“ಸ್ತ್ರೀವಾದ…. ಹೊರಳದಿರಲಿ ವಿಘಟನೆಯತ್ತ” ವಿಶೇಷಲೇಖನ ವೀಣಾ ಹೇಮಂತ್ ಗೌಡ ಪಾಟೀಲ್

ಗೃಹಿಣಿ ಎಂದೊಡನೆ ನಮ್ಮ ಕಣ್ಣ ಮುಂದೆ ಬರುವುದು ಅಂದವಾದ ಸೀರೆ, ಚಂದದ ಕುಪ್ಪಸ ತೊಟ್ಟ, ಜಡೆ ಹೆಣೆದು ತಲೆಯಲ್ಲಿ ಹೂ ಮುಡಿದು,ಹಿತ ಮಿತವಾದ ಅಲಂಕಾರ, ಹಣೆಯಲ್ಲಿ ಕುಂಕುಮದ ಬೊಟ್ಟಿಟ್ಟ ಹೆಣ್ಣು ಮಗಳ ಚಿತ್ರ ಕಣ್ಣ ಮುಂದೆ ಬರುತ್ತದೆ . ಕೊರಳಲ್ಲಿ ಗಂಡ ಕಟ್ಟಿದ ತಾಳಿ, ಕೈಗಳಲ್ಲಿ ಹಸಿರು ಕೆಂಪು ಬಳೆಗಳು, ಕಿವಿಯೋಲೆ ಮತ್ತು ಕಾಲಲ್ಲಿ ಬೆಳ್ಳಿಯ ಕಾಲ್ಗೆಜ್ಜೆ ಮತ್ತು ಕಾಲುಂಗುರಗಳು ಆಕೆಯ ಬಾಹ್ಯಆಭೂಷಣಗಳಾದರೆ ಹಿರಿಯರಿಗೆ ಕೊಡುವ ಗೌರವ, ಗಂಡನಲ್ಲಿ ಪ್ರೀತಿ, ಮಕ್ಕಳ ಮೇಲೆ ಮಮತೆ ಮತ್ತು ಮನೆಗೆ ಬಂದು ಹೋಗುವ ಅತಿಥಿಗಳಲ್ಲಿ ಪ್ರೀತ್ಯಾದರ ತೋರುವ ಹೆಣ್ಣು ಮಗಳು ಮನೆಯ ಕಳೆಯನ್ನು ಹೆಚ್ಚಿಸುತ್ತಾಳೆ. ಅದೆಷ್ಟೇ ಕಾಲ ಬದಲಾಗಿದ್ದರು ಕೂಡ ಹೆಣ್ಣುಮಕ್ಕಳು ಸ್ತ್ರೀತ್ವದ ಪ್ರತೀಕವಾಗಿ, ಮಮತೆ ವಾತ್ಸಲ್ಯಗಳ ಪ್ರತಿರೂಪವಾಗಿ ಹುಟ್ಟಿದ ತವರುಮನೆ ಮತ್ತು ಮೆಟ್ಟಿದ ಗಂಡನ ಮನೆ ಎರಡನ್ನೂ ಸಂಭಾಳಿಸಿಕೊಂಡು ಹೋಗುವಲ್ಲಿ ನಿಷ್ಣಾತೆ.

ನೂರಾರು ವರ್ಷಗಳು ಸಂದು ಹೋದರೂ ಅಮ್ಮ ಎಂದರೆ ಆಡಿ ಬಂದ ತನ್ನ ಮಗುವಿನ ಮುಖವನ್ನು ಸೀರೆಯ ಸೆರಗಿನಿಂದ  ಒರೆಸಿ ಮುದ್ದಿಡುವ ತಾಯಿಯೇ ನೆನಪಾಗುತ್ತಾಳೆ. ಈಗ ಕಾಲ ಬದಲಾಗಿದೆ, ಅಮ್ಮನ ದಿರಿಸು ಬದಲಾಗಿದೆ… ನಿಜ ಆದರೆ ತಾಯಿಯ ಮಮತೆ, ಪ್ರೀತಿ ಮಾತ್ರ ಯಾವತ್ತೂ ನಿತ್ಯಹರಿದ್ವರ್ಣ ಕಾಡಿನಂತೆ.

 ಆದರೆ ಇತ್ತೀಚಿನ ದಿನಗಳಲ್ಲಿ ಸ್ತ್ರೀ ಸ್ವಾತಂತ್ರ್ಯದ ಹೆಸರಿನಲ್ಲಿ, ವೈಯುಕ್ತಿಕ ಸ್ವೇಚ್ಚೆಯ ಹುಚ್ಚಿನಲ್ಲಿ ಸ್ತ್ರೀವಾದ ವಿಘಟನೆಯತ್ತ ಸಾಗುತ್ತಿದೆ.
 ಪುರುಷನಿಗೆ ನಾವೇನು ಕಮ್ಮಿ ಎನ್ನುತ್ತಾ ಹೆಣ್ಣು ಮಕ್ಕಳು ಪುರುಷನಿಗೆ ಸರಿಸಮನಾಗಿ ದುಡಿಯುತ್ತಿರುವುದೇನೋ ಸರಿಯೇ. ಹೆಣ್ಣು ಮಕ್ಕಳು  ಪುರುಷನಿಗೆ ಯಾವುದರಲ್ಲೂ ಕಮ್ಮಿ ಇಲ್ಲ… ಇಲ್ಲಿ ಯಾರು ಯಾರನ್ನು ಹೆಚ್ಚು ಕಮ್ಮಿ ಎಂದು ತಾರತಮ್ಯ ಮಾಡುವುದೂ ಬೇಕಿಲ್ಲ. ನಿಸರ್ಗ ಸಹಜವಾಗಿ ಇರುವ ನಮ್ಮ ದೈಹಿಕ, ಮಾನಸಿಕ ಅಗತ್ಯತೆಗಳಿಗೆ ತಕ್ಕಂತೆ ಈಗಾಗಲೇ ನಾವುಗಳು ನಮ್ಮ ಕರ್ತವ್ಯಗಳನ್ನು ಶತಶತಮಾನಗಳಿಂದ ನಿರ್ವಹಿಸುತ್ತಾ ಬಂದಿದ್ದೇವೆ.

 ಎಷ್ಟೋ ಬಾರಿ ಹೆಣ್ಣು ಮಕ್ಕಳು ಪುರುಷನಿಗೆ ಸರಿ ಸಮನಾಗಿ ಹೊಲಗಳಲ್ಲಿ,ಯುದ್ಧಗಳಲ್ಲಿ, ಔದ್ಯೋಗಿಕ ರಂಗಗಳಲ್ಲಿ ಕಾರ್ಯನಿರ್ವಹಿಸಿದ್ದಾಳೆ,ಆದರೆ ಆಕೆ ಎಂದೂ ವಿಘಟನೆಯತ್ತ ಮನಸ್ಸು ಮಾಡಿಲ್ಲ. ಅದುವೇ ಆಕೆಯ ಅಂತಃಸ್ಸತ್ವ.

ಹೆಣ್ಣು ಬೆಂದ ಮನಗಳಿಗೆ ತಂಪನೆರೆವ ತಾಯಿ ಗುಣದವಳು, ದಣಿದ ಮನಕ್ಕೆ ಚೇತನ ತುಂಬಬಲ್ಲವಳು, ಸೋತು ಬಳಲಿದ ಪತಿಗೆ ಹೆಗಲಾಗಿ ನಿಲ್ಲಬಲ್ಲಳು. ಮಮತೆಯ ಕಡಲಾಗಿ ಪ್ರೀತಿಯ ಧಾರೆಯನ್ನು ಹರಿಸಬಲ್ಲವಳು, ತಪ್ಪು ಮಾಡಿದವರನ್ನು ಕ್ಷಮಿಸಬಲ್ಲವಳು, ಕಾರ್ಯೇ ಶು ದಾಸಿ, ಕರಣೇ ಶು ಮಂತ್ರಿ, ಭೋಜ್ಜೆ ಶು ಮಾತಾ, ರೂಪೇ ಶು ಲಕ್ಷ್ಮಿ, ಶಯನೇಶು ರಂಭ, ಕ್ಷಮಯಾಧರಿತ್ರಿ ಎಂದು ನಮ್ಮ ಪ್ರಾಚೀನರು ಹೊಗಳಿದ್ದಾರೆ.
 ಇದರ ಜೊತೆ ಜೊತೆಗೆ ಹೆಣ್ಣು ಕ್ಷಮೆಯಾಧರಿತ್ರಿಯಾಗಿದ್ದರೂ… ತಪ್ಪು ಮಾಡಿದರೆ ಶಿಕ್ಷಿಸಬಲ್ಲ ದೇವಿ ಸ್ವರೂಪಳಾಗಿದ್ದಾಳೆ.  

 ಇಂದಿಗೂ ಪುರುಷ ಪ್ರಧಾನ ವ್ಯವಸ್ಥೆ ಅಡಿಯಲ್ಲಿ ಬೆಳೆದ ಬಹಳಷ್ಟು ಗಂಡಸರ ಸಂವೇದನಾರಹಿತ ವರ್ತನೆಯಿಂದ ಹೆಣ್ಣು ಮಕ್ಕಳು ನಲುಗಿ ಹೋಗಿದ್ದಾರೆ. ಹೆಣ್ಣನ್ನು ತೊತ್ತಿನಂತೆ ನಡೆಸಿಕೊಳ್ಳುತ್ತಿರುವ ಪುರುಷಪ್ರಧಾನ ವ್ಯವಸ್ಥೆಯು ಆಕೆಯೂ ಓರ್ವ ವ್ಯಕ್ತಿ, ಆಕೆಗೂ ಒಂದು ವ್ಯಕ್ತಿತ್ವವಿದೆ  ಆಸೆ ಆಕಾಂಕ್ಷೆಗಳಿವೆ ಎಂಬುದನ್ನು ಮರೆತಂತೆ ವರ್ತಿಸುತ್ತದೆ… ಕೆಲವೊಮ್ಮೆ ಹೆಣ್ಣಿಗೆ ಹೆಣ್ಣೆ ಶತ್ರು ಎಂಬಂತೆ ಹೆಣ್ಣು ಮಕ್ಕಳು ವರ್ತಿಸುವುದು ಬೇಸರದ ಸಂಗತಿ.

  ಬಹುಶಹ ತಮ್ಮ ತಾಯಂದಿರು ಅನುಭವಿಸಿರುವ ನೋವುಗಳನ್ನು, ಹಿಂಸೆ,ಅವಮಾನಗಳನ್ನು, ಪ್ರತಿಯೊಂದು ಪೈಸೆ ದುಡ್ಡಿಗಾಗಿ ಗಂಡಸರ ಮುಂದೆ ಕೈ ಚಾಚುವುದನ್ನು ಕಂಡಿರುವ ಇಂದಿನ ಹೆಣ್ಣು ಮಕ್ಕಳು ಸ್ವತಂತ್ರವಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಪಡೆದಿದ್ದಾರೆ. ಅಮ್ಮನ ನಗುಮುಖದ ಹಿಂದಿನ ನೋವು, ಪ್ರೀತಿಯ ಹಿಂದಿನ ಅವ್ಯಕ್ತ ಭೀತಿ, ಗಟ್ಟಿ ಧೈರ್ಯದ ಮುಖವಾಡದ ಹಿಂದಿನ ಅಳುಕು ಆತಂಕ ಹಿಂಜರಿಕೆಗಳನ್ನು ನೋಡಿರುವ ಹೆಣ್ಣು ಮಕ್ಕಳು ತಮ್ಮ ತಾಯಿಯಂತೆ ತಾವು ಎಲ್ಲವನ್ನು ಸಹಿಸಿಕೊಂಡಿರಬಾರದು ಎಂದು ನಿರ್ಧರಿಸಿ ಅಂತೆಯೇ ನಡೆಯುತ್ತಿರುವುದು ತಪ್ಪಲ್ಲ.
 ಗಂಡಿಗೆ ಸಮನಾಗಿ ವಿದ್ಯೆ ವಿದ್ವತ್ತುಗಳನ್ನು ಪಡೆದು ಉದ್ಯೋಗಗಳನ್ನು ಕೂಡ ಹೊಂದಿರುವ ಅವರ  ಜ್ಞಾನ ಕೌಶಲಗಳನ್ನು ಮೆಚ್ಚಲೇಬೇಕು.

 ಕೇವಲ ಎರಡು-ಮೂರು ದಶಕಗಳ ಹಿಂದೆ ಉದ್ಯೋಗಸ್ಥರಾಗಿದ್ದ ಹೆಣ್ಣು ಮಕ್ಕಳು ಕಚೇರಿ ಮತ್ತು ಮನೆ ಎರಡೂ ಕಡೆ ದುಡಿದು ಹೈರಾಣಾಗುತ್ತಿದ್ದರು.
 ಪುರುಷ ಸಹಜ ಅಹಂಕಾರದಿಂದಿದ್ದ ಗಂಡಸರು ಮನೆಯಲ್ಲಿ ಹೆಂಡತಿಗೆ ಯಾವ ರೀತಿಯ ಸಹಾಯ ಮಾಡದೆ ಇದ್ದರೂ ಕೂಡ ನನ್ನಮ್ಮನಂತೆ ಅಡುಗೆ ಮಾಡಲು ಬರುವುದಿಲ್ಲ,ಮನೆ ವಾರ್ತೆ ನನ್ನಮ್ಮನನ್ನು ನೋಡಿ ಕಲಿ ಎಂದು ಹಂಗಿಸಿ ಉದ್ಯೋಗಸ್ಥ ಮಹಿಳೆಯರಲ್ಲಿ ಕೀಳರಿಮೆಯನ್ನು ಉಂಟು ಮಾಡುತ್ತಿದ್ದರು. ಇದರ ಜೊತೆಗೆ ಚಿಕ್ಕ ವಯಸ್ಸಿನ ಮಕ್ಕಳಿದ್ದರಂತೂ ಆ ಉದ್ಯೋಗಸ್ಥ ಮಹಿಳೆಯರಿಗೆ ತನ್ನ ಮಕ್ಕಳಿಗೆ ಅವಶ್ಯಕವಾದ ಕಾಳಜಿ ಮತ್ತು  ಪ್ರೀತಿಯನ್ನು ನೀಡಲಾಗದವಳು ಎಂಬಂತೆ ಬಿಂಬಿಸಿ ನೋಯಿಸುತ್ತಿದ್ದರು. ಖುದ್ದು ಉದ್ಯೋಗಸ್ಥ ಮಹಿಳೆ ಕೂಡ  ತನ್ನನ್ನು ಮತ್ತು ತನ್ನ ಆರೋಗ್ಯವನ್ನು ಕಡೆಗಣಿಸಿ ಮನೆ ಅತ್ತೆ, ಮಾವ, ಗಂಡ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಸಿದ್ದಳಾಗುವಂತೆ ಪ್ರೇರೇಪಿಸುತ್ತಿದ್ದರು. ನೌಕರಿ ಮಾಡಲು ಆಕೆಗೆ ಬಿಟ್ಟಿರುವುದೇ ಆಕೆಗೆ ತಾವು ಮಾಡುತ್ತಿರುವ ಉಪಕಾರ ಎಂಬಂತೆ ವರ್ತಿಸುವುದು ಸಹಜವಾಗಿತ್ತು.

ಆದರೆ ಕಾಲ ಬದಲಾಗಿದೆ.. ತಮ್ಮ ತಾಯಂದಿರ ನೋವನ್ನು ಕಂಡಿರುವ ಗಂಡುಮಕ್ಕಳು, ತಾವು ಪ್ರೀತಿಸಿದ ಯುವತಿಯನ್ನೇ ಮದುವೆಯಾದವರು, ಕಾಲದ ಪ್ರವಾಹದಲ್ಲಿ  ಹೆಣ್ಣಿನ ಅಸ್ತಿತ್ವದ ಮಹತ್ವ ವನ್ನು ಗುರುತಿಸಿದವರು, ಸಮಾನತೆಯ ಮಹತ್ವ ಅರಿತ ಆಧುನಿಕ ಹುಡುಗರು ತಮ್ಮ ಪತ್ನಿಯಲ್ಲಿ.. ಸಂಗಾತಿಯನ್ನು ಸ್ನೇಹಿತೆಯನ್ನು ಕಂಡುಕೊಂಡಿದ್ದು,  ಆಕೆಗೆ ಸಮನಾಗಿ ಅಲ್ಲದೆ ಹೋದರೂ, ಮನೆಗೆಲಸದಲ್ಲಿ ಆಕೆಗೆ ಸಹಾಯ ಮಾಡುತ್ತಿದ್ದಾರೆ. ಇದು ಇಂದಿನ ಅಗತ್ಯತೆಗಳಲ್ಲಿ ಒಂದಾಗಿದ್ದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.  

 ಈ ಹಿಂದೆ ಕಂಡು ಬರುತ್ತಿದ್ದ ಅತ್ತೆ ಸೊಸೆ ಎಂದರೆ ಎಣ್ಣೆ ಸೀಗೆಕಾಯಿ ಸಂಬಂಧ ಎಂಬಂತಹ ಮಾತುಗಳು ಸವಕಲಾಗಿವೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಒಬ್ಬರಿನ್ನೊಬ್ಬರಿಗೆ ಆಸರೆಯಾಗಿ ನಡೆಯುವ ಅತ್ತೆ ಸೊಸೆ ಮಾದರಿ ಕೂಡ ಒಳ್ಳೆಯ ಬೆಳವಣಿಗೆ. ತನ್ನತ್ತೆ ತನ್ನನ್ನು ನಡೆಸಿಕೊಂಡಂತೆ ತಾನು ತನ್ನ ಸೊಸೆಯನ್ನು ನೋಡಬಾರದು ಎಂಬ ಮಾನಸಿಕ
 ಪ್ರಬುದ್ಧತೆಯನ್ನು ಅತ್ತೆಯರು ಹೊಂದಿದ್ದರೆ ಕುಟುಂಬ ಎಂದ ಮೇಲೆ ಹೊಂದಿಕೊಂಡು ಹೋಗುವುದು ಸಹಜ ಎಂಬ ಭಾವ ಸೊಸೆಯಂದಿರಲ್ಲಿ ಬಂದಿದ್ದು ಮೊದಲಿನಂತೆ ಅತಿಯಾದ ಕಿತ್ತಾಟಗಳು, ಜಗಳಗಳು ಇಲ್ಲದೆ ಮನೆ ಶಾಂತಿಯ ಗೂಡಾಗಿದೆ. ಕೆಲವೊಂದು ಅಪವಾದಗಳನ್ನು ಹೊರತುಪಡಿಸಿ ಸಂಸಾರದಲ್ಲಿ ಸಾಮರಸ್ಯ ಪ್ರಧಾನತೆಯನ್ನು ಪಡೆದಿದೆ.

 ಆದರೆ ಇತ್ತೀಚಿನ ಕೆಲ ಬೆಳವಣಿಗೆಗಳ ಪ್ರಕಾರ
ಸ್ವಾತಂತ್ರ್ಯದ ಹೆಸರಿನಲ್ಲಿ ಕೆಲವು ಹೆಣ್ಣು ಮಕ್ಕಳು ಸ್ವೇಚ್ಛೆಯಿಂದ ವರ್ತಿಸುತ್ತಿದ್ದಾರೆ, ಗಂಡಸರಿಗೆ ನಾವೇನು ಕಮ್ಮಿ  ಆಧುನಿಕತೆಯ ಸೋಗಿನಲ್ಲಿ ದುಶ್ಚಟಗಳನ್ನು ರೂಢಿಸಿಕೊಂಡು ಧೂಮಪಾನ ಮದ್ಯಪಾನ ಗಳ ಜೊತೆಗೆ ಮಾದಕ ಪದಾರ್ಥಗಳ ಸೇವನೆ ಮಾಡುತ್ತಾ ಅರೆ ಬಟ್ಟೆ ಉಡುಪು ತೊಡುತ್ತಾ ಅಂಗ ಪ್ರದರ್ಶನ ಮಾಡುತ್ತಿದ್ದಾರೆ. ಎಲ್ಲೋ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಮಾತ್ರವಲ್ಲದೆ ಸಣ್ಣ ಪುಟ್ಟ ನಗರ ತಾಲೂಕು ಪ್ರದೇಶಗಳಲ್ಲಿಯೂ ನಡೆಯುತ್ತಿರುವ  ಹೆಣ್ಣು ಮಕ್ಕಳ ಸ್ವೇಚ್ಚೆಯ ವರ್ತನೆ ನಮ್ಮ ಸಂಸ್ಕೃತಿಯ ಅದೆಷ್ಟು ಅಧಪತನಕ್ಕೆ ಇಳಿಯುತ್ತಿದೆ ಎಂಬುದನ್ನು ತೋರುತ್ತದೆ. ತಾವು ಕೂಡ ಆಧುನಿಕತೆಯ ಪ್ರವಾಹದ ಭಾಗವಾಗಿರಲು ಇಚ್ಛಿಸುವ ಹೆಣ್ಣು ಮಕ್ಕಳು ಎಷ್ಟೋ ಬಾರಿ ತಂದೆ ತಾಯಿಗೆ ಗೊತ್ತಿಲ್ಲದಂತೆ ಈ ಕೃತ್ಯಗಳಿಗೆಳಸುತ್ತಾರೆ.

 ಇದಕ್ಕೆ  ಪಾಲಕರಾದ ನಾವುಗಳೇ ಕಾರಣ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಿರುವ ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಬೆಲೆ ಕೊಡುವ ಉದ್ದೇಶದಿಂದ ಪಾಲಕರು ನಮ್ಮ ಸನಾತನ ಸಂಸ್ಕೃತಿಯ ಮೂಲ ಬೇರುಗಳನ್ನು ಪರಿಚಯಿಸದೇ ಇರುವುದು, ಸ್ತ್ರೀತ್ವದ ಹೆಮ್ಮೆಯನ್ನು ಮಕ್ಕಳಿಗೆ ತಿಳಿಯಪಡಿಸದಿರುವುದು, ತಮ್ಮೆಲ್ಲ ಕೆಲಸ ಕಾರ್ಯಗಳಿಗೆ ಹೆಣ್ಣು ಮಕ್ಕಳ ಮೇಲೆ ಅವಲಂಬಿತರಾಗಿದ್ದು ಕೂಡ  ಖುದ್ದು ಮನೆಯಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸದೇ ಇರುವುದನ್ನು ಕಾಣುವ ಬಹಳಷ್ಟು ಹೆಣ್ಣುಮಕ್ಕಳು ಎಲ್ಲವನ್ನೂ ಎಲ್ಲರನ್ನೂ ಧಿಕ್ಕರಿಸುತ್ತೇವೆ ಎಂಬ ಹಪಹಪಿಯಲ್ಲಿ ತಮ್ಮನ್ನು ತಾವು ದುಷ್ಟ ಚಟಗಳಿಗೆ ಒಡ್ಡಿಕೊಳ್ಳುವುದು ಅವರ ಮಾನಸಿಕ ಅಸ್ವಸ್ಥತೆಯನ್ನು ತೋರುತ್ತದೆ.
 ಅಂತಹ ಹೆಣ್ಣು ಮಕ್ಕಳಿಗೆ ಎಲ್ಲ ತಾಯಂದಿರ  ಪರವಾಗಿ ಕೆಲ ಹಿತ ನುಡಿಗಳು
 ಪ್ರವಾಹದ ಭಾಗವಾಗಿ ನಾವು ಹೀಗೆ ವರ್ತಿಸುತ್ತೇವೆ ಎಂಬುದು ನಿಮ್ಮ ಅಭಿಪ್ರಾಯವಾದರೆ… ಆ ಪ್ರವಾಹ ಒಮ್ಮುಖವಾದುದು ಅದು ಕೂಡ ಇಳಿಜಾರಿನತ್ತ ಸಾಗುವುದು ಎಂಬುದು ನಿಮ್ಮ ಅರಿವಿನಲ್ಲಿರಲಿ.
 ಯಾವ ವಿಷಯವನ್ನು ನಿಮ್ಮ ಪಾಲಕರು ಮತ್ತು ಮನೆಯ ಹಿರಿಯ ಸದಸ್ಯರ ಮುಂದೆ ನೀವು ಮುಚ್ಚಿಡಲು ಪ್ರಯತ್ನಿಸುತ್ತೀರಿ ಎನ್ನುವುದಾದರೆ ಅದು ತಪ್ಪು ಎಂಬುದು ನಿಮ್ಮ ಅಂತಪ್ರಜ್ಞೆಗೆ ಈಗಾಗಲೇ ಗೊತ್ತಿದೆ ಎಂದರ್ಥ. ಹಾಗಿದ್ದರೆ ತಪ್ಪನ್ನು ಮಾಡಲು ಅದೇಕೆ ಅಷ್ಟು ಆತುರ, ಕಾತುರ ಎಂಬುದನ್ನು ನಿಮ್ಮನ್ನು ನೀವೇ ಪ್ರಶ್ನೆಸಿಕೊಂಡಾಗ ತುಸು ತಡವಾಗಿಯಾದರೂ ನಿಮಗೆ ಅರಿವಾಗುತ್ತದೆ.
 ಆಧುನಿಕತೆ ಎನ್ನುವುದು ನಿಮ್ಮ ವೇಷಭೂಷಣಗಳಲ್ಲಾಗಲಿ ನಿಮ್ಮ ಹವ್ಯಾಸಗಳು ಆಗಲಿ ತೋರಬೇಕಿಲ್ಲ… ಬದಲಾಗಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಿಮ್ಮ ಮಾತು, ಕೃತಿ ಮತ್ತು ವಿಚಾರಧಾರೆಗಳಲ್ಲಿ ಆಧುನಿಕತೆಯ ಸ್ಪರ್ಶವಿರಬೇಕು.
 ಹೆಣ್ಣು ಗಂಡಿಗಿಂತಲೂ ಹೆಚ್ಚು ಸಮರ್ಥಳು ಮತ್ತು ತನ್ನ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಬಲ್ಲಳು, ಎಂತಹದೇ ವಿಪತ್ತಿನ ಪರಿಸ್ಥಿತಿಯಲ್ಲಿಯೂ ಕೂಡ ಎದುರಿಸಿ ಬಾಳಬಲ್ಲಳು  ಎಂಬ ಕಾರಣದಿಂದಲೇ ಪ್ರಕೃತಿಯು ಆಕೆಗೆ ತಾಯ್ತನದ ಶಕ್ತಿಯನ್ನು ನೀಡಿರುವುದು, ಒಂದೊಳ್ಳೆಯ ಸಮಾಜ ನಿರ್ಮಾಣಕ್ಕಾಗಿ ಹೆಣ್ಣು ಮಕ್ಕಳು ನೀಡುವ ಅಹರ್ನಿಶಿ  ಕೊಡುಗೆ ಎಂದರೆ ಉತ್ತಮ ಮಕ್ಕಳನ್ನು ಈ ಸಮಾಜಕ್ಕೆ ಕಾಣಿಕೆಯಾಗಿ ಒಪ್ಪಿಸುವುದು.
 ಹಾಗೆಂದು ಮೌಂಟ್ ಎವರೆಸ್ಟ್ ಹತ್ತುವಾಗ ಸೀರೆ ಉಡಿ ಎಂದು ಹೇಳುತ್ತಿಲ್ಲ, ನಿಮ್ಮ ಉಡುಪುಗಳು ಸಬ್ಬತೆಯ ಗಡಿಯನ್ನು ದಾಟದಿರಲಿ, ನಿಮ್ಮ ಕುಟುಂಬದ ಸಂಸ್ಕಾರವನ್ನು ಎತ್ತಿ ತೋರಿಸುವ ಉಡುಪುಗಳು ನಿಮಗೆ ಭೂಷಣವಾಗಿರಲಿ…. ಯಾಕೆಂದರೆ ನೀವು ಧರಿಸುವ ಬಟ್ಟೆಗಳು ನಿಮ್ಮ ಪಾಲಕರ ಪಾಲಕತ್ವವನ್ನು, ಚಾರಿತ್ರ್ಯವನ್ನು ಎತ್ತಿ ತೋರುತ್ತವೆ…. ಅಯ್ಯೋ ಊರಿಗೆಲ್ಲ ಬುದ್ಧಿ ಹೇಳ್ತಾರೆ ಇವರ ಮಕ್ಕಳು ಹೇಗೆ ಅಂತ ನಮಗೆ ಗೊತ್ತಿಲ್ವಾ ಎಂಬ ಒಂದು ಪುಟ್ಟ ಮಾತು ಪಾಲಕರಿಗೆ ಶೂಲದಂತೆ ಭಾಸವಾಗುತ್ತದೆ.

 ಒಂದೇ ಮನೆಯಲ್ಲಿರುವ ಕುಟುಂಬ ಸದಸ್ಯರ ನಡುವೆಯೇ ಸಾಕಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ ಅಂತದ್ದರಲ್ಲಿ ಬೇರೊಂದು ಮನೆಯಿಂದ ಬರುವ ಹೆಣ್ಣು ಮಗಳು ತಮ್ಮ ಕುಟುಂಬಕ್ಕೆ ಹೊಂದಿಕೊಳ್ಳಲು ಅನುವು ಮಾಡಿಕೊಡಬೇಕು… ignorance is bliss ಎಂಬ ಮಾತಿನಂತೆ  ಕೆಲ ವಿಷಯಗಳನ್ನು ನಮ್ಮ ಅಹಮ್ಮಿಗೆ ಪೆಟ್ಟು ಬಿದ್ದಿತ್ತು ಎಂದು ಭಾವಿಸದೆ ಕಡ್ಡಿಯನ್ನು ಗುಡ್ಡ ಮಾಡದೆ ಕಂಡೂ ಕಾಣದಂತೆ ತೇಲಿಸಿ ಬಿಡಬೇಕು. ತೀರಾ ಅನಿವಾರ್ಯವಲ್ಲದ ಹೊರತು  ಕುಟುಂಬವನ್ನು ಒಡೆದು ನಾನು, ನನ್ನ ಗಂಡ ಮಕ್ಕಳು ಮತ್ತು ನನ್ನ ಮನೆ ಎಂದು ಬೇರೊಂದು ಮನೆ ಮಾಡಿಕೊಳ್ಳದೆ ತಾಳಿದವನು ಬಾಳಿಯಾನು ಎಂಬ ಉಕ್ತಿಯಂತೆ ಹಿರಿಯರೊಂದಿಗೆ ಹೊಂದಿಕೊಂಡು ಬಾಳಿದರೆ ನಿಮ್ಮ ಹುಟ್ಟಿದ ಮನೆಗೆ ನೀವು ಗೌರವ ತಂದು ಕೊಡುವುದಲ್ಲದೆ ನಿಮ್ಮ ಸಂಗಾತಿಯ ಪ್ರೀತ್ಯಾದರ ಗಳಿಗೆ ಭಾಜನರಾಗುವಿರಿ. ನಿಮ್ಮ ಮಕ್ಕಳು ಅಜ್ಜಿ ತಾತ ಅತ್ತೆ ಚಿಕ್ಕಪ್ಪ ಚಿಕ್ಕಮ್ಮ ಮುಂತಾದ ಸಂಬಂಧಗಳ ಪ್ರೀತಿಯ ಬಂಧನದಲ್ಲಿ ಬೆಳೆದು ಉನ್ನತ ಸಂಸ್ಕಾರಗಳನ್ನು ಹೊಂದಲು ಕಾರಣರಾಗುವಿರಿ.
 ಸಮುದ್ರದಲ್ಲಿ ಏರಿಳಿತಗಳು ಇರುವಂತೆಯೇ ಸಂಸಾರ ಎಂದ ಮೇಲೆ ಸುಖ ದುಃಖ, ಇದ್ದೇ ಇರುತ್ತದೆ. ಇಂದಿಗೂ ಸಂಸಾರದ ಭಾರವನ್ನು ಹೊತ್ತಿರುವುದು ಹೆಣ್ಣು ಮಕ್ಕಳೇ.
 ಅತ್ಯಂತ ಸಮಾಧಾನ ಚಿತ್ತದಿಂದ ಮನೆಯ ಎಲ್ಲ ಆಗುಹೋಗುಗಳನ್ನು ನೋಡಿಕೊಂಡು ಹೋಗುವ ಹೆಣ್ಣು ಮಕ್ಕಳು ಈ ಸಮಾಜಕ್ಕೆ ಕೊಡುವ ಅತಿ ದೊಡ್ಡ ಕೊಡುಗೆ ಎಂದರೆ ತಮ್ಮ ಮಕ್ಕಳಲ್ಲಿ ಅತ್ಯುನ್ನತ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವ ಮೂಲಕ ಈ ಸಮಾಜಕ್ಕೆ ಕೊಡುಗೆಯಾಗಿ ಕೊಡುವುದು, ಸಾಮಾಜಿಕ ಶಾಂತಿ, ಸಾಮರಸ್ಯವನ್ನು ಕಾಪಾಡುವ ಮೂಲಕ ದೇಶದ ಐಕ್ಯತೆಯನ್ನು ಉಳಿಸಿ ಬೆಳೆಸುವುದು. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಎಂದೂ ಹಿಂದೆ ಬೀಳಬಾರದು.
 ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳ ಪುನರುತ್ಥಾನಗೊಳಿಸುವ ಸಾಮೂಹಿಕ ಪ್ರಯತ್ನದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ…. ಇಂತಹ ಸಾಂಘಿಕ ಪ್ರಯತ್ನವನ್ನು ಮಾಡುವ ಮೂಲಕ ಹೆಣ್ಣು ಮಕ್ಕಳು ಸ್ತ್ರೀತ್ವದ ಪಾರಮ್ಯವನ್ನು ಮೆರೆಯಲಿ.

 ಮಹಿಳೆಯರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಬಲೀಕರಣದ ಜೊತೆ ಜೊತೆಗೆ ಕೌಟುಂಬಿಕವಾಗಿಯೂ ಮಹಿಳೆಯರನ್ನು ಮಹಿಳೆಯರೇ ಮುಂದೆ ತರುವ ಮೂಲಕ ಸ್ತ್ರೀತ್ವಕ್ಕೆ ಹೊಸ ಆಯಾಮವನ್ನು ನೀಡಲಿ ಎಂದು ಆಶಿಸುವ


.

Leave a Reply

Back To Top