ಶಂಕರಾನಂದ ಹೆಬ್ಬಾಳ-ಈ ಮನಕೆ ನೀನೊಂದು ಉಸಿರಾಗಿದ್ದೆ

ಅರಳುವ ಹೂಗಳಲಿ ದುಂಬಿಯಾಗಿದ್ದೆ
ನೀಲಿಯ ಆಗಸದಲಿ ಬೆಳ್ಮೋಡವಾಗಿದ್ದೆ
ಹೊನ್ನಿನುಂಗುರಕೆ ವಜ್ರದ ಹರಳಾಗಿದ್ದೆ
ಈ ಮನಕೆ ನೀನೊಂದು ಪದಕವಾಗಿದ್ದೆ…

ಗಿರಿಯ ಶೃಂಗದಲಿ ಗಂಧದ ತರುವಾಗಿದ್ದೆ
ಪ್ರೇಮದ ತಲ್ಪದಲಿ ಬೀಳುವ ಸ್ವಪ್ನವಾಗಿದ್ದೆ
ಒಲವವೀಣೆಯಲಿ ನುಡಿವ ಗಾನವಾಗಿದ್ದೆ
ಈ ಮನಕೆ ನೀನೊಂದು ಪದವಾಗಿದ್ದೆ…!

ಹೃದಯದಲಿ ಉರಿವ ನಂದಾದೀಪವಾಗಿದ್ದೆ
ಅನಾಥಳಿಗೊಂದು ಜೋಡಿ ಜೀವವಾಗಿದ್ದೆ
ಜನುಮವಿದು ಮರೆಯದ ಸಿಹಿಸ್ವಪ್ನವಾಗಿದ್ದೆ
ಈ ಮನಕೆ ನೀನೊಂದು ಪ್ರಪಂಚವಾಗಿದ್ದೆ….!

ಗಗನದಲಿ ಮೂಡುವ ಇಂದ್ರಚಾಪವಾಗಿದ್ದೆ
ರಾತ್ರಿಯಲಿ ಹೊಳೆಯುವ ನಕ್ಷತ್ರವಾಗಿದ್ದೆ
ಹಾಡಿಗೆ ಜೀವತುಂಬುವ ದನಿಯಾಗಿದ್ದೆ
ಈ ಮನಕೆ ನೀನೊಂದು ಉಸಿರಾಗಿದ್ದೆ


Leave a Reply

Back To Top