ಕಾವ್ಯ ಸಂಗಾತಿ
ಡಾ.ಸುಮತಿ ಪಿ
ಗಜಲ್
ಪ್ರೀತಿಯ ರಾಗವು ಗುನುಗುತಿಹುದು
ಜೊತೆಯಾಗುವೆಯ ಗೆಳತಿ
ಮನದಿ ಮಧುರ ಭಾವ ತುಂಬಿಹುದು
ಅರಿಯಲಾರೆಯಾ ಗೆಳತಿ
ಮೊದಲ ನೋಟಕೆ ನನ್ನ ಮನ
ಸೋತು ಹೋಗಿಹುದು
ಪ್ರೇಮದ ನಿವೇದನೆಯನು
ಆಲಿಸಲಾರೆಯಾ ಗೆಳತಿ
ಕಣ್ಣುಗಳಂಚಿನ ಪ್ರೀತಿಯ ಕುಡಿ
ನೋಟಕೆ ಸೆರೆಯಾಗಿಹೆನು
ಹೃದಯಮಂದಿರದಲಿ ನೀನು
ಪೂಜಿಸಲಾರೆಯಾ ಗೆಳತಿ
ತಂಬೆಲರು ಬೀಸುತ್ತಾ ಬಂದು
ಎಲೆಗಳ ಮುತ್ತಿಕ್ಕುವಂತೆ
ಸನಿಹದಲಿ ನಿಂದು ಸ್ಪರ್ಶ ಸುಖದಲಿ
ಕಚಗುಳಿ ಇಡುವೆಯಾ ಗೆಳತಿ
ಜೀವನದಲ್ಲಿ ಸುಖ ದುಃಖಗಳ
ಹಂಚಿಕೊಳ್ಳುವ ಸಮಯದಿ
ರಮಣನ ಸಾಂಗತ್ಯದಲ್ಲಿ
ಮೌನವೀಣೆ ನುಡಿಸೆಯಾ ಗೆಳತಿ
ಡಾ.ಸುಮತಿ ಪಿ