ಡಾ. ಯಲ್ಲಮ್ಮ ಕೆ ಅವರ ಕವಿತೆ-ಜೀವನಾಡಿ

ಜಿಂದಾಲ್
ಎಂಬ
ಕಾಡೊಳಗೆ
ಯಂತ್ರ –
ತಂತ್ರೋಪಕರಣಗಳ
ಅಬ್ಬರ!

ರಣಗುಡುವ
ಕಡುಬೇಸಗೆ
ಕಳೆದು
ಮಳೆಗಾಲದಿ
ಆಗೊಮ್ಮೆ
ಈಗೊಮ್ಮೆ
ಮಳೆಯುದುರುತ್ತದೆ ;
ದೋಸೆಯಂಚಿನ
ಮೇಲೆ
ನೀರು –
ಹೂಯ್ಯದಂಗ್ಹೆ
ಬರೀ
ಹೊಗೆ-ದಗೆ!

ರಸ್ತೆಯುದ್ದಕ್ಕೂ
ಎಡ-ಬಲದಿ
ಜೀವ ಕೈಲಿ
ಹಿಡಿದುಕೊಂಡು
ನಿಂತಿರುವ
ಸಾಲು ಸಾಲು
ಗಿಡ-ಮರ-
ಬಳ್ಳಿಗಳಲ್ಲೂ
ಹೂಗಳು
ಆಗಾಗ್ಗೆ
ನಗುತ್ತವೆ!

ತಮ್ಮ
ಮೈಬಣ್ಣ
ಕಳೆದುಕೊಂಡ
ಹಕ್ಕಿ-ಪಿಕ್ಕಿಗಳೆಲ್ಲವೂ
ಅಲ್ಲಿಂದಿಲ್ಲಿಗೆ
ಇಲ್ಲಿಂದಲ್ಲಿಗೆ
ಹಾರುತ್ತವೆ –
ಆಗೊಮ್ಮೆ
ಈಗೊಮ್ಮೆ
ಹಾಡುತ್ತವೆ!

ದಿನವಿಡೀ
ಹಾರುವ
ಕೆಂಧೂಳು,
ಉಗುಳುವ
ದಟ್ಟ ಹೊಗೆಗೆ
ಕಪ್ಪಿಟ್ಟ
ಬೆಳ್ಳಿಮೋಡಗಳು
ದಿಕ್ಕೆಟ್ಟು
ಓಡುತ್ತಿವೆ!
ಇನ್ನೆಲ್ಲಿ
ಮಳೆ?

ನೀರು-ನೆಲೆ,
ಆಶ್ರಯ –
ಬಯಸಿ
ಬಂದೊಂದೆಡೆ
ಸೇರುವಂತೆ
ಬಾನಾಡಿಗಳು ;
ಅದೆಲ್ಲೆಲ್ಲಿಂದಲೋ
ಬಂದು ಸೇರಿವೆ
ಜೀವನಾಡಿಗಳು!

ತಳವರಿದ
ತುತ್ತಿನಚೀಲವ
ತುಂಬಿಸಲೋಸುಗ
ಹಗಲಿರುಳು
ದುಡಿದುಡಿದು
ದಣಿದು
ಬಿಕ್ಕುತ್ತಿವೆ ;
ಕೆಲ –
ಮಿಕಗಳು
ಮಾತ್ರ
ಹುರಿದು
ಮುಕ್ಕುತ್ತಿವೆ
ಅನವರತ!


Leave a Reply

Back To Top