ಜಾಂಬ್ಳಿ ಟುವಾಲು
ಜಾಂಬ್ಳಿ ಟುವಾಲು
ಕಥಾಸಂಕಲನ
ಲೇಖಕರು- ರಾಜು ಹೆಗಡೆ
ಪ್ರಕಾಶನ – ಅಂಕಿತ ಪುಸ್ತಕ
ಶಿರಸಿಯಲ್ಲಿ ಕನ್ನಡ ಉಪನ್ಯಾಸಕರಾಗಿರುವ ಪ್ರೊ.ರಾಜು ಹೆಗಡೆ ಉತ್ತರ ಕನ್ನಡದ ಪ್ರಮುಖ ಕವಿ ಮತ್ತು ಕಥೆಗಾರ.ಉ.ಕದ ಗಡಿರೇಖೆಯೊಳಗೆ ತಮ್ಮ ಕಥಾಲೋಕ ಸೃಷ್ಟಿಸಿಕೊಂಡು ಇಲ್ಲಿಯೇ ನೆಲೆಸಿರುವ ಬರಹಗಾರ.
ಜಾಂಬ್ಳಿ ಟುವಾಲು ಎಂಬ ಹೆಸರಿನ ಯಾವುದೇ ಕಥೆ ಇಲ್ಲಿಲ್ಲ. ಆದರೆ ‘ಕುರುರಾಯ ಇದನೆಲ್ಲ ಕಂಡು..’ ಎಂಬ ಕಥೆಯಲ್ಲಿ ಟವೆಲ್ ಇಟ್ಟು ಹೋದವರ ಜಗಳದ ಪ್ರಸಂಗ ಬರುತ್ತದೆ.
ಕಥೆಗಳನ್ನು ಜಾಂಬ್ಳಿ – ಇಲ್ಲಿ ಆರು ಕಥೆಗಳು ಇವೆ.
ಟುವಾಲು- ಇಲ್ಲಿಯೂ ಆರು ಕಥೆಗಳಿವೆ.
ಮತ್ತು ಅನುಬಂಧದಲ್ಲಿ ನಾಲ್ಕು ಕಥೆಗಳಾಗಿ ವಿಂಗಡಿಸಲಾಗಿದೆ.
ಅಪಾರ ಪಾಂಡಿತ್ಯವನ್ನು ಪಡೆದಿದ್ದರೂ ರಾಜು ಹೆಗಡೆ ಅವರು ಅದನ್ನು ಕಥೆಗಳಲ್ಲಿ ತುರುಕಿಲ್ಲ. ಸರಳ ಮತ್ತು ಉತ್ತರ ಕನ್ನಡದ ಭಾಷೆಯಲ್ಲಿ ಕತೆ ಹೇಳುತ್ತಾ ಹೋಗಿದ್ದಾರೆ.
ವಿನೋದದ ಪ್ರಸಂಗವನ್ನು ಚಂದಾಗಿ ಹೇಳಬಲ್ಲ ಹೆಗಡೆಯವರು ‘ ಲಾರಿ ಏರಿದ ಕಾಡು ‘ ಎಂಬ ಕತೆಯಂತಹ ಕತೆಯಲ್ಲಿ ವಿಷಾದವನ್ನು ಸಟಕ್ಕನೆ ತಂದು ಕಾಡುವರು.
ಕತ್ತಲೆ ಮೌನ ಮತ್ತು… ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಮೊದಲ ಬಹುಮಾನ ಪಡೆದ ಕಥೆ.
ಇಲ್ಲಿ ಗಜಾನನ, ತಿಮ್ಮಣ್ಣ (ತಿರುಮಲೇಶ) ಮತ್ತು ಗೌರಿಯ ಸುತ್ತ ಸುತ್ತುತ್ತಾ ಊರನ್ನೂ ಒಳಗೊಳ್ಳುವ ಕಥೆ. ಸಣ್ಣ ಪುಟ್ಟ ಚಾಲ್ ನಲ್ಲೆ ಚಿತ್ರಣ ಕಟ್ಟಿಕೊಡುವುದು ಇವರ ನಿರೂಪಣೆಯ ವಿಶೇಷ.
ಚಾವಿ ಕಥೆ ಅತ್ಯಂತ ಸಣ್ಣ ಸಮಯದಲ್ಲಿ ನೆಡೆಯುವ ಸಾಮಾನ್ಯ ಘಟನೆ. ಆದರೆ ಅದು ರಾಜು ಹೆಗಡೆ ಅವರ ಕೈಯಲ್ಲಿ ಕಲಾತ್ಮಕವಾಗಿ ಹೊರಹೊಮ್ಮಿದೆ.
ಪಾರಿಜಾತದ ಗೀರು ಒಂದು ವಿಶಿಷ್ಟವಾದ ಕಥೆ.ಇಲ್ಲಿಯ ಪ್ರೇಮಿಗಳ ವಾತಾವರಣ ಈಗಿನ ಕಾಲಘಟ್ಟದ್ದಾದರೂ, ಇಬ್ಬರೂ ಪ್ರೌಢರು. ವಿಪ್ರಲಂಭ ಕೂಡಾ ಎಕ್ಸ್ಟ್ರಾ ಮರೈಟಲ್ ರಿಲೇಶನ್ ಶಿಪ್ ಬಗ್ಗೆ ರೋಮ್ಯಾಂಟಿಕ್ ನಿರೂಪಣೆಯಲ್ಲಿ ಸಾಗುತ್ತದೆ. ಲಾಸ್ಟ್ ಪೆಗ್,ಫ್ರಿಜ್ಜು, ಲೌಕಿಕ ದಂತಹ ಕತೆಗಳು ಯಾವುದೇ ಪ್ರಕಾರದ ಹಂಗಿಲ್ಲದೆ ಓದುವ ಮತ್ತು ಕೇವಲ ಓದುವ ಖುಷಿಯನ್ನು ಕೊಡುತ್ತವೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಒಮ್ಮೆ ಓದಲೇಬೇಕಾದ ಕೃತಿ ಈ ‘ ಜಾಂಬ್ಳಿ ಟುವಾಲು.
***********.
ಡಾ.ಅಜಿತ್ ಹರೀಶಿ