ಕಾವ್ಯಯಾನ

ಭಾವನೆಗಳು ಮಾತನಾಡುತ್ತಿವೆ

Hearts, Red, Love, Shapes, Doodle, Paint

ಮೈಮನಾ.

ಕಲ್ಪನೆಗಳ ಸಾಗರದಲಿ
ಹುದುಗಿ ಹೊಕ್ಕಿದ್ದ ಶಿಲ್ಪವನು
ಹೆಕ್ಕಿ ನನಸಾಗಿಸುವಾಸೆಯಲಿ
ನೂರೂರಗಳ ಸುತ್ತಿ ಸುತ್ತಿ
ಮೌನಿಯಾದ ಶಿಲ್ಪಿಯೊಬ್ಬ
ಬಾಯಾರಿ ದಣಿದಿರಲು
ತಿರುಕನ ಕನಸು ಹಾರೈಸಿದಂತೆ
ಚಂದಿರನ ಬೆಳದಿಂಗಳ ಮೀರಿ
ಅಮೃತ ಸಮಾನ ಶಿಲೆಯೊಂದು
ಹರ್ಷದಾ ವರವಾಗಿ ಗೋಚರಿಸಿ

ವನವಾಸದಲಿಹ ಲಕ್ಷ್ಮಣನ
ಕಾಯ್ದು ಕನವರಿಸಿ ಕಲ್ಲಾಗಿ
ತಪಗೈವಂತೆ ಊರ್ಮಿಳೆ,
ಹಸಿವು ನಿದ್ದೆಗಳ ಗೆದ್ದು
ಕಾಲನ ಕುಣಿಕೆಯ ಮರೆತು
ಹಗಲಿರುಳು ಹವಣಿಸುತಲಿ
ಶಿಲೆಯನು ದೃಷ್ಟಿಸುತಲಿ
ಅಂತರಾತ್ಮದಿ ಅಡಗಿಹ
ಅರಿವನು ಹದಗೊಳಿಸಿ
ಕಲ್ಪನೆ ಶಿಲ್ಪವನೆ ಉಸಿರಾಡಿ

ಇಂದ್ರಿಯಗಳ ನಿಗ್ರಹಿಸಿ
ಅತೀಂದ್ರಿಯ ಹುರಿಗೊಳಿಸಿ
ಬಕಧ್ಯಾನದಿಂದಲಿ ಶಿಲೆಯ
ತಿದ್ದುತಲಿ ತೀಡುತಲಿ ನವಿರಾಗಿ
ಸಿಹಿ ಉಳಿಪೆಟ್ಟು ನೀಡುತಲಿ
ಜ್ಞಾನದ ಒಳಗಣ್ಣ ತೆರೆದು
ಕಾಲ್ಬೆರಳಿಗುಂಗುರ ಕೈಗೆಬಳೆಗಳ
ಮೂಗುನತ್ತು ಕೊರಳ ಮಾಂಗಲ್ಯ
ಜೀವ ಭಾವಗಳೆಲ್ಲವ ತುಂಬಿ
ಕಣ್ಬಿಟ್ಟ ಶಿಲ್ಪವನು ಹೆಣ್ಣಾಗಿಸಿ

ಅಪ್ಸರೆ ಸೋಲಿಸುವ ತವಕದಿ
ದಣಿದ ಶಿಲ್ಪಿಯ ಉಸಿರು
ಸಿಂಧೂರವಿಡದೆ ಹೆಣ್ಣಾದ ಶಿಲ್ಪಕೆ
ವಿಧಿಯಾಟಕೆ ಬಲಿಯಾಯಿತು
ಶಿಲ್ಪಿ ಸಾಂಗತ್ಯಕೆ ಕಾಯುತಲಿ
ಜೀವಬಂದ ಶಿಲ್ಪ ಒಂಟಿತನದಿ
ಬರಿಯ ಮೌನವೇ ಶಾಪವಾಗಿ
ಮೂಕ ರೋಧನೆಯ ಕೂಪದಿ
ಭಾವನೆಗಳು ಮಾತನಾಡುತ್ತಿವೆ

************

One thought on “ಕಾವ್ಯಯಾನ

Leave a Reply

Back To Top