ಅರುಣಾ ನರೇಂದ್ರ-ವೈ ಎಂ.ಯಾಕೊಳ್ಳಿ- ಅವರ ಗಜಲ್ ಜುಗಲ್ ಬಂದಿ

ಮರದ ಕೆಳಗೆ ಹೂವು ಉದುರಿ ಬಿದ್ದಿವೆ ಯಾಕೆಂದು ಕೇಳಬೇಡ
ಮತ್ತೆ‌ ಅಲ್ಲೆರಡು ಕಣ್ಣು ಬೆದರಿ ನೋಡಿವೆ ಯಾಕೆಂದು ಕೇಳಬೇಡ

ಕೆಲವು ಪ್ರಶ್ನೆಗಳಿಗೆ ಉತ್ತರ ಸರಳ ಮತ್ತೆ ಹಲವಕೆ ಉತ್ತರವೇ ಇಲ್ಲ
ಗುಬ್ಬಚ್ಚಿ ಗೂಡಲಿ ಮುದುರಿ ಕುಳಿತಿವೆ ಯಾಕೆಂದು ಕೇಳಬೇಡ

ಚುಕ್ಕಿ ಇರುವ ಬಾನು ರೆಕ್ಕೆ ಇರದ ಹಕ್ಕಿಗೆ ಬಲು ದೂರ ಗೆಳೆಯ
ಮಳೆ ಬರುವ ಹೊತ್ತು ಮೋಡ ಚದುರಿ ಹೋಗಿವೆ ಯಾಕೆಂದು ಕೇಳಬೇಡ

ಸೆರಗ ಬೀಸಿ ಲಾಲಿ ಹಾಡಿದೆ ತಂಗಾಳಿ ಒಳಗಿದೆ ಕುದಿವ ಬೆಂಕಿ
ಮಾತುಕತೆ ಕೃತಕ ನಗೆ ಮಾದರಿ ಆಗಿವೆ ಯಾಕೆಂದು ಕೇಳಬೇಡ

ಬಾಳ ಹೋರಾಟದಲಿ ಪ್ರತಿ ಸಲವೂ ಸೋಲು ಇರುವುದಿಲ್ಲ ತಿಳಿ
ಅರುಣಾ ನಕ್ಕರೆ ನೋವು ಹೆದರಿ ನಡೆದಿವೆ ಯಾಕೆಂದು ಕೇಳಬೇಡ


ಮನದ ತುಂಬ ನಿನ್ನ ನೆನಹು ಚೆದುರಿವೆ ಯಾಕೆಂದು ಕೇಳಬೇಡ
ನೀ ಇದ್ದು ಎದ್ದು ಹೋದುದ ನೆನಪಿಸಿವೆ ಯಾಕೆಂದು ಕೇಳಬೇಡ

ಊರ ತುಂಬ ಜಾತ್ರೆಯ ಸಂಭ್ರಮ ಗದ್ದಲದೊಳಗೂ ನೋವು
ನನ್ನೊಳಗೆ ನಾ ಮುದುರಿ ಕುಳಿತಿರುವೆ ಯಾಕೆಂದು ಕೇಳಬೇಡ

ಹೂವು ಇರದ ಬಳ್ಳಿ ಹಣ್ಣು ಇರದ ಮರ ಭೂಮಿಗೆ ಭಾರ ಗೆಳತಿ
ಮಳೆ ತರದ ಮೋಡ ಮದುರಿ ಕುಳಿತಿವೆ ಯಾಕೆಂದು‌ ಕೇಳಬೇಡ

ಹೊದ್ದ ವಸ್ತ್ರ ಗಾಳಿಗೆ ತೂರಿದರೆ ಅಂಬರಕೆ ಉರಿ ಹತ್ತೀತು ಜೋಕೆ
ಮತದ ಬೆಂಕಿಯಲಿ ಮನಗಳು ಬೆಂದಿವೆ ಯಾಕೆಂದು ಕೇಳಬೇಡ

ನೂರು ಸಲ ಹೋರಾಡು ಒಮ್ಮೆಯಾದರೂ ಜಯ ಸಿಕ್ಕೀತು ಗೆಳತಿ
‘ಯಯಾ’ ನ ಮಾತು ಸುಳ್ಳಲ್ಲ ಸತ್ಯವಾಗಿವೆ ಯಾಕೆಂದು ಕೇಳಬೇಡ


Leave a Reply

Back To Top