ರಾಮ ರಾಜ್ಯದ ಕನಸು ಮತ್ತು ಅಂಬೇಡ್ಕರ್ ಅವರ ಮಹಿಳಾ ಸಬಲೀಕರಣದ ನಿಜ ಆಶಯ ಈಡೇರುತ್ತದೆ.



ಯುವಜನ ಕಾರ್ಯಕರ್ತರು
ಹೊಂಬಾಳೆ ಟ್ರಸ್ಟ್ ಗುಳಿಗೇನಹಳ್ಳಿ
ಸಿರಾ ತಾಲ್ಲೂಕು ತುಮಕೂರು

Leave a Reply

Back To Top