ಶಾಲಿನಿ ಕೆಮ್ಮಣ್ಣುಅವರ ಕವಿತೆ-ಆಕರ್ಷಣೆ

ಎಲ್ಲಿ ಮರೆಯಾಗಿರುವೆ
ಕಣ್ಣೋಟದಿ ನನ್ನ ಸೆಳೆದವನೇ
ಮರಳಿ ನೆನಪಲೇಕೆ ಬಂದಿರುವೆ
ಮೌನದಿ ಮನದ ಬಾಗಿಲ ತಟ್ಟಿದವನೇ
ಬರಿ ಕಣ್ಣುಗಳಲಿ ಸೂಚನೆ
ಏನೇನೋ ಭಾವನೆಗಳ ರವಾನೆ
ಇಬ್ಬರ ನಡುವೆ ಇರಲಿಲ್ಲ ಬೇರೆ ಸಂವಹನೆ
ಹದಿಹರೆಯದ ಚಂಚಲ ಮನ ಕಾಮನೆ
ನೆನಪಿದೆ ಆ ನಯನಗಳು
ತುಂಟ ನಗೆಯ ಕೆನ್ನೆಕುಳಿಗಳು
ಗೆಳೆಯರ ಗುಂಪಲ್ಲಿ ನೀ ಬೆರೆಯತಲಿದ್ದರೂ
ಹುಸಿ ನೋಟವ ಬೀರುತಿದ್ದೆ ನನ್ನೆಡೆಗೆ
ಗೆಳತಿಯರೊಡನೆ ನಾ ಮಾತಲ್ಲಿ ಮರೆತರು
ದೃಷ್ಟಿಯು ಮಾತ್ರ ನಿನ್ನೆಡೆಗೆ
ಯಾರು ಅರಿಯದ ನಮ್ಮ ಸಂಭಾಷಣೆ
ಮಧ್ಯೆ ರಸ್ತೆಯೊಂದೇ ಮೂಕ ಸಾಕ್ಷಿ ತಾನೇ
ನಿನ್ನನರಸಿದ ದಿನಗಳೆಷ್ಟೊ
ನಿನಗಾಗಿ ನಡೆದ ದಾರಿಗಳೆಷ್ಟೊ
ಕಂಡ ಕನಸುಗಳೆಷ್ಟೊ
ಕಾಣದೆ ಕಳೆದಿವೆ ದಶಕಗಳು
ಕೌತುಕ ಉಳಿದಿದೆ ಮನದೊಳು
ಮತ್ತೆ ಕಾಣುವ ತವಕ ಉಳಿಸಿಹೆಯಾ
ನನ್ನಲಿ ನಿನ್ನ ಮನದ ಮಾತಾಡೆಯ
ಇಂದಿಗೂ ತಿಳಿಯಲಿಲ್ಲ ನಿಜವೇನೆಂದು
ನನ್ನ ಭಾವನೆಗಳ ಕಲ್ಪಿತ ಭ್ರಮೆಯೋ ಇದು
ನಿನ್ನಲ್ಲೂ ಇತ್ತೋ ನನ್ನ ಕಾಣುವ ಪ್ರೇಮ ತುಡಿತವು

————————

One thought on “ಶಾಲಿನಿ ಕೆಮ್ಮಣ್ಣುಅವರ ಕವಿತೆ-ಆಕರ್ಷಣೆ

Leave a Reply

Back To Top