‘ಕ್ಲಿಕ್ ಟು ಪ್ರೋಗ್ರೆಸ್ – ಸುಸ್ಥಿರತೆಯೆಡೆಗೆ ಯುವ ಸಮುದಾಯ’-ಮೇಘ ರಾಮದಾಸ್ ಜಿ

ಯುವ ಜನತೆ ದೇಶದ ಜನಶಕ್ತಿಯಾಗಿ ಮಾತ್ರವಲ್ಲದೆ, ಪ್ರಗತಿಯ ಹರಿಕಾರರಾಗಿ ತಮ್ಮ ಕಾಯಕ ಮಾಡುತ್ತಿದ್ದಾರೆ. ನಮ್ಮದು ಯುವ ರಾಷ್ಟ್ರ, 420 ಮಿಲಿಯನ್ ಜನಸಂಖ್ಯೆಯ ಯುವಜನರನ್ನು ಹೊಂದಿರುವ ರಾಷ್ಟ್ರ. ಇಲ್ಲಿ ದೇಶದ ಪ್ರಗತಿ ಯುವಜನತೆಯ ಪ್ರಗತಿಯ ಮೇಲೆ ನೇರವಾಗಿ ಅವಲಂಬಿತವಾಗಿದೆ. ಯುವ ಜನತೆಯನ್ನು ದೇಶದ ಆಸ್ತಿ, ಮಾನವ ಸಂಪತ್ತು, ಬಲ, ಬೆನ್ನೆಲುಬು ಎಂದೆಲ್ಲ ಗುರುತಿಸಲಾಗುತ್ತಿದೆ. ಇಂತಹ ಯುವ ಸಮುದಾಯವನ್ನು ಹೆಚ್ಚಿನ ಕಾಳಜಿ ವಹಿಸಿ, ಗಮನಹರಿಸಿ ಬೆಳೆಸುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಿಂದ ಹಿಡಿದು ದೇಶಗಳವರೆಗೆ ಯುವ ಜನರಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂಥ ಕಾರ್ಯಕ್ರಮಗಳಲ್ಲಿ ಬಹಳ ಪ್ರಮುಖವಾದದ್ದು ” ಯುವ ದಿನ “. ಈ ದಿನವನ್ನು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಾಗಿ ಎರಡೂ ಹಂತಗಳಲ್ಲಿಯೂ ಆಚರಿಸಲಾಗುತ್ತಿದೆ.

ಈ ಅಂತರಾಷ್ಟ್ರೀಯ ಯುವ ದಿನಕ್ಕೆ ತನ್ನದೇ ಆದ ಇತಿಹಾಸವಿದೆ. 8 ರಿಂದ 12 ಆಗಸ್ಟ್ 1998ರಲ್ಲಿ ಪೋರ್ಚುಗಲ್ ನಲ್ಲಿ ನಡೆದ ಯುವಜನ ವ್ಯವಹಾರಗಳ ಮಂತ್ರಿಗಳ ವಿಶ್ವ ಸಮ್ಮೇಳನವು ಆಗಸ್ಟ್ 12 ಅನ್ನು ” ಅಂತರರಾಷ್ಟ್ರೀಯ ಯುವ ದಿನ ” ವಾಗಿ ಘೋಷಿಸುವ ನಿರ್ಣಯ ಅಂಗೀಕರಿಸಿತು. ನಂತರ 17ನೇ ಡಿಸೆಂಬರ್ 1999ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ರೆಸುಲ್ಯೂಷನ್ 54/120 ರ ಅಳವಡಿಕೆಯೊಂದಿಗೆ ಈ ಶಿಫಾರಸ್ಸನ್ನು ಅನುಮೋದಿಸಿತು. ಅದರಂತೆ ಮೊದಲ ಅಂತಾರಾಷ್ಟ್ರೀಯ ಯುವ ದಿನವನ್ನು ಆಗಸ್ಟ್ 12 2000 ದಂದು ವಿಶ್ವದಾದ್ಯಂತ ಆಚರಿಸಲಾಯಿತು.

ಪ್ರತಿ ವರ್ಷ ಈ ಅಂತರಾಷ್ಟ್ರೀಯ ಯುವ ದಿನವನ್ನು ಯುವಜನರ ಏಳಿಗೆಯನ್ನು ಚರ್ಚಿಸುವುದಕ್ಕಾಗಿ ಮೀಸಲಿರಿಸಲಾಗಿದೆ. ಈ ದಿನವನ್ನು ಯುವ ಜನತೆಯ ಸಮಸ್ಯೆಗಳನ್ನು ಚರ್ಚಿಸಲು, ಪರಿಹಾರೋಪಾಯಗಳನ್ನು ಕಂಡುಕೊಳ್ಳಲು, ಸಬಲೀಕರಣದ ಮಾರ್ಗಗಳನ್ನು ರೂಪಿಸಲು, ನಿಗದಿಗೊಳಿಸಿದ್ದಾರೆ. ಇದಷ್ಟೇ ಅಲ್ಲದೆ ಯುವಜನತೆಯಿಂದ ಜಗತ್ತಿನ ಅಭಿವೃದ್ಧಿಯ ಮೇಲೆ ಆಗುತ್ತಿರುವ ಪೂರಕ ಪರಿಣಾಮಗಳ ಬಗ್ಗೆ ವಿಮರ್ಶೆ ಮಾಡಲಾಗುತ್ತದೆ. ವಿಶ್ವಸಂಸ್ಥೆಯ ಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ಯುವಜನತೆಯನ್ನು ಪ್ರತಿನಿಧಿಗಳಾಗಿ ಭಾಗಿಯಾಗಿಸಿಕೊಂಡು ಅವರ ಅನಿಸಿಕೆ, ಅಭಿಪ್ರಾಯ, ಸಮಸ್ಯೆ, ಯೋಜನೆಗಳೆಲ್ಲವನ್ನು ಆಲಿಸಲಾಗುತ್ತದೆ. ನಂತರ ಎಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಯುವಜನತೆಯ ಸಕಾರಾತ್ಮಕ ಬೆಳವಣಿಗೆಗೆ ಅಗತ್ಯವಿರುವ ರೂಪರೇಷೆಗಳನ್ನು ರೂಪಿಸಲಾಗುತ್ತದೆ.

ಈ ಅಂತರಾಷ್ಟ್ರೀಯ ದಿನದ ಮತ್ತೊಂದು ವಿಶೇಷತೆ ಎಂದರೆ ಪ್ರತಿ ವರ್ಷ ಆಯಾ ಕಾಲಮಾನಕ್ಕೆ ತಕ್ಕಂತೆ ಒಂದೊಂದು ವಿಷಯ ಇಟ್ಟುಕೊಂಡು ಚರ್ಚೆ ನಡೆಸಲಾಗುತ್ತದೆ. ಇದು ಯುವಜನರ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದ್ದಾಗಿರುತ್ತದೆ. ಅದರ ಜೊತೆಗೆ ಯಾವುದರಲ್ಲಿ ಯುವ ಜನತೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎನ್ನುವುದನ್ನು ಸಹ ಪರಿಗಣಿಸಿ ನಿರ್ಧರಿಸಲಾಗುತ್ತದೆ.ಈ ಥೀಮ್ ಗಳ ಮೇಲೆ ವಿಶ್ವದಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳು, ರ್ಯಾಲಿಗಳು, ಚರ್ಚೆಗಳು, ಗೋಷ್ಠಿಗಳು, ಕಾರ್ಯಗಾರಗಳು ನಡೆಯುತ್ತವೆ. ಈ ಥೀಮ್ಗಳು ನೇರವಾಗಿ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಸಹಕಾರಿಯಾಗುತ್ತವೆ. ಇದರಂತೆ ಈ ಬಾರಿಯೂ ಸಹ ಇದೇ ಉದ್ದೇಶದಿಂದ ಯುವಜನತೆ ಅತಿ ಹೆಚ್ಚು ಸಮಯ ಕಾಲ ಕಳೆಯುವ ಡಿಜಿಟಲ್ ತಂತ್ರಜ್ಞಾನದ ಕುರಿತು ಥೀಮ್ ರೂಪಿಸಲಾಗಿದೆ. ಅದೇನೆಂದರೆ ” From clicks to progress : youth digital pathways for sustainable development ” ಎಂಬ ಥೀಮ್ ನೊಂದಿಗೆ ಈ ವರ್ಷ ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತಿದೆ.

ಈ ಥೀಮ್ ಮುಖ್ಯವಾಗಿ ಯುವ ಜನತೆ ಹಾಗೂ ಡಿಜಿಟಲ್ ತಂತ್ರಜ್ಞಾನದ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತದೆ. ಡಿಜಿಟಲ್ ತಂತ್ರಜ್ಞಾನದ ಅನ್ವೇಷಣೆಗಳು ಹಾಗೂ ಸುಸ್ಥಿರ ಅಭಿವೃದ್ಧಿಯಲ್ಲಿನ ಯುವಜನತೆಯ ಪಾತ್ರದ ಮೇಲೆ ಈ ಥೀಮ್ ಬೆಳಕು ಚೆಲ್ಲುತ್ತದೆ. ಸುಸ್ಥಿರ ಪ್ರಗತಿಯನ್ನು ಹೆಚ್ಚಿಸಲು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸುವಲ್ಲಿ ಯುವಜನರು ವಹಿಸಿರುವ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳುತ್ತದೆ.

ಈ ಥೀಮ್ ಖಂಡಿತವಾಗಿಯೂ ಪ್ರಸ್ತುತ ಯುವಜನತೆಯ ಮನಸ್ಥಿತಿಗೆ ಹೊಂದುವಂತದ್ದೆ ಆಗಿದೆ. ನಮ್ಮ ಯುವ ಜನತೆ ಹೆಚ್ಚು ಸಮಯವನ್ನು ಡಿಜಿಟಲ್ ವೇದಿಕೆಗಳಲ್ಲಿಯೇ ಕಳೆಯುತ್ತಾರೆ ಎನ್ನುವ ಆಪಾದನೆ ಇದೆ. ಆದರೆ ಈ ಡಿಜಿಟಲ್ ವೇದಿಕೆಗಳಿಂದಲೇ ಸಾಮಾಜಿಕವಾಗಿ ಬದಲಾವಣೆ ತರಬಲ್ಲಂತಹ ಎಷ್ಟೋ ಯುವತಿ/ಕರು ನಮ್ಮ ನಡುವೆ ಇದ್ದಾರೆ. ಆ ಮೂಲಕ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವಲ್ಲಿ ಸಹಕಾರಿಯಾಗುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ.

ಬದಲಾವಣೆಗಳನ್ನು ಈ ಡಿಜಿಟಲ್ ಮಾಧ್ಯಮಗಳಿಂದ ತರುವುದು ಮಾತ್ರವಲ್ಲದೆ ಸಾಮಾಜಿಕ ಘಟನೆಗಳಿಗೆ, ರಾಜಕೀಯ ನಡೆಗಳಿಗೆ, ಪ್ರಾಕೃತಿಕ ವಿಕೋಪಗಳಿಗೆ, ಕೌಟುಂಬಿಕ ಬಿಕ್ಕಟ್ಟುಗಳಿಗೆ, ಜನರ ಸಮಸ್ಯೆಗಳಿಗೆ, ಸಾಧನೆಗಳಿಗೆ, ಜಾತಿ ಧರ್ಮದ ಕಾರಣಕ್ಕೆ ಆಗುತ್ತಿರುವ ದೌರ್ಜನ್ಯಗಳಿಗೆ, ಹೆಣ್ಣಿನ ಮೇಲಿನ ದಬ್ಬಾಳಿಕೆಗಳಿಗೆ, ಹೀಗೆ ತನಗೆ ಪರಿಚಯ ಇದೆಯೋ ಇಲ್ಲವೋ ಎಂಬುದನ್ನು ಪರಿಗಣಿಸದೆ ಎಲ್ಲದಕ್ಕೂ ಎಲ್ಲರಿಗೂ ಸ್ಪಂದಿಸಲು ಈ ಡಿಜಿಟಲ್ ಮಾಧ್ಯಮಗಳನ್ನು ಬಳಸುತ್ತಿದ್ದಾರೆ. ಅವರ ಕೋಪ, ಅಸಹನೆ, ಬೇಸರ, ಸಂತೋಷ, ದುಃಖ, ಹೆಮ್ಮೆಗಳಂತಹ ಎಲ್ಲಾ ರೀತಿಯ ಭಾವನೆಗಳನ್ನು ಈ ತಂತ್ರಜ್ಞಾನದ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಈ ಮಟ್ಟಕ್ಕೆ ಡಿಜಿಟಲ್ ಮಾಧ್ಯಮಗಳು ಯುವಜನರ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಮಾಧ್ಯಮಗಳು ಯುವಜರನನ್ನು ಆವರಿಸಿರುವುದು ಅಷ್ಟೇ ಅಲ್ಲದೆ, ಅರಿವು ಮೂಡಿಸುವ ಮೂಲಕ ಬದಲಾವಣೆಗಳನ್ನು ತರುವ ಸಾಧನಗಳಾಗಿವೆ. ಈ ಸಾಧನಗಳನ್ನು ಸಕಾರಾತ್ಮಕವಾಗಿ ಬಳಸುತ್ತಿರುವ ನಮ್ಮ ಯುವ ಜನತೆ ಅಭಿವೃದ್ಧಿಯ ಪಥದಲ್ಲಿದ್ದಾರೆ.

ಆದರೆ ಈ ಡಿಜಿಟಲ್ ಮಾಧ್ಯಮಗಳನ್ನು ಬಳಸುತ್ತಿರುವ ಎಲ್ಲಾ ಯುವ ಜನರು ಈ ಸಾಮಾಜಿಕ ಬದಲಾವಣೆ ತರುವಲ್ಲಿ ಕಾರ್ಯನಿರತರಾಗಿದ್ದಾರೆಯೇ ಎಂದು ಗಮನಿಸಿದರೆ ಇಲ್ಲ ಎನ್ನುವ ಉತ್ತರ ಸ್ಪಷ್ಟವಾಗುತ್ತದೆ. ಈ ಸಕಾರಾತ್ಮಕ ಕೆಲಸದಲ್ಲಿ ತೊಡಗಿರುವವರು ಬೆರಳೆಣಿಕೆ ಮಾತ್ರ. ಹಾಗಾಗಿ ಎಲ್ಲಾ ಯುವ ಸಮುದಾಯವೂ ಈ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡು ಸುಸ್ಥಿರ ಬದಲಾವಣೆಯ ಮುಖಾಂತರ ಪ್ರಗತಿ ಸಾಧಿಸುವ ದಿಕ್ಕಿನಲ್ಲಿ ಹೆಜ್ಜೆ ಹಾಕಿದರೆ ಬಹುಶಃ ಈ ವರ್ಷದ ಥೀಮ್ ಗೆ ನ್ಯಾಯ ಸಲ್ಲಿಸಿದಂತಾಗುತ್ತದೆ. ಇದರ ಮೂಲಕ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ತಲುಪಲು ಸಹಾಯಕವಾಗುತ್ತದೆ.


Leave a Reply

Back To Top