ಕಾವ್ಯ ಸಂಗಾತಿ
ಹೆಚ್.ಮಂಜುಳಾ ಹರಿಹರ
ಬಂತು ನೋಡು ಆಷಾಡ
ಇದೇಕೆ ಬಂದಿತೋ ಆಷಾಢ
ಮನಸ್ಸೆಲ್ಲಾ ಕವಿದ ಕಾರ್ಮೋಡ ॥
ಹೆ:
ತವರವರು ಬಂದಾರೆ ಕರೆಯಲು ನಿಮ್ಮ ಮನಕ್ಕೊಪ್ಪಿಗೆಯೇ ನಾ
ಹೊರಡಲು
ತೋಚದು ನನಗೇನೂ ಮಾಡಲು
ಮುಂದಡಿಯಿಡಲೇಕೊ ಹಿಗ್ಗಾಲು ಮುಗ್ಗಾಲು!
ಗಂ:
ನನ್ನವಳಾಗಿ ಮೂರು ದಿನ
ಕಳೆದಿಲ್ಲ
ಇದನಾರು ಮಾಡಿದರೋ ನಮಗಿದು ಸಲ್ಲ
ನಿನ್ನನ್ನು ಅಗಲಿರಲು ನನಗೆ ಮನಸ್ಸಿಲ್ಲ
ಈ ಮನಗಳನ್ನು ಇವರೇಕೆ ಅರಿತಿಲ್ಲ?!
ಹೆ: ಬಿರಿದ ಭುವಿಗೆ ಸುರಿದಿದೆ ವರ್ಷಧಾರೆ
ಒಣಗಿದ ಲತೆಗೆ ಹರಿದಿದೆ ಹರ್ಷಧಾರೆ
ನಲಿದು ದುಂಬಿಯೊಡಗೂಡಿದೆ ಸುಮಸಿರಿ
ಇದ ನೋಡುತ ನಿನ್ನನಗಲಿ ನಾ ಹೇಗೆ ಇರಲಿ?!
ಗಂ: ನೀನಿಲ್ಲದೇ ಸುಳಿಯುವ ಗಾಳಿಯೂ ಬಿರುಸು
ನೀ ಮುಡಿಯದ ಪುಷ್ಪದ ಸುಗಂಧವೂ ಹಳಸು
ಚಂದಿರನ ಶೀತಲತೆಯೂ ಸುಡುವ ಬಗೆ
ಮುಂಗಾರು ಮಳೆಯ ಸಿಂಚನವೂ ಧಗೆ
ಹೆ: ನಾ ಹೊರಟ ಗಳಿಗೆಯಲಿ ಓ ಮೋಡ ಬಾ ಕವಿದು
ನಾ ಹೊರಟ ದಾರಿಯಲಿ ಓ ಮಳೆಯೇ ನೀ ಸುರಿದು
ಕೆರೆ ಕಟ್ಟೆಗಳೇ ಒಡೆದು ನನ್ನ ದಾರಿಗೆ ಅಡ್ಡವಾಗಿ
ಪಯಣವ ನಿಲ್ಲಿಸಿ ಉಳಿಯಲು ನೀವು ಸಹಕಾರಿಯಾಗಿ!
ಹೆಚ್.ಮಂಜುಳಾ ಹರಿಹರ
Superb