ಲಹರಿ

ಆತ್ಮಸಾಕ್ಷಿಯಾಗಿ

ಸುರೇಶ ಎನ್ ಶಿಕಾರಿಪುರ.

ಸತ್ತ ವ್ಯಕ್ತಿಯನ್ನು ಶ್ರೀಗಂಧ, ಒಣ ಕೊಬ್ಬರಿ, ತುಳಸಿಯನ್ನು ರಾಶಿ ಒಟ್ಟಿ, ಮೇಲೆ ತುಪ್ಪವ ಸುರಿದು ಸುಟ್ಟರೆ ಅದು ಕಡೆಯ ಪಕ್ಷ ಹೆಣದ ವಾಸನೆಯನ್ನು ಮರೆ ಮಾಚಬಹುದು ಇಲ್ಲವೇ ಸತ್ತ ವ್ಯಕ್ತಿಯ ಶ್ರೀಮಂತಿಕೆಯ ಪ್ರದರ್ಶನ ವಾಗಬಹುದು ಅಷ್ಟೆ. ಅದು ಗುಣದ ಮಾನದಂಡವಲ್ಲ. ಅದರಿಂದ ಮೃತ ವ್ಯಕ್ತಿಯ ಗುಣ ಮಾತ್ರ ಸುಡುವುದಿಲ್ಲ. ಅದು ಒಳ್ಳೆಯ ಗುಣವಾಗಿದ್ದರೂ ಕೆಟ್ಟ ಗುಣವಾಗಿದ್ದರೂ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ… ಸದ್ಗುಣವಾಗಿದ್ದರೆ ಜನತೆಯ ನಾಲಗೆಯ ಮೇಲೆ ಸ್ತುತಿಯಾಗಿಯೂ ದುರ್ಗುಣವಾಗಿದ್ದರೆ ಅದೇ ಜನರ ನಾಲಗೆಯ ಮೇಲೆ ನಿಂದೆಯಾಗಿಯೂ ತಲೆಮಾರುಗಳು ಕಳೆದರೂ ಹಾಗೆಯೇ ಉಳಿಯುತ್ತದೆ‌.

“ಉಂಡರೆ ಉಟ್ಟರೆ ಸೇರ ಮಂಡೆ ಬಾಚಿದರೆ ಸೇರ |
ಕುಂತಲ್ಲಿ ಸೇರ ದುಸ್ಮಾನ | ಸತ್ತಾರೆ |
ಉಂಡ್ಹೋಗಿ ಹೆಣವ ತಗುದೇವೊ||

ಇದು ದುಷ್ಟರ ಸಾವಿಗೆ ಜನಪದ ಪ್ರತಿಕ್ರಿಯಿಸಿದ ರೀತಿ. ಬೂತಯ್ಯ ಸತ್ತಾಗ ಊರು ಪ್ರತಿಕ್ರಿಯಿಸಿದ ರೀತಿಯೂ ಹಾಗೇ. ಆದರೆ ಒಳ್ಳೆಯವರ ಸಾವನ್ನೂ ಪಟಾಕಿ ಹೊಡೆದು ಸಂಭ್ರಮಿಸುವ, ಕೇಕೆ ಹಾಕಿ ಕುಣಿಯುವ, ನಿಂದೆಗಳ ಮಳೆಗರೆದು ವಿಕೃತ ಆನಂದ ಅನುಭವಿಸುವ ವಿಕಾರಿಗಳೇ ತುಂಬಿರುವ ಅಸಹನೀಯ ವಾತಾವರಣದಲ್ಲಿ ನಾವೀಗ ಬದುಕುತ್ತಿದ್ದೇವೆ.

ದುಷ್ಟರ ಸಾವು ನೋವು ಸಮಾಜದ ದೃಷ್ಟಿಯಲ್ಲಿ ಯಾವ ಸಹಾನುಭೂತಿಯನ್ನೂ ಗೌರವವನ್ನೂ ಪಡೆದುಕೊಳ್ಳುವುದಿಲ್ಲ. ಸಾವು ಸಾರ್ಥಕವಾಗಬೇಕಾದರೆ ಬದುಕು ಸಾರ್ಥಕವಾಗಿರಬೇಕು. ಆ ಸಾರ್ಥಕತೆ ನಮ್ಮಷ್ಟಕ್ಕೆ ನಮ್ಮದೇ ಆಗಿರದೆ ಅದು ನಾಲ್ಕು ಜನರೂ “ಸಾರ್ಥಕವಾಗಿ ಬದುಕಿದ್ನಪ್ಪ ಆ ಮನುಷ್ಯ ಪುಣ್ಯಾತ್ಮ” ಎನಿಸಿಕೊಳ್ಳುವಂತಿರಬೇಕು. ಅದಕ್ಕೇ ಯಾರೋ ಒಬ್ಬ ಕವಿ ಬರೆದುಬಿಟ್ಟ,
“ಒಳಿತು ಮಾಡು ಮನುಸಾ…
ನೀ ಇರೋದು ಮೂರು ದಿವಸ…” ಎಂದು.

ನಾವು ಸರಳವಾಗಿ ಬದುಕಬೇಕು. ಕಪಟವಿಲ್ಲದ ನೆಡೆ ನುಡಿ ನೋಟ ಹೊಂದಿರಬೇಕು. ನನಗೆ ಸಾಲದೆಂದು ನನ್ನ ಮಕ್ಕಳಿಗೂ ಮೊಮ್ಮಕ್ಕಳಿಗೂ ಮರಿಮಕ್ಕಳಿಗೂ ಅವರ ಮರಿ ಮಕ್ಕಳಿಗೂ ಆಗುವಷ್ಟು ಕೂಡಿಡುವ ದುರಾಸೆ ಸಲ್ಲದು. ಸಂಪತ್ತು ಹೆಚ್ಚಿದಷ್ಟೂ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಾ ಹೋಗುತ್ತಾನೆ ಮಾತ್ರವಲ್ಲ ಮನುಷ್ಯತ್ವವನ್ನೂ ಕಳೆದುಕೊಳ್ಳುತ್ತಾ ಹೋಗುತ್ತಾನೆ. ದರ್ಪ, ಅಹಂ, ಮದ, ಉದಾಸೀನತೆ, ಕ್ರೌರ್ಯ ಅವನಲ್ಲಿ ಮನೆ ಮಾಡುತ್ತಾ ಹೋಗುತ್ತದೆ‌. ಅವನೊಬ್ಬ ಶೋಷಕನೂ ನಾಶಕನೂ ಆಗಿ ಮಾರ್ಪಾಡಾಗುತ್ತಾನೆ‌. ಮಾನವ ದಾನವನಾಗುವ ಪರಿ ಇದು. ಇಂಥವರ ಸಾವು ನೊಂದವರ ಸಂಭ್ರಮವಾಗುತ್ತದೆ. ಸಾವು ಅರ್ಥಪೂರ್ಣವಾಗಬೇಕು ಸತ್ತ ಮೇಲೂ ಬದುಕಬೇಕು ಎಂದರೆ ನಾವು ಹಣವನ್ನು ಸಿರಿಯನ್ನು ಕೀರ್ತಿಯನ್ನು ಅಧಿಕಾರವನ್ನು ಮೋಹಿಸುವುದನ್ನು ಸ್ವಾರ್ಥವನ್ನು ಸ್ವಪ್ರತಿಷ್ಟೆಯನ್ನು ಬಿಡಬೇಕು. ಮನದ ಮುಂದಣ ಆಸೆಯೆಂಬ ಮಾಯೆ ನಮ್ಮನ್ನು ಎಂದೂ ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಬಿಡದು. ಮನುಷ್ಯನಿಗೆ ಹಂಚಿ ತಿನ್ನುವ ಗುಣ ಇರಬೇಕೋ ಹೊರತು ಹೊಂಚಿ ಹೊಡೆದು ತಿನ್ನುವ ಗುಣ ಅಲ್ಲ. ಯಾವನು ಅಂತರಂಗವೂ ಬಹಿರಂಗವೂ ಶುದ್ಧನಾಗಿರುತ್ತಾನೋ ಅವನು ಜಗತ್ತಿನ ಯಾವ ಶ್ರೀಮಂತನಿಗೂ ಕೆಳಗಿನವನಲ್ಲ. ಗುಣಶ್ರೀಯೇ ಮನುಷ್ಯನ ಶ್ರೀಮಂತಿಕೆ. ಗುಣವನ್ನು ಹಣ ಕೊಟ್ಟು ಕೊಳ್ಳಲು ಆಗುವುದಿಲ್ಲ. ಅದು ನಮ್ಮೊಳಗೇ ಹುಟ್ಟಿ ಹರಿಯುವ ಅಮೃತವಾಹಿನಿ ಅದನ್ನು ಮನುಷ್ಯನಿಂದ ಮನುಷ್ಯನಿಗೆ ಹರಿಸಬೇಕು.. ಮಾನವತೆಯ ಬೀಜವನ್ನು ಬಿತ್ತಿ ಬೆಳೆಯಬೇಕು.

ನಮ್ಮ ದೇಹ ಹೊರಟುಹೋಗುವ ಹಕ್ಕಿಯನ್ನು ಕೂಡಿಹಾಕಿಕೊಂಡಿರುವ ತೊಗಲು ಮಾಂಸ ಮೂಳೆಯ ಪಂಜರ. ಹಕ್ಕಿಯು ಒಂದಲ್ಲಾ ಒಂದು ದಿನ ಬಂಧನದಿಂದ ಮುಕ್ತವಾಗಿ ಹಾರಿ ಹೋಗುತ್ತದೆ. ಅಸ್ತಿತ್ವ ಕಳೆದುಕೊಂಡ ದೇಹವೆಂಬ ಪಂಜರ ಕೊಳೆಯಲು ಆರಂಭಿಸುತ್ತದೆ. ಇದು ಸಕಲ ಪ್ರಾಣಿ ಜಗತ್ತಿನ ಬಾಳಿನ ಅಂತಿಮ ಸತ್ಯ. ಆದರೆ ಮನುಷ್ಯನನ್ನು ಹೊರತು ಪಡಿಸಿ ಬೇರಾವ ಪ್ರಾಣಿಗಳೂ ಅಪ್ರಾಕೃತಿಕವಾಗಿ ಬದುಕಲಾರವು ಅವುಗಳ ವರ್ತನೆಯಲ್ಲಿ ನಮ್ಮ ಸಣ್ಣತನಗಳಿಲ್ಲ. ನಮ್ಮ ದುರಾಸೆಗಳಿಲ್ಲ, ನಮ್ಮ ಧರ್ಮ ಜಾತಿಯ ಕಿತ್ತಾಟಗಳಿಲ್ಲ‌. ನಾಳೆಗೆ ಕೂಡಿಸಿಟ್ಟುಕೊಳ್ಳಬೇಕೆಂಬ ಸ್ವಾರ್ಥ ದಾಹವಿಲ್ಲ. ಗುಣದಲ್ಲಿ ಅವೇ ಮೇಲು ನಾವೇ ಕೀಳು.

ಸದಾ ಅತೃಪ್ತಿಯಲ್ಲೇ ಬದುಕುವಾತ ಎಂದೂ ಸುಖವಾಗಿರಲಾರ ಮತ್ತು ಆತ ಇತರರನ್ನೂ ಸುಖವಾಗಿರಲು ಬಿಡಲಾರ. ಯಯಾತಿಯ ದಾಹ ಯಯಾತಿಯನ್ನೇ ಬಲಿ ಪಡೆಯಿತು. ಕಂಡಕಂಡ ಹೆಣ್ಣುಗಳನ್ನೆಲ್ಲಾ ಭೋಗಿಸಿದ, ಚಿರ ಯೌವ್ವನಕ್ಕಾಗಿ ಹಪಹಪಿಸಿದ, ಅವನ ದುರಾಸೆ ಅವನ ಅತೃಪ್ತಿ ಅವನ ದಾಹಕ್ಕೆ ತೃಷೆಗೆ ಎಲ್ಲೆಯೇ ಇರಲಿಲ್ಲ. ಮನುಷ್ಯತ್ವ ಕಳೆದುಕೊಂಡ ಕಾಮದ ಪುತ್ಥಳಿಯಾಗಿದ್ದ. ತನ್ನ ತೆವಲು ತನ್ನ ಸುಖಕ್ಕಾಗಿ ನಿಸರ್ಗದ ಧರ್ಮದ ವಿರುದ್ಧವಾದ ಹಾದಿಯಲ್ಲಿ ಗೂಳಿ ದನದಂತೆ ನುಗ್ಗುತ್ತಿದ್ದ ಆತ; ಅಕಾಲಿಕ ಮುಪ್ಪಿನ ಶಾಪಕ್ಕೆ ಗುರಿಯಾದ. ಕಡೆಗೆ ಮಗನ ಯೌವ್ವನಕ್ಕೂ ಕನ್ನ ಹಾಕಿದ. ಎಲ್ಲವೂ ಆದಮೇಲೆ ಅವನಿಗೆ ಬದುಕಿನ ಅಂತಿಮ ಸತ್ಯದ ಅರಿವಾಯಿತು ದರ್ಶನವಾಯಿತು. ತಪ್ಪಿಗಾಗಿ ಪರಿತಪಿಸಿದ ಪಶ್ಚಾತ್ತಾಪಬಟ್ಟ. ಆದರೆ ಶಿಕ್ಷೆಯಿಂದ ಆತನಿಗೆ ಮುಕ್ತಿಯಿಲ್ಲ. ಬಂದ ಮುಪ್ಪನ್ನು ನಿರಾಕರಿಸಲು ತಪ್ಪಿಸಿಕೊಳ್ಳಲು ದಾರಿಗಳಿಲ್ಲವೆಂಬ ಜೀವನ ಸತ್ಯದ ಅರಿವಾದಾಗ ಎಲ್ಲವನ್ನೂ ಬಿಟ್ಟುಕೊಟ್ಟು ನಿರಾಳನಾದ ಆತ “ಮಹಾತ್ಮ” ಎನಿಸಿಕೊಂಡ. ‌ನಾವು ನಮ್ಮೊಳಗಿನ ಯಯಾತಿಯ ದಾಹವನ್ನು ಕೊಂದುಕೊಳ್ಳಬೇಕು. ಸನ್ಮಾರ್ಗದ ಆಯ್ಕೆಯೇ ನಮ್ಮನ್ನು ಸುಖವಾಗಿ ಸುಂದರವಾಗಿ ಇಡುವುದು. ಬಾಳು ಇರುವುದು ಸ್ವೀಕರಣೆಗೋ ಹೊರತು ನಿರಾಕರಣೆಗಲ್ಲ.

ಎಲ್ಲರಿಂದಲೂ ಕಲ್ಲು ಹೊಡೆಸಿಕೊಳ್ಳುವ ಕಾಬಾದ ಶಿಲೆಯಾಗಿ ಬಾಳುವುದಕ್ಕಿಂತ ಎಲ್ಲರೂ ಮೆಚ್ಚವ ಮನುಷ್ಯನಾಗಿ ನಾಲ್ಕು ಕಾಲ ಬಾಳಿದರೆ ಸಾಕು..

**************************

11 thoughts on “ಲಹರಿ

  1. ಸತ್ತ ಮೇಲೂ ಬದುಕುವಂತಿರಬೇಕು ನಾವು..ಬತ್ತಿ ಹೋಗಿರುವ ಮಾನವೀಯತೆಯ ಒರತೆಯನ್ನು ಪನರುಜ್ಜೀವನಗೊಳಿಸಬೇಕಾಗಿದೆ..

  2. ಚೆನ್ನಾಗಿದೆ ಲೇಖನ ತುಂಬಾ ಇಷ್ಟವಾಯಿತು

  3. ಅದ್ಬುತವಾಗಿದೆ ಸರ್ ನಿಮ್ಮ ಬರವಣಿಗೆಯ ಶೈಲಿ… ಮನಕ್ಕೆ ಮೆಚ್ಚುಗೆಯಾಗಿತು….

    1. ಲೇಖನ ಬಹಳ ಸುಂದರ ವಾಗಿದೆ.ಜೀವನದ ಅಂತಃಸತ್ವ ತಿಳಿಸುತ್ತಿದೆ.ಹುಟ್ಟಿನಿಂದ ಅಂಟಿಕೊಳ್ಳವ ಬಾಹ್ಯ ಭಾವನಾತ್ಮಕ ಬಂದನಗಳು,ಜೊತೆಗೆ ಮನುಷ್ಯನಲ್ಲಿಯ ಗುಣಾವಗುಣಗಳು ಹೇಗೆ ವರ್ತಿಸುತ್ತವೆಂಬುದನ್ನು ತಿಳಿಸಿದ್ದಿರ.ಗುರುಗಳೇ ಧನ್ಯವಾದಗಳು..

      1. ವಂದನೆಗಳು ಸಹೃದಯರಿಗೆ…
        ದಯವಿಟ್ಟು ನಿಮ್ಮ ಪರಿಚಯ ತಿಳಿಸಿಕೊಡಿ

Leave a Reply

Back To Top