ಕಾವ್ಯ ಸಂಗಾತಿ
ಎಂ.ಆರ್. ಅನಸೂಯ
‘ನಿವೃತ್ತಿಯ ಸುಖ’ವಿಶೇಷ ಲೇಖನ-
ಯಾರಾದರೂ ಇಬ್ಬರು ವ್ಯಕ್ತಿಗಳು ಭೇಟಿಯಾದಾಗ ಬರುವ ಮೊದಲೇ ಮಾತೇ ಆರಾಮ್ ಇದೀರಾ ಅಥವ ಚೆನ್ನಾಗಿದೀರಾ ಅಥವಾ ಚಲೋ ಇದೀರಾ. ಆ ಸಂದರ್ಭದಲ್ಲಿ ಆವೆಲ್ಲವೂ ಸುಖದ ಸಮಾನಾರ್ಥಕ ಪದಗಳಾಗಹುದು.ಸುಖವೆನ್ನುವುದು ಎಲ್ಲರಿಗೂ ಒಂದೇ ಸಹಾ ಆಗಿರುವುದಿಲ್ಲ .
ಸುಖ ಎಂದರೆ ಏನು ? ಸುಖವೆನ್ನವುದು ಅವರವರ ಭಾವಕ್ಕೆ ತಕ್ಕಂತೆ. ಆದರೂ ಸುಖ ಎನ್ನುವುದು ವ್ಯಕ್ತಿಯೊಬ್ಬನ ಮನದ ನಿರಾತಂಕ ಹಾಗೂ ನೆಮ್ಮದಿಯ ಮನಸ್ಥಿತಿಯೆನ್ನಬಹುದು. ಇದು ಅಂತರಂಗದ ಸ್ಥಿತಿ ಏಕೆಂದರೆ ಎಷ್ಟೋ ಜನರ ಬಾಹ್ಯ ಪರಿಸ್ಥಿತಿಯು ನೋಡುವವರಿಗೆ ಚೆಂದವೇ ಕಾಣುತ್ತಿದ್ದರೂ ಸಹ ಸ್ವತಃ ಅವರಿಗೆ ಬೇಕಾದ ನೆಮ್ಮದಿಯೇ ಇಲ್ಲದೇ ಇರಬಹುದು. ” ಊಟ ತನ್ನಿಚ್ಛೆ , ನೋಟ ಪರರಿಚ್ಛೆ “ಎನ್ನುವಂತೆ ಸುಖವೂ ಕೂಡಾ ತನ್ನಿಚ್ಛೆಯೇ. ಎಲ್ಲಾರೂ ಮಾಡುವುದು ಹೊಟ್ಟೆಗಾಗಿ , ಗೇಣು ಬಟ್ಟೆಗಾಗಿ ‘ ಎಂಬಂತೆ ಇವುಗಳಿಗಾಗಿಯೇ ಪ್ರತಿದಿನ ಸೆಣಸಾಡುವ ಬಡ ಜನರೂ ಸಹ ಸುಖವಾಗಿರುತ್ತಾರೆಂದರೆ ಅದಕ್ಕೆ ಕಾರಣ ಅವರ ಮನಸ್ಥಿತಿ. ಹಲವರು ತಮಗಿಷ್ಟದ ಪ್ರವಾಸದಲ್ಲಿ ಸುಖ ಕಂಡರೆ ,ಕೆಲವರು ಉತ್ತಮ ಸಾಹಿತ್ಯದ ಓದುವಿಕೆಯಲ್ಲಿ ಸುಖ ಅನುಭವಿಸಿದರೆ, ಮತ್ತೊಬ್ಬರು ತಮ್ಮ ಪ್ರೀತಿಯ ಕಾಯಕದಲ್ಲಿ ತೊಡಗಿಸಿಕೊಳ್ಳುವುದೇ ಸುಖವೆಂದರೆ ಮಗದೊಬ್ಬರು ಸದಾ ಸುಂದರವಾದ ಪ್ರಕೃತಿಯೊಡನೆ ಜೀವನ ಮಾಡುವುದೇ ಸುಖ ಎನ್ನುತ್ತಾರೆ. ಹೀಗಾಗಿ ಸುಖವೆನ್ನುವುದು ಅವರವರ ಅಭಿರುಚಿಗೆ ಸಂಬಂಧಿಸಿದ್ದು. ಇದು ಎರವಲು ಪಡೆಯುವಂಥದ್ದಲ್ಲ. ತಾವೇ ಪಡೆಯುವಂತದ್ದು.
ಇನ್ನೂ ನಿವೃತ್ತಿಯ ಸುಖಕ್ಕೆ ಬರುವುದಾದರೆ ಪ್ರತಿಯೊಬ್ಬರೂ ತಮ್ಮ ಜೀವನಕ್ಕಾಗಿ ಒಂದಲ್ಲ ಒಂದು ಉದ್ಯೋಗವನ್ನು ನೆಚ್ಚಿ ಕೊಂಡಿರುತ್ತಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಕೆಲವು ಜವಾಬ್ದಾರಿಗಳಿರುತ್ತವೆ. ಅವುಗಳನ್ನು ನಿಭಾಯಿಸಲು ಮನದ ಉತ್ಸಾಹದ ಜೊತೆಯಲ್ಲಿ ತನುವಿನ ಕಸುವು ಅಗತ್ಯ. ನಮಗೆ ವಯಸ್ಸಾದಂತೆ ಮನದಲ್ಲಿ ಉತ್ಸಾಹವಿದ್ದರೂ ದೇಹಶಕ್ತಿಯಲ್ಲಿ ಚೈತನ್ಯ ಕುಗ್ಗುತ್ತಿರುತ್ತದೆ. ವೃದ್ಧಾಪ್ಯವೆನ್ನುವುದು ಪ್ರಕೃತಿ ಧರ್ಮ ಆದರೆ ನಮ್ಮ ಮನದ ಚಿರ ಯೌವ್ವನ ನಮ್ಮ ಮನೋಧರ್ಮ. ವೃದ್ಧಾಪ್ಯವು ವಿಶ್ರಾಂತಿಯನ್ನು ಕೇಳುತ್ತದೆ. ಆಗ ನಮ್ಮ ವೃತ್ತಿಗೆ ನ್ಯಾಯ ಕೊಡಲು ಸಾಧ್ಯವಾಗುವುದಿಲ್ಲ. ನಾವೆಲ್ಲರೂ ನಮ್ಮ ವೃತ್ತಿಯಿಂದ ಮುಕ್ತಿಯನ್ನು ಹೊಂದುವುದೇ ನಿವೃತ್ತಿ.
ನಿವೃತ್ತಿಯಾದ ಹೊಸದರಲ್ಲಿ ಎಲ್ಲರಿಂದಲೂ ಕೇಳಿ ಬರುವಂಥ ಸಾಮಾನ್ಯ ಪ್ರಶ್ನೆಯೆಂದರೆ “ನಿಮಗೀಗ ಮನೆಯಲ್ಲೇ ಕುಳಿತು ಬೇಸರ ಆಗುತ್ತಾ. ಸಮಯವನ್ನು ಹೇಗೆ ಕರೆಯುತ್ತೀರಾ ?” ಅದು ಸಹಜವೇ ಆಗಿರಬಹುದಾದರೂ ನಿವೃತ್ತಿಯೂ ಸಹಾ ಜೀವನಕ್ಕೆ ಆಗತ್ಯವಾದ ಒಂದು ಘಟ್ಟ ಎಂಬುದನ್ನು ಅರಿತರೆ ಒಳಿತು. ವೃತ್ತಿಯಲ್ಲಿದ್ದಾಗ ಸಿಗುವ ಮಾನ್ಯತೆಯೂ ಇಲ್ಲವಾಗ ಬಹುದು. ಇದಕ್ಕಾಗಿ ನಾವು ನಿವೃತ್ತಿಯ ಅಂಚಿನಲ್ಲಿರುವಾಗಲೇ ಮಾನಸಿಕವಾಗಿ ಸಿದ್ಧರಾಗಿರಲೇಬೇಕು. ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಿರುವಂತೆ ಸಿದ್ದತೆ ಮಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವೆಂಬುದನ್ನು ಮರೆಯಲಾಗದು. ಸಕಾರಾತ್ಮಕ ಚಿಂತನೆಗಳೊಂದಿಗೆ ನಮಗಿಷ್ಟವಾದ ಹವ್ಯಾಸಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಆಗ ಸಮಯದ ಸದುಪಯೋಗವೂ ಆಗಿ ಜೀವನ ಪ್ರೀತಿಯು ಬತ್ತದೇ ಉಳಿಯುತ್ತದೆ .
ನಾವು ವೃತ್ತಿ ಜೀವನದಲ್ಲಿರುವಾಗ ನಮ್ಮ ದಿನಚರಿಗೆ ಒಂದು ಚೌಕಟ್ಟು ಹಾಕಿಕೊಂಡಿರುತ್ತೇವೆ. ನಮ್ಮ ಜೀವನಶೈಲಿಯು ಸಹ ನಮ್ಮ ವೃತ್ತಿಗೆ ತಕ್ಕಂತೆ ಹೊಂದಿಕೊಂಡು ಬಿಟ್ಟಿರುತ್ತದೆ. ನಮ್ಮ ಕಾರ್ಯಕ್ರಮ, ಪ್ರವಾಸ ಹಾಗೂ ರಜೆಗಳು ಎಲ್ಲವೂ ನಮ್ಮದೇ ಆದ ವೃತ್ತಿಯ ಮೇಲೆ ಅವಲಂಬಿತವಾಗಿರುತ್ತವೆ. ಇನ್ನೂ ವೃತ್ತಿ ಜೀವನದ ಕಡಿವಾಣಗಳಂತೂ ಇದ್ದೇ ಇರುತ್ತವೆ. ಹೀಗಿರತಕ್ಕ ವೃತ್ತಿಯಿಂದ ನಿವೃತ್ತಿ ಹೊಂದಿದಾಗ ನಮ್ಮ ದಿನಚರಿಯ ಮೇಲೆ ಹಿಡಿತವನ್ನು ಹೊಂದಿದ್ದಂಥ ವೃತ್ತಿಯ ನಿರ್ದಿಷ್ಟವಾದ ಚೌಕಟ್ಟು ಇಲ್ಲವಾಗಿಬಿಡುತ್ತದೆ. ನಿವೃತ್ತಿಯ ಆರಂಭದ ದಿನಗಳಲ್ಲಿ ಮುಕ್ತ ಸ್ವಾತಂತ್ರ್ಯವನ್ನು ಅನುಭವಿಸುವಾಗ ಏನೋ ಒಂದು ರೀತಿಯ ಬಿಡುಗಡೆಯ ಭಾವವು ನಮ್ಮನ್ನಾವರಿಸುತ್ತದೆ .
ನಿವೃತ್ತಿಯಾದಾಗ ನಮ್ಮಲ್ಲಿನ ಪ್ರವೃತ್ತಿಗಳನ್ನು ಜಾಗೃತಗೊಳಿಸಿ ಅವುಗಳನ್ನೇ ನಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳಬೇಕು. ಆಗ ಮೊದಲಿನಂತೇ ನಮ್ಮ ಜೀವನದಲ್ಲಿ ಒಂದು ರೀತಿಯ ಶಿಸ್ತು ಜಾರಿಯಾಗತೊಡಗುತ್ತದೆ. ಏಕೆಂದರೆ ನಮ್ಮ ಪ್ರವೃತ್ತಿಗಳನ್ನು ನಾವು ಇಷ್ಟಪಟ್ಟು ಮಾಡುತ್ತೇವೇ ಹೊರತು ಕಷ್ಟಪಟ್ಟಂತೂ ಅಲ್ಲವೇ ಅಲ್ಲ. ಅದೇ ಪ್ರವೃತ್ತಿಯ ತಾಕತ್ತು. ಇದು ನಮಗಾಗಿ ನಮ್ಮ ಬದುಕಿನಲ್ಲಿ ನಾವೇ ಉಳಿಸಿಕೊಂಡಿರುವ ಸಮಯ. ವಿಶ್ರಾಂತ ಜೀವನದಲ್ಲಿ ಬಿಡುವಿದೆಯೆಂದು ಆಲಸಿಯಾದಲ್ಲಿ ನಮ್ಮ ದೇಹವು ಸುಖದ ವ್ಯಾಧಿಗಳ ಆಶ್ರಯತಾಣವಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ವಯಸ್ಸಾದಂತೆ ನಮ್ಮಲ್ಲಿ ರೋಗ ನಿರೋಧಕ ಸಾಮರ್ಥ್ಯ ಕುಗ್ಗುತ್ತಾ ಹೋಗುತ್ತದೆ. ಆಗ ನಮಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ನಮ್ಮ ಆರೋಗ್ಯದ ರಕ್ಷಣೆ ಮಾಡಿಕೊಳ್ಳಲು ಅಗತ್ಯವಾದ ನಡಿಗೆ, ಹಿತಮಿತವಾದ ವ್ಯಾಯಾಮಗಳ ಜೊತೆಗೆ ಉತ್ತಮ ಸಾಹಿತ್ಯದ ಓದು, ಆಪ್ತರ ಒಡನಾಟ ಹಾಗೂ ತನುವಿನೊಂದಿಗೆ ಮಾಗಿದ ನಮ್ಮ ಮನದ ನಡೆನುಡಿಗಳೊಂದಿಗೆ ಜೀವನ ಪ್ರೀತಿಯ ಒರತೆ ಚಿಮ್ಮುವಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಏಕೆಂದರೆ ನಮ್ಮ ತನುಮನಗಳೆರಡೂ ನಮ್ಮ ಉಸಿರಿರುವ ತನಕ ನಮ್ಮೊಂದಿಗೆ ಇರುತ್ತವೆ.
ನಮ್ಮೊಡನಿರುವ ನಮ್ಮ ಕುಟುಂಬ ಸದಸ್ಯರುಗಳ ಬದುಕಿನ ಹೊಣೆಗಳ ಅರಿವು ನಮಗಿರಬೇಕು. ಅದಕ್ಕಾಗಿ ನಾವು ನಮ್ಮ ಕೈಗಳನ್ನು ಜೋಡಿಸಬೇಕು. ನಮ್ಮ ಮಕ್ಕಳು ನಮ್ಮಿಂದಲೇ ಬಂದವರಾದರೂ ಸಹ ನಮಗಾಗಿ ಅಲ್ಲ ಎನ್ನುವ ಶ್ರೇಷ್ಠ ಕವಿ ಖಲೀಲ್ ಗಿಬ್ರಾನ್ ಮಾತುಗಳು ಇಲ್ಲಿ ಸ್ಮರಣಾರ್ಹ. ನಾವು ಯಾರಿಂದಲೂ ಏನನ್ನೂ ಹೆಚ್ಚು ನಿರೀಕ್ಷಿಸಬಾರದು. ನಮ್ಮ ಬದುಕಿನ ಬಂಧನಗಳ ವ್ಯಾಮೋಹದಿಂದ ದೂರ ಸರಿಯಲು ಆದಷ್ಟೂ ನಿರ್ಲಿಪ್ತರಾಗಲು ಪ್ರಯತ್ನಿಸಬೇಕು. ನಾವು ಹಿರಿಯ ಸದಸ್ಯರಾಗಿ ಉದಾರತೆಯಿಂದ ನಡೆದುಕೊಳ್ಳಬೇಕೇ ಹೊರತು ಸಣ್ಣತನವನ್ನು ತೋರಬಾರದು. ಗೌರವ ಎನ್ನುವುದು ತಾನಾಗೆ ಬರುವಂಥದ್ದೇ ಹೊರತು ಬಲವಂತದಿಂದ ಪಡೆಯತಕ್ಕದ್ದಲ್ಲ ಆಗ ನಮ್ಮ ಬದುಕಿನೊಂದಿಗೆ ನಮ್ಮ ಕುಟುಂಬ ಸದಸ್ಯರುಗಳ ಬದುಕು ಸಹಾ ಸಹನೀಯವಾಗುತ್ತದೆ. ಆಗ ಮಾತ್ರವೇ ನಮ್ಮ ನಿವೃತ್ತಿಯ ಸುಖದಲ್ಲಿ ಸಾರ್ಥಕತೆಯಿರುತ್ತದೆ .
.—————————————-
ಎಂ.ಆರ್. ಅನಸೂಯ