ಅನಿಸಿಕೆ

ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ

ರಾಮಸ್ವಾಮಿ ಡಿ.ಎಸ್.

ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ . . . .

‘ನಾನೇಕೆ ಬರೆಯುತ್ತೇನೆ?’ ಎನ್ನುವ ಪ್ರಶ್ನೆಗೆ ಉತ್ತರ ಕೊಡುವುದು ಎಣಿಸಿದಷ್ಟು ಸುಲಭವಲ್ಲವಲ್ಲವೆಂಬುದು ಎಲ್ಲ ಬರಹಗಾರರಿಗೂ ಅರಿವಾಗುವುದೇ ಅವರು ಇಂಥ ಪ್ರಶ್ನೆಗೆ ಉತ್ತರ ಕೊಡಲು ಕೂತಾಗ ಮಾತ್ರ! ಹೇಗೆ ಬರೆದರೆ ತನ್ನ ಬರಹಗಳಿಗೂ ಪತ್ರಿಕೆಗಳಲ್ಲಿ ಒಂದಿಷ್ಟು ಜಾಗ ಸಿಕ್ಕಬಹುದೆನ್ನುವ ಯೋಚನೆಯಲ್ಲೇ ಬರೆಯುತ್ತಿದ್ದ ದಿನಗಳು ಹೋಗಿ ಅನ್ನಿಸಿದ್ದೆಲ್ಲವನ್ನೂ ಫೇಸ್ಬುಕ್ಕಲ್ಲೋ ವಾಟ್ಸಪ್ಪಿನ ಗುಂಪಲ್ಲೋ ಬರೆದು ಬಿಸಾಕುತ್ತಿರುವ ಈ ಹೊತ್ತಿನ ಬರಹಗಾರ ಹೊಳೆದದ್ದನ್ನು ಬರೆಯುವದಕ್ಕಿಂತಲೂ ಅನ್ಯರನ್ನು ಮೆಚ್ಚಿಸಲು ಬರಹದ ಹಿಂದೆ ಬಿದ್ದ ಅಕ್ಷರ ಬೇಟೆಗಾರನ ಹಾಗೆ ನನಗೆ ಕಾಣುತ್ತಿದ್ದಾನೆ. ಇದರ ಜೊತೆಗೇ ನಾವು ಮೆಚ್ಚಿದ ಹಿರಿಯ ಬರಹಗಾರರನ್ನು ಕೇಳಹೋದರೆ ಅವರೂ ನಮ್ಮದೇ ಗೊಂದಲದಲ್ಲಿ ಬಿದ್ದವರ ಹಾಗೇ ಮಾತಾಡ ತೊಡಗುತ್ತಾರೆ. ಜೊತೆಗೇ ಇತರ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿರುವ ತಮ್ಮ ಸಮಕಾಲೀನರ ಬಗ್ಗೆ ಫೇಸ್ಬುಕ್ಕಲ್ಲಿ ಪಟ ಹಾಕಿ ಗಂಟೆಯಲ್ಲಿ ಸಾವಿರ ಲೈಕು ಪಡೆದವರ ಬಗ್ಗೆ ಕೊಂಚ ಹೊಟ್ಟೆಕಿಚ್ಚಿನ ಮಾತೇ ಸೇರಿಸುತ್ತಾರೆ.

ಹೇಗೆ ಹೇಗೆ ಬರೆಯಬೇಕೆಂದು ಹೇಳುವವರ ಹಿಂದೆ ಅವರು ಮೆಚ್ಚಿಕೊಂಡ ಬರಹಗಳ ಹಿನ್ನೆಲೆ ಇದ್ದೇ ಇರುತ್ತದೆ. ಆದರೆ ಸದ್ಯೋವರ್ತಮಾನದ ತವಕ ತಲ್ಲಣಗಳನ್ನು ‘ಹೀಗೇ’ ಬರೆಸುವುದರಿಂದ ಹಿಡಿದಿಡುವುದು ಸಾಧ್ಯವೇ ಎನ್ನುವುದು ಇಲ್ಲಿ ಪ್ರಶ್ನೆ. ನಮ್ಮ ತಲೆಮಾರಿಗೆ ಬರಹದ ಮಾಧ್ಯಮವೇ ಮೊದಲ ಸಮಸ್ಯೆಯಾಗಿದೆ. ವಿವಿಧ ಕಾಲಘಟ್ಟಗಳಲ್ಲಿ ಉಜ್ವಲವಾಗಿ ಬೆಳಗುತ್ತಿದ್ದ ಸಾಹಿತ್ಯ ಪ್ರಕಾರಗಳು ಆಯಾ ಕಾಲದ ಲೇಖಕರ/ಕವಿಗಳ ಪಾಲಿಗೆ ವರದಾನವಾಗಿದ್ದವು. ಆದರೆ ಯಾವುದೇ ಚಳುವಳಿಗಳ ಹಂಗಿಲ್ಲದ ಆದರೆ ಎಲ್ಲೆಲ್ಲೂ ಅತೃಪ್ತಿಗಳೇ ತಾಂಡವವಾಡುತ್ತಿರುವ ಈ ದಿನಗಳಲ್ಲಿ ಎಲ್ಲ ಕ್ಷೇತ್ರಗಳಂತೆ ಕಾವ್ಯಕ್ಷೇತ್ರವನ್ನೂ ‘ವೇಗ’ ಮತ್ತು ‘ಸ್ಪರ್ಧೆ’ಗಳೇ ಆಳುತ್ತಿವೆ. ಮೊದಲ ಸಂಕಲನದಲ್ಲಿ ಹುಬ್ಬೇರಿಸುವಂತೆ ಬರೆದವರೆಲ್ಲ ಏಕೋ ಎರಡನೆಯ ಸಂಕಲನ ತರುವ ಹೊತ್ತಿಗೆ ಮತ್ತದೇ ಸವೆದ ಜಾಡುಗಳಲ್ಲಿ ತಮ್ಮ ರೂಪಕ, ಪ್ರತಿಮೆಗಳನ್ನು ನೆಡಲು ತಹತಹಿಸುತ್ತಿರುವುದರ ಕಾರಣಗಳೂ ಸ್ಪಷ್ಟವಾಗುತ್ತಿವೆ. ಸರಿಯಾಗಿ ಉಸಿರಾಡಲೂ ಪುರುಸೊತ್ತಿಲ್ಲದ ದಿನಗಳಲ್ಲಿ ‘ಟೈಮ್ ಮ್ಯಾನೇಜ್’ ಮಾಡುತ್ತಿರುವ ನಾವೆಲ್ಲ ಕಛೇರಿಯ ಕಡತಗಳಲ್ಲಿ, ಆನ್ ಲೈನ್ಗಂಟಿದ ಮೋಹದ ಬಲೆಗಳಲ್ಲಿ ನಮ್ಮನ್ನೇ ತೆತ್ತುಕೊಳ್ಳುತ್ತಿದ್ದೇವೆ. ಈ ನಡುವೆ ಓದು ಬರಹ ತಿಳಿದವರೆಲ್ಲ ಅವಸರದಲ್ಲಿ ಬರೆದೋ, ಅನ್ಯರದ್ದನ್ನು ಕದ್ದು ತಮ್ಮದೆಂದು ಹಾಕಿ ಕೊಳ್ಳುವ ಫೇಸ್ಬುಕ್ಕಿನಲ್ಲಂತೂ ಬರಹಗಳಿಗಿಂತಲೂ ಸ್ಟೆಟಸ್ಸಿನ ಪಟಗಳೇ ಭಾರೀ ಸದ್ದು ಮಾಡುತ್ತಿವೆ.  ಏಕಾಂತದಲ್ಲಿ ಮತ್ತು ಶಾಂತ ಮನಸ್ಥಿತಿಯಲ್ಲಿ ಸೃಜಿಸಬೇಕಾದ ಕಾವ್ಯವೂ ಕೂಡ ತಕ್ಷಣದ ಕ್ಷಿಪ್ರ ‘ದರ್ಶಿನಿ ಸಂಸ್ಕೃತಿ’ಯಂತಾಗುತ್ತಿದ್ದರೂ, ಬರೆಯಲೇಬೇಕೆಂದು ಹಟತೊಟ್ಟವರಿಗೆ, ಸಾಹಿತ್ಯ ರಚನೆ ಎಂಬುದು ಘನಸ್ತಿಕೆಯ ಕೆಲಸವೆಂದು ನಂಬಿದವರಿಗೆ  ಈ ಬಗೆಯ ಚಟುವಟಿಕೆಗಳಿಂದಾದ ಪರಿಣಾಮ ಘೋರವಾದುದು.

ಕವಿತೆಗಳ ಬಗ್ಗೆ ಚರ್ಚಿಸುವವರಿಲ್ಲ ಎಂಬ ಮಾತು ಆಗೀಗ ತೂರಿ ಬರುತ್ತಲೇ ಇರುತ್ತದೆ. ಈಗ ಬರೆಯುತ್ತಿರುವವರ ಆತ್ಮ ವಿಶ್ವಾಸ ಕೂಡ ಪ್ರಶ್ನಾರ್ಹವೇ ಆಗಿದೆ. ಹಾಗೆಂದು ಸದ್ಯ ಬರೆಯುತ್ತಿರುವವರೆಲ್ಲ ತಮ್ಮ ಸಮಕಾಲೀನರನ್ನು ಓದಿಕೊಳ್ಳುತ್ತಿದ್ದಾರೆಯೇ ಎನ್ನುವುದೂ ಇಲ್ಲಿ ಬಹು ಮುಖ್ಯ ವಿಚಾರವಾಗಿದೆ. ಸಣ್ಣ ಪುಟ್ಟ ವಿಷಯಗಳಿಗೂ ಒಳಗಿರುವ ‘ಗಿಲ್ಟ್’ನ್ನು ತಟ್ಟೆಬ್ಬಿಸುವ ವ್ಯವಸ್ಥೆಯಲ್ಲಿ ಆತ್ಮ ವಿಶ್ವಾಸ ಶ್ವಾಸ ಕಳೆದುಕೊಳ್ಳುವುದೂ ಮಾಮೂಲಿ ಖಾಯಿಲೆಯೇ ಆಗುತ್ತಿದೆ. ಆದರೂ ನಮ್ಮ ಪುಣ್ಯಕ್ಕೆ ಸಾಕಷ್ಟು ಕಿರುಪತ್ರಿಕೆಗಳಲ್ಲಿ ಬ್ಲಾಗುಗಳಲ್ಲಿ ಈ ಕೆಲಸ ನಡೆಯುತ್ತಿರುವುದನ್ನು ನಾವು ಗಮನಿಸಿಲೇ ಬೇಕು. ಈವತ್ತು ಬರೆಯುತ್ತಿರುವವರೆಲ್ಲ ತಾವು ನಿಜಕ್ಕೂ ಮೆಚ್ಚಿಕೊಂಡಿದ್ದರ ಬಗ್ಗೆಯೇ ಬರೆಯುತ್ತಿದ್ದಾರೆ.

ಇನ್ನು ಈ ಹೊತ್ತಿನ ಪದ್ಯಗಳನ್ನು ಹಾಡಲು ಸಾಧ್ಯವಿಲ್ಲವಲ್ಲ ಎಂಬ ಕ್ಯಾತೆಯ ಮಾತು ಆಗೀಗ ಪ್ರತಿಧ್ವನಿಸುತ್ತಲೇ ಇರುತ್ತದೆ. ಆದರೆ ಕವಿತೆ ಹಾಡಾದಾಗ ರಾಗ ಸಂಯೋಜನೆಯಷ್ಟೇ ಮುಖ್ಯವಾಗುತ್ತದೆ. ಅಡಿಗರ ‘ಮೋಹನ ಮುರಳಿ’ ಓದಿದಾಗ ದಕ್ಕುವ ತಾತ್ವಿಕ ದರ್ಶನ ಅದನ್ನೇ ಭಾವಗೀತೆಯಾಗಿ ಕೇಳಿದಾಗ ಮೈಸೂರು ಅನಂತ ಸ್ವಾಮಿಗಳು ವಿರಹಗೀತೆಯೊಂದಕ್ಕೆ ರಾಗ ಜೋಡಿಸಿದಂತೆಯೇ  ಕೇಳಿಸುತ್ತದೆ. ಆಕಾಶವಾಣಿ ಕೆಂದ್ರಗಳ ‘ತಿಂಗಳ ಹೊಸ ಹಾಡು’ ನವಸುಮಗಳ ಕೊಡುಗೆ ಎಂಬುದು ನಿತ್ಯ ರೇಡಿಯೋ ಕೇಳುವವರಿಗಷ್ಟೇ ಗೊತ್ತಿರುವ ಸಂಗತಿ. ಅಂತೆಯೇ ಸುಗಮ ಸಂಗೀತದ ಕ್ಯಾಸೆಟ್ಟುಗಳಿಗೂ ನಮ್ಮ ಯುವಕವಿಗಳ ಕೊಡುಗೆಯೂ ಇದೆ.

ಭಾಷೆ ಬದಲಾಗಿದೆ. ಬದುಕಿನ ರೀತಿ ಬದಲಾಗಿದೆ. ಹಾಗೆಯೇ ಇವೆರಡರ ನಡುವೆ ಹುಟ್ಟಿ ಉಳಿಯಬೇಕಾದ ಸಾಹಿತ್ಯಕ-ಸಾಂಸ್ಕೃತಿಕ ಸಂಗತಿಗಳೂ ಬದಲಾಗುತ್ತಿವೆ. ಆಧುನಿಕ ಸಂದರ್ಭದಲ್ಲಿ ಸಾಹಿತ್ಯದ ಓಟ ಎತ್ತಕಡೆಗಿದೆ ಎಂದು ಗಮನಿಸಬೇಕಾದ ಮೀಮಾಂಸಕರು ತಮ್ಮ ಕರ್ತವ್ಯವನ್ನೇ ಮರೆತು ಓಟಕ್ಕೊಂದು ದಿಕ್ಕು ತೋರಿಸುವ ಸಲುವಾಗಿ ಮತ್ತದೇ ಪರಂಪರೆಯೆಂಬ ಕಾಗದದ ಹುಲಿಯನ್ನು ನಮ್ಮ ಮುಂದಕ್ಕೆ ಚಾಚುತ್ತಿದ್ದಾರೆ. ಅಂಥವರೇ ಕಾವ್ಯ ಈ ಕಾಲದ ಮಾಧ್ಯಮವಲ್ಲವೆಂದೂ ಘೋಷಿಸಿಯೂ ಬಿಡುತ್ತಾರೆ.

ಯಾವುದನ್ನೂ ಪರಿಪೂರ್ಣ ಅರಿಯಲು ಬಿಡದ ಆದರೆ, ಎಲ್ಲವನ್ನೂ ತಿಳಿದಿರಲೇಬೇಕೆಂದು ಒತ್ತಾಯಿಸುವ ನಮ್ಮ ಶಿಕ್ಷಣ ವ್ಯವಸ್ಥೆಯೇ ‘ಕಿಚಡಿ’ಯಾಗಿರುವುದನ್ನು ಅವಸರದಲ್ಲಿ ಮರೆತೂ ಬಿಡುತ್ತಾರೆ. ಜೀ.ಪಿ.ರಾಜರತ್ನಂ, ಪಂಜೆ, ಹೊಯ್ಸಳರೇ ಗೊತ್ತಿಲ್ಲದ ಪೀಳಿಗೆ ಹೇಗೆ ತಾನೆ ಸಾಹಿತ್ಯ ಚರಿತ್ರೆಯನ್ನು ಅಭ್ಯಸಿಸಿ ಬರೆಯಲು ಸಾಧ್ಯ? ಜ್ಞಾನವೆಂಬುದು ಆಳವಾಗಿ ಉಳಿಯದೇ ಬರಿಯ ಮೇಲ್ನೋಟದ ತಿಳುವಳಿಕೆಯಾಗುತ್ತಿರುವ ಹೊತ್ತಲ್ಲಿ ಹೊಸಕವಿಗಳು ಕಟ್ಟಿಕೊಡುತ್ತಿರುವ ರೂಪಕ, ಪ್ರತಿಮೆಗಳು ಅವರ ಕವಿಮನದ ವ್ಯುತ್ಪತ್ತಿಯಿಂದಲೇ ಮೂಡಿದವೆಂಬುದನ್ನು ಏಕೋ ಯಾರೂ ಗಮನಿಸುತ್ತಿಲ್ಲ.

ಹೆಸರಾಂತ ಪತ್ರಿಕೆಗಳು ಕಂಡರಿಯದ ಮೊತ್ತದ ನಗದು ಬಹುಮಾನಗಳನ್ನು ಕಥಾ ಸ್ಪರ್ಧೆಗಳಿಗೆ ಕೊಡುತ್ತಿವೆ, ನಿಜ. ದುರಂತವೆಂದರೆ ಬಹುಮಾನ ಗಿಟ್ಟಿಸುತ್ತಿರುವವರೆಲ್ಲ ಅದೇ ಅದೇ ಕತೆಗಾರರು. ಬಿಗಿ ಬಂಧ, ಪರಂಪರೆ ತುಂಬಿದ ಸಾಂದ್ರತೆ, ಸಾಂಸ್ಕೃತಿಕ ತಲ್ಲಣಗಳ ಮೆರವಣಿಗೆ ಎಂಬೆಲ್ಲ ತೀರ್ಪುಗಾರರ ಷರಾ ಪಡೆದ ಈ ಕತೆಗಾರರು ಸುತ್ತಿದಲ್ಲೇ ಸುತ್ತುತ್ತಿದ್ದಾರೆ. ಹೇಳಿದುದನ್ನೇ ಮತ್ತೆ ಮತ್ತೆ ತಂತ್ರ ಪೂರ್ವಕವಾಗಿ ಪಠಿಸುತ್ತಿದ್ದಾರೆ. ಏಕೆಂದರೆ ಪತ್ರಿಕೆಗಳು ತೀರ್ಪುಗಾರರೆಂದು ನೇಮಿಸಿದವರೆಲ್ಲ ಈಗಾಗಲೇ ಈ ರಂಗದಿಂದ ಕಡ್ಡಾಯ ನಿವೃತ್ತಿ ಪಡೆಯಬೇಕಾಗಿದ್ದೂ ಇನ್ನೂ ವಯಾಗ್ರ ಸೇವಿಸಿ ತಾವಿನ್ನೂ ಫಾರಂನಲ್ಲಿ ಇದ್ದೇವೆಂದು ಬೀಗುತ್ತಿರುವವರು.

ಈ ಎಲ್ಲದರ ನಡುವೆ ಅಪವಾದವೆಂಬಂತೆ ಕ್ರೈಸ್ಟ್ ಕಾಲೇಜು, ಸಂಚಯ ಸಾಹಿತ್ಯ ಪತ್ರಿಕೆಯ ಸಾಹಿತ್ಯ ಸ್ಪರ್ಧೆಗಳು, ಸಾಹಿತ್ಯ ಅಕಾಡೆಮಿಯ ಕಮ್ಮಟಗಳು ಹೊಸಬರನ್ನು ಗುರುತಿಸಿವೆ, ಪೋಷಿಸಿವೆ ಮತ್ತು ಸಂರಕ್ಷಿಸಿವೆ. ಎಂ.ಎನ್.ಜಯಪ್ರಕಾಶ್, ವಿಭಾ ತಿರಕಪಡಿ, ಕಾ.ಸು.ರಾಮಚಂದ್ರ ಸತ್ತ ನಂತರವೂ ನಮಗೆ ಸಿಗುವ ಹಾಗೆ ಮಾಡಿವೆ.

ಕಾವ್ಯ ಯಾವತ್ತೂ ಕೆಲವೇ ಜನರಿಗೆ ಬೇಕಾದದ್ದು. ಸಂಪೂರ್ಣ ಹಸಿದಿರುವವರಿಗೆ ಮತ್ತು ಪೂರ್ಣ ಹೊಟ್ಟೆ ತುಂಬಿದವರಿಗೆ-ಹಸಿವನ್ನು, ಅವಮಾನವನ್ನು ಕಾವ್ಯ ಮರೆಸಬಲ್ಲ ಶಕ್ತಿಯುಳ್ಳದ್ದು. ಹಾಗೆಯೇ ಮೆರೆಸಬಲ್ಲ ತಾಕತ್ತಿರುವಂಥದು. ಈ ಎರಡೂ ಅತಿಗಳ ನಡುವೆ ಇರುವ ಕಂದಕದೊಳಗೇ ಹೆಚ್ಚಿನ ಜನಸಮುದಾಯ ಇರುವುದರಿಂದ ಕಾವ್ಯ ಯಾವತ್ತೂ ಸಾಮಾನ್ಯರಿಗೆ ಸಹ್ಯವಾಗುವುದೇ ಇಲ್ಲ. ಹಾಗಾಗಿ ಕಾವ್ಯ ಈ ಕಾಲದ ಮಾಧ್ಯಮವಲ್ಲ ಎಂಬ ಹೇಳಿಕೆ ಅವಸರದ್ದಾಗುತ್ತದೆ, ರದ್ದಾಗುತ್ತದೆ.

ನೆಲವೇ ಕಾಣದ ಹಾಗೆ ತಲೆ ಎತ್ತಿರುವ ಕಟ್ಟಡಗಳು, ಭೂಮಿಯಗೆದು ಅದಿರ ತರುವ ಕೆಲಸ ತಪ್ಪಿಸಿವೆ. ಹಗಲು ಇರುಳುಗಳ ವ್ಯತ್ಯಾಸವೇ ತಾಕದ ಹಾಗೆ ವಿಜೃಂಬಿಸುತ್ತಿರುವ ಬೆಳಕು ತನ್ನ ಮೂಲವನ್ನೇ ಮರೆಮಾಚಿ ವಂಚಿಸುತ್ತಿದೆ. ಲೋಹ ತಂದು ಇಷ್ಟ ದೇವತೆಯ ವಿಗ್ರಹಕ್ಕೆ ಒಗ್ಗಿಸುವ ಅಸಲು ಅಕ್ಕಸಾಲಿಯ ಗುಣ ನೆಲದ ಸ್ಪರ್ಶವೇ ಸಿಕ್ಕದಿರುವ ಹೊತ್ತಲ್ಲಿ, ಪರಿತಪಿಸುತ್ತಿದೆ. ಇದರ ಮೂಲ ಕಾರಣವಾದ ಬದುಕಿನ ವೇಗವನ್ನು ನಿಯಂತ್ರಿಸಲು ಸಾಧ್ಯವಿದೆಯೇ?  ಇದು ನಮ್ಮ ಮುಂದಿರುವ ಸವಾಲೆಂದರೆ ಹೌದು. ಇಲ್ಲವೆಂದರೆ ಇಲ್ಲ. ದೂರದಲ್ಲೆಲ್ಲೋ ಕೂತು ತಾಯ್ನೆಲದ ಬಗ್ಗೆ ಬರೆಯುವವರು, ಆತ್ಮ ವಂಚಿಸಿಕೊಂಡು ಮೌಲ್ಯಗಳ ಬಗ್ಗೆ ಕೊರೆಯುವವರು, ಸಂಸ್ಕೃತಿಯೆಂದರೆ ಕ್ಯಾಸೆಟ್ಟುಗಳ ಸಂಗೀತಕ್ಕೆ ಕೈ, ಕಾಲು ಕುಣಿಸುವವರು, ಅನ್ಯರ ಮೇಲಣ ದ್ವೇಷವನ್ನೇ ಸಂವೇದನೆಯೆಂದು ವಾದಿಸುವವರೂ ಇರುವ ಕಾಲದಲ್ಲಿ ಕಾವ್ಯದ ಶುದ್ಧತೆಯ ಕುರಿತು ಮಾತನಾಡುವುದೇ ವ್ಯಂಗ್ಯವಾಗುತ್ತದೆ.

ಬರೆಯುವವರೆಂದರೆ ವಿಶ್ವ ವಿದ್ಯಾಲಯಗಳಲ್ಲಿ ಪಾಠಹೇಳುವವರೆನ್ನುವ ಹುಸಿಯನ್ನಳಿಸುವಂತೆ ಈ ಹೊತ್ತಿನ ಬರಹಗಾರರು ಜ್ಞಾನದ ಹಲವು ಸೆಲೆಗಳಿಂದ, ಜೀವನ ದರ್ಶನದ ಹಲವು ಸ್ತರಗಳಿಂದ ಬಂದವರಾಗಿದ್ದಾರೆನ್ನುವುದೇ ಅತಿ ಖುಷಿಯ ಸಂಗತಿಯಾಗಿದೆ. ಬಹು ವಿಸ್ತಾರವಾದ ಬಟಾಬಯಲಿನಲ್ಲಿ ಹಿಂದಿನವರಿಗೆ ಇದ್ದಂಥ ಸ್ಪಷ್ಟ ದಾರಿಗಳೂ, ಸಿದ್ಧಾಂತಗಳ ಗೋಜಲುಗಳೂ ಇಲ್ಲದ ಗಾಢ ಆತಂಕದ ಸನ್ನಿವೇಶದಲ್ಲಿ ಇವತ್ತಿನ ಕವಿ ಇದ್ದಾನೆ. ತೀರ ಯಾಂತ್ರಿಕವೂ, ಕೃತಕವೂ, ವೇಗವೂ ಆಗುತ್ತಿರುವ ನಿತ್ಯ ಬದುಕಿನ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಓದು, ಬರಹ, ಚರ್ಚೆ ಅತ್ಯಗತ್ಯವೆಂದು ನಂಬಿದ್ದಾನೆ.ಅದು ಪತ್ರಿಕೆಗಳ ಅಂಕಣದ ಮೇಲಣ ಸಂವಾದವೋ, ಪರಸ್ಪರರ ಈ-ಮೇಲೋ, ಅಥವ ಬ್ಲಾಗೋ, ಎಸ್.ಎಂ.ಎಸ್ಸೋ, ತನ್ನ ಅನ್ನಿಸಿಕೆಗಳನ್ನು ಹಂಚಿಕೊಳ್ಳುತ್ತಲೇ ಇದ್ದಾನೆ. ಅದು ಬದುಕಿಗೆ ಕೊಂಚ ನೆಮ್ಮದಿಯನ್ನು ಕೊಡುತ್ತಿರುವುದರಿಂದ, ಬರೆಯದಿದ್ದರೆ ತಲೆ ಸಿಡಿದು ಹೋಳಾಗಬಹುದೆಂಬ ಭಯದಿಂದ, ಒತ್ತಡಗಳಿಂದ ಕೊಂಚಕಾಲವಾದರೂ ದೂರವಾಗುವ ಆಸೆಯಿಂದ, ತನ್ನ ಸುತ್ತಣ ಒತ್ತಡಗಳಿಗೇ ಕಾವ್ಯದ ಪೋಷಾಕು ತೊಡಿಸುತ್ತಿದ್ದಾನೆ. ಆದುದರಿಂದಲೇ ‘ಇದಮಿಥ್ಥಂ’ ಪಂಡಿತರಿಂದ ಮೂತಿಗಿಕ್ಕಿಸಿಕೊಳ್ಳುತ್ತಿದ್ದಾನೆ. ಹಾಗಾಗಿಯೇ ಇಂದು ಬರೆಯುವುದು ಕಷ್ಟವಾಗಿದೆ. ಬರೆಯದೇ ಇರುವುದು ಅದಕ್ಕಿಂತ ಹೆಚ್ಚಿನ ಯಾತನೆಗೆ ದೂಡುತ್ತಿದೆ. ಹೊರಬಂದ ಮಾತುಗಳಿಗೆ ಒಂದೆರೆಡಾದರೂ ಕಿವಿಗಳಿರಬಹುದೆಂಬ ಆಶಾವಾದದಲ್ಲಿ ಬರೆಯುತ್ತಿದ್ದಾನೆ. ಅಷ್ಟೆ!

*********

3 thoughts on “ಅನಿಸಿಕೆ

  1. ಕೊನೆಯ ಎರೆಡು ಸಾಲು….. ಸರಿ, ನನ್ನ ಅನಿಸಿಕೆ ಸಹ ಅದೇ ಆಗಿದೆ.ಬರೆಯುವವರಿಗೆ ಅದರಲ್ಲಿ ಒಂದು ಆತ್ಮತೃಪ್ತಿ ಸಿಗುತ್ತೆ.

  2. ಸತ್ಯ. ಬರೆಯುವುದು ಕಷ್ಟ, ಬರೆಯದೆ ಇರುವುದು ಯಾತನೆ. ಮನಸ್ಸಿನ ತುಮುಲಗಳನ್ನು ಚೆನ್ನಾಗಿ ಹೇಳಿದ್ದೀರಿ. ಅಭಿನಂದನೆಗಳು ಸರ್.

Leave a Reply

Back To Top