ಕಾವ್ಯ ಸಂಗಾತಿ
ವಿಷ್ಣು ಆರ್. ನಾಯ್ಕ –
ಟಿ.ಆರ್.ಪಿ ಬೇಕು ಟಿ.ಆರ್.ಪಿ
ಸುದ್ದಿಯ ಸುಳ್ಳಿನ ಲಾಟೀನ್ ಹಿಡಿದು
ಕತ್ತಲೆ ಕೋಣೆಯ ತಡವುತ ನಡೆದು
ಹಸಿಬಿಸಿ ರಕ್ತದ ವಾಸನೆ ಹಿಡಿದು
ಹೆಣದ ರಕ್ತವ ಹೀರುವೆವು ನಾವು
ಟಿ. ಆದ್.ಪಿ ಬೇಕು ಟಿ. ಆರ್.ಪಿ
ದೇಶದೇಶಗಳ ಅಂತೆಕಂತೆಯ ಸಂತೆ
ಜಾಹೀರಾತುಗಳ ‘ಮಾಯಾ ವನಿತೆ’
ಸೋಮಾರಿಗಳಿಗೆ ದಿಕ್ಸೂಚಿ ‘ವಾರ್ತೆ’
ಹೇಳುವ ಸುಳ್ಳೇ ಸತ್ಯದ ಒರತೆ
ಟಿ.ಆರ್.ಪಿ ಬೇಕು ಟಿ. ಆರ್.ಪಿ
ಪರರ ಬದುಕಲಿ ನಮ್ಮಯ ಆಟ
ನಾವೇ ಮಾಡುವೆವು ತನಿಖೆಗೆ ಓಟ
‘ಮಾನ’ವ ಕಳೆದು ಸನ್ಮಾನದ ಚಟ
ಪರರ ಸಮಾಧಿಯೆ ನಮ್ಮಯ ಬುನಾದಿ
ಟಿ.ಆರ್.ಪಿ ಬೇಕು ಟಿ. ಆರ್.ಪಿ
ಎಂದು ಕಾಣದ ಪ್ರಕೃತಿ ವಿಕೋಪ
ಭೂಮಿತಾಯಿಯ ಕೋಪದ ತಾಪ
ಜಾಣ ಕುರುಡುತನ ಮಾಧ್ಯಮ ಭೂಪ
ಜನ ನೋಡಿದರೆ ಮಾತ್ರ ನಮ್ಮಯ ವಿಲಾಪ
ಟಿ .ಆರ್.ಪಿ ಬೇಕು ಟಿ.ಆಠ್.ಪಿ
ನಮ್ಮಲ್ಲೇ ಮೊದಲು ಎಂದಿಹರಂತೆ
ತಲೆಬರೆಹವು ತಪ್ಪಿಹುದಂತೆ
ವಾಕ್ಯದ ಪ್ರತಿಪದ ದೋಷವಂತೆ
ಯಾರದೋ.. ಚಿತ್ರ ಯಾರದೊ ಸುದ್ದಿ
ಟಿ. ಆರ್.ಪಿ ಬೇಕು ಟಿ. ಆರ್.ಪಿ
ನಾಲ್ಕನೇ ಅಂಗವ ತರಿವೆವು ನಾವು
‘ಜನಮಂದೆ’ಗೆ ಕಟುಕರು ನಾವು
ಪಕ್ಷದ ಮುಖವಾಣಿ ನಾಯಕರು ನಾವು
ಶಾಂತಿ ತೋಟಕೆ ‘ಕಿಚ್ಚಿ’ನ ಪಾಠ
ಟಿ . ಆರ್. ಪಿ ಬೇಕು ಟಿ. ಆರ್.ಪಿ
ಲೋಕವ ನಾವು ಕಟ್ಟಲ್ಲ
ಅರಿವಿನ ದೀಪವ ಹಚ್ಚಲ್ಲ
ಬದುಕಿನ ಕೊಳೆಯನು ತೊಳೆಯಲ್ಲ
ಧನದಾನವರ ವಿರಾಟ ರೂಪ
ಟಿ. ಆರ್.ಪಿ ಬೇಕು ಟಿ. ಆರ್. ಪಿ
ವಿಷ್ಣು ಆರ್. ನಾಯ್ಕ