ಗೊರೂರು ಸೋಮಶೇಖರ್ ಕೃತಿ ಗೊರೂರು ನೆನಪುಗಳು ಮರು ಓದು-ಗೊರೂರು ಅನಂತರಾಜು,

ಲೇಖಕ ಗೊರೂರು ಸೋಮಶೇಖರ್‌ರವರು ತನ್ನೂರ ಮೇರು ಪ್ರತಿಭೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರ ಪ್ರಿಯರು ಮತ್ತು ಅಭಿಮಾನಿ. ಅವರನ್ನು ತಮ್ಮ ಬಾಲ್ಯದಿಂದ ಕೊನೆಯ ತನಕವೂ ಅತ್ಯಂತ ಸಮೀಪದಲ್ಲಿ ಶಿಷ್ಯರಾಗಿ ಆತ್ಮೀಯವಾಗಿ ಒಡನಾಟ ಇಟ್ಟುಕೊಂಡು ಬಂದವರು. ಹಾಗಾಗಿ ಲೇಖಕರು ‘ಗೊರೂರು ನೆನಪುಗಳು’ ಎಂಬ ಪುಸ್ತಕದ ಮೂಲಕ ಹಾಸ್ಯ ಸಂದೇಶಗಳನ್ನು ಅಕ್ಷರಕ್ಕೆ ಇಳಿಸಿದ್ದಾರೆ.. ಸುಭಾಷ್ ಭರಣಿ.
ಇದು ನಮ್ಮ ಊರಿನ ಹಿರಿಯ ಸಾಹಿತಿ ಗೊರೂರು ಸೋಮಶೇಖರ್ ಅವರ ಗೊರೂರು ನೆನಪುಗಳು ಕೃತಿಗೆ ಐಪಿಎಸ್ ಅಧಿಕಾರಿ  ಶ್ರೀ ಸುಭಾಷ್ ಭರಣಿ ಅವರು ಬರೆದ ಹಾರೈಕೆ. ಮುನ್ನುಡಿ ನಾಡಿನ ಪ್ರಸಿದ್ಧ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರದು. ‘ನಾನು ೧೯೪೭-೪೮ರ ಒಂದು ವರ್ಷ ಗೊರೂರಿನ ಮಾಧ್ಯಮಿಕ ಶಾಲೆಯ ಕೊನೆಯ ವರ್ಷವನ್ನು ಓದಿ ಆಗ ಸಾರ್ವಜನಿಕ ಪರೀಕ್ಷೆಯಾಗಿದ್ದ ಲೋಯರ್ ಸೆಕಂಡರಿಯನ್ನು ಪಾಸು ಮಾಡಿದೆ. ನುಗ್ಗೇಹಳ್ಳಿಯಲ್ಲಿ ಓದುತ್ತಿದ್ದವನು ಗೊರೂರಿಗೆ ಹೋದದ್ದು ಮೊದಲಾಗಿ ಗೊರೂರಿನ ನನ್ನ ಅನುಭವಗಳನ್ನು ‘ಭಿತ್ತಿ’ಯಲ್ಲಿ ಬರೆದಿದ್ದೇನೆ..
ಶುಭ ನುಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರದು. ಸೋಮಶೇಖರರ ನೆನಪುಗಳ ವಿಶೇಷ ಎಂದರೆ ಅವರ ಬರವಣಿಗೆ ವಾಸ್ತವತೆಯನ್ನು ಆಧರಿಸಿದೆ. ಗೊರೂರಿನ ಹಲವು ಬದುಕುಗಳು, ಜಾತ್ರೆ ಹಬ್ಬಗಳು, ಜಾತೀಯತೆ ಸಣ್ಣತನಗಳಿಂದ ಹಿಡಿದು ಅಣೆಕಟ್ಟು ಮುಳುಗಡೆ ಇತ್ಯಾದಿವರೆಗೆ ಎಲ್ಲವನ್ನೂ ತಮ್ಮ ಗ್ರಹಿಕೆಗೆ ತಂದುಕೊಂಡು ವಿಮರ್ಶಿಸುತ್ತಾ ವರ್ಣಿಸುತ್ತಾ ತಮ್ಮ ಆತ್ಮ ಚರಿತ್ರೆಯನ್ನಾಗಿಸಿದ್ದಾರೆ..
ಎಲ್ಲಿಯ ತನಕ ಬಡವರ್ಗಗಳ ಆರ್ಥಿಕ ಶಕ್ತಿ ಸದೃಢವಾಗಿ ಬೆಳೆಯಲು ರಾಜಕೀಯ ಶಕ್ತಿ ಈ ನಾಡಿನಲ್ಲಿ ಅವಶ್ಯಕವೋ ಅಲ್ಲಿಯ ತನಕ ಮೀಸಲಾತಿ ಬೇಕೇ ಬೇಕು. ಎಂದು ಈ ಬಡವರ್ಗಗಳಿಗೆ ಆತ್ಮಾಭಿಮಾನ ಮೂಡುತ್ತದೋ ಆಗ ಸರ್ಕಾರಗಳ ಜನಪರ ಕಾರ್ಯಕ್ರಮಗಳು ಗುರಿಮುಟ್ಟಲು ಸಾಧ್ಯ. ಎಲ್ಲ ಬಡವರ್ಗಗಳು ಸಂಘಟಿತರಾಗಿ ತಮ್ಮ ಕುಲಕಸುಬುಗಳು ಕೀಳಲ್ಲ ಸಮಾನವಾದವು ಎಂದು ಸಾರುವಂತಾಗಬೇಕು. ಆತ್ಮವಿಶ್ವಾಸ ಎಲ್ಲ ಬಡವರ್ಗಗಳಲ್ಲಿ ಒಟ್ಟೊಟ್ಟಿಗೆ ಹುಟ್ಟಬೇಕು. ಒಂದು ಬಡವರ್ಗ ಮುಂದುವರೆದು ಮತ್ತೊಂದು ನಿಂತಲ್ಲಿಯೇ ಇರುವುದಕ್ಕೆ ಅವಕಾಶ ಕೊಡಬಾರದು. ಹೀಗೆ ‘ಜಾಗೃತಿ’ ಸ್ಮರಣ ಸಂಚಿಕೆಯಲ್ಲಿ ‘ಆತ್ಮವಿಶ್ವಾಸ ಒಂದು ಸಂವಾದ’ ಎಂಬ ಲೇಖನದಲ್ಲಿ ಬರೆಯುತ್ತಾ ಹೋದ ಇವರು ಲೇಖಕರು ಹೌದು. ಇವರ ದಾಸಿಮಯ್ಯ ಪುರಾತ ಎಂಬ ಲೇಖನಗಳ ಕೃತಿ ಕೂಡ ಪ್ರಕಟವಾಗಿದೆ.  ತಮ್ಮ ಗೊರೂರು ನೆನಪುಗಳು ಕೃತಿಯಲ್ಲಿ ಬರೆಯುತ್ತಾ ಡಾ. ಗೊರೂರರ  ಬಗ್ಗೆ ಏನಾದರೂ ಬರೆಯಬೇಕೆನಿಸುತ್ತಿತ್ತು. ಹೇಗೆ ಪ್ರಾರಂಭಿಸಬೇಕು ಎಂದು ಯೋಚಿಸುತ್ತಿದ್ದಾಗ ಗೊರೂರು ಗ್ರಾಮದ ಬಗೆಗೂ ತೋಚಿದ್ದನ್ನು ಗೀಚುತ್ತಾ ಹೋದೆ. ಎಲ್ಲಿಯೋ ಪ್ರಾರಂಭಿಸಿ ಎಲ್ಲೆಲ್ಲಿಯೋ ಸುತ್ತಾಡಿದೆ. ನೆನಪುಗಳು ಹರಿದಂತೆ ಹರವು ವಿಸ್ತಾರಗೊಳ್ಳುತ್ತಾ ಆಗಾಗ್ಗೆ ಹರಗುತ್ತಾ ನಡೆದೆ. ಗೊ.ರಾ. (ಡಾ.ಗೊರೂರು) ಮತ್ತು ನನ್ನ ತಂದೆಯ ಪರಿಚಯದ ಸುತ್ತಾ ಐದಾರು ದಶಕಗಳ ಅವಧಿಯಲ್ಲಿ ನಾನು ಕಂಡು ಕೇಳಿದ ಘಟನೆಗಳನ್ನು ಹೆಕ್ಕಿ ತೆಗೆದೆ. ಗೊ.ರಾ. ದಂಪತಿಗಳ ಜೊತೆಗೆ ನನ್ನ ತಾಯಿ ತಂದೆಯವರನ್ನೂ ಕೇಂದ್ರಬಿಂದುವಾಗಿಸಿ ಗೊರೂರು ಹಾಗೂ ಸುತ್ತಮುತ್ತಲಿನ ಊರುಗಳ ವ್ಯಕ್ತಿ, ಸಂಗತಿಗಳನ್ನು ಸಂಕ್ಷಿಪ್ತವಾಗಿ ದಾಖಲಿಸಿದೆ..
 ಪುಸ್ತಕದ ಮುನ್ನೋಟದಲ್ಲೇ ಇನ್ನೂರು ಪುಟದ ಪುಸ್ತಕದ ಕಿರು ಪರಿಚಯದ ಅರಿವಾಗುತ್ತದೆ. ಸಾಹಿತಿ ಅಷ್ಟೇ ಅಲ್ಲಾ ಗೊರೂರು ಸೋಮಶೇಖರ್ ಸಮಾಜ ಸೇವೆಯಲ್ಲಿ ತೆರೆಯ ಹಿಂದೆ ನೇಪಥ್ಯದಲ್ಲಿ ಕೆಲಸ ಮಾಡಿದವರು. ಸರ್ಕಾರಿ ಉದ್ಯೋಗದಲ್ಲಿ ಇದ್ದುದರಿಂದ ತೆರೆಯ ಮೇಲೆ ಬರಲಿಲ್ಲ ಅಷ್ಟೇ.  ಅವರು ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ತಮ್ಮ ಪಾತ್ರ ನಿರ್ವಹಿಸಿದವರು. ವೃತ್ತಿಯಲ್ಲಿ ಇಂಜಿನಿಯರ್ ಆಗಿ ಪ್ರವೃತ್ತಿಯಲ್ಲಿ ಕನ್ನಡ ಸಾಹಿತ್ಯಾಭಿಮಾನಿ, ಸಾಹಿತ್ಯ ಪರಿಚಾರಕರಾಗಿ ತಾನು ಸೇವೆ ಸಲ್ಲಿಸುತ್ತಿದ್ದ ಜಾಗದಲ್ಲೆಲ್ಲಾ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದ ಬಗ್ಗೆ ಕೃತಿಯಲ್ಲಿ ದಾಖಲಿಸಿದ್ದಾರೆ.
ಡಾ|| ಗೊರೂರರ ಆತ್ಮೀಯರಾಗಿ ತಾ. ೧೩-೦೩-೧೯೮೫ರಂದು ತವರೂರಿನಲ್ಲಿ ಗೊರೂರರನ್ನು ಅದ್ಧೂರಿ ಮೆರವಣಿಗೆ ಮಾಡಿ ಸನ್ಮಾನಿಸಿ ತವರಿನ ಕಾಣಿಕೆ ಅರ್ಪಿಸುವಲ್ಲಿ ಸಂಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಸನ್ಮಾನದ ಹಿನ್ನೆಲೆಯಲ್ಲಿ ಸ್ಥಳೀಯ ಪದವಿ ಕಾಲೇಜನ್ನು ಉಳಿಸಿ ಬೆಳೆಸುವ ಗುರಿಯಿತ್ತು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆ, ದಾನಿ ಎ.ಎನ್. ವರದರಾಜುಲು ಅವರಿಂದ ಆಗ  ನೆರವು ಪಡೆದು, ಸರ್ಕಾರದ ಅನುದಾನದಿಂದ ಗ್ರಾಮೀಣ ಕಾಲೇಜು ಉಳಿದು ಬೆಳೆದು ಬಂದಿದ್ದರ ಕಿರು ಮಾಹಿತಿ ಇದೆ.  ತಾವು ಕೆಲಸ ಮಾಡಿದ ಇಲಾಖೆಯ ಬಗ್ಗೆ ಬರೆಯುತ್ತಾ ರಾಜ್ಯದಲ್ಲಿ ಅಣೆಕಟ್ಟು ಆರಂಭವಾಗುವ ಮೊದಲೇ ಅದರ ನಾಲೆಗಳು ಹೋಗುವ ಜಾಗಗಳನ್ನು ಗುರುತಿಸಿ ಹೊರ ನಾಡಿನವರು ಜಮೀನು ಖರೀದಿಸಿದ್ದ ಬಗ್ಗೆಯೂ ಪ್ರಸ್ತಾಪಿಸುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡದಲ್ಲಿ ಆಡಳಿತ ತರಬೇತಿ ಶಿಬಿರ ನಡೆಸಿಕೊಟ್ಟಿದ್ದು,  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌ|| ಕಾರ್ಯದರ್ಶಿಯಾಗಿ ಗೊರೂರಿನಲ್ಲಿ ಮೈಸೂರು ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿ ಸಾಹಿತ್ಯಗೋಷ್ಠ್ತಿ ಕವಿಗೋಷ್ಠಿ  ನಡೆಸಿಕೊಟ್ಟಿದ್ದನ್ನು ಸ್ಮರಿಸಿದ್ದಾರೆ. ನಾನಾದರೂ (ಗೊರೂರು ಅನಂತರಾಜು) ಆಗ ತಾನೇ ಸಾಹಿತ್ಯ ಕ್ಷೇತ್ರಕ್ಕೆ ಪಾದ ಇಡುತ್ತಿದ್ದೆನಾಗಿ ಅವರ ಈ ಕಾರ್ಯ ಗಮನಿಸಿದ್ದೆನು. ಗೊರೂರಿನಲ್ಲಿ ಸೋಮಶೇಖರ್ ಏರ್ಪಡಿಸಿದ್ದ ಮತ್ತೊಂದು ವಿಶೇಷ ಸಮಾರಂಭವೆಂದರೆ ಸಾರ್ವಜನಿಕರೊಂದಿಗೆ PWD. ಮಂತ್ರಿಗಳ ಜನಸ್ಫಂದನ ಕಾರ್ಯಕ್ರಮ. ಆಗ  PWD ಮಂತ್ರಿಗಳು ಮಾಜಿ ಪ್ರಧಾನಿ ಸನ್ಮಾನ್ಯ ಶ್ರಿ ಹೆಚ್.ಡಿ.ದೇವೇಗೌಡರು.  ಜಿಲ್ಲಾ ವಾರ್ತಾಧಿಕಾರಿ ತೋಪೇಗೌಡರು ಗೊರೂರು ಸೋಮಶೇಖರ್ ನಡೆಸಿಕೊಟ್ಟ ಈ ಕಾರ್ಯಕ್ರಮ ಮರೆಯುವಂತಿಲ್ಲ. ಏಕೆಂದರೆ  ನನ್ನ ಒಂದು ಪ್ರಶ್ನೆಯೂ ಆಯ್ಕೆ ಆಗಿ ನನ್ನಂತೆಯೇ ಪ್ರಶ್ನೆ ಕೇಳಿದ್ದ ೩೦ ಮಂದಿ ಅಂದಿನ ಲೋಕೋಪಯೋಗಿ ಮಂತ್ರಿಗಳೊಂದಿಗೆ ಸರ್ಕ್ಯೂಟ್ ಹೌಸ್‌ನಲ್ಲಿ ಊಟ ಮಾಡಿದ್ದು ಎಂತು ಮರೆಯುವುದುೃ?  
 ತಿರುಗುಬಾಣ ಎಂಬ ನಾಟಕ ಕೃತಿ ಪ್ರಕಟಿಸಿರುವ ಗೊರೂರು ಸೋಮಶೇಖರ್ ಓದಿನ ದಿನಗಳಲ್ಲಿ ನಟರಾಗಿಯೂ ರಂಗದ ಮೇಲೆ ಬಂದವರು. ತಿರುಗುಬಾಣ ನಾಟಕವನ್ನು ಹೇಮಾವತಿ ರಂಗಮಂದಿರದಲ್ಲಿ  ತಮ್ಮ ಸಹೋದ್ಯೋಗಿ ಸಿಬ್ಬಂದಿಗಳ ಜೊತೆಗೆ ನಟಿಸಿ ಪ್ರದರ್ಶಿಸಿದ್ದರು.  ಉಂಡಾಡಿ ಗುಂಡ, ಗಗ್ಗಯ್ಯನ ಗಡಿಬಿಡಿ, ವರಪರೀಕ್ಷೆ, ಶುದ್ಧ ಶುಂಠಿ ಹೀಗೆ ಸಾಮಾಜಿಕ ನಾಟಕಗಳಲ್ಲಿ ನಟಿಸಿದರು. ಪಾಂಡು-ವಿಜಯ ಪೌರಾಣಿಕ ನಾಟಕದಲ್ಲಿ ಕೃಷ್ಣ, ಸೂರ‍್ಯನ ಪಾತ್ರ ನಿರ್ವಹಿಸಿದ್ದಾರೆ. ತಮ್ಮ ಐದನೇ ವಯಸ್ಸಿನಲ್ಲೇ ರಂಗಪ್ರವೇಶ ಮಾಡಿ  ಹೈಸ್ಕೂಲ್‌ನಲ್ಲಿ ರಾಮಾಯಣ ಮಹಾಭಾರತ ಪಾತ್ರಗಳ ಸಂಭಾಷಣೆಯನ್ನು ಹೇಳುತ್ತಿದ್ದರಂತೆ.! ಫ್ಯಾನ್ಸಿ ಡ್ರೆಸ್‌ನಲ್ಲಿ ರಂಜಿಸಿದ್ದಾರೆ. ಕಲೆ ಅಷ್ಟೇ ಅಲ್ಲಾ ಸಮಾಜ ಸೇವೆಯಲ್ಲೂ ಕ್ರಿಯಾಶೀಲರಾಗಿ ‘ಕರ್ನಾಟಕ ದೇವಾಂಗ ಸೇವಾ ಸಮಾಜ’ ಸ್ಥಾಪಕ ಅಧ್ಯಕ್ಷರಾಗಿ ಬೆಂಗಳೂರಿನಲ್ಲಿ ಆ ಕಾಲಕ್ಕೆ ನಡೆದ ಮಹಾ ಸಮ್ಮೇಳನಕ್ಕೆ ಪ್ರೇರಕರು. ಹಾಸನ ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿ  ಸಭೆ ಸಮಾರಂಭ ಸಂಘಟಿಸಿ ಜಿಲ್ಲಾ ದೇವಾಂಗ ಸಂಘದ ಬೆಳವಣಿಗೆಗೆ ತಮ್ಮದೇ ಪಾತ್ರ ನಿರ್ವಹಿಸಿದ್ದರು.
ಆಲೂರಿನಲ್ಲಿ ವಾಟೆಹೊಳೆ ಪ್ರಾಜೆಕ್ಟಿನ ಸ. ಕಾ. ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ರಾಜ್ಯೋತ್ಸವ ಸಮಾರಂಭದಲ್ಲಿ ನಾಡಿನ ಇತಿಹಾಸವೇ ಮೂಡಿಬರುವಂತೆ ಸಂಗೀತ ಸೌರಭ, ನೃತ್ಯ ವೈಭವ, ನೆಲ-ಜಲ ದರ್ಶನ ಮುಂತಾಗಿ ಸಾಹಿತ್ಯ ಸೊಗಡಿನ ಕಾರ್ಯಕ್ರಮ ಏರ್ಪಡಿಸಿದ್ದರ ಬಗ್ಗೆಯೂ ಕೃತಿಯಲ್ಲಿ ಬರೆಯುತ್ತಾರೆ. ೧೯೮೧ರಲ್ಲಿ ಹೇಮಾವತಿ ಜಲಾಶಯದಲ್ಲಿ ದೋಣಿ ವಿಹಾರಕ್ಕಾಗಿ ಬೋಟ್‌ಜೆಟ್ಟಿ, ಕೋನಾಪುರ ದ್ವೀಪ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿ ಕಾಮಗಾರಿ ಮಾಡಿಸಿದ್ದನ್ನು ಸ್ಮರಿಸುತ್ತಾರೆ.  ಹಾಸನ ಜಿಲ್ಲಾ ಕ.ಸಾ.ಪ. ಇವರ ಸಾಂಸ್ಕೃತಿಕ ಸಾಮಾಜಿಕ ಸೇವೆಯನ್ನು ಗುರುತಿಸಿ ೧೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿತ್ತು. ಹಾಸನ ಜಿಲ್ಲಾ ಆಡಳಿತ ಇವರ ಸಾಹಿತ್ಯ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. ಹೇಮಾವತಿ ವಸತಿ ಕಾಲೋನಿಯ ನಿರ್ಮಾಣ ಹಂತದ ವೇಳೆ ಸಹಾಯಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಇವರನ್ನು  ಹೇಮಾವತಿ ಪ್ರಾಜೆಕ್ಟ್ ನೌಕರರು ಗುತ್ತಿಗೆದಾರರ  ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಅಖಿಲ
ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗಿದೆ.  ಹೀಗೆ ‘ಗೊರೂರು ನೆನಪು’ ಕೃತಿ ಲೇಖಕರನ್ನು ಪರಿಚಯಿಸುವ ಜೊತೆಗೆ ಡಾ. ಗೊರೂರರ ನಂತರದ ಊರಿನ ಕಾಲಘಟ್ಟದ ಚಿತ್ರಣವನ್ನು ತಮ್ಮ ಸುತ್ತಲಿನ ಜನಜೀವನವನ್ನು ಕಟ್ಟಿಕೊಡುತ್ತದೆ. ಕಲೆ ಸಾಂಸ್ಕೃತಿಕ ಬದುಕನ್ನು ಅನಾವರಣಗೊಳಿಸುತ್ತದೆ.  ಮೊದಲನೇ ಅಧ್ಯಾಯ ಡಾ. ಗೊರೂರು, ಸ್ನಾನಘಟ್ಟದಲ್ಲಿ ಪ್ರಾರಂಭಿಸಿ ಶಾಸನಗಳಲ್ಲಿ ಗೊರೂರು, ಬಾಲ್ಯ ಬೆರಗು, ಮದುವೆ-ಆಚಾರ, ಜನ ಸೇತು, ಜಾತ್ರೆ ಹಬ್ಬ ಬಯಲಾಟ, ಸಂಸ್ಕೃತಿ ಸೌರಭ, ಪುಟ್ಟಣ ಕಣಗಾಲ್, ಡಾ. ರಾಜ್ ನಂಟು.. ಹೀಗೆ ಏನೆಲ್ಲಾ ಉಂಟು.! ಗೊರೂರಿನಲ್ಲಿ ಘಟಿಸಿದ ಅನೇಕ ಘಟನೆಗಳನ್ನು ತಮ್ಮ ನೆನಪಿನಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕ ಮರು ಮುದ್ರಣ ಕಂಡಿದೆ.  ಮುಂದಿನ ತಿಂಗಳು ೭ನೇ ತಾರೀಖು ಗೊರೂರಿನಲ್ಲಿ ಲೇಖಕ ಸುಂದರೇಶ್ ಡಿ. ಉಡುವಾರೆ ಡಾ. ಗೊರೂರು ೧೨೦ನೇ ಜನ್ಮ ದಿನಾಚರಣೆ ಸಮಾರಂಭ ಏರ್ಪಡಿಸುತ್ತಿದ್ದಾರೆ. ನಾನಾದರೂ ಗೊರೂರು ನೆನಪುಗಳು ಕೃತಿ ಮರು ಓದಿದೆ. ಹುಟ್ಟಿದ ಊರು ಬಿಟ್ಟು ಬಂದಿದ್ದರೂ ಮತ್ತೆ ಮತ್ತೆ ನೆನಪಾಗುವುದೇ ಇಂತಹ ಪುಸ್ತಕಗಳನ್ನು ಓದುವುದರಿಂದ ಹೌದಷ್ಟೇ..!


Leave a Reply

Back To Top