ಹನಮಂತ ಸೋಮನಕಟ್ಟಿ ಅವರ ಶಾಯರಿಗಳು

ಇಬ್ರೂ ಕೂಡಿ ನಕ್ಕೋಂತ ಇದ್ರ
ಸುಗಂಧದ ಗಾಳಿ ಬೀಸಿದಂಗ ಅಕ್ಕೈತಿ
ಇಬ್ರಗು ಏನರ ಗುದ್ಯಾಟ ಆತಂದ್ರ
ದೆವ್ವಗಾಳಿ ಬಡದ ಹೋದಂಗ ಅಕ್ಕೈತಿ

ನೀ ನನ್ನ ಬಿಟ್ಟು ದೂರ ಹೋಗಿಯಂದ್ರು
ನನ್ನ ಎದಿಯಾಗಿನ ನಿನ್ನ ಜಾಗ ಹಂಗ ಐತಿ
ನಿನ್ನ ಜಾಗದಾಗ ಯಾರರ ಕುಂದರ್ತೀನಿ ಅಂದ್ರು
ಉಸಿರಾಡೋ ಗಾಳಿ ಸೈತ ಒಮ್ಮಿಗೆ ನಿಂತು ಹೋಕ್ಕೈತಿ

ಇಬ್ರೂ ಮಾತು ಕೊಟ್ಟಂಗ ಮಾತಾಡಿಕೊಂತ ಇದ್ರ
ಮರತ ಹೋದ ಮಾತ ಸೈತ ಮತ್ತ ನೆಪ್ಪ ಅಕ್ಕೈತಿ
ಇಬ್ರೂ ಕೊಟ್ಟ ಮಾತ ಬಿಟ್ಟು ಕೆಟ್ಟ ದಾರಿ ಹಿಡದ್ರ
ನೆನಪ ಇದ್ದ ಮಾತ ಸೈತ ಮಾತಾಡಲಾರ್ದಂಗ ಅಕೈತಿ

ನಿನ್ನ ನೋಡಬೇಕು ಅಂತ ಎಷ್ಟ ಕಾಯಾಕ ಹತ್ತೀನಿ
ಒಂದು ದಿನ ಅರ ನೋಡುದು ಆಗಿಲ್ಲ
ಯಾಕಂದ್ರ ನೀ ಇದ್ದ ಜಾಗ ಬಿಟ್ಟು ಎಲ್ಲೆಲ್ಲೆರ ಹುಡಕಿದ್ರು
ನೀ ಸಿಗುದಂತೂ ನನ್ನ ಜೀವನದಾಗ ಆಗಿಲ್ಲ

ಮತ್ತೆ ಮತ್ತೆ ನಿನ್ನ ನೆನಪು ಬರ್ಬಾರ್ದಂತ
ಮನಿ ಕದ ಕಿಡಕಿ ಎಲ್ಲ ಬಂದೋಬಸ್ತ್ ಮಾಡಿನಿ
ಗ್ವಾಡ್ಯಾಗ ಹಾದ ನಿನ್ನ ನೆನಪು ಒಂದೊಂದ ಬರುದಕ
ಒಮ್ಮೆ ಹಾಸಿಗೆ ಹಿಡದವ ಪೂರ್ತಿ ಸಣ್ಣ ಆಗಿ ಹೊಂಟೀನಿ


Leave a Reply

Back To Top