ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಮೃದು ಭಾವ
ಭಾರ ಹೊತ್ತ ಕಾರ್ಮೋಡ
ದುಃಖಿಸಿ ಕರಗಿ ಸುರಿಸಿತು
ಕಣ್ಣೀರ ವರ್ಷಧಾರೆ
ಸಮಾಧಾನಿಸಿ ಇಳೆಗಪ್ಪಳಿಸಿ
ಗುಡುಗು ಸಿಡಿಲಿನ ಸದ್ದಿಗೆ
ಬೆದರಿತೋ ಕಾರ್ಮೋಡ
ಹಿಡಿತ ತಪ್ಪಿ ಭೂರಮೆಗೆ
ಹನಿ ಹನಿಯಾಗಿ ಜಾರಿತು
ನೋವನ್ನು ಸೀಳಿ ಸುಳಿವ ಗಾಳಿ
ಏದುಸಿರು ಬಿಡುತ ನುಸುಳಿ
ಜಾರುವ ಹನಿಗಳ ಎಲ್ಲೋ
ಸರಿಸಿ ದೂರ ದೂರ ತಳ್ಳಿ
ನೆಲವೊಣಗಿ ಬಾಯ್ದೆರೆದಿರಲು
ಹನಿಗಳು ಇಳೆಯ ಚಿಗುರಿರಲು
ನಗುವ ಮೊದಲೇ ಸುಡುಬಿಸಿಲು
ಮತ್ತೆ ಸುಟ್ಟು ಬರ ಅವರಿಸಿದೆ
ಕಮರಿದ ಬರಡು ಒಡಲಿಗೆ
ಸೋನೆ ಹನಿ ಭಾವ ಬಿತ್ತದೆ
ಚಿಗುರಿದ ಚಿಗುರು ಅಗಲಿದೆ
ಇಳೆ ಹನಿಗಳ ಸ್ಪರ್ಶ ಕಾಣದೆ
ಹಂಬಲಿಸುವ ಭುವಿ ಬಾನು
ಸಮ್ಮಿಲನಕ್ಕೆ ಅಡ್ಡಿಯಾದಂತಿದೆ
ಕರಗಿ ನೀರಾಗುವ ಮೋಡ
ಕರಗದೆ ಹೋದರೆ ಗಟ್ಟಿತನವು
ಮೃದುತನವ ಸೆಳೆದು
ಗಡಸುತನವನ್ನು ಸರಿಸಿ
ಸುರಿಸಿದ ಹನಿಗಳೆ ಮುಂದೆ
ನೆಮ್ಮದಿಯ ತೊರೆಗಳು
ಸತೀಶ್ ಬಿಳಿಯೂರು
ಚೆನ್ನಾಗಿದೆ