ತುಂಟ ಮೋಡವೊಂದು


ಫಾಲ್ಗುಣ ಗೌಡ ಅಚವೆ
ಎಲ್ಲಿಂದಲೋ ಹಾರಿಬಂದ ತುಂಟ ಮೋಡವೊಂದು
ನನ್ನೆದೆಗೆ ಬಂದು
ತನ್ನೊಳಗಿನ ಹನಿ ಹನಿ
ಇಬ್ಬನಿಗರೆಯಿತು
ಅಂಗಳದ ಸಂಜೆ ಗತ್ತಲು
ಬೆರಗುಗಣ್ಣಿನ ಚುಕ್ಕೆಗಳು
ಅಗಾಧ ನೀಲಾಕಾಶ
ಹಿಮಕಣಗಳ ಹೊತ್ತು ತಂದ ಗಾಳಿ
ನನ್ನ ತೆಕ್ಕೆಯಿಂದ ಹೊರಬಿದ್ದವು
ಆ ಬೆಳ್ಳಿ ಮೋಡ ಬಂದದ್ದೇ ತಡ:
ಎದೆಯ ತುಂಬೆಲ್ಲ
ನಾದದ ನವನೀತವಾಗಿ
ನೀರವ ಮೌನದ ಮಜಲುಗಳು
ಶಬ್ದವಾಗಿ
ಸಾಲು ಬೆಳ್ಳಕ್ಕಿಗಳಾದವು
ತಿಳಿ ನೀರ ಸರೋವರದ ಆವಿಯೋ
ಕಡಲ ಅಲೆ ಮಿಂಚಿನ
ಹಿತ ನೋವ ಸ್ಪರ್ಶವೋ
ಗಾಳಿ ಮರದ ಮೌನಭಾಷೆಯ
ಇನಿದನಿಗೆ ದಂಗಾಗಿ
ದಿಗಂತಕ್ಕಾಗಿ ಕಾದುಕುಳಿತ
ದಂಡೆಯೋ
ಏನೂ ಹೊಳೆಯಲಿಲ್ಲ
ನನ್ನ ಏಕಾಂತವನ್ನು ಹಾದ
ಆ ತುಂಟ ಮೋಡ
ನೋಡ ನೋಡುತ್ತಿದ್ದಂತೆ
ನಕ್ಷತ್ರಗಳಲ್ಲಡಗಿದ ಮಿಂಚಂತೆ
ಮೈ ತುಂಬಿಬಂದು
ಅಕ್ಷರದಲ್ಲಡಗಿತು!
*******
ಥ್ಯಾಂಕ್ ಯು ಸರ್
ತುಂಬಾ ಚೆನ್ನಾಗಿದೆ ಸರ್
ಥ್ಯಾಂಕ್ ಯು ಡಿಯರ್