‘ಸೂಡಿ’ ಲಲಿತ ಪ್ರಬಂಧ ಜಿ.ಎಸ್.ಹೆಗಡೆ ಅವರಿಂದ

gshegade

ಮಲೆನಾಡಿನ ಅಲ್ಲಲ್ಲಿ ಅಲ್ಪ ಸ್ವಲ್ಪ ಮಟ್ಟಿಗೆ ಭೌಗೋಳಿಕ ಭಿನ್ನತೆಯುಂಟು.ಅದರಲ್ಲಿ ಮುಖ್ಯವಾಗಿ  ಕರಾವಳಿ ತೀರದಿಂದ ತುಸು ದೂರದ ಭಾಗ ಮತ್ತು ಆ ಕಡೆ ದಟ್ಟ ಕಾಡು ಅಲ್ಲದ ಸುಂದರ ಪರಿಸರವಿದೆ. ಇದನ್ನೂ ಸಹ ಅರೆಮಲೆನಾಡು ಎನ್ನಬಹುದೇನೊ?… ಇಲ್ಲಿಯ ಜನರ ಜೀವನ ಒಂದು ರೀತಿಯಲ್ಲಿ ಹೋರಾಟದ ಬದುಕು. ಅತೀ ಕಡಿಮೆ ಜಮೀನಿನಲ್ಲಿ ಸುಂದರ ಸಂಸಾರ‌ ಮಾಡಿ ಬದುಕಿನ ಗಾಡಿ ಓಡಿಸುವವರು. ಇವರು ದಿನ ನಿತ್ಯ ಬಳಸುವ ಅವಶ್ಯಕ ಸಾಮಗ್ರಿಗಳು ಹತ್ತು ಹಲವು. ಕೃಷಿ ಸಾಮಗ್ರಿಗಳು, ಅಡುಗೆ ಸಾಮಗ್ರಿಗಳು, ಮನೆ ಕಟ್ಟಲು ಬಳಸುವ ಸಾಮಗ್ರಿಗಳು ಇತ್ಯಾದಿ, ಇತ್ಯಾದಿ… ಇವುಗಳ ಹೊರತಾಗಿಯೂ ಅತೀ ಅವಶ್ಯಕವಾಗಿ  ಬೇಕಾಗಿರುವಂತಹ ಸಾಧನವೊಂದಿತ್ತು. ಅದೇ ‘ಸೂಡಿ’ ನೋಡಿ.
    ಈ ‘ಸೂಡಿ’ ಎಂದ ಕೂಡಲೆ ಕೆಲವು ಪ್ರದೇಶಗಳಲ್ಲಿ ಪ್ರಾದೇಶಿಕತೆಯಿಂದಾಗಿ ಬೇರೆ ಬೇರೆ ಅರ್ಥ ಪಡೆಯಬಹುದು. ಅದೊಂದು ಜನಾಂಗವಾಗಿರಬಹುದು, ಧಿರಿಸಾಗಿರಬಹುದು( ಹೂಡಿಯ ಅಪಂಭ್ರಶವಲ್ಲ), ಊರ ಹೆಸರಾಗಿರಬಹುದು,
ಕ್ರಿಯಾಪದವಾಗಿರಬಹುದು. ಆದರೆ ಈ ಕರಾವಳಿ ತೀರದವರಿಗೆ ಅದೊಂದು ನಾಮಪದವಾಗಿರುವ ಸಾಧನ.
  ಈ ಸೂಡಿ ಎಂದರೇನು ಎನ್ನುವುದನ್ನು ಹೇಳಿಯೇ‌ ಮುಂದೆ ಸಾಗುವ ಅನಿವಾರ್ಯತೆ ನನಗೆ. ಸೂಡಿಯೆಂದರೆ ಒಣಗಿದ ತೆಂಗಿನ ಗರಿಯ  ಸುಮಾರು ಎರಡು ಅಡಿಯ ಒಂದು ಜೊತೆ ತುಂಡುಗಳನ್ನು ಜೋಡಿಸಿ ಕಟ್ಟಿದ ಸಾಧನವೇ ‘ಸೂಡಿ’.ಇನ್ನೂ ಸ್ಪಷ್ಟಪಡಿಸಬೇಕೆಂದರೆ ಪಂಜಿನಂತಹ ಸಾಧನ, ಆದರೆ ಪಂಜೇ ಬೇರೆ, ಸೂಡಿಯೇ ಬೇರೆ. ಸೂಡಿಯ ತುದಿಯಲ್ಲಿ, ಮಧ್ಯದಲ್ಲಿ‌ ಮತ್ತು ಬುಡಭಾಗದಲ್ಲಿ ಮೂರು ಕಟ್ಟುಗಳನ್ನು ಕಟ್ಟಿದಾಗ ಸುಮಾರು ನಾಲ್ಕು ಅಡಿಯಷ್ಟು ಉದ್ದದ ಸಾಧನವಾಗುವುದು.ಆ ಸೂಡಿಗೆಂದು ಬಳಸಿದ ತೆಂಗಿನ ಗರಿಯ ಒಂದು ಎಳೆಯಿಂದಲೇ ಇದಕ್ಕೆ ಕಟ್ಟನ್ನು ಕಟ್ಟಲಾಗುವುದು.
    ಈ ಹಳ್ಳಿಗರು ತಮ್ಮ ತೋಟದ ಅಥವಾ ಬೇಣದ ಯಾವ ವಸ್ತುವನ್ನು, ಉತ್ಪನ್ನವನ್ನೂ  ಹಾಳು ಮಾಡಲಾರರು. ಈ ತೆಂಗಿನ ಮರವಂತೂ ಇವರ ಪಾಲಿಗೆ ಕಲ್ಪವೃಕ್ಷವೇ ಸರಿ!. ಬಹುಪಯೋಗಿ!. ತೆಂಗಿನ ಕಾಯಿಯಿಂದಂತೂ ಮಾಡದ ಅಡುಗೆಯಿಲ್ಲ.’ತೆಂಗು‌ ಮತ್ತು ಇಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುವುದು’ ಎಂದಂತೆ.
       ಬಹು ಹಿಂದಿನ ಕಾಲದ ಮಾತಲ್ಲ. ಸುಮಾರು ಮೂರು ದಶಕದ ಹಿಂದೆಯಂತೂ ತೆಂಗಿನ ಗರಿಗಳೇ ಅತೀ ಅವಶ್ಯವಾಗಿ ಬೇಕಿದ್ದ ಸಾಮಗ್ರಿ. ಅದರಿಂದಲೇ ‘ತಡಿಕೆ’ ನೇಯ್ದು ಬಚ್ಚಲ ಮನೆಗೆ, ಮನೆಯ ಮಾಡಿಗೆ ಹೊದಿಸಲು, ಅಂಗಳದ ಚಪ್ಪರಕ್ಕೆ ಬೇಕಾಗಿರುವುದು ತೆಂಗಿನ ಗರಿಯೇ ಆಗಿತ್ತು. ಈ ‘ ತಡಿಕೆ’ ನೇಯಲು ತೆಂಗಿನ ಗರಿಯ ತುದಿ ಭಾಗ ಮತ್ತು ಬುಡದ ಭಾಗ ಅಪೇಕ್ಷಣೀಯವಲ್ಲ. ಈ ಮಧ್ಯದ ಭಾಗ ‘ತಡಿಕೆ’ಗೆ ಬಳಕೆಯಾದರೆ ತುದಿಯ ಭಾಗ ಮತ್ತು ತಡಿಕೆ ನೇಯಲು ಬಾರದ ಗರಿಗಳು ಸೂಡಿ ಕಟ್ಟಲು ಬಳಕೆಯಾಗುತ್ತಿತ್ತು.
    ಮಳೆಗಾಲ ಪ್ರಾರಂಭಕ್ಕಿಂತ ಒಂದು ತಿಂಗಳು ಮೊದಲು ಸೂಡಿಕಟ್ಟಲು ಬೇಕಾದ ತೆಂಗಿನ ಗರಿಗಳನ್ನು ಒಣಗಿಸಲಾಗುವುದು. ಆ ನಂತರ ಗರಿಯ ತುಂಡುಗಳನ್ನು ಎರಡೆರಡರಂತೆ ಸೇರಿಸಿ ಸೂಡಿ‌ಕಟ್ಟುವರು. ಇದನ್ನು ಕಟ್ಟಲು  ಅಲ್ಪ ಕೌಶಲ ಸಾಕು. ಬಿಗಿಯಾಗಿ ಕಟ್ಟಿದರೆ ಹೆಚ್ಚು ಅನುಕೂಲ.
   ಈ ಸೂಡಿಯೆನ್ನುವುದು ಹಳ್ಳಿಗರಿಗೆ ‘ಟಾರ್ಚ್’ ಇದ್ದ ಹಾಗೆ. ಹಾಗಂತ ಹಳ್ಳಿಗರು ‘ಬ್ಯಾಟರಿ’ (ಟಾರ್ಚ್) ಎಂದು ಕರೆಯುವ ಸಾಧನ ಅಂದು ಎಲ್ಲರಿಗೂ ಪರಿಚಯವಿದ್ದ ಕಾಲವೇ ಆಗಿತ್ತು. ಆದರೂ ಕೆಲವೊಮ್ಮೆ ಈ ಸೂಡಿ ಎನ್ನುವುದು ಟಾರ್ಚ್ ನಷ್ಟೇ ಅವಶ್ಯವಾದ ಸಾಧನವೂ ಆಗಿತ್ತು.
   ಹಳ್ಳಿಯ ಜನರಿಗೆ ಅಂದು ಈ ಟಿ.ವಿ, ಮೊಬೈಲ್ ಗಳು ಎಲ್ಲಿಯೂ ಇರದ ಕಾಲ. ಅಂದು ಎಷ್ಟೊಂದು! ಬಾಂಧವ್ಯವಿತ್ತು. ಸಾಯಂಕಾಲದ ಹೊತ್ತಿನಲ್ಲಿ ಸಮಯ ಕಳೆಯಲು ಕೇರಿಯ‌ ಮನೆಗಳಿಗೆ ತೆರಳಿ ಒಂದಿಷ್ಟು ಮಾತುಕತೆಯಾಡಿ ಬರುವವರು. ಕತ್ತಲಾಗುವುದರೊಳಗೆ‌ ಮನೆ ಸೇರುವೆವೆಂದು ಹೊರಟವರಿಗೆ ಮಾತನಾಡುತ್ತಲೋ, ಇಸ್ಪೀಟ್ ಆಡುತ್ತಲೋ ಕತ್ತಲಾಗಿದ್ದೇ ಗಮನಕ್ಕೆ ಬಾರದಿದ್ದಾಗ ಮೊರೆ ಹೋಗುವುದು ಈ ಸೂಡಿಗೆ ಆಗಿತ್ತು.
       ಮನೆ ಮನೆಗೆ ತೆರಳಿ ಮಾತನಾಡುವವರಲ್ಲಿ ಕತೆಗಾರರು, ಒಳ್ಳೆಯ ವರದಿಗಾರರೂ ಮತ್ತು ಸ್ವಲ್ಪ ಚಾಡಿ ಹೇಳುವ ಚಟದವರೂ ಇರುತ್ತಿದ್ದರು.ಅವರಲ್ಲಿ ಈ ಕತೆಗಾರರನ್ನು ಮಕ್ಕಳು ಒತ್ತಾಯವಾಗಿ ‘ಕತೆ ಹೇಳು’ಎಂದು ಹಠ ಬಿದ್ದು‌ ಮನೆಯಲ್ಲೇ ಕೂಡ್ರಿಸಿಕೊಳ್ಳುವ ಪ್ರಯತ್ನ ಮಾಡಿದರೆ ಕತೆಗಾರನೆಂದೆನಿಸಿಕೊಂಡವನು” ಇಲ್ಲ, ಇಲ್ಲ ಕತ್ತಲಾಗುತ್ತದೆ, ಮನೆ ಸೇರಬೇಕು” ಎಂದು ಹೊರಡಲು ಅನುವಾಗುವನು. ಆಗ ಈ‌ ಮಕ್ಕಳು,  ‘ಕತ್ತಲಾದರೂ ಅಡ್ಡಿಯಿಲ್ಲ, ಸೂಡಿ ತೆಗೆದುಕೊಂಡು ಹೋಗು’ ಎಂದು ಸೂಡಿ ಕೊಡುವ ಜವಾಬ್ದಾರಿ ತೆಗೆದುಕೊಂಡು ಮನೆಗೆ ತೆರಳುವವರನ್ನು ಕೂಡ್ರಿಸಿಕೊಂಡು ಕತೆ ಹೇಳಿಸಿ,ಕೇಳಿ ಕಳುಹಿಸಿಕೊಡುವರು.
    ಮನೆಯಲ್ಲೆ ಟಾರ್ಚ್ ಬಿಟ್ಟು ಬಂದವರಿಗೆ ರಾತ್ರಿ ಅವರವರ ಮನೆಯನ್ನು ಮುಟ್ಟಿಸುವುದು ಈ ಸೂಡಿಯೇ ಆಗಿತ್ತು.  ರಾತ್ರಿ ಎಷ್ಟೆಂದರೂ ಒಂಥರಾ ಹೆದರಿಕೆ. ಆತ ಎಷ್ಟೇ ಧೈರ್ಯವಂತನಾದರೂ ರಾತ್ರಿಯಲ್ಲಿ ಅಳುಕುತ್ತಲೇ‌ ಮನೆ ಸೇರುತ್ತಾನೆ. ಈ ಸೂಡಿಯೆನ್ನುವುದು ಧೈರ್ಯ ತಂದು ಕೊಡುವ ಸಾಧನವೂ ಹೌದು.ಕಾರಣ ಕೈಯಲ್ಲಿರುವುದು ಸೂಡಿ ಮತ್ತೆ ಬೆಂಕಿ. ಹಾಗಾಗಿ ಸ್ವಲ್ಪ ಧೈರ್ಯ.  ಸೂಡಿಯು ಧೈರ್ಯ ತಂದು ಕೊಡುವ ಸಾಧನ ಎನ್ನುವುದನ್ನು ಬರೆದೆ. ಅದರ ಕುರಿತು ಸ್ವಲ್ಪ ಬರೆದು ಮತ್ತೆ ಮುಂದುವರಿಯುವೆ. ಅದು ಹೇಗೆ ನೋಡಿ.
     ಸೂಡಿ ಮತ್ತು ಟಾರ್ಚ್ ಅಂದಿನ ಜನರಿಗೆ ಆತ್ಮ ರಕ್ಷಣೆಯ ಸಾಧನ ಹೌದೆಂದು ದೃಢವಾಗಿ ಹೇಳಬಲ್ಲೆ. ಟಾರ್ಚ್ ಇದು ಸೂಡಿಗಿಂತಲೂ ಆತ್ಮ ರಕ್ಷಣೆಯಲಿ ತುಸು ಮೇಲು.ಈ ಟಾರ್ಚ್ ಗಳಲ್ಲಿ  ಹಲವು ವಿಧಗಳು. ಎರಡು ಸೆಲ್ ಬ್ಯಾಟರಿ, ಮೂರು ಸೆಲ್ ಬ್ಯಾಟರಿ,  ದೊಡ್ಡ ತಲೆ ಬ್ಯಾಟರಿ, ಚಿಕ್ಕ ತಲೆ ಬ್ಯಾಟರಿ ಹೀಗೆ… ಹಲವು ವಿಧ. ಮೂರು ಸೆಲ್ ಜೊತೆಗೆ ದೊಡ್ಡ ತಲೆಯ ಬ್ಯಾಟರಿಯೆಂದರೆ ಕೈಯಲ್ಲಿ ಸೊಟ್ಟ(ದೊಣ್ಣೆ) ಹಿಡಿದ ಹಾಗೆ. ಅದಕ್ಕೊಂದು ಬಿಗಿಯಾಗಿರುವ ಚೀಲ ಮತ್ತು ದಪ್ಪ ದಾರ. ಅದನ್ನು ಹೆಗಲಿಗೇರಿಸಿ ಕಂಕುಳ ಕೆಳಗೆ ಇಳಿಬಿಟ್ಟು  ರಾತ್ರಿ ಯಕ್ಷಗಾನ  ನೋಡಲು ಹೊರಟ ಎಂದರೆ ಆತನ ಹಿಂದೆ ಮುಂದೆ ಯಾರೂ ಸುಳಿಯರು.ಕೆಲವರು ಸೂಡಿ ಹಿಡಿದು ಯಕ್ಷಗಾನದ ಟೆಂಟ್ ಕಡೆ ಸಾಗುವರು. ಯಕ್ಷಗಾನದ ಟಿಕೆಟ್ ಕೌಂಟರ್ ಹತ್ತಿರ ಸ್ವಲ್ಪ ನೂಕುನುಗ್ಗಲು ಸ್ವಾಭಾವಿಕ. ಅಲ್ಲೇನಾದರೂ ಈ ಬ್ಯಾಟರಿ ಹಿಡಿದವಗೆ ಯಾರಾದರೂ ಕಿರಿಕ್ ಮಾಡಿದ ಅಂತಾದರೆ ಕಂಕುಳಲ್ಲಿ ನೇತು ಬಿದ್ದಿರುವ ಬ್ಯಾಟರಿ ಕೈಗೆ ಬರುವುದು. ಈತನ ದೊಡ್ಡ ತಲೆ ಬ್ಯಾಟರಿ ನೋಡಿ ಕಿರಿಕ್ ಮಾಡಿದವ ತೆಪ್ಪಗಿರಬೇಕು.‌ಕೆಲವೊಮ್ಮೆ ಇದರಿಂದಲೇ ತಲೆ ತಲೆಯ ಮೇಲೆ ಹೊಡೆದಾಡಿಕೊಂಡು ಪೋಲಿಸರ ಮಧ್ಯ ಪ್ರವೇಶವಾದದ್ದೂ ಇದೆ. ಟಾರ್ಚ್ ವಿಷಯ ಇಲ್ಲಿಗೇ ಇರಲಿ.
 ಈಗ ಮತ್ತೆ ಸೂಡಿಗೆ ಬರುವೆ. ಈ ಸೂಡಿಯ ಬಳಕೆ ಹೇಗೆಂದರೆ ಇದರ ತುದಿಗೆ ಬೆಂಕಿ ಹೊತ್ತಿಸಿ ಹೊರಟ ಅಂತಾದರೆ ಸೂಡಿ ಬೀಸುವುದೇ ಒಂದು ಗಾಂಭೀರ್ಯ. ಈ ಸೂಡಿ ಹಿಡಿಯಲೂ ಸಹ ಅನುಭವ ಬೇಕು. ಸೂಡಿ ಹಿಡಿದವ ಎಡಗೈಲೇ ಹಿಡಿಯಲಿ ಅಥವಾ ಬಲಗೈಲೇ ಹಿಡಿಯಲಿ ಸಾಗುವಾಗ ಸೂಡಿಯ ತುದಿ ಹಿಮ್ಮುಖವಾಗಿರಬೇಕು. ಸೂಡಿ ಹಿಡಿದವನ ಮುಖಕ್ಕೆ ಬೆಳಕು ಬೀಳಬಾರದು. ಅದೊಂತರ ಬಸ್ ನ ಹೆಡ್ ಲೈಟ್ ಇದ್ದ ಹಾಗೆ. ರಾತ್ರಿ ವೇಳೆ ಬಸ್ ಚಲಾಯಿಸುವಾಗ ಬಸ್ ನ ಒಳಗಿನ ಲೈಟನ್ನು ಹೆಚ್ಚು ಹೊತ್ತು ಉರಿಸುವುದಿಲ್ಲ. ಕಾರಣ ಆ ಒಳಗಿನ ಲೈಟ್ ಚಾಲಕನ ಕಣ್ಣಿಗೆ ಬಿದ್ದು ರಸ್ತೆ ಸರಿಯಾಗಿ ಕಾಣದು. ಅದೇ ರೀತಿ ಸೂಡಿ ಹಿಡದವನಿಗೂ ಸಹ ಹೀಗೆಯೆ. ಇನ್ನೊಂದು ವಿಚಾರವೇನೆಂದರೆ ಸೂಡಿ ಹಿಡದವನು ಅದನ್ನು ಬೀಸಲೇ ಬೇಕು. ಅದಕ್ಕೆ ಸಾಕಷ್ಟು ಗಾಳಿ ದೊರಕಿದಾಗಲೇ ಅದು ನಂದದೇ ಉರಿಯುವುದು. ದಾರಿಯಲ್ಲಿ ಸಾಗುವಾಗ ಒಂದೊಂದೇ ಕಟ್ಟುಗಳನ್ನು ಬಿಡಿಸುತ್ತಾ ಸಾಗಿದರೆ ಪೂರ್ಣವಾಗಿ ಉರಿಯುವವರೆಗೆ ಸುಮಾರು ಒಂದೂವರೆ ಕಿಲೋ ಮೀಟರ್ ಸಾಗಬಹುದು. ಅಂತೂ ಕೇರಿಯ ಬುಡದ ಮನೆಯಿಂದ ತುದಿಯಲ್ಲಿರುವ ಮನೆ ಸೇರಲು ಒಂದು ಸೂಡಿಯು ಸಾಕಾಗಿತ್ತು. ಈ ಸೂಡಿಯ ಬೀಸುವಿಕೆಯಿಂದಲೇ ಸೂಡಿ ಹಿಡಿದು ಬೀಸುತ್ತ ಸಾಗುತ್ತಿರುವವರು ‘ಇಂತವರೇ’ ಎಂದು ಕತ್ತಲಲ್ಲೂ ಗುರುತಿಸುವಷ್ಟರ ಮಟ್ಟಿಗೆ ಸೂಡಿ ಬಳಕೆಯಲ್ಲಿತ್ತು. ಮಳೆಗಾಲದಲ್ಲಿ ಈ ಸೂಡಿಯನ್ನು ನಂಬಿ ಸಾಗುವುದು ತುಸು ಹೆದರಿಕೆಯೇ ಆಗಿತ್ತು. ಸೂಡಿಗೆ ತಗುಲಿದ ತಂಡಿಯಿಂದಾಗಿ,ಸುರಿವ ಮಳೆಯಿಂದಾಗಿ  ಮಧ್ಯದಾರಿಯಲ್ಲಿ ಸೂಡಿ ಸರಿಯಾಗಿ ಉರಿಯದೆಯೆ ಬೆಂಕಿ ಆರಿ ಹೋಗಿ ಇಕ್ಕಟ್ಟಿಗೆ ಸಿಗುವಂತಾಗುತ್ತಿತ್ತು. ನಂತರ ರಾತ್ರಿ ಸಮಯದಲ್ಲೇ ದೊಡ್ಡದಾಗಿ ‘ ಕೂಯ್’ ಹಾಕಿ ಹತ್ತಿರದ ಮನೆಯವರನ್ನು ಕರೆದು ಸಹಾಯ ಪಡೆದು ಮನೆಯನ್ನು ತಲುಪುವ ಸಂದರ್ಭ ಬಂದೊದಗುತ್ತಿತ್ತು. ಸೂಡಿ ಕೊಟ್ಟವರ ಮೇಲೆ ಬೇಸರ‌ ಮಾಡಿಕೊಳ್ಳುವ ಸಂದರ್ಭವೂ ಅಪರೂಪಕ್ಕೆ ಅಲ್ಲಲ್ಲಿ ನಡೆಯುತ್ತಿತ್ತು.
          ಸೂಡಿಯ ಬಳಕೆ ಹೇಗಿತ್ತೆಂದರೆ….ಕೇರಿಯಲ್ಲಿ ಮನೆ‌ಮನೆಗೆ ತೆರಳಿ‌ ಮಾತುಕತೆಯಾಡುವವರಲ್ಲಿ ಕೆಲವರಿಗೆ ಮಾತನಾಡುವ ಚಪಲ, ವಾಚಾಳಿ ಗುಣ. ಕೆಲವು ಸಂದರ್ಭದಲ್ಲಿ ಈ ಮಾತು ಅತಿಯಾಗಿ ಕೇಳುಗರಿಗೆ ಕಿರಿಕಿರಿಯನ್ನುಂಟುಮಾಡುತ್ತಿತ್ತು. ಅವರನ್ನು  ‘ ಮಾತು ಸಾಕು, ಹೋಗು’ ಎಂದು ಕಳುಹಿಸಲು ಸಾಧ್ಯವೇ? ಖಂಡಿತಾ ಸಾದ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಂದೊದಗುವುದು  ಸೂಡಿ. ಚಿಮಣಿ ದೀಪ ಮತ್ತು ಸೂಡಿಯನ್ನು ಜಗಲಿಯ ತುದಿಯ ಮೂಲೆಯಲ್ಲಿ ತಂದಿಟ್ಟರೆ ಸಾಕು.ಮನೆಗೆ ಬಂದವನಿಗೆ ‘ಸಾಕು’ ನೀ ಹೋಗು’ ಎನ್ನುವ ಸಂಜ್ಞೆ ಅರ್ಥವಾಗಿ ಬಿಡುತಿತ್ತು. ‘ಕತ್ತಲಾಯಿತು, ನಾನು ಹೊರಡುತ್ತೇನೆ’ ಎಂದು ಸೂಡಿಗೆ ಬೆಂಕಿ ಹೊತ್ತಿಸಿ ತೆರಳುತ್ತಿದ್ದರು.ಈ ಸೂಡಿಯಿಂದ ಹೊಸ ಹೊಸ ವಿಚಾರಗಳೂ ಹುಟ್ಟಿಕೊಂಡ ಹಲವು ಉದಾಹರಣೆಗಳಿವೆ.ಉಪಯೋಗಕ್ಕೆ ಬಾರದ ವ್ಯಕ್ತಿ ಅಥವಾ ವಸ್ತುವಿಗೆ        ‘ ಹಸಿಮಡ್ಲ(ಹಸಿಯಾದ ತೆಂಗಿನ ಗರಿ) ಸೂಡಿ’ ಎನ್ನುವ ಪಡೆನುಡಿಯೂ ಹುಟ್ಟಿದ್ದು ಇಂತಹ ಹಳ್ಳಿಗಳಲ್ಲೇ. ಕೆಲವೊಮ್ಮೆ ದಾರಿ‌ ಮಧ್ಯದಲ್ಲೇ‌ ಬೆಂಕಿ ಆರಿ ತೊಂದರೆಗೆ ಸಿಲುಕಿಸುವಾಗ  ಕೋಪದಿಂದ ಬಂದ ಉದ್ಗಾರವೇ        ‘ ಇದೆಂತಾ ಮಳ್ ಸೂಡಿ!’ ಇದೇ ಮುಂದೆ ಕೆಲಸ ಕಾರ್ಯಗಳಲ್ಲಿ ಮಧ್ಯದಲ್ಲಿ ಕೈ ಕೊಡುವ ವ್ಯಕ್ತಿಗೆ ಅನ್ವರ್ಥಕವಾಗಿ ಬಳಸುವ ಪದವಾಗಿ ಬಳಕೆಗೂ ಬಂತು. ‘ಅಂವ ಮಳ್ ಸೂಡಿಯಿದ್ದಾಂಗೆ’ ಎಂದು.ಈ ಪಡೆನುಡಿಗಳು ಈಗಲೂ ಅಲ್ಲಲ್ಲಿ ಬಳಕೆಯಲ್ಲಿವೆ.
    ಈ ಸೂಡಿ ಎನ್ನುವುದು ಬಹುಪಯೋಗಿ ಸಾಧನವಾಗಿತ್ತು. ಅಡುಗೆ ಮನೆಯಲ್ಲಿ ಒಲೆಗೆ ಬೆಂಕಿ ಹೊತ್ತಿಸಲು ಒಲೆಯ ಪಕ್ಕದಲ್ಲಿರುವ ‘ಒಲೆಯಡ್ಕಲ’ದಲ್ಲಿ ಇರಲೇ ಬೇಕಾದ ಸಾಮಗ್ರಿಯಿದು. ಬೆಳಿಗ್ಗೆ ಒಲೆ ಹೊತ್ತಿಸುವಾಗ ಚಿಮಣಿ ದೀಪವನ್ನು  ಹೊತ್ತಿಸಿ ಈ ಗರಿಯ ಒಂದು‌ ಮುಷ್ಟಿ ಎಳೆ(ಎಮೆ)ಗಳನ್ನು ಎಳೆದು ಅದಕ್ಕೆ ಬೆಂಕಿ ಹೊತ್ತಿಸಿ ನಂತರ ಒಲೆಯಲ್ಲಿ ಬೆಂಕಿ ಸೃಷ್ಟಿಸಿದ  ನಂತರ ರಾತ್ರಿ ಸುಮಾರು ಹತ್ತು ಗಂಟೆಯವರೆಗೆ ಈ ಒಲೆಯಲ್ಲಿ ದೊಡ್ಡ ಬೆಂಕಿ‌ ಅಥವಾ ಸಣ್ಣ ಬೆಂಕಿ ಇರುವಂತೆ ನೋಡಿಕೊಳ್ಳುವುದು ವಾಡಿಕೆ. ಸದಾ ಬೆಚ್ಚಗಿನ ಹಿತವನ್ನು ಅನುಭವಿಸಲು ಬೆಕ್ಕಿನ ‘bed room’ ಒಲೆ ಅಥವಾ ಅದರ ಪಕ್ಕದ ಒಲೆಯಡ್ಕಲು ಆಗಿರುತ್ತಿತ್ತು.
   ಸೂಡಿ ಎನ್ನುವುದು ಬಹುಪಯೋಗಿ ಎನ್ನಲು ಇನ್ನೊಂದು ಕಾರಣವಿದೆ. ಕೆಲವೊಮ್ಮೆ ಮನೆಯ ಸಮೀಪದಲ್ಲೋ, ತೋಟದಲ್ಲೋ ಹೆಜ್ಜೇನಿನಂತ ಜೇನುಗಳು ಗೂಡು ಕಟ್ಟಿ  ಉಪದ್ರವ ಕೊಡುತ್ತಿದ್ದವು. ಈ ಗೂಡಿನಲ್ಲಿರುವ ಹುಳುಗಳನ್ನು ತಿನ್ನಲು ಗೂಬೆಯೋ, ಕಾಗೆಯೋ ಕುಕ್ಕಿ ಹೋದರೆ ತೋಟದಲ್ಲಿರುವ ರೈತನ ಮೇಲೋ ಮನೆಯಲ್ಲಿರುವವರ ಮೇಲೋ ದಾಳಿ ಮಾಡಿ ಅಪಾರ ಹಿಂಸೆ ನೀಡುವವು. ಆಸ್ಪತ್ರೆಗೆ ದಾಖಲಿಸಿದ ಸಂದರ್ಭವೂ ಒದಗುತ್ತಿತ್ತು. ಇವುಗಳನ್ನು ಓಡಿಸಲು ರಾತ್ರಿ ವೇಳೆ ಕೊಕ್ಕೆಗೆ ಸೂಡಿಯನ್ನು ಕಟ್ಟಿ ಬೆಂಕಿ ಹಚ್ಚಿ ಈ ಗೂಡಿನ ಹತ್ತಿರ ಹೊಗೆ ಮತ್ತು ಶಾಖ ತಗಲುವ ಹಾಗೆ  ಹಿಡಿದು ಅವುಗಳನ್ನು ಓಡಿಸುವ ಅನಿವಾರ್ಯತೆ ಇವರಿಗಿತ್ತು. ಆಗಲೂ ಸಹ ಈ ಸೂಡಿ ಅನಿವಾರ್ಯವಾಗಿರುತ್ತಿತ್ತು.ಈ ಸೂಡಿ ಪಂಜಿನಂತೆ ಕೆಲಸ ಮಾಡುವುದು. ಪಂಜನ್ನು ಶುಭ ಕಾರ್ಯಕ್ಕೆ ಬಳಸಿದರೆ ಸೂಡಿಯು ಶುಭ ಕಾರ್ಯಕ್ಕೆ ನಿಷಿದ್ಧವಾಗಿತ್ತು.
   ಇಹಲೋಕ ಯಾತ್ರೆಯನ್ನು ಮುಗಿಸಿ ಹೊರಟವನ ಶವ ದಹನ ಮಾಡಲೂ ಸಹ ಈ ಸೂಡಿಯೇ ತೀರ ಅವಶ್ಯ. ಚಿತೆಯ ಸುತ್ತಲೂ ಸೂಡಿಯನಿಟ್ಟು ಬೆಂಕಿಯನ್ನು ಬೇಗ ಹೊತ್ತಿಸಲು ಮತ್ತು ಚಿತೆಯ ಅಗ್ನಿಸ್ಪರ್ಶಕೂ ಈ ಸೂಡಿಯೇ ಬೇಕು.
     ಇಂದು ಹಳ್ಳಿ ಬರಿದಾಗಿದೆ. ಸೂಡಿಯೂ ಇಲ್ಲ, ಸೂರೂ ಸರಿಯಿಲ್ಲ.ತೆಂಗಿನ ಗರಿಯಿಂದ ಮಾಡುತ್ತಿರುವ ‘ತಡಿಕೆ’ ನೇಯುವವರಿಲ್ಲ. ಈ ತಡಿಕೆಯೆನ್ನುವ ಪದವೂ ಸಹ ಶ್ರೀ ಹುಣಸೂರು ಕೃಷ್ಣಮೂರ್ತಿಯವರು ಬರೆದ ‘ ಮಾನವ, ದೇಹವು ಮೂಳೆ‌ಮಾಂಸದ ತಡಿಕೆ’ ಎನ್ನುವ ಪದ್ಯದ ಸಾಲಿನಲ್ಲಿ ಬಂದು ಹೋಯಿತೇ ವಿನಃ ಉಳಿದ ಕಡೆ ಬಳಕೆಯಾಗಿದ್ದು ಬಹಳ ವಿರಳ. ತಡಿಕೆ, ಸೂಡಿ, ಹುರಿಬಳ್ಳಿ, ಹಿಡಿಕಟ್ಟು( ಪೊರಕೆ) ಇವೆಲ್ಲವೂ ತೆಂಗಿನ ಉಪ ಉತ್ಪನ್ನಗಳೇ ಆಗಿದ್ದು ಈಗಿನ ಜನರಿಗೆ ಇವುಗಳ
 ಪರಿಚಯವೇ ಇಲ್ಲ. ಹಳ್ಳಿಯೇ ಚೆಂದ, ಅವರ ಜೀವನ ಇನ್ನೂ ಚೆಂದ.

13 thoughts on “‘ಸೂಡಿ’ ಲಲಿತ ಪ್ರಬಂಧ ಜಿ.ಎಸ್.ಹೆಗಡೆ ಅವರಿಂದ

  1. Naavu belida ooranna nenapisida haage aathu appa Prasangada artha helalu hoguthidda aaga night ninu helida soodi ge benki hachhi torch thara upayogisuthidda ninu thumba chennagi vivarane kottu barediruve Excellent aagi eddu. Ede thara bereyutha eru chennagi erthu.- Savitri S Hegde

  2. ಸೂಡಿಯ ಮಹತ್ವ ಉಪಯೋಗಿಸಿದವರಿಗೆ ಮಾತ್ರವೇ ಗೊತ್ತು. ಬಹಳ ಸುಂದರ ಲೇಖನ.

  3. ಚೆಂದ ಇದೆ.
    ಮುಖ್ಯ ಸೂಡಿಯ ನೆಪದಲ್ಲಿ ಮಲೆನಾಡಿನ‌ ಒಂದಿಷ್ಟು ಬದುಕು ಕಾಣಸಿಕ್ಕಿತು.
    ನಮ್ಮ ಕಡೆ ಅತಿಥಿಗಳನ್ನು ಕಳಿಸಬೇಕಾದರೆ ಚಹಾ ಮಾಡಿ ಕೊಟ್ಟರೆ ಅದೇ ಸೂಚನೆ!
    ಇಲ್ಲಿ ಸೂಡಿ!
    ನಮ್ಮ ಬಯಲು ಸೀಮೆಯಲ್ಲಿಯೂ ಇದು ಉಂಟು.ಆದರೆ ತೆಂಗಿನದಲ್ಲ.ತೆಂಗಿನ ಬೆಳೆ ಕಡಿಮೆ.ದಪ್ಪ ಮರದ ತುಂಡಿನ ಒಂದು ತುದಿಯನ್ನು ಚನ್ನಾಗಿ ಉರಿಸಿ ಅದು ಕೆಂಡವಾದ ಮೇಲೆ ಅದು ಮತ್ತಷ್ಟು ಬೆಳಗುವಂತೆ ಜೋರಾಗಿ ಬೀಸುತ್ತ ಸಾಗುವುದು.ಇದಕ್ಕೆ ಪ್ರಾಣಿಗಳು ಕೂಡ ಹೆದರುತ್ತವೆಯಂತೆ.
    ಪ್ರಬಂಧ ಬರೆಯಲು ಯಾವ ವಸ್ತುವಾದರು ಆಯ್ತು.ಏಕೆಂದರೆ ಪ್ರಪಂಚದಲ್ಲಿ ಯಾವ ವಸ್ಸತುವೂ ” ವ್ಯರ್ಥವಲ್ಲ!”

    1. ದೊಂದಿ ನಮ್ಮಲ್ಲೂ ಇದೆ. ಅದಕ್ಕೆ ನಾವು ‘ಜುಂಜಿ’ ಎನ್ನುತ್ತೆವೆ. ತೆಂಗಿನ ಗರಿಯ ಕಡ್ಡಿಗೆ ಬಟ್ಟೆ ಸುತ್ತಿ ಎಣ್ಣೆಯಲ್ಲಿ ಮುಳುಗಿಸಿ ದೀಪ ಹಚ್ಚುತ್ತೇವೆ

Leave a Reply

Back To Top