ಪರಿಸರ ಸಂಗಾತಿ
ಮಾಲಾ ಹೆಗಡೆ
‘ಪ್ರಕೃತಿಯ ಮುನಿಸು’
ಆಹಾ!! ಸುಂದರ ಸೋಜಿಗ ದೈವ ಸೃಷ್ಟಿ ಈ ಪ್ರಕೃತಿ. ಚರಾಚರ ಜೀವ ಜಂತುಗಳ ಉಸಿರು, ಮೂಲಾಧಾರ ಬದುಕು ಈ ನಿಸರ್ಗ. ತನ್ನೊಡಲ ಮಕ್ಕಳ ಮೇಲೆಯೇ ತನ್ನ ಪ್ರತೀಕಾರಎಂದರೆ ಇದು ನಿಜಕ್ಕೂ ಪ್ರಕೃತಿಯ ಮಾತೆಯ ದಯನೀಯ ಸ್ಥಿತಿ ಎನ್ನಬಹುದೇನೋ. ಇಂದು ನಾವು ಕಾಣುತ್ತಿರೋ ಈ ವಿಕೋಪ, ನೈಸರ್ಗಿಕ ಅಸಮತೋಲನ ಇದು ನಮ್ಮಗಳ ಅವಿವೇಕದ ಕಾರ್ಯಕ್ಕೆ ಪ್ರಕೃತಿ ನಮಗೀಯುತ್ತಿರುವ ಶಿಕ್ಷೆಯೋ, ನಮ್ಮ ಪರಿವರ್ತನೆಗಾಗಿ ಕಲಿಸುತ್ತೀರೋ ಪಾಠದ ಪರಿಯೋ ಅರಿಯಲಾಗುತ್ತಿಲ್ಲ.
ಮಾನವ ಎಲ್ಲಾ ಪ್ರಾಣಿಗಳಲ್ಲೂ ಬುದ್ಧಿವಂತ ಪ್ರಾಣಿ, ಜೀವಿ ಎನಿಸಿಕೊಂಡಿರುವ. ಆದರೆ ವಿಪರ್ಯಾಸ ಏನೆಂದರೆ ಅವನ ಈ ಅತಿಯಾದ ಬುದ್ಧಿವಂತಿಕೆಯೇ ಎಲ್ಲಾ ಅನಾಹುತಕ್ಕೆ ಎಡೆಮಾಡಿಕೊಟ್ಟಿರುವುದು.
ನಿಜ, ನಮ್ಮ ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಎಲ್ಲದರಲ್ಲೂ ಮಾನವನ ಕೊಡುಗೆ ಅಪಾರ. ಹಳ್ಳಿಗಳೂ ನಗರಗಳಾಗಿವೆ, ಕೃಷಿ, ತಂತ್ರಜ್ಞಾನ, ವೈದ್ಯಕೀಯ ಎಲ್ಲಾ ಕ್ಷೇತ್ರದಲ್ಲಿಯೂ ಗಣನೀಯ ಪ್ರಗತಿ ಸಾಧಿಸುತ್ತಿದೆ. ಹತ್ತು ಜನ ಮಾಡುವ ಕೆಲಸವನ್ನು ಒಂದೇ ಯಂತ್ರ ಮಾಡುವಂತಾಗಿದೆ. ಇದೆಲ್ಲವೂ ಮಾನವನ ಶ್ರಮ ಪ್ರಗತಿಗೆ ಪೂರಕವೇ ಒಂದು ಬಗೆಯಾಗಿ ಯೋಚಿಸಿದರೆ. ಉರುವಲಿಂದ ಬೆಂಕಿ ಹಿಡಿಸುತ್ತಿದ್ದ ಹಳ್ಳಿಗಳಲ್ಲಿ ಗ್ಯಾಸ್, ಇಂಧನ ಬಂದಿದೆ. ನವ ನವೀನ ಕೃಷಿ ಉಪಕರಣಗಳು ಚಾಲ್ತಿಯಲ್ಲಿವೆ ಮಾನವ ತನ್ನ ಅಗಾಧ ಬುದ್ಧಿಶಕ್ತಿಯಿಂದ ಎಲ್ಲವನ್ನೂ ತನಗೆ ಬೇಕಾದಂತೆ ಅಭಿವೃದ್ಧಿ ಪಡಿಸಿಕೊಳ್ಳುತ್ತಿದ್ದಾನೆ, ಚಂದ್ರಯಾನದಂತಹ ಸಾಹಸವನ್ನೇ ಕೈಗೆತ್ತಿ ಕೊಂಡಿದ್ದಾನೆ. ವೈ ದ್ಯಲೋಕವಂತೂ ಊಹೆಗೂ ಮೀರಿ ದಿನೇ ದಿನೇ ಬೆಳವಣಿಗೆಯತ್ತ ಸಾಗುತ್ತಿದೆ. ಹಿಂದೆ ಹರಪ್ಪ ನಾಗರೀಕತೆಯ ಕಾಲದಲ್ಲಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಆಗಿನ ಒಂದಿಷ್ಟು ಜನಾಂಗವೇ ನಶಿಸಿ ಹೋಗಿರುವ ಚರಿತ್ರೆ ನಾವು ಓದುತ್ತೇವೆ ಅದನ್ನೆಲ್ಲವನ್ನು ಗಮನಿಸಿದಾಗ ಈಗ ನಾವು ಎಷ್ಟೋ ವಿಧದಲ್ಲಿ ಸುರಕ್ಷತೆಯನ್ನು ಕಂದುಕೊಂಡಿದ್ದೇವೆ ಎಂಬುದನ್ನು ಅಲ್ಲಗಳೆಯಲಾ ಗದು.
ಇದೇನೇ ಇದ್ದರೂ ನಾವುಗಳು ಈ ಅಭಿವೃದ್ಧಿಯ ಗುಂಗಿನಲ್ಲಿ ಅವಿವೇಕಿಗಳಾಗುತ್ತಿರುವುದು ಶೋಚನೀಯ. ಏಕೆಂದರೆ ಒಂದು ಕೆಲಸ ಮಾಡುವುದರಿಂದ ಅದರಿಂದಾಗುವ ಅನುಕೂಲ ಅನಾನುಕೂಲ ಎರಡನ್ನು ಪರಾಮರ್ಶಿಸಿ ಅದ ಕೈಗೆತ್ತಿಕೊಳ್ಳಬೇಕು. ಅಂತಹ ತಾಳ್ಮೆ ಇರಬೇಕು. ನಾವು ಮಾಡುವ ಕಾರ್ಯದಿಂದ ಮನುಕುಲಕ್ಕೆ ಬಂದೊದಗುವ ಸಮಸ್ಯೆಗಳ ಕುರಿತು ವೈಜ್ಞಾನಿಕವಾಗಿ ಯೋಚಿಸಿ ಮುಂದುವರೆದಲ್ಲಿ ಈ ರೀತಿಯ ಪ್ರಕೃತಿ ವಿರೋಧಿ, ಪ್ರಕೋಪಗಳನ್ನು ಆದಷ್ಟು ತಡೆಗಟ್ಟಬಹುದು.
ತಾನು, ತನ್ನದು ಎನ್ನುವ ಸಂಕುಚಿತ ಆಲೋಚನೆ ತೊಡೆದಾಗಲೇ ಎಲ್ಲರ ಕ್ಷೇಮ ಸಾಧ್ಯ.
ಉದಾಹರಣೆಗೆ, ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ಎಷ್ಟು ಕಟ್ಟಡಗಳು ಇರಬಹುದು, ಎಷ್ಟು ಕೊಳವೆ ಬಾವಿ ತೋಡಬಹುದು, ಎಷ್ಟು ಗಿಡಮರಗಳು ಅವಶ್ಯಕ ಇವೆಲ್ಲದರ ಅಧ್ಯಯನ ಅತ್ಯಾವಶ್ಯಕ. ಇಂತಹ ಪರಿಸರ ತಜ್ಞರ ಸಲಹೆ ಸೂಚನೆಯಂತೆ ನಮ್ಮಗಳ ಕಾರ್ಯ ಮಾಡಿದಲ್ಲಿ ಅದು ಪೂರಕವಾಗುವುದು.
ಇದಲ್ಲದೇ ಭಾರತದಲ್ಲಿ ಭೂ ಪ್ರದೇಶದ ಮಿತಿಯಲ್ಲಿ ಜನಸಂಖ್ಯೆಯ ಮಟ್ಟ ಅತೀವ ಹೆಚ್ಚಿನದಾಗಿದೆ. ಇದರಿಂದಲೇ ಬೆಂಗಳೂರಿನoತಹ ನಗರಿಯಲ್ಲಿ ಒಂದು ಕಾಲದಲ್ಲಿ ಹೇರಳವಾಗಿದ್ದ ಕೆರೆಗಳು ಈಗ ಬೆರಳೆಣಿಕೆಗೆ ಬಂದು ತಲುಪಿ ಆ ಜಾಗದಲ್ಲಿ ಜನ ವಸತಿ ಕಟ್ಟಡಗಳು, ವಿವಿಧ ಕಾರ್ಖಾನೆಗಳು, ತಲೆಎತ್ತಿವೆ. ಇದು ಅನಿವಾರ್ಯವೂ ಹೌದು ಏಕೆಂದರೆ ಮಾನವನಿಗೆ ವಸತಿ ಮೂಲಭೂತ ಅವಶ್ಯಕತೆ ಏನನ್ನುವುದು ಇದಕ್ಕೆ?? ಈ ನಿಟ್ಟಿನಲ್ಲಿ ಜನಸಂಖ್ಯೆಯ ನಿಯಂತ್ರಣವೂ ಪ್ರಕೃತಿ ಉಳಿವಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.
ಇದಲ್ಲದೇ ಪರಿಸರ ಸ್ನೇಹಿ ಜಾಗೃತೆ, ಇವುಗಳ ಕುರಿತಾದ ಶೈಕ್ಷಣಿಕ ಅರಿವು ಮೂಡಿಸುವಲ್ಲಿ ಮುಂದಾಗಬೇಕು ಅಂದಾಗ ಮಾತ್ರ ಮುಂದಿನ ಪೀಳಿಗೆ ಈ ಕುರಿತು ಜ್ಞಾನ ಪಡೆದು ಸುವ್ಯವಸ್ಥಿತ ಸಮಾಜ ನಿರ್ವಹಣೆ ಸಾಧ್ಯ.
ಈ ಸುಂದರ ಪ್ರಕೃತಿಯ ನೈರ್ಮಲ್ಯ, ಅವುಗಳ ಉಳಿವು ನಾವು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಹೋಗುವ ಅತಿದೊಡ್ಡ ಕೊಡುಗೆ. ಇದು ನಮ್ಮ ಆದ್ಯ ಕರ್ತವ್ಯವೂ ಹೌದು.
ಅತಿಯಾದರೆ ಅಮೃತವೂ ವಿಷವಾಗುವುದಂತೆ ಈಗ ಆಗಿರುವುದು ಅದೇ. ನಮ್ಮಗಳ ಅತಿಯಾದ ಆಲೋಚನೆ, ಸ್ವಾರ್ಥ, ನಮಗೆ ಮುಳುವಾಗಿ ಪರಿಣಮಿಸಿರುವುದು. ನಮ್ಮ ಉಳಿವು ಅಳಿವು ನಮ್ಮಗಳ ಕೈಯಲ್ಲೇ ಇರುವುದು ಎಂಬುದನರಿತು, ಪ್ರಜ್ಞಾವಂತರಾಗಿ ಮುನ್ನಡೆದಲ್ಲಿ ಪ್ರಕೃತಿಯೂ ನಮಗೆ ಸಹಕರಿಸುವುದರಲ್ಲಿ ಸಂಶಯವಿಲ್ಲ. ನಾವೇನು ಕೊಡುತ್ತೇವೋ ನಮಗದೇ ದೊರೆಯುವುದು. ಹಾಗಾಗಿ ಪ್ರಕೃತಿಯ ಪ್ರೀತಿಸೋಣ,ಪೂಜಿಸೋಣ.
ಅದ ಉಳಿಸಿ ಬೆಳೆಸುವತ್ತ ಯೋಚಿಸೋಣ.
ಆ ಮೂಲಕವೇ ನಮ್ಮ ಪ್ರಗತಿಯ ಆಶಿಸೋಣ.
————————————
ಮಾಲಾ ಹೆಗಡೆ.