ಮಾಲಾ ಹೆಗಡೆ ಅವರ ಕವಿತೆ-ಸ್ವಪ್ನ ಸುಂದರಿ

ಇರುಳ ಮಬ್ಬು ಕತ್ತಲೆಯಲೂ
ಕಾಂತಿ ಬೀರೋ ಕಿನ್ನರಿ,
ಹಗಲುಗನಸಿಗೆಳೆದು
ನನ್ನಾವರಿಸೋ ಸ್ವಪ್ನ ಸುಂದರಿ.
ಬೆಳದಿಂಗಳ ರಾತ್ರಿಯಲೂ
ಬೆವರಿಳಿಸೋ ಐಸಿರಿ,
ಬಿಸಿಲ ಝಳದಲೂ ತನುವ
ತಂಪಿರಿಸೋ ಕುವರಿ.

ಭುವಿಗಿಳಿದಿಹ ಶಶಿಯ ಬಿಂಬ
ಸೌoದರ್ಯದಾ ಗಣಿ,
ಆಂತರ್ಯವೂ ಅಕ್ಷಯದ
ಒಲವಿನಾ ಖಣಿ.
ದೇವಶಿಲ್ಪಿ ಕಳಿಸಿದ.
ಮನಸೂರೆಗೊಳ್ಳೋ ತರುಣಿ,
ಹೃದಯ ಸಾಮ್ರಾಜ್ಯವನಾಳೋ
ಮುದ್ದು ಮಹಾರಾಣಿ.

ಮುತ್ತುದುರಿದಂತ ಮಾತು
ಕೇಳಲೆಷ್ಟು ಇಂಪು,
ಸುತ್ತೇಳು ಲೋಕವನ್ನೇ
ಬೆಳಗೋ ಕಣ್ ಹೊಳಪು.
ಕಲ್ಪನೆಯೇ ಜೀವ ತಳೆದು
ಬಳಿಬಂದು ನನ್ನನೊಪ್ಪು,
ಬಳಿದುಬಿಡು ಬಾಳ ಚಿತ್ರಕೆ ಕಪ್ಪನಳಿಸಿ ಬಿಳುಪು.


Leave a Reply

Back To Top