“ಬದುಕೇ ಹೂವಾದಾಗ”ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ

ಬೇಸಿಗೆಯ ಬಿಸಿಲು. ಅದರಲ್ಲೂ ಕರಾವಳಿ ಬಿಸಿಲು ಒಂಥರಾ ಬೆವರಿನ ಮೂಟೆ ಒಡೆದು ಕುಳಿತಂತೆ ಕಾಣುತ್ತಿತ್ತು ಅವಳ ಹಣೆಯ ಮೇಲೆ. ಅವಳೆಂದರೆ ಸಾಮಾನ್ಯರಲ್ಲಿ ಸಾಮಾನ್ಯದವಳು. ಹಣೆಯ ಮೇಲೆ ದೊಡ್ಡದೊಂದು ಕುಂಕುಮದ ಬಿಂಬ.  ಎಂತಹ ಬೆವರಿಗೂ ಹೆದರದೇ ನಿಲ್ಲುವ ಅದರ ತಾಕತ್ತು ಅದರ ದೃಢತೆ.  ನಿಮಿಷಕ್ಕೆ ನೂರು, ಸಾವಿರ ವಾಹನದ ಬಿಡುವಿರದ ಓಡಾಟ.  ಪೇಟೆಯ ಸಾವಿರ ಮುಖಗಳ ವಿಚಿತ್ರ ಬಿಂಬ ಪ್ರತಿಬಿಂಬದ ನಡುವೆ ಸಿಕ್ಕು ನಕ್ಕು ಹಗುರಾಗಿ ಸುಮ್ಮನೆ ಹೂಗಳ ಹರಡಿ ಹೂವಿನಂತೆ ಕುಳಿತುಕೊಳ್ಳುವುದು ಅವಳ ದಿನದ ರೂಢಿ.  ರೈಲ್ವೆಯಲ್ಲಿ ಕೆಲಸ ಮಾಡುವ ಸುರೇಶನಿಗೆ ರಂಗಜ್ಜಿಯ ಪರಿಚಯ. ರಂಗಜ್ಜಿ ಎಂದರೆ ಪೇಟೆಯಲ್ಲಿ ಹೆಸರು ತಿಳಿದಿರದಿದ್ದರೂ ಹೂ ಮಾರುವವಳು ಎನ್ನುವುದು ಎಲ್ಲರಿಗೂ ಗೊತ್ತು. ಒಮ್ಮೊಮ್ಮೆ ಸಾದಾಸೀದ ಆಗಿ ಹೂವನ್ನ ಮಾರಿನಲ್ಲಿ ಎಣಿಸಿಕೊಟ್ಟು ಇರಲಿ ಎಂದು ಜೊತೆಗೆ ಚೂರು ಹೆಚ್ಚು ಹೂ ಹಾಕಿ ಕೊಡುವುದು ಅವಳ ಒಳ್ಳೆಯ ಗುಣವೇ. ಮನೆಯ ದೇವರಿಗೆಂದು ಹೂ ಕೊಳ್ಳುವುದು ಸುರೇಶನಿಗೆ ಅಭ್ಯಾಸ.  ಹಾಗಾಗಿ ಬಂದು ನಿಲ್ಲುವುದು ಈ ರಂಗಜ್ಜಿಯ ಹೂವಿನ ಅಂಗಡಿಯ ಹತ್ತಿರವೇ. ರೈಲಿನಲ್ಲಿ ಬರುವ ಹೋಗುವ ಸಾವಿರಾರು ಮುಖಗಳನ್ನು ಓದಿರುವ ಸುರೇಶನಿಗೆ ಈ ರಂಗಜ್ಜಿ ಯಾವಾಗಲೂ ಭಿನ್ನವಾಗಿ ನಿಂತಂತೆ ಕಾಣಿಸುತ್ತಾಳೆ.

          ಅದೆಷ್ಟು ಜನ ಹೂ ಮಾರುವವರು ಇದ್ದರೂ ಈ ರಂಗಜ್ಜಿಯೇ ಆಪ್ತ. ಏಕೆಂದರೆ ಅವಳು ಬದುಕುವ ಮಾತನಾಡುವ ಶೈಲಿ ಆಪ್ತತೆ ಇಷ್ಟ. ಸರಳತೆ, ಸ್ವಚ್ಛತೆ ಅವಳ ಎದ್ದು ಕಾಣುವ ಗುಣ.  ಒಮ್ಮೆ ಸುರೇಶನಿಗೂ ತರತರದ ಹೂಗಳ ಮಾರುವ ರಂಗಜ್ಜಿಗೂ ಮಾತಿಗೆ ಮಾತು ಆಯಿತಂತೆ. ಹಣದ ವಿಚಾರದಲ್ಲಿ  ಸ್ವಲ್ಪ ಕಡಿಮೆ ಮಾಡು ಎಂದಾಗ ರಂಗಜ್ಜಿ ಸಿಟ್ಟು ಬಂದು ನನ್ನ ಮಗನ ಹಾಗೆ  ಇದ್ದ ನೀನು ಹಣ ಕೊಡುವುದು ಬೇಡ. ಹೂ ತೆಗೆದುಕೊಂಡು ಹೋಗು ನೀ ಎಂದು ರಂಗಜ್ಜಿ ಗರಂ ಆಗಿ ಅಂದು ಬಿಟ್ಟಳಂತೆ.  ಸುತ್ತ ಸೇರಿದ ಜನರ ನಡುವೆ ಅಜ್ಜಿಯ ಗರಂ ಆದ ಮಾತು ಕೇಳಿ ಸುರೇಶ ಸುಮ್ಮನೆ ಹೂ ತೆಗೆದುಕೊಂಡು ಮನೆಗೆ ಬಂದನಂತೆ. ಆ ದಿನ ಸುರೇಶನ ತಾಯಿಯ ದಿನ. ಅವಳೂ ಮನೆಯ ಹಿತ್ತಲಿನಲ್ಲಿ ಬೆಳೆದ ಮಲ್ಲಿಗೆ, ಅಬ್ಬಲಿಗೆ, ಜಾಜಿ, ಕುಂದಿ, ಜೀಟಿಗೆ ಹೂಗಳ ರಾತ್ರಿ ಕಟ್ಟಿಟ್ಟು ಬೆಳಿಗ್ಗೆ ಪೇಟೆಯಲ್ಲಿ ಮಾರಿ ಸಿಕ್ಕ ಹಣವನ್ನು ಬಳಸಿಕೊಂಡು ಮನೆಗೆ ಬೇಕಾದ ಸಾಮಾನುಗಳನ್ನು ತರುತ್ತಿದ್ದಳು. ಸುರೇಶನಿಗೆ ಮತ್ತು ಸುರೇಶನ ಅಕ್ಕ-ತಂಗಿಯರಿಗೆ ತಿನ್ನಲು ತಿನಿಸು ತರುವುದು ಸಾಮಾನ್ಯವಾಗಿತ್ತು. ಅನಾರೋಗ್ಯದ ಅಪ್ಪ. ಬದುಕು ಸಾಗಿಸಲು ಹೆಣಗುವ ಅಮ್ಮನ ಎಲ್ಲಾ ನೆನಪು ಈಗ ಸುರೇಶನಿಗೆ  ಬಂತು. ಹೂ ಮಾರುವ ಅಜ್ಜಿಯೆಡಗಿನ ಒಂದು ಮಾತು ಇಷ್ಟಕ್ಕೆಲ್ಲ ಕಾರಣವಾದೀತು ಎಂದುಕೊಂಡ ಸುರೇಶ. ಅಮ್ಮ ಇಲ್ಲವಾಗಿ ಇಂದಿಗೆ ಇಪ್ಪತ್ತೈದು ವರ್ಷ. ಆಪ್ತತೆ, ಅನುಬಂಧ ಎಲ್ಲವೂ ದುಡ್ಡು ಕೊಟ್ಟುಕೊಳ್ಳಲು ಬರುವುದಿಲ್ಲ. ಅದು ಹೃದಯದಿಂದ ಬರಬೇಕು ಎಂದುಕೊಂಡವ ಸುರೇಶ. ನಾಲ್ಕು ಮಕ್ಕಳನ್ನು ಓದಿಸಿ ಬೆಳೆಸಲು ಅಮ್ಮ ಆಯ್ದುಕೊಂಡ ಕೆಲಸ ಹೂ ಮಾರುವುದು. ಅಮ್ಮ ಹೂ ಹಿಡಿದು ಮಾರಲು ಹೊರಟಾಗ ನಕ್ಕ ಮುಖಗಳು ನೆನಪಿದೆ. ಬದುಕು ಅವಳದ್ದು. ಕಷ್ಟ ಅವಳದ್ದು. ಹಸಿವೆಗೆ ನಗುವ ಮುಖಗಳು ಕಾಣದು. ಬದುಕಲು ಅಮ್ಮ ಹಿಂದೆ ಮುಂದೆ ನೋಡಲಿಲ್ಲ. ಧೈರ್ಯ ಬಿಡಲಿಲ್ಲ. ಮುಖ ನೋಡಿ ಸುಮ್ಮನಾಗಲಿಲ್ಲ. ಅಮ್ಮ ಸಾಕಲು ಹೆಣಗಾಡಿದ ಪರಿಯ ಪರಿಚಯವಿದೆ ಸುರೇಶನಿಗೆ.

         ಅದೊಂದು ದಿನ ಜಾತ್ರೆಗೆ ನಾನು ಬರುವೆನೆಂದು ಹಠ ಹಿಡಿದು ಹೊರಟ ತನ್ನನ್ನ ಅಮ್ಮ ಹೊಸ ಅಂಗಿ ಹಾಕಿಸಿ ಕರೆದೊಯ್ದು ನೆರಳಿನಲ್ಲಿ ಕುಳ್ಳಿರಿಸಿ ಅಮ್ಮ ಬಿಸಿಲಲ್ಲಿ ತಾನು ನಿಂತು ಹೂವನ್ನು ಮಾರುತ್ತಿದ್ದ ದೃಶ್ಯ ಕಣ್ಣ ಮುಂದೆ ಬಂದು ಹೋಯಿತು ಅವನಿಗೆ. ಬಂದ ಬೆವರನ್ನು ಒರೆಸಿಕೊಳ್ಳುತ್ತಾ ಸಿಕ್ಕ ಅಲ್ಪ ಹಣದಲ್ಲಿ ಅಮ್ಮ ಕೊಡಿಸಿದ ಶರಬತ್ತು ಸಿಹಿ ತಿಂಡಿಯ ರುಚಿ ಇಂದಿನ ಯಾವ ರುಚಿಗೂ ಕಡಿಮೆ ಇರಲಿಲ್ಲ. ಅಂದು ಅದೆಷ್ಟು ಛಲಗಾತಿ ನನ್ನಮ್ಮ ಎನಿಸಿತ್ತು. ಓದಿಗೆಂದು ಬರೆಯಲೆಂದು ಅಮ್ಮ ತಂದು ಕೊಡುತ್ತಿದ್ದ ವಸ್ತುಗಳೆಲ್ಲ ಒಂದು ಕೊನೆಯವರೆಗೆ ತಾನು ಬಳಸಿದ್ದು ನೆನಪಿದೆ. ತಾನು ರೈಲ್ವೆಯಲ್ಲಿ ಉದ್ಯೋಗ ಪಡೆದು ಬಂದಾಗ ಅಮ್ಮನ ಮುಖದಲ್ಲಿನ ಖುಷಿ ಜಗತ್ತನ್ನು ಗೆದ್ದಂತೆ ಇತ್ತು…ಇಂದಿಗೂ ನೆನಪಿದೆ ಸುರೇಶನಿಗೆ . ಅಕ್ಕ ತಂಗಿಯರ ಮದುವೆ ತನ್ನ ಮದುವೆ ಎಂದು ಕಳೆದು ಹೋದ ನೆನಪು ಸುರೇಶನಿಗೆ ಮತ್ತೆ ಮತ್ತೆ ಬಂತು. ಅಮ್ಮನ ಮುಖವನ್ನು ನೆನಪಿಗೆ ತಂತು. ತನ್ನೊಳಗಿನ ನೋವನ್ನು ಅಮ್ಮ ಎಂದು ಮಕ್ಕಳಿಗೆ ತೋರಿಸಿದ್ದಿಲ್ಲ. ಹಸಿವಿಗೆ ಎಂದು ಮಾಡಿಟ್ಟ ಅನ್ನ ಖಾಲಿಯಾದರೂ ಅಮ್ಮ ದೇವರಿಗೆ ಉಪವಾಸ ಎಂದು ತಾನು ಖಾಲಿ ಹೊಟ್ಟೆಯಲ್ಲಿ ಉಳಿದಿದ್ದು ಸುರೇಶನಿಗೆ ನೆನಪಿದೆ. ಅಮ್ಮನ ನಂತರ ಅಕ್ಕ-ತಂಗಿಯರು ಅದೇ ಸಾಲಿನಲ್ಲಿ ನಿಲ್ಲುತ್ತಾರೆ. ಏನು ಬಯಸದ ಅವರ  ನಿಷ್ಕಲ್ಮಶ ಪ್ರೀತಿ  ಅಮ್ಮನ ನೆನಪನ್ನ ಮರಳಿ ತರುತ್ತಿತ್ತು ಸುರೇಶನಿಗೆ.  ಎಷ್ಟೇ ಕಷ್ಟವಾದರೂ ಅವರು ಸುರೇಶನ ಮುಂದೆ ಏನನ್ನು ಹೇಳುತ್ತಿರಲಿಲ್ಲ. ಇಷ್ಟವಾದ ಕೆಲಸ ಮಾಡುತ್ತಲೇ ಪದವಿಯವರೆಗೆ ಓದಿದ ಅವರು ಒಂದೊಂದು ಉದ್ಯೋಗ ಮಾಡುತ್ತಾ ಬದುಕು ಕಟ್ಟಿಕೊಂಡರು. ಹಬ್ಬ ಜಾತ್ರೆ ಎಂದು ತಪ್ಪದೇ ಬರುತ್ತಿದ್ದ ಅವರ ತವರ ಪ್ರೀತಿ  ಸುರೇಶನಿಗೆ ನೆಮ್ಮದಿ ನೀಡಿತ್ತು. ಒಮ್ಮೊಮ್ಮೆ ಸುರೇಶನಿಗೆ ಈ ಆಪ್ತತೆ ಅನುಬಂಧ ಎಲ್ಲಾ ಎಷ್ಟು ವಿಚಿತ್ರ ಎನಿಸುತ್ತದೆ. ಏನೂ ಅಲ್ಲದ ಸಂಬಂಧಗಳಿಗೆ ಕೊಡುವ ಗೌರವ ಹೆಚ್ಚಿನದ್ದು ಎನಿಸಿಬಿಡುತ್ತದೆ.

     ಸುರೇಶ ತನ್ನ ತಾಯಿಯ ನೆನಪಾಗಿ ಮತ್ತೆ ಮತ್ತೆ ಸಣ್ಣವನಾಗಿ ಬಿಡುತ್ತಾನೆ.ರಂಗಜ್ಜಿ ಹೇಳಿದ ನೀನು ನನ್ನ ಮಗನಂತೆ ಎಂಬ ಮಾತು ಕಿವಿಯಲ್ಲಿ ಆಗ ತಾನೇ ಉಸಿರದಂತೆ ಕೇಳಿಸುತ್ತಿತ್ತು. ಬಹಳ ಯೋಚಿಸಿದ ರಂಗಜ್ಜಿಯ ಕುರಿತು. ವಿಷಯ ಚಿಕ್ಕದೇ. ಏನೇ ಆಗಲಿ ಆ ತಾಯಿ ಎಷ್ಟು ನೊಂದಿರಬಹುದು….. ನಾಳೆ ಅವಳ ಹತ್ತಿರ ಮಾತನಾಡಬೇಕು. ಅವಳಿಗೆ ಎಷ್ಟು ಮಕ್ಕಳು ಎಂಬುದನ್ನು ಕೇಳಿ ತಿಳಿಯಬೇಕು ಎಂದುಕೊಂಡು ಸುಮ್ಮನಾದ. ದಿನ ಕಳೆಯಿತು. ಬೆಳಗಾಯಿತು. ಮತ್ತೆ ಸುರೇಶ ದಿನದ ಕೆಲಸಕ್ಕೆ ಹೊರಟ. ಅನ್ನ ಕೊಟ್ಟ ಕೆಲಸವೆಂದರೆ ಆಪ್ತವೇ ಸುರೇಶನಿಗೆ. ಆದರೆ ನೀನು ನನ್ನ ಮಗನಂತೆ ಎಂದ ಮಾತು ಪದೇ ಪದೇ ಕೇಳಿಸಿದಂತಾಗುತ್ತಿತ್ತು.

        ಬೆಳಗೆದ್ದು ಸುರೇಶ ಮೊದಲೇ ಹೋಗಿ ನಿಂತಿದ್ದು ರಂಗಜ್ಜಿಯ ಹೂವಿನ ಅಂಗಡಿಗೆ. ತರ ತರದ ಹೂಗಳ ಸರಿಮಾಡಿ ಇಡುತ್ತಿದ್ದ ಅವಳನ್ನು ಕಂಡು ಸುರೇಶ ಸುಮ್ಮನೇ ನಕ್ಕ. ಅಜ್ಜಿಯು ‘ ತಮ್ಮ ನಾನು ನಿನಗೆ ನಿನ್ನೆ ಹೇಳಿದ ಮಾತು ಬೇಜಾರಾಯ್ತಾ ಹೇಗೆ? ‘ಮನಸ್ನಾಗ ಇಟ್ಕೋಬೇಡ’ ‘ವ್ಯಾಪಾರ ಹಾಂಗೆ ….ಮಾತು ಬರುತ್ತದೆ….ಹೋಗುತ್ತದೆ…… ಮನಸ್ಸಿಗೆ ಹಿಡ್ಕೋಬೇಡ’. ಮಾಸ್ತಿಗುಡಿಗೆ  ಒಂದು ಮಾರು ಹೂ ಕೊಟ್ಟು ಹಂಗಾ ಸುಮ್ಮನೆ ಯಾಪಾರ ಈಗ ಸುರು ಮಾಡೀನಿ ಅಂದಳು. ಸುರೇಶ ಹೂ ಕೊಡು ಎಂದ. ನಕ್ಕು ಹಗುರಾಗಿ ನಿನ್ನ ಜೀವನದ ಕಥೆ ಹೇಗೆ ಎಂದ….ಯಾರೂ ಇಲ್ಲದ ಕಾರಣ ತನ್ನ ಬದುಕಿನ ಕಥೆ ಹೇಳಲು ಸುರು ಮಾಡಿದಳು. ನನಗ ಐದು ಮಕ್ಕಳು.  ಐದು  ಹೆಣ್ಣು ಮಕ್ಕಳು. ಐದು ಜನರನ್ನು ಒಳ್ಳೆ ಮನೆಗೆ ಮದುವೆ ಮಾಡಿಕೊಟ್ಟಿರುವೆ. ಈ ಊರಿಗೆ ಬಂದು ಮೂವತ್ತು ವರ್ಷ ಆಯ್ತು. ಇಲ್ಲಿಗೆ ಬರಲು ಕಾರಣ ಗಂಡನ ಜಗಳ , ಹಸಿವೆ, ಬದುಕಬೇಕು ಎನ್ನುವ ಚಿಕ್ಕ ಆಸೆಗೆ ಊರು ಸಾಕು ಅಂತ  ಬಿಟ್ಟು ಬೇಸರ ಆಗಿ ದೂರದ ಈ ಊರಿಗೆ ಬಂದು ಮುಟ್ಟಿದೆ. ಹಾಗೆ ಹೀಗೆ ಅಂತ ಹೊಟ್ಟೆಪಾಡಿಗೆ ಹಣ್ಣು ಹೂವನ್ನು ಮಾರುತ್ತ ಬದುಕು ಸಾಗಿಸಿದೆ. ಕೊನೆಗೆ ಈ ಹೂವಿನ ಬದುಕೇ ನಂದಾಯ್ತು. ಎಲ್ಲಿಂದಲೇ ಬರುವ ಹೂವಿಗೆ ನನ್ನ ಕೈಯಿಂದ ಇತರರ ಮನೆಗೆ ಸೇರುವ ಭಾಗ್ಯ. ಎಲ್ಲರ ಮನೆಯ ಪೂಜೆ, ಹಬ್ಬ, ಕಾರ್ಯ ಎಲ್ಲದಕ್ಕೂ ಉಪಕಾರಿ ಎನಿಸಿತು. ಆ ದೇವರು ನನ್ನ ಬದುಕಿನಾಗ  ಹೂವಿನಿಂದಲೇ ಬದುಕು ಅಂತ ಬರೆದಿದ್ದ ಕಾಣುತ್ತದೆ ಎನ್ನುತ್ತಾ ಹೂವನ್ನು ಕತ್ತರಿಸಿ ಕೈಯಲ್ಲಿಟ್ಟಳು. ಬೆಳಿಗ್ಗೆ ಎಂಟಕ್ಕೆ ಶುರುವಾದ ವ್ಯಾಪಾರ ಸಂಜೆ ಎಂಟಕ್ಕೆ ಮುಗಿತದ. ಈ ಊರಿನ ಜನ ಅನೇಕರು ನನ್ನವರು. ಯಾಕೆಂದರೆ ಅವರೆಲ್ಲಾ ನನಗೆ ಅನ್ನ ಕೊಟ್ಟರ. ಈಗ ನೀ ಏನ್ ಕೆಲಸ ಮಾಡ್ತೀಯ ಅಂತ ನನಗೆ ಗೊತ್ತಿಲ್ಲ ನೋಡು…. ಆದರೂ ನೀ ಹೇಳಿದ್ದು ಖರೆ ಅಂತ ಒಂದು ಹೂವು ಮಾರು ಕತ್ತರಿಸಿಕೊಟ್ಟೇನು. ಹಣ ಕೊಡು ಬಿಡು ಪ್ರಶ್ನೆ ಅದಲ್ಲ……ನಂಬಿಕೆ ಅಷ್ಟೇ ಮುಖ್ಯ.   ಈ ಯಾಪಾರದಾಗ ಏನು ಮಹಾ ಲಾಭ ಆಗಲ್ಲ. ಆದರೆ ನನ್ನ ಬದುಕಿದು ಎಂದವಳು ಸುರೇಶನಿಗೆ. ಅನ್ನ ಕೊಟ್ಟ ಬದುಕು ಎಂದೂ ಮೋಸ ಮಾಡಿಲ್ಲ. ನಿಯತ್ತಾಗಿ ಇರಬೇಕು ಮಾಡುವ ಕೆಲಸಕ್ಕೆ. ಅವಳ ಮಾತು ಇನ್ನು ಇದೆ ಎನಿಸಿತು. ವಯಸ್ಸು ಎಷ್ಟು ಈಗ ?ಎಂದ….. ಎಂಬತ್ತೆರಡು ಆಗಿರಬಹುದು ಎಂದಳವಳು. ಮತ್ತೆ ಕೆಲವರು ಬಂದರು ಹೂ ಕೊಳ್ಳಲು. ಸುರೇಶ ಬದಿ ಸರಿದು ನಿಂತ.

         ಇಷ್ಟು ವರ್ಷವಾದರೂ ಅವಳ ಬದುಕುವ ಉತ್ಸಾಹ ಕುಂದಿರಲಿಲ್ಲ. ಅವಳ ಬದುಕಿನ ಪಾಠಗಳು ಇನ್ನಷ್ಟು ಕೇಳಬೇಕು ಅನಿಸಿತು. ಅನುಭವ ಅನುಭವದ ಪಾಠವಾಗುತ್ತದೆ. ಬದುಕಿಗೆ ಕ್ಷಣಬಿಡದೇ ದುಡಿಯುವ ಗುಣವಿದ್ದರೆ ಯಾವ ಕೆಲಸವೂ ಬದುಕಲು ಕಲಿಸುತ್ತದೆ ಎಂದು ಜೀವಿಸುವ ಇಂಥವರ ಅನುಭವದ ಮಾತುಗಳು ಸುರೇಶನಿಗೆ ಆಪ್ತ ಎನಿಸಿತು. ಮನೆ ಎಲ್ಲಿ? ಎಂದು ಕೇಳಿದ.  ಇಲ್ಲೇ ಈ ಅಂಗಡಿಯ ಪಕ್ಕವೇ ಅಲ್ಲಿ ಕಾಣುತ್ತಿದೆಯಲ್ಲ ಅಲ್ಲೇ ಎಂದು ಕೈ ತೋರಿಸಿದಳು ರಂಗಜ್ಜಿ. ಆ ಮನೆಯ ಯಜಮಾನ ಮೂವತ್ತು ವರ್ಷಗಳಿಂದ ಅಲ್ಲಿಯೇ ಉಳಿಯಲು ನಮಗೆ ಜಾಗ ಕೊಟ್ಟಿದ್ದರು. ಅವರ ಮನೆಯವರು ಮಕ್ಕಳು ನಮ್ಮನ್ನು ಮನೆಯವರಂತೆ ನೋಡಿಕೊಂಡ್ರು ಈವರೆಗೆ. ಒಂದು  ರೂಪಾಯಿಯೂ ಬಾಡಿಗೆ ತೆಗೆದುಕೊಳ್ಳದೇ ಎಂದಳು. ಈಗ ಯಜಮಾನರಿಲ್ಲ. ಅವರ ಉಸಿರುಹೋಗೈತಿ. ಅಮ್ಮನವರು ಮಾತ್ರ ಇದ್ದಾರೆ. ಮಕ್ಕಳೆಲ್ಲ ದೂರದ ಊರಿನಾಗೆ ದೊಡ್ಡ ನೌಕರಿಯಲ್ಲಿ ಇದ್ದಾರೆ ಅಂತೆ. ನಂಗೆ ಬರುವಾಗ ಸೀರೆ ಅಂತ ತಂದು ಕೊಡುತ್ತಾರೆ ಎಂದಳು. ಅವರು ಪುಣ್ಯವಂತರು ಅವರ ಮನೆ ಕಡೆ ನೋಡಿ ಕೈಮುಗಿದು ಕುಳಿತಳು ಸುಮ್ಮನೇ. ಸುರೇಶ ಸುಮ್ಮನಾದ. ಬದುಕಿನ ಇನ್ನೊಂದು ಮುಖ ಸುರೇಶನಿಗೆ ಕಾಣಿಸಿತು. ಮಾನವೀಯತೆ ಎನ್ನುವಂಥದ್ದು ಎಷ್ಟು ದೊಡ್ಡದು ಅನಿಸಿತು. ಉಪಕಾರಿಗಳು ಅನೇಕರು ನಮ್ಮ ಎದುರಿಗಿರುತ್ತಾರೆ. ಆದರೆ ಗೊತ್ತೇ ಆಗುವುದಿಲ್ಲ ಎನ್ನುವ ಅವಳ ಮಾತು ಅವನಿಗೆ ಕೇಳಿಸಿತು. ಹಣಕ್ಕೆ ,ಆಸ್ತಿ ,ಅಂತಸ್ತಿಗೆ ಮರುಳಾಗಿ ಹತ್ತಿರದವರನ್ನು  ದೂರವಿಡುವವರ ನಡುವೆ ಅಜ್ಜಿ ಹೇಳಿದ ಅವಳ ಬದುಕಿನ ಕಥೆ ವಿಶಿಷ್ಟ ಎನಿಸುತ್ತಿತ್ತು . ಸುರೇಶ ಹೂ ಪಡೆದು ಐದು ನೂರರ ನೋಟನ್ನು ಕೈಯಲ್ಲಿ ಇಟ್ಟು ಹೊರಟ. ಆದರೆ ಅಜ್ಜಿ ಹೇಳಿದ ಕಥೆಯ ಘಟನೆಗಳು ಮನಸ್ಸು ತುಂಬಿದವು. ಬದುಕೆಂದರೆ ಆಪ್ತವಾದ ಎಲ್ಲವೂ ಎನಿಸಿದರೂ ಉಸಿರೊಂದು ಉಳಿದರೆ ಅದು ಶ್ರೇಷ್ಠ. ಉಪಕಾರಿಯಾದರೆ ಹೂವಂತ ಚಿಕ್ಕ ವಸ್ತು ಕೂಡ ದೊಡ್ಡ ಬದುಕು ಕಟ್ಟಿ ಕೊಡಬಲ್ಲದು ಬದುಕಾಗಬಲ್ಲದು ಎಂಬುದನ್ನು ಹೂವು ಹೇಳಿದಂತೆ ಅನಿಸಿತು ಸುರೇಶನಿಗೆ. ಒಂದು ಬದುಕಿನ ಅನುಭವ ಇನ್ನೊಂದು ಜೀವಿತದ ಅನುಭವದಾಚೆಗೆ ತಲೆ ಎತ್ತಿ ನಿಲ್ಲುವುದು ಬದುಕಿನ ಭರವಸೆ ಎನಿಸಿತು ಸುರೇಶನಿಗೆ……… ಮತ್ತೆ ಅಮ್ಮನ ನೆನಪು ಬಂತು……ತುಂಬಿದ ಕಣ್ಣಾಲಿಗಳ ಜೊತೆಗೆ……


10 thoughts on ““ಬದುಕೇ ಹೂವಾದಾಗ”ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ

    1. ಕಥೆ ತುಂಬಾ ಚೆನ್ನಾಗಿದೆ. ಕಥೆಯ ಪ್ರಾರಂಭದಿಂದ ಕೊನೆಯವರೆಗೂ ಓದುತ್ತಿದ್ದ ಹಾಗೆ ನನ್ನಮ್ಮನ ನೆನಪಿನಿಂದ ಕಣ್ಣಾಲಿಗಳು ತುಂಬಿ ಬಂದವು ಸರ್ . ನಿಮ್ಮ ಬರವಣಿಗೆ ಭಾವನಾ ಜೀವಿಗಳಿಗೆ ಸ್ಫೂರ್ತಿ

  1. ಕಥೆ ಮನವ ಮುಟ್ಟಿತು.ನಿನ್ನ ಬರಹ ಅನುಭವ ದೆಡೆಗೆ ಸಾಗುತಿದೆ.ಹೀಗೆಯೇ ಮುಂದುವರಿಯಲಿ.

  2. ಹೂ ಮಾರುತ, ಹೂವಂತೆ ಘಮಘಮಿಸುತ್ತ, ಜೀವನ ನಡೆಸುವ, ರಂಗಜ್ಜಿ 82ರ ಇಳಿ ಬಯಸಿನಲ್ಲೂ ದುಡಿದು ತಿನ್ನುವ ಸ್ವಾಭಿಮಾನಿ.ಕಾಯಕ ನಿಷ್ಠೆಯ ಸುರೇಶ ಮತ್ತು ರಂಗಜ್ಜಿ, ಇಬ್ಬರ ನಡುವೆ ಸಾಗುವ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಈ ಜಗತ್ತಿನಲ್ಲಿ ಪ್ರತಿಯೊಬ್ಬರದ್ದು ಒಂದೊಂದು ಕಥೆ, ಒಂದೊಂದು ಬದುಕೇ ಹೂವಾದಾಗ ಈ ಮಣ್ಣಿನ ಸೊಗಡಿನ ಕಥೆ ಓದಿ ಮುಗಿಸಿದಾಗ, ಕಣ್ಣ ಮುಂದೆ ಅನೇಕ ಚಿತ್ರಗಳು ಹಾದು ಹೋಗುತ್ತವೆ. ಕಥೆ ಅತ್ಯಂತ ಸುಂದರವಾಗಿ ಸರಳವಾಗಿ ಮೂಡಿ ಬಂದಿದೆ.ಓದುವ ಮನದ ತುಂಬ ಹೂವಿನ ಪರಿಮಳ ಬೀರುತ್ತದೆ.

    ನಾನಾ

  3. ಕಂಡ ಘಟನೆಗಳನ್ನು ಗಮನಿಸಿ ಅನುಭವದ ಮೂಸೆಯಿಂದ ಕಂಡಿರುವ ರೀತಿ ಸುಂದರ.
    ರಾಮಮೂರ್ತಿ ನಾಯಕ.

Leave a Reply

Back To Top