ಆಹ್ವಾನ ಸಂಗಾತಿ
ನಾನು ನನ್ನ ಗೆಳತಿಯರು
ಪ್ರೇಮಾ ಟಿ ಎಂ ಆರ್
ಹೇ , ಹೆಂಗಿದ್ರೆ? ನೀನು ಏನೇನೋ ಬರಿತೀಯಂತೆ.. ಮಹಾ ನಮ್ಮ ಬಗ್ಗೆ ಬರೆಯೋಕೆ ನಿಂಗೆ ಇಷ್ಟೊಂದು ದಿನ ಬೇಕಾಯ್ತಾ? ಎಂದು ಮೂಗು ಮುರಿತಿರೇನೋ ಅಲ್ವಾ? ಅದಲ್ಲಾ ಕಣ್ರೆ.. ಅಸಲಿಗೆ ನಮ್ಮ ನಡುವಿರುವ ಸ್ನೇಹವನ್ನು ಶಬ್ದಗಳಲ್ಲಿ ಹಿಡಿದಿಡುವಷ್ಟು ನಾನಿನ್ನು ಬೆಳೆದಿಲ್ಲ ಅನ್ಸುತ್ತೆ.. ಇನ್ನು ಹಸಿಹಸಿ ಬರಹಗಾರ್ತಿ ನಾನು. ಪ್ರೀತಿ ಪ್ರಣಯಗಳ ಕುರಿತು ಅಭಿವ್ಯಕ್ತಿಯ ಅವಸರ ಬಂದಾಗ ಪ್ರಬುದ್ಧ ಪ್ರತಿಭಾವಂತ ಸಾಹಿತಿಗಳು ಕೂಡ ಸೋಲುವಂತೆ ನಾನು ಕೂಡ ನಿಮ್ಮ ಸ್ನೇಹದಲ್ಲಿ ಮಿಂದೆದ್ದ ಕ್ಷಣಗಳನ್ನು ಬರೆಯಬೇಕು ಅಂದ್ಕೊಂಡಾಗೆಲ್ಲ ಹಡಬಡಿಸುತ್ತೇನೆ. ನಿಸರ್ಗದಲ್ಲಿರುವ ಪರಿಕರಗಳನ್ನೆಲ್ಲ ಒಗ್ಗೂಡಿಸಿಕೊಂಡು ಪ್ರಕೃತಿಯ ಪ್ರತಿರೂಪವಾದ ತುಳಸಿಯನ್ನು ಪ್ರಧಾನವಾಗಿಟ್ಟುಕೊಂಡು ಸಲ್ಲಿಸುವ ಪೂಜೆಯ ಹೊತ್ತಿಗೆ, ಅದೇ ಪ್ರಕೃತಿಯ ಅಂಗಳದ ಅಂಗವಾಗಿ ಹಾಸು ಹೊಕ್ಕು ಹೊಸೆದು ಹೋದ ನಮ್ಮ ಸ್ನೇಹ ಇನ್ನಿಲ್ಲದೇ ಕಾಡಿ, ಇರುವುದೆಲ್ಲವ ಇದ್ದಲ್ಲಿಯೇ ಬಿಟ್ಟು ಈ ಮನಸ್ಸು ನಿಮ್ಮತ್ತ ಹಾರಿಬಿಡುತ್ತದೆ ಹುಡುಗಿಯರೇ….
‘ಮೂರು ಕೂಡ್ತು ಮುಂಡೆ ದೆವ್ವಗಳು’ ಹೀಗಲ್ಲವೇನ್ರೆ ನಮ್ಮ ತೀರ ತುಂಟಾಟಗಳಿಂದ ರೋಸಿ ಹೋದ ನಮ್ಮ ಹಿರಿಯರು ನಮ್ಮನ್ನು ಕರೆಯುತ್ತಿದ್ದದ್ದು.. ಒಂದೇ ಕೇರಿಯ ಸಾಲಾಗಿದ್ದ ಮೂರು ಮನೆಗಳಲ್ಲಿ ಮೂರು ಮುತ್ತುಗಳಂತೆ ಬರೀ ಕೆಲ ದಿನಗಳ ಅಂತರದಲ್ಲಿ ಹುಟ್ಟಿ ಬೆಳೆದವರು ನಾವು. ಶಾಲೆ ಬೆಟ್ಟ ಬಯಲು ತೇರು ಪೇಟೆ ಜಾತ್ರೆ ಹಾಳಾಗ್ಲಿ ಚೊಂಬು ಹಿಡ್ಕೊಂಡು 2ಇಷ್ಟಕ್ಕೆ ಹೋಗುವಾಗಲೂ ಒಟ್ಟಿಗೆ ಹೋಗುತ್ತಿದ್ದ ಆಸಾಮಿಗಳು ನಾವು . ದಿನ ಬೆಳಗಾದರೆ ಕೋಳಿ ಕುನ್ನಿ ಕೊಟ್ಟಿಗೆಯ ದನ, ತೋಟದ ಬೇಲಿ, ಗೆದ್ದೆಹಾಳಿ, ಕಾರಗಿ ನೀರು ಹೀಗೇ ಯಾವುದೋ ಒಂದು ಕಾರಣಕ್ಕೆ ಶುರುವಾಗುವ ರಂಡೆ, ಮುಂಡೆ, ಬೋಸಡಿ, ಬೋ… ಮಗನೆ, ಸೂ…..ಮಗನೆ ಎಂಬಿತ್ಯಾದಿ ಸುಪ್ರಭಾತಗಳೊಂದಿಗೆ(ಇದು ಅಂದಿನ ಸುದ್ದಿ, ಇಂದಿನದಲ್ಲ) ಸೂರ್ಯನನ್ನು ಎದುರುಗೊಳ್ಳುವ ಹಿಂದುಳಿದವರು ಕೇರಿಯಲ್ಲಿ ಸದ್ದು ಮಾಡಿಕೊಂಡೆ ಅರಳಿದವರು ನಾವು….. ಆದ್ರೂ ನಮ್ಮ ಬಾಯಲ್ಲಿ ಆ ಶ್ಲೋಕಗಳು ಬರದಂತೆ ನಮ್ಮನ್ನು ಪದ್ಮಪತ್ರದ ಹಾಗೆ ಬೆಳೆಸಿದವರು ನಮ್ಮ ಹೆತ್ತವರು. ಕಾಲಿಗೊಂದು ಮುಳ್ಳು ಹೊಕ್ಕಿದರೂ ಕೈಗೊಂದು ಇರುವೆ ಕಡಿದರೂ ಅದನ್ನೇ ನೆವ ಮಾಡಿಕೊಂಡು, ಶಾಲೆ ಎಂಬ ದಮ್ಮು ಕಟ್ಟುವ ಪರಿಸರವನ್ನು ದೂರವಿಟ್ಟು , ಮಾವು ಹಲಸು ಹುಣಸೆ ಗೇರುಮರಗಳ ಅಡಿಯಲ್ಲಿಯೇ ಹೆಚ್ಚು ಹೊತ್ತು ಕಳೆದು ಬದುಕ ಕಲಿತವರು ನಾವು. ಸಣ್ಣಸಣ್ಣದಕ್ಕೆ ಕಾಲ್ ಕೆರೆದು ಜಗಳಕ್ಕೆ ನಿಲ್ಲುವ ನಾನು ಒಣಕಿ ಸೊಣಕಿ. ಅಕ್ಕ ಪಕ್ಕ ನನ್ನ ತಲೆ ಕಾಯುವ ಸ್ವಲ್ಪ ಪರವಾಗಿಲ್ಲ ಎಂದುಕೊಳ್ಳುವಷ್ಟು ತೂಕದ ಶರೀರದ ನೀವುಗಳು. ಒಟ್ಟಿನಲ್ಲಿ ಶಾಲೆಯ ಮಕ್ಕಳ ಗುಂಪಿನಲ್ಲಿ ನಾವು ಜಗಳಗಂಟಿಯರು. ಎಲ್ಲೋ ಒಂದ್ಕಡೆ ನಮಗಿರುವ ಕೊರತೆಗಳೇ ಇದಕ್ಕೆ ಕಾರಣವಾಗಿತ್ತೇನೋ… ನಮ್ಮ ಜೊತೆ ಓದುವ ಮೇಲ್ವರ್ಗದ ಮಕ್ಕಳು ಹಪ್ಪಳ, ಸಂಡಿಗೆ ಬಾಳಕ, ದಡ್ಣ, ಅಪ್ಪೆಮಿಡಿ ಉಪ್ಪಿನಕಾಯಿ ಎನ್ನುತ್ತಿದ್ದರೆ , ಶೂದ್ರ ಮಕ್ಕಳು ನಾವು ಮಳೆಗಾಲದಲ್ಲಿ ಹೊಳ್ಳಿ(ಜಗುಲಿ) ತುದೀಗೆ,ಅಥವಾ ಅಂಗಳದ ಹೇಡ್ಗಿ ಕಟ್ಟೆ ಮೇಲೆ ಕೂತು ಸೋರ್ಕಲ ನೀರಿಗೆ ಕಾಲ್ಕುಣಿಸುತ್ತ, ಕೆಂಡದಮೇಲೆ ಸುಟ್ಟ ಹಲಸಿನಬೀಜ ಹುಣಸೆಬೀಜ ಕಟ್ಟಂಗುಡುತ್ತಾ ಮೆಲ್ಲುತ್ತಿದ್ದರೆ ಮೂರು ಲೋಕದ ಸುಖವು ನಮ್ಮ ಕಾಲ್ಬುಡದಲ್ಲಿ ಬಂದು ಬಿದ್ದಂತೆ…. ಅಕ್ಕಪಕ್ಕದ ಯಾವುದೇ ಮನೆಯಲ್ಲಿ ಹಲಸಿನ ಹಣ್ಣು ಬಿರಿದರು ನಾವುಗಳು ಮುಗಾಳಿ ತಕ್ಕೊಂಡು ಅಲ್ಲಿಗೆ ಹೋಗಿ ಪಟ್ಟಾಗಿ ಕೂತು ಪಂದ್ಯ ಕಟ್ಟಿದವರಂತೆ ಸೊಳೆಗಳನ್ನ ಎಳೆದೆಳೆದು ಮುಕ್ಕಿ ಕಾಲಿ ಮಾಡಿ “ಯಪ್ಪಾ ಈ ಮೂರು ಹೆಣ್ಣು ಮಕ್ಕಳು ಮೂರು ಬಿಟ್ಟವರು ” ಎಂದು ಬೈಸಿಕೊಂಡ್ರೂ ನಮಗಲ್ಲ ಎಂಬಂತೆ ಕೈ ಕೊಡವಿಕೊಂಡು ಹಾಕಿದ ಹಳೆ ಅಂಗಿಗೆ ಕೈ ಒರಸಿಕೊಂಡು ಕುಂಡೆ ತಿರುವಿ ಎದ್ದು ಬಂದವರು…. ಯಾರದೇ ತೋಟದಲ್ಲಿ ಪೇರಲೆ ಮರ ಇರಲಿ ಕೋತಿಯಂತೆ ಏರಿ ಹೀಚು ಬಿಡದೆ ಕಿತ್ತಿದ್ದು, ಗೇರು ಹಣ್ಣನ್ನು ಸೇಬಿನಂತೆ ಹೆಚ್ಚಿ ಉಪ್ಪು ಖಾರ ಹಚ್ಚಿ ಮೂಗಿಗೆ ಬರೋತನಕ ಮೆದ್ದು ಮೈಯಲ್ಲ ಒಗರು ವಾಸನೆ ಮೆತ್ತಿಕೊಂಡು ತಿರುಗಿ “ಗಲೀಜು ಹೆಣ್ಮಕ್ಳು” ಎಂದು ಬೈಸಿಕೊಂಡದ್ದು ಯಾರೇನೇ ಬೈದರೂ ನಮಗೇನೂ ಫರಕ್ ಬೀಳದಂತೆ ಇದ್ದುದು ತೀರ ಚಿಕ್ಕವರಿರುವಾಗಲೇನೂ ಅಲ್ಲ ಬಿಡಿ. ನಮ್ಮ ಕೇರಿಗೆ ಯಾರೇ ದೇವರು ಹೊತ್ತವರು, ಸೀರೆ ಮಾರುವ ಪೇರಿವಾಲಾಗಳು , ಬಳೆಗಾರರು, ಮಂಗ ಕರಡಿ ಆಡಿಸುವವರು, ಬಸವನ ತಂದವರು ಬಂದ್ರೂ ಅವರ ಹಿಂದ್ಹಿಂದೇ ಸುತ್ತಿ ಅವರನ್ನ ಈ ಕೇರಿಯಿಂದ ಆ ಕೇರಿಗೆ ಮುಟ್ಟಿಸಿ ಬರುವ ಹೊಣೆಯನ್ನು ನಾವಾಗಿಯೇ ಸ್ವಸಂತೋಷಕ್ಕೆ ಹೊತ್ಕೊಂಡಿದ್ದು ಬಿಡಿ. ಗಣಿತ ವಿಜ್ಞಾನ ಇಂಗ್ಲೀಸು(English) ನಮ್ಮ ಬೊಡ್ಡು ತಲೆಗೆ ಹೋಗದೆ,, ಅಕ್ಬರ ರಾಣಾ ಪ್ರತಾಪರ ಜನನ ಮರಣಗಳ ಇಸ್ವಿಗಳು ತಲೆ ಚಿಟ್ಟು ಹಿಡಿಸಿ, ಸಾಯ್ಲಿ ಇದು ಎಂದು ಜೋಳಿಗೆ ಜಾರಿಸಿ ಹೆಗಲು ಹಗುರಾಗಿಸಿ, ಇನ್ನೇನಿದ್ದರೂ ತೆರೆದ ಬಯಲಲ್ಲಿಯೇ ಕಲಿಯುವುದೆಂದು ಪಣತೊಟ್ಟು, ನೀವಿಬ್ಬರು ಹಲ್ಗತ್ತಿ ಬಾಯ್ಗತ್ತಿ ಹಿಡಿದು ಸೊಪ್ಪು ಸೌದೆ ಕಡಿದು ತಲೆಹೊರೆಗೆ ಕೊರಳು ಬಾಗಿಸಿದ್ದು ಸೆವೆನ್ತ್ ಮುಗಿದ ತಕ್ಷಣ.. ನಾನು ಕೆನ್ನೆ ಹಿಂಡುವ ಅಮ್ಮನಿಗೆ, ಅಪ್ಪಯ್ಯನ ಕತ್ತಿಕೊಕ್ಕೆ ಹುರಿಗೆ ಹೆದರಿ ಹೆದರಿ ನಿಮ್ಮತ್ತ ಹಿಂತಿರುಗಿ ನೋಡುತ್ತಾ ಹೈಸ್ಕೂಲು ಮೆಟ್ಟಿಲು ಹತ್ತಿದ್ದೆ.
ಅಲ್ಲಿ ಕೆ ಆರ್ ಹೆಗ್ಡೆ ಅವರು ಕಲಿಸುವ ಫಿಸಿಕ್ಸ್ ಕೆಮಿಸ್ಟ್ರಿ ಆಲ್ಜಿಬ್ರಾ ಅರ್ಥಮೆಟಿಕ್ ಗಳು ನನ್ನ ಮೆದುಳು ಹಿಂಡಿ ಹಿಪ್ಪೆ ಮಾಡಿ, ಎನ್ ಬಿ ನಾಯ್ಕ್ ಸರ್ ಕಲಿಸುವ ಜೀವಶಾಸ್ತ್ರ ಬಯೋಲಜಿ ಜೊಮೆಟ್ರಿಗಳು ನನ್ನ ರಾಗಿ ಅಂಬ್ಲಿ ಉಂಡ ತಲೆಗೆ ಅಲ್ಪ ಸ್ವಲ್ಪ ಏರಿ , ತುಸು ಪರ್ವಾಗಿಲ್ಲ ಎಂಬಷ್ಟು ಮಾರ್ಕ್ಸ್ ತೆಗೆದು, ಮೂರು ವರ್ಷ ಹರ ಹರ ಹಾಕಿ, ನನ್ ಮಗ್ಳನ್ನು ಮಾಸ್ತರಣಿ ಮಾಡಿಸಬೇಕು ಎಂಬ ಅಮ್ಮನ ಕನಸಿಗೆ ಕಲ್ಲು ಬೀಳದ ಹಾಗೆ ಹೆಂಗ್ಹೆಂಗೋ ಮೆಂಟೈನ್ ಮಾಡಿ, ಅಡ್ಡಿಲ್ಲ ನಮ್ಮ ಕೇರಿ ಮಗು ಗನಾ ಮಾರ್ಕ್ಸ್ ತಕ್ಕೊಂಡದೆ ಅಂತ ಹೊಗಳಿಸಿಕೊಂಡು , ಮೆಟ್ರಿಕ್ ಮುಗಿಸಿಕೊಂಡೇ ಮಲ್ಲಾಪುರ ಬಿಟ್ಟಿದ್ದು. ಸಣಿಯಾರ ಆಯ್ತಾರ ರಜಾದಿನಗಳಲ್ಲಿ ನೀವೆಲ್ಲೋ ನಾನಲ್ಲೇ ಎಂದು ಬಗಲಚೀಲ ಎಸೆದು, ಬಳ್ಳಿ ಸಿಂಬಿ ಹಿಡಿದು ನಿಮ್ಮ ಬೆನ್ನಿಗೆ ಬೀಳುವದು ಮಾಮೂಲಾಗಿತ್ತು ಬಿಡಿ… ಮೂವರಿಗೂ ಮನೆಯಲ್ಲಿ ಕೊಡಿಸೋದು ವರ್ಷಕ್ಕೆ ಒಂದೇ ಅಂಗಿ ಸೆವೆನ್ತ್ ತನಕ ಒಂದೇ ಒಂದೇ ಅಂಗಿಯಲ್ಲಿ ಅಡ್ಜಸ್ಟ್ ಮಾಡ್ಕೊಂಡವರು ನಾವು . ಹೈಸ್ಕೂಲಿಗೆ ಹೋಗುವಾಗ ಪಾಪ ಸಾಲಿಗೆ ಹೋಗುವ ಹೋಗುವವಳು ಇವಳು ಎಂದು ನಿಮ್ಮ ಅಂಗಿಯನ್ನು ನನಗೆ ಹಾಕೋಕೆ ಕೊಡ್ತಿದ್ದುದರಿಂದ ಆಗ ನಾನು ಮೂರು ಅಂಗಿಯ ಒಡತಿ. ಆ ಯೂನಿಫಾರ್ಮ್ ದು ಬೇರೇನೆ ಕಥೆ ಬಿಡ್ರೆ. ಬಟ್ಟೆ ತರುವಾಗ ದುಡ್ಡು ಸಾಕಾಗದೇ ಅಮ್ಮ ಅರ್ಧ ಮೀಟರ್ ಕಡಿಮೆ ತಂದು , ಆ ಟೇಲರ್ ಹರಿಶ್ಚಂದ್ರಣ್ಣ ಸ್ಕರ್ಟ್ ಗಿಡ್ಡ ಹೊಲಿದು , ಅದು ನನ್ನ ಗೋರೆಗೋರೆ ತೊಡೆಗಳನ್ನು ಪೂರ್ತಿ ಮುಚ್ಚದೇ ಅಲ್ಲಿನ ಗೆಳತಿಯರು ಮುಸಿಮುಸಿ ನಕ್ಕು, ಹಾಳಾಗಲಿ ಇದ್ರ ಸಾವಾಸ ಎಂದು ಬೆಳ್ಳಕ್ಕಿಗಳ ನಡುವೆ ನಾನೊಬ್ಬಳೇ ಬಣ್ಣದ ಹಕ್ಕಿಯಾಗಿ, ಶಿಸ್ತಿನ ಸಿಪಾಯಿ ಪಟ್ಗಾರ್ ಮಾಸ್ಟರ್ ಹತ್ತಿರ ಬೈಸಿಕೊಂಡದ್ದನ್ನು ಅಮ್ಮನಿಗೆ ಹೇಳಿದ್ರೆ ಸರಿಯಾಗಿ ಬಟ್ಟೆ ಕೊಡಿಸಲಾಗದ ಹಣೆಬರಕ್ಕೆ ಹಳಹಳಿಸುತ್ತಾಳೆಂದು ನಿಮ್ಮ ಮುಂದೆಯೇ ತೋಡಿಕೊಂಡದ್ದು… ಯುನಿಫಾರ್ಮ ದಿನ ಬುಧವಾರ ಶಾಲೆಗೆ ಚಕ್ಕರ್ ಹೊಡೆಯುವ ಐಡಿಯಾವನ್ನು ನೀವೇ ಕೊಟ್ಟಿದ್ದು… ಇಷ್ಟಕ್ಕೆ ನನ್ನ ಕಷ್ಟ ಮುಗೀತು ಅಂದ್ಕೊಂಡ್ರಾ?, ಇಲ್ಲ, ನಮ್ ಜಾತಿ ಹುಡುಗಿ ಒಂದಷ್ಟು ಕಲಿತುಕೊಳ್ಳಿ ಎಂದು ಕಾಳಜಿ ಇರುವ ಎನ್ ಎಸ್ ನಾಯ್ಕರು ನಾನು ಶಾಲೆ ತಪ್ಪಿಸಿದ್ದಕ್ಕೆ ಗುಳ್ಳಿ ಹೆಕ್ಕೋಕ್ ಹೋಗಿದ್ಯೆ? ಗಾಳ ಹಾಕುಕ್ ಹೋಗಿದ್ಯೆ? ಎಂದು ಜಡೆ ಬಗ್ಗಿಸಿ ಡುಮ್ಮೆಂದು ಗುದ್ದಿದರೆ ಗಂಡು ಮಕ್ಕಳು ಹೋ ಎಂದು ಬೊಬ್ಬೆ ಹೊಡೆಯುತ್ತಿದ್ದರು…. ಮೊದಲೇ ನೀರಿನ ಟ್ಯಾಂಕ್ ನಾನು, ಬುಳು ಬುಳು ಅತ್ತದ್ದು ನಿಮ್ಮೆದುರಿಗೇನೆ…ಅಮ್ಮ ಸಪ್ಪ ಹೊಟ್ಟೆ ಪಾಡಿಗೆ ವಲಸೆ ಹೋಗುವ ಜೀವಗಳು… ಮತ್ತೆ ಪಾಪ ಅಮ್ಮನ ಹತ್ತಿರ ಹೇಗೆ ಹೇಳಲಿ…. ಅವಳು ನೊಂದ್ಕೊಳ್ಳೋದು ನಂಗೆ ಬೇಕಿರಲಿಲ್ಲ..
ಹಾಗೇ ಮೆಲ್ಲಮೆಲ್ಲನೆ ಎದೆ ಚಿಗುರಿ ಕುಂಡೆ ಕೊನರಿ ಯುವತಿಯರಾದೆವು. ಈಗ ಕೊನಳ್ಳಿ ಹಬ್ಬ, ಕೆಕ್ಕಾರು ತೇರು, ವಾಲಗಳ್ಳಿ ಬಂಡಿಹಬ್ಬ, ಚಂದಾವರ ಪೇಸ್ತು (ಫೆಸ್ಟ್) ಹೀಗೆ ಊರ ಸುತ್ತ ಯಾವುದೇ ಹಬ್ಬ ಜಾತ್ರೆ ಇರಲಿ ಉದ್ದುದ್ದಕ್ಕೆ ಅಬ್ಬಲಿ ಹೂಂಗು ಮುಡುಕೊಂಡು ಹೊರಟು ಬಿಡುವ ನಮ್ಮನ್ನು ಊರ ಹಿರಿಯರು ಕೇಳ್ತಿದ್ದಿದ್ದು , “ಏನ್ರೆ ಚಿತ್ರಾಕ್ಷಿಯರ ಇಂದೆ(ಇದಿನ) ಯಾವೂರು ಹಾಳ್ ಮಾಡೂಕ್ ಹೋತ್ರೆ ?”ಎಂದು . ಊರಲ್ಲಿ ಎಲ್ಲೇ ಮದುವೆ ಚೊಳಂಗಿ(ಮುಂಜಿ) ಇರಲಿ ನಾವು ಮೂರು ಜನ ಮುಂಡೆದೆವ್ವಗಳು ಹಾಜರು.. ಸತ್ಯಕ್ಕೆ ಎಷ್ಟು ಹತ್ತಿರವಿತ್ತೋ ಗೊತ್ತಿಲ್ಲ , ‘ಆದರೆ ನಾವು ಅಂದುಕೊಂಡಿದ್ದು ಊರಿಗೆಲ್ಲ ನಾವೇ ಸುಂದ್ರೀರು, ಊರಿಗೆಲ್ಲ ನಾವೇ ಪದ್ಮಾವತೀರು…. ‘ ಅಣ್ಣ ತಮ್ಮಂದಿರ ಪಟಾಲಮ್ಮ ಕಟ್ಟಿಕೊಂಡು, ಆರು ಏಳು ಮೈಲಿ ದೂರದ ಗಜಾನನ ಹಾಗೂ ಚಿತ್ತರಂಜನ್ ಟಾಕೀಸ್ಗೆ ನಡ್ಕೊಂಡೆ ಹೋಗಿ , ಆರು ಒಂಬತ್ತರ ಶೋ ನೋಡಿ, ನಡ್ಕೊಂಡೇ ಮನೆ ತಲುಪುತ್ತಿದ್ದ ಘಟವಾಣಿಗಳು ನಾವು. ಆಚೀಚೆ ಮನೆ ಅಜ್ಜಿಯರು “ಯವ್ವ ಕಲಿ ಮುಂಡೀರು… ಉರ್ಕಂತ ನೋಡು, ಏನಾಗೋತ್ರೋ ಎಂದು ನಮ್ಮ ನೋಡಿ ಸಕ್ಣ( ಶಕುನ) ನುಡಿಯುತ್ತಿದ್ದರು ಅಲ್ವಾ?. ನಾವೇನು ಅಗೇ ಇಲ್ಲ ನೋಡಿ ಎಂದು ಹೇಳೋಕೆ ಈಗ ಅವರೊಬ್ಬರು ಇಲ್ಲವಲ್ಲ.. ದಸದಿಮ್ಮೀರು , ಯಾವನ ಗುಡಿ ತೊಳುಕ್ (ತೊಳೆಯೋಕೆ) ಹುಟ್ಟರ್ಯೋ ಎನ್ನುತ್ತಿದ್ದವರಿಗೆ ನಾವು ಕೊಟ್ಟ ಮನೆಯ ಮಾನ ಸಮ್ಮಾನವನ್ನು ಕಾಪಾಡಿಕೊಂಡು ನೆಮ್ಮದಿಯಿಂದ ಬದುಕುತ್ತಿದ್ದುದನ್ನು ಈಗ ಹೇಳೋಣವೆಂದರೆ ಪಾಪ ಅವ್ರೆಲ್ಲ ಯಾವಾಗ್ಲೋ ಪಡ್ಚ.. ಹೌದೇ, ನೀವಿಬ್ರು ಹುಟ್ಟಿದೂರಲ್ಲೇ ಸೋದರ ಮಾವನ ಮಗಕಳಿಗೆ ಮನಸ್ಸು ಕೊಟ್ಟು, ನಿಮ್ಮ ಮದುವೆ ಮಾತುಕತೆಗಳಾದಾಗ, ನಾನು ನನಗಿಲ್ಲದ ಮಾವನ ಮಗನಿಗೆ, ಇದ್ದರೂ ನನ್ನ ಮೆಚ್ಚಿ ಕೊಳ್ಳದವನಿಗೆ ಹಿಡಿ ಶಾಪವಿಟ್ಟಿದ್ದು ಇನ್ನೂ ಕಸಗಾಯಿಯಂಥ ವಯಸ್ಸಿನಲ್ಲಿ ಬಿಡ್ರೆ. ಈಗ ಆ ನೋವಿಲ್ಲ. ನನ್ನ ಸಂಸಾರದಲ್ಲಿ ನಾನು ಪೂರ್ಣ ತೃಪ್ತೆ…ಆದರೂ ನೀವು ಹತ್ತಿರವಿಲ್ಲದ ಬದುಕು ಆಧಾ ಅಧೂರಾ ಅನ್ಸೋದಂತೂ ನಿಜ. ನನ್ನ ಬಿಎ ಫೈನಲ್ ಇಯರ್ ಕೊನೆಯ ಹಿಸ್ಟರಿ ಪೇಪರ್ ದಿನವೇ ನಿಮ್ಮಲ್ಲಿ ಒಬ್ಬಳ ಮದುವೆ.. ನಿಮ್ಮ ಮದುವೆಗಿಂತ ಈ ಪೇಪರ್ ಹೆಚ್ಚಲ್ಲ ಎಂದ್ಕೊಂಡು, ಅರವತ್ತು ಮಾರ್ಕ್ಸ್ ಪೇಪರ್ ಬರೆದು ಬಿಸಾಕಿ ನಿಮ್ಮ ಮದುವೆ ಮಂಟಪಕ್ಕೆ ಹಾಜರಾಗಿದ್ದು ನಮ್ಮಮ್ಮಂಗೆ ಗೊತ್ತಾದ್ರೆ ಈಗ್ಲೂ ನಮ್ಮಮ್ಮ ಮೇಲಿನೂರಿನಿಂದಲೇ ಕೋಲು ತಕ್ಕೊಂಡು ಬಂದ್ಬಿಡ್ತಾಳೆ… ಈಗ ಮುಗಿಸ್ತೇನೆ ಆಯ್ತಾ?… ಇನ್ನೂ ಬರಿ ಅಂತೀರಾ…? ಇಲ್ಲ ಕಣ್ರೀ ಈಗ್ಲೇ ಉದ್ದ ಆಯ್ತು . ಬರೆದ್ರೆ ಒಂದು ಹೊತ್ತಿಗೆಯಾದೀತು ಹುಡುಗಿಯರೇ… ಆದ್ರೆ ನಮ್ಮ ಸಂಪಾದಕರು, “ನೀವು ಶಾರ್ಟ್ ಅಂಡ್ ಸ್ವೀಟ್ ಆಗಿ ಬರೆಯೋದು ಯಾವ ಕಲಿತೀರಿ ಮೇಡಂ?” ಅಂದ್ಬಿಟ್ರೆ ಅಂತ ಭಯ. ಇನ್ನೊಮ್ಮೆ ಮತ್ತೇನಾದ್ರೂ ಬರೆಯೋಕೆ ಸಾಧ್ಯಾನಾ? ನೋಡೋಣ… ಬರ್ಲಾ?
ಕಳೆದು ಹೋದೆವು ನಾವು ಕಾಲದಾ ಕಾಲಲ್ಲಿ
ಕೊಂಚವೂ ಮಾಸಿಲ್ಲ ನೆನಪು ಈ ತನಕ
ಚೆನ್ನೆಮಣೆಯಾದ ನೆಲ ಗಾರೆಯಾದವು ಅಂದೇ
ಮನದಲ್ಲೇ ಉರುಳುತಿವೆ ಇಂದು ಕಾಯಿಗಳು
ಬಾಳು ಸವಿಯಲು ಸವೆಯಲು ಸರ್ವರ ಬಾಳಿನಲ್ಲಿ ಇಂತಹ ಗೆಳತಿಯರು ಇರಲಿ ಅವರ ಸವಿ ನೆನಪುಗಳು ತುಂಬಿರಲೆಂಬ ಆಶಯಗಳೊಂದಿಗೆ ಮತ್ತೆ ಬರ್ತೇನೆ ಆಯ್ತಾ?……..
ಪ್ರೇಮಾ ಟಿ.ಎಂ.ಆರ್
ಚೆನ್ನಾಗಿದೆ ಲೇಖನ. ಗುಡ್