ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಅಳಲು

ಅಂದು
ತ್ರೇತಾ ಯುಗದಲ್ಲಿ ಸಮರವಾಯಿತು ಸೀತೆಯ ರಕ್ಷಣೆಗೆಂದು
ದ್ವಾಪರದಲ್ಲಿ ಯುದ್ಧ ನಡೆಯಿತು ದ್ರೌಪದಿಯ ಮಾನಕ್ಕೆಂದು
ಇಂದು ಕಲಿಯುಗದಲ್ಲಿ ನಾರಿಯ ಸಮ್ಮಾನವೆಂತು
ನೀಚ ದೃಷ್ಟಿಯಿಂದ ಹೆಣ್ಣನ್ನು ಹಣ್ಣಂತೆ ಕಿತ್ತು ತಿನ್ನುವರು
ಕಚ್ಚಿ ಹರಿದು ಚಿಂದಿ ಮಾಡಿ ಅಟ್ಟಹಾಸ ಮೆರೆದಿಹರು
ಬೀಭತ್ಸ ರಾಕ್ಷಸರು ಇಂದಿಗೂ ಈ ಜಗದಲ್ಲಿ ನೆಲೆಯಾಗಿಹರು
ಯಾವ ಮಾತೆಯ ಒಡಲು ಬಸಿದು ಜನಿಸಿಹರೋ
ಅದೇ ತಾಯಿಯ ಬೈವರು ನಿಂದಿಸುವರು ಚುಚ್ಚುವರು
ಮಹಿಳೆ ಸೋತರೆ ನಕ್ಕು ನಲಿವರು ಅಪಹಾಸ್ಯದ ಚಪ್ಪಾಳೆ ತಟ್ಟುವರು
ಒಮ್ಮೆ ದಿಲ್ಲಿ ಇನ್ನೊಮ್ಮೆ ಕಲ್ಕತ್ತೆ ಮತ್ತೊಮ್ಮೆ ಇನ್ನೆಲ್ಲೋ
ಎಲ್ಲೆಲ್ಲೂ ಕಾಡುವ ಭಯದ ಛಾಯೆ ನಿರ್ಭಯಳ ಪಾಲಿಗೆ
ನೆನಪಿದೆಯಾ? ಇಲ್ಲಾ ನೀವು ಮರೆತೆ ಬಿಟ್ಟಿರಾ?
ತ್ರೇತಾ ಯುಗದಿಂದ ದ್ವಾಪರದವರೆಗೆ ಎಲ್ಲೆಲ್ಲಿ ನಾರಿಯ ಅಪಮಾನವಾಯಿತೋ ಆಗೆಲ್ಲ ರಣಕಹಳೆ ಮೊಳಗಿತು ಭೀಷಣ ಯುದ್ಧವೇ ನಡೆಯಿತು
ಇಂದು ಕಲಿಯುಗದಲ್ಲಿ …. ಹರಿವ ಕಣ್ಣೀರುಗಳಡಿಯಲ್ಲಿ ಸಾಗುವ ಮೇಣದ ಬತ್ತಿಯು ಮಂದ ಉರಿ ತೇಲಿ ಮರೆಯಾಗುವುದು
ಮೂಲೆಯಲಿ ಬಿಕ್ಕುತ್ತಾ ತನ್ನ ಪಾಲಿನ ಅಭಾಗ್ಯಕ್ಕೆ ಅಬಲೆಯಂತೆ ಕನ್ಯೆ ಕೊರಗಿಹಳು
ಸಹನೆ ಮುರಿದು ಆಕ್ರಂದನದ ಮೊರೆಹಯಿಡುತಿಹಳು
ರಘುನಂದನನೇ ಹೇ ಮಾಧವನೇ….
ಇಂದೀಗ ಬಂದಿಲ್ಲಿ ಅವತರಿಸು…….
ರಕ್ಕಸರ ಸಂಹರಿಸು .. ಜಗನ್ಮಾತೆಯ ಹರಸಿ
ಈ ಜಗವನೀ ಉದ್ಧರಿಸು


One thought on “ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಅಳಲು

Leave a Reply

Back To Top