ಓರೆನೋಟ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಓರೆನೋಟ
ಕಹಿ ಬೇವಿನ ಬೀಜ ಸಿಹಿಯಾದ ಬಗ
“ಬ್ಯಾಸಿಗಿ ದಿವಸಕ ಬೇವಿನಮರ ತಂಪ/ ಭೀಮಾರತಿ ಎಂಬ ಹೊಳೆ ತಂಪು ಹಡೆದವ್ವ // ನೀ ತಂಪು ನನ್ನ ತವರಿಗೆ”
ನಮ್ಮ ಜನಪದರು ಬೇವಿನಮರದ ನೆರಳನ್ನು ಕುರಿತು ಹೀಗೇ ಬರೆದಿದ್ದಾರೆ. ಅದರ ಮಹತ್ವ ಬಹು ದೊಡ್ಡದು.
ಬದುಕಿನಲ್ಲಿ ಕೆಲವು ಸಲ ಹೀಗಾಗುತ್ತವೆ…!!
ಎಲ್ಲರಿಗೂ ಬೇವು ಕಹಿಯಾದರೂ ನಮಗಂತೂ ಅದು ಸಿಹಿಯನ್ನು ಹಂಚಿದೆ. ಕಡು ಬಡತನದ ಬೇಗೆಗೆ ಈ ಬೇವಿನಮರ ನಮಗೆ ತಂಪೆರೆದಿದೆ.
ನಮ್ಮೂರು ಹಲಗೇರಿ ಗ್ರಾಮದಲ್ಲಿ ಬಹುತೇಕ ಕೃಷಿಕ ಮಹಿಳೆಯರು ಬೇಸಿಗೆ ರಜೆ ಬಂದಿತೆಂದರೆ ತಮ್ಮ ಮಕ್ಕಳೊಡನೆ ಕೃಷಿಯೇತರ ಉದ್ಯೋಗಗಳನ್ನು ಮಾಡಲು ಹುಡುಕಾಡುತ್ತಾರೆ. ಬೇಸಿಗೆಯಲ್ಲಿ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕೃಷಿ ಕೆಲಸಗಳು ಇರುವುದಿಲ್ಲ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಕಳೆ ತೆಗೆಯುವದಾಗಲಿ, ಕೊಯ್ಯುವುದಾಗಲಿ, ರಾಶಿ ಮಾಡುವುದಾಗಲಿ, ಇನ್ನಿತರ ಯಾವುದೇ ಕೃಷಿ ಕೆಲಸವಿಲ್ಲದ ಸಮಯವಿದು. ಹಾಗಾಗಿ ಪರ್ಯಾಯವಾಗಿ ಏನಾದರೂ ಕೆಲಸ ಹುಡುಕುವ ಸಂದರ್ಭ. ಸುಡು ಬೇಸಿಗೆಯಲ್ಲಿ ಬೇವಿನಮರ ಅತ್ಯಂತ ತಂಪಾದ ನೆರಳನ್ನು ಕೊಡುತ್ತದೆ. ಚೈತ್ರ ಮಾಸದಲ್ಲಿ ತನ್ನೆಲ್ಲ ಎಲೆಗಳನ್ನು ಕಳೆದುಕೊಂಡು ವಸಂತದಲ್ಲಿ ತುಂಬು ಬಸುರಿಯಂತೆ ಹಚ್ಚಹಸುರಿನ ಎಲೆಗಳಿಂದ ಕಂಗೊಳಿಸುತ್ತಾ, ಬೇವಿನ ಕಾಯಿಯ ಫಸಲು ಕೂಡ ಚೆನ್ನಾಗಿ ಬಿಡುತ್ತದೆ. ಬೇಸಿಗೆಯಲ್ಲಿ ಬೇವಿನಕಾಯಿಗಳು ಮಾಗಿ ಬೇವಿನ ಹಣ್ಣುಗಳಾಗಿಬಿಡುತ್ತವೆ. ಸದಾ ಹಚ್ಚಹಸಿರಿನ ಬೇವಿನ ಮರದಲ್ಲಿ ಹಳದಿ ಬೇವಿನ ಹಣ್ಣುಗಳು ನೋಡುಗರ ಕಣ್ಣನ್ನು ಕುಕ್ಕುತ್ತವೆ.
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಬೇವಿನ ಬೀಜಗಳನ್ನು ಔಷಧಿಗಾಗಿ ಬಳಸುತ್ತಾರೆ. ಬೇವಿನ ಎಣ್ಣೆಗಾಗಿ ಯಥೇಚ್ಛವಾಗಿ ಬಳಸುವುದುಂಟು. ಹಾಗಾಗಿ ಮಾರುಕಟ್ಟೆಯಲ್ಲಿ ಬೇವಿನ ಬೀಜಗಳಿಗೆ ತುಂಬಾ ಬೇಡಿಕೆಯಿದೆ.
ಅಂದಿನ ಬೇಸಿಗೆಯ ದಿನಗಳಲ್ಲಿ ಅವ್ವ ನೆರೆಹೊರೆಯವರೊಡನೆ, ಬಂಧುಗಳ ಜೊತೆಗೆ ಬೇವಿನ ಹಣ್ಣುಗಳನ್ನು ಆರಿಸಲು ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು. ಬೇವಿನ ಬೀಜ ಆರಿಸಲು ನಾವು ತಲೆಯ ಮೇಲೆ ಈಚಲು ಬುಟ್ಟಿ, ಬುತ್ತಿಯನ್ನು ಹೊತ್ತುಕೊಂಡು, ಬಿರು ಬಿಸಿಲಿನಲ್ಲಿ ಹೆಜ್ಜೆ ಹಾಕುತ್ತಾ, ಬೆವರ ಹರಿಸುತ್ತಿದ್ದ ನೆನಪುಗಳು ಇವತ್ತಿಗೂ ಮರೆಯಲಾಗದು.
ರಭಸವಾಗಿ ಬೀಸುವ ಬಿರುಗಾಳಿಗೆ ಬೇವಿನ ಹಣ್ಣುಗಳೆಲ್ಲ ಉದುರಿ ಬೀಳುತ್ತಿದ್ದವು. ನಮಗೋ ಅವುಗಳನ್ನು ನೋಡಿದಾಗ ಖುಷಿಯೋ ಖುಷಿ…! ಬೇವಿನ ಹಣ್ಣುಗಳು ಉದರದಿದ್ದರೆ ಇಡೀ ದಿನ ಅಡವಿಯಲ್ಲಿ ಬೇವಿನ ಮರಗಳನ್ನು ಹುಡುಕುತ್ತಾ ಹುಡುಕುತ್ತಾ ಅಲೆದಾಡಬೇಕಾಗಿತ್ತು. ಸಿಕ್ಕರೆ ಅವುಗಳನ್ನು ಶೇಂಗಾ ಆರಿಸುವ ರೀತಿಯಲ್ಲಿ ಆರಿಸಿ ಬುಟ್ಟಿ ಮತ್ತು ಚೀಲಗಳನ್ನು ತುಂಬುತ್ತಿದ್ದೆವು. ನಂತರ ಅವುಗಳನ್ನು ಹೊತ್ತುಕೊಂಡು ಬರುತ್ತಿದ್ದೆವು. ಕೆಲವು ಸಲ ಅತಿ ಹೆಚ್ಚು ಬೇವಿನ ಹಣ್ಣುಗಳು ನೆಲಕ್ಕೆ ಉದುರಿದಾಗ ಚಳು (ಕಸಬರಿಗೆ) ತೆಗೆದುಕೊಂಡು ಬಳಿದು ತುಂಬಿಕೊಂಡು ಬಂದಿದ್ದುಂಟು.
ಬೇವಿನ ಹಣ್ಣುಗಳನ್ನು ನೀರು ಹರಿಯುವ ಪಂಪ್ಸೆಟ್ಟಿನಲ್ಲಿಯೋ ಅಥವಾ ಕೆರೆಯ ಅಕ್ಕಪಕ್ಕದಲ್ಲಿಯೋ ನೀರು ಹೊತ್ತು ಹಾಕುತ್ತಾ ಅವುಗಳನ್ನು ಈಚಲುಬುಟ್ಟಿಯೊಳಗೆ ಹಾಕಿ, ಕಚ ಕಚ ತೊಳಿಯಬೇಕಾಗಿತ್ತು. ನಾವು ಭಾರ ಹಾಕಿ ತುಳಿತವಾದರೆ, ಬೇವಿನ ಬೀಜದಿಂದ ಸಿಪ್ಪೆ ಬೇರ್ಪಡಿಸಿ ಅದರ ರಸವನ್ನು ಈಚಲ ಬುಟ್ಟಿಯಿಂದ ನೀರಿನಲ್ಲಿ ಹೊರ ಹೋಗುವಂತೆ ಮಾಡುತ್ತಿದ್ದೆವು ನಂತರ ಮಣ್ಣನ್ನು ಸ್ವಚ್ಛಗೊಳಿಸಿ, ಕಣದಂತೆ ಮಾಡಿ ತುಳಿದ ಬೇವಿನ ಹಣ್ಣುಗಳನ್ನು ಒಣಗಿಸಲು ಹಾಕುತ್ತಿದ್ದೆವು. ಸುಮಾರು ಎರಡು-ಮೂರು ತಾಸುಗಳ ನಂತರ ಒಣಗಿದ ಬೀಜಗಳನ್ನು ಗಾಳಿಗೆ ತರುವುದರ ಮೂಲಕ ಸಿಪ್ಪೆಯನ್ನು ಬೇರ್ಪಡಿಸಿ ನಂತರ ಚೀಲಕ್ಕೋ ಇಲ್ಲವೇ ಈಚಲಬುಟ್ಟಿಗೋ ತುಂಬಿ ಹೊತ್ತುಕೊಂಡು ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದೆವು.
ಇಷ್ಟೇ ಒಣಗಿಸಿದರೂ ಬೇವಿನ ಬೀಜಗಳು ಹಸಿಯಾಗಿ ಹಾಗೇ ಇರುತ್ತಿದ್ದರಿಂದ ತುಂಬಾ ಭಾರವಾಗಿರುತ್ತಿದ್ದವು. ಈ ಭಾರಕ್ಕೆ ನೆತ್ತಿ ಉರಿಯುತ್ತಿತ್ತು. ಹೆಗಲು ನೋಯುತ್ತಿತ್ತು. ದೃಢವಾದ ಹೆಜ್ಜೆ ಹಾಕುತ್ತಾ ಹಾಕುತ್ತಾ ಕೈಕಾಲು ಸೋಲುತ್ತಿದ್ದವು. ಆದರೂ ಬದುಕಿನ ಬಂಡಿಯನ್ನು ಸಾಗಿಸಲೇಬೇಕಾಗುತ್ತದೆ.
ಮಾರುಕಟ್ಟೆಗೆ ಬೇವಿನಹಣ್ಣುಗಳನ್ನು ಅಥವಾ ಬೇವಿನ ಬೀಜಗಳನ್ನು ತುಂಬುತ್ತಿದ್ದ ನಮ್ಮೂರಿನ ದೊಡ್ಡ ಗುರುನಗೌಡ್ರು ನಮಗೆ ತುಂಬಾ ಸಹಾಯ ಮಾಡುತ್ತಿದ್ದರು. ಕೆಲವು ಸಲ ಅಡ್ವಾನ್ಸ್ ಆಗಿ ಹೆಚ್ಚು ಹಣವನ್ನು ಕೊಡುತ್ತಿದ್ದರು.
ಅದನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾದ ಬಟ್ಟೆಗಳನ್ನು, ನೋಟ್ ಪುಸ್ತಕಗಳನ್ನು, ಪೆನ್ನುಗಳನ್ನು ಖರೀದಿಸಲು ದುಡ್ಡನ್ನು ಹೊಂದಿಸಿಕೊಳ್ಳಬೇಕಾಗಿತ್ತು. ಹೀಗೆ ಬೇವು ಕಹಿಯಾದರೂ ನಮ್ಮ ಬದುಕಿಗೆ ಸಿಹಿಯಾದ ಕ್ಷಣಗಳನ್ನು ನಾನೆಂದು ಮರೆಯಲಾರೆ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಅತ್ಯುತ್ತಮ ಬರಹ ಸಹೋದರ
ಧನ್ಯವಾದಗಳು ಸಹೋದರ… ತಮ್ಮ ಪ್ರೋತ್ಸಾಹಕ್ಕೆ