ಕಾವ್ಯ ಸಂಗಾತಿ
ವೀಣಾ ಹೇಮಂತ್ ಗೌಡ
ಸಮಾಜ ‘ಸೇವೆ’ ಅಲ್ಲ…
ಸಾಮಾಜಿಕ ‘ಜವಾಬ್ದಾರಿ’ ಯ ನಿರ್ವಹಣೆ
ನಿಮಗೆಲ್ಲಾ ನೆನಪಿರಬಹುದು… ಕರೋನಾದ ಸಂಕಷ್ಟ ಕಾಲದಲ್ಲಿ ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ವೃದ್ದರು, ಬಡವರು, ನಿರ್ಗತಿಕರು, ಭಿಕ್ಷುಕರು ಒಂದು ಹೊತ್ತಿನ ಕೂಳಿಗೆ ಒದ್ದಾಡಿದರು. ಈಗಾಗಲೇ ಮನೆಯಲ್ಲಿ ತಂದಿಟ್ಟ ದಿನಸಿ ಪದಾರ್ಥ ಖಾಲಿಯಾದ ಮೇಲೆ ಮುಂದಿನ ಬದುಕು ಹೇಗಪ್ಪ ಎಂಬ ಸಂಕಷ್ಟ ಬಹುತೇಕ ಜನರನ್ನು ಆವರಿಸಿತು. ಈ ಸಮಯದಲ್ಲಿ ಕೆಲ ಸಾರ್ವಜನಿಕರ, ಸಂಘ ಸಂಸ್ಥೆಗಳ, ವಿವಿಧ ಪಕ್ಷಗಳ ಜನರು ಸ್ವಯಂ ಪ್ರೇರಿತರಾಗಿ ದಿನಸಿ ಸಾಮಾನುಗಳ ಕಿಟ್ಗಳನ್ನು ಮನೆ ಮನೆಗೆ ತಲುಪಿಸಿದರು. ಇನ್ನು ಕೆಲವೆಡೆ ತಾವು ತಾವೇ ಸೇರಿಕೊಂಡು ಅಡುಗೆ ಮಾಡಿ ಅವಶ್ಯಕತೆಯುಳ್ಳ ಜನರ ಮನೆಗಳಿಗೆ ಪಾರ್ಸಲ್ ಕಳುಹಿಸಿದರು. ಮತ್ತೆ ಕೆಲವು ಜನ ಯಾವುದೇ ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ಜನರಿಗೆ ಒಪ್ಪತ್ತಿನ ಊಟಕ್ಕೆ ಕೊರತೆಯಾಗದಂತೆ ಸಹಾಯ ಮಾಡಿದರು.
ಕೆಲವರಂತೂ ಮನುಷ್ಯರೂಪಿ ದೇವತೆಗಳಾದರು. ಜನರ ಹಸಿವು ಸಂಕಟಗಳನ್ನು ನೋಡಲಾರದೆ ತಮ್ಮ ಆಸ್ತಿಯ ಒಂದಷ್ಟು ಭಾಗವನ್ನು ಮಾರಿ ಅದರಿಂದ ಅನ್ನದಾಸೋಹ ನಡೆಸಿದವರು ಮತ್ತೆ ಕೆಲವರು. ಆದರೆ ಇವರಾರು ತಮ್ಮ ಕೆಲಸಗಳನ್ನು ಸಮಾಜ ಸೇವೆ ಎಂದು ಹೇಳಿಕೊಳ್ಳಲಿಲ್ಲ…. ಬದಲಾಗಿ ಸಾಮಾಜಿಕ ಜವಾಬ್ದಾರಿ ಎಂಬಂತೆ ಕಾರ್ಯನಿರ್ವಹಿಸಿದರು. ಮಾಧ್ಯಮಗಳು, ವಿವಿಧ ಟಿವಿ ಚಾನೆಲ್ಗಳು ಇದನ್ನು ಹೈಲೈಟ್ ಮಾಡಲು ಕಾರಣ ಮತ್ತಷ್ಟು ಜನರು ಇದರಿಂದ ಪ್ರೇರಿತರಾಗಿ ತಾವು ಕೂಡ ತಮ್ಮ ಅಲ್ಪ ಕಾಣಿಕೆಯನ್ನು ಸಮಾಜದ ಒಳಿತಿಗೆ ಬಳಸಲಿ ಎಂದು.
ಆ ಸಮಯದಲ್ಲಿ ಬಹಳಷ್ಟು ಜನ ಎಲೆ ಮರೆಯ ಕಾಯಿಗಳಂತೆ ತಮ್ಮ ಸೇವೆಯನ್ನು ಮುಂದುವರಿಸಿದರು. ಕೆಲವರಂತೂ ಮಾಧ್ಯಮಗಳ ಮುಂದೆ ಬರಲು ಒಪ್ಪಲೇ ಇಲ್ಲ. ಕಾರಣ ಬಹಳ ಸ್ಪಷ್ಟವಾಗಿತ್ತು…. ದೇವರು ತಮಗೆ ನೀಡಿದ್ದರಲ್ಲಿ ತಾವು ಸಮಾಜಕ್ಕೆ ಅಳಿಲು ಕಾಣಿಕೆ ಸಲ್ಲಿಸಿರುವುದಾಗಿ ಬಹುತೇಕ ಜನರು ಹೇಳಿದರು.ಸತ್ತಾಗ ತಾವೇನು ಹೊತ್ತುಕೊಂಡು ಹೋಗುವುದಿಲ್ಲ. ಬದುಕಿ ಉಳಿದರೆ ಮುಂದೆ ಹೇಗೋ ದುಡಿದು ಜೀವನ ಸಾಗಿಸಬಹುದು. ಕರೋನಾದ ಈ ಸಂಕಷ್ಟ ಸಮಯದಲ್ಲಿ ಯಾರ ಬದುಕು ಹೇಗೆ ಎಂಬುದು ಅನಿಶ್ಚಿತ. ಆದ್ದರಿಂದ ತಮಗೆ ಇರುವುದರಲ್ಲಿ ಜನರಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಆಹಾರವನ್ನು ಪಡೆಯಲು ವಿನಿಯೋಗಿಸುವುದು ತಮ್ಮ ಸಾಮಾಜಿಕ ಜವಾಬ್ದಾರಿ ಎಂಬುದು ಅವರ ಅಂಬೋಣವಾಗಿತ್ತು.
ಹಾಗೆಂದು ಅವರಲ್ಲಿ ಬಹಳಷ್ಟು ಜನ ಶ್ರೀಮಂತರಾಗಿರಲಿಲ್ಲ. ದುಡಿದು ತಿನ್ನುವವರಲ್ಲಿಯೇ ಇದ್ದುದರಲ್ಲಿ ತುಸು ಅನುಕೂಲಸ್ಥರಾಗಿದ್ದರು. ಆದರೂ ನಾಳೆ ಹೇಗಪ್ಪಾ ಎಂಬ ಚಿಂತೆ ಮಾಡದೆ ಜನರ ನೋವಿಗೆ ಮುಲಾಮು ಸವರಿದರು.
ಇದು ಕೆಲ ಜನರದ್ದಾದರೆ ಸಾಮಾಜಿಕವಾಗಿ ಅತ್ಯಂತ ಕೆಳ ಸ್ಥರದಲ್ಲಿರುವ ಮತ್ತೆ ಕೆಲ ಜನರು
ಆಸ್ಪತ್ರೆಯಲ್ಲಿ ಸತ್ತ ಕರೋನ ರೋಗಿಗಳನ್ನು ಹೂಳಲು ಸ್ಮಶಾನದಲ್ಲಿ ನೆಲವನ್ನು ಅಗೆಯುವ, ಸುಡಲು ಬೇಕಾಗುವ ಕಟ್ಟಿಗೆಗಳನ್ನು ಸಂಗ್ರಹಿಸಿ ಒಡೆದು ಸೇರಿಸುವ, ಪಿಪಿಇ ಕಿಟ್ ಧರಿಸಿ ಅಂತಹ ರೋಗಿಗಳ ಶವಗಳನ್ನು ಸೂಕ್ತವಾಗಿ ಅವರವರ ಧಾರ್ಮಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸುವ ಕಾಯಕದಲ್ಲಿ ತೊಡಗಿಕೊಂಡರು. ಸೋಂಕಿನ ಭೀತಿ ಇದ್ದರೂ ಕೂಡ ತಮ್ಮ ಬದುಕನ್ನು ಪಣವಾಗಿಟ್ಟು ಈ ಕೆಲಸಗಳನ್ನು ನಿರ್ವಹಿಸಿದರು. ಮತ್ತೆ ಕೆಲ ಚಾಲಕ ವೃತ್ತಿಯಲ್ಲಿರುವವರು ಹಗಲಿರುಳೆಲ್ಲದೆ ಕೊರೊನಾ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಲು, ಅಕಸ್ಮಾತ್ ಮರಣ ಹೊಂದಿದರೆ ಶವ ಸಂಸ್ಕಾರಕ್ಕೆ ಅನುಕೂಲವಾಗುವಂತೆ ಕುಟುಂಬದವರಿಗೆ ಸಹಾಯ ಹಸ್ತ ನೀಡಿದರು. ಬೆರಳೆಣಿಕೆಯ ಕೆಲವೇ ಜನರನ್ನು ಹೊರತುಪಡಿಸಿದರೆ ಇನ್ನುಳಿದವರಿಗೆ ಆ ಸಮಯದಲ್ಲಿ ದುಡ್ಡು ಮುಖ್ಯವಾಗಿರದೇ, ಮಾನವೀಯತೆ ಮುಖ್ಯವಾಗಿತ್ತು.
ಈ ವಿಷಯವನ್ನು ಈಗ ನೆನಪು ಮಾಡಿಕೊಳ್ಳಲು ಕಾರಣ… ತಾವು ಕೊಟ್ಟ ಟ್ಯೂಬ್ ಲೈಟ್ನ ಬೆಳಕು ಬೀಳದಂತೆ ಅದರ ತುಂಬಾ ತಮ್ಮ ಹೆಸರು ಬರೆದುಕೊಳ್ಳುವ ಭಕ್ತರು, ವಿವಿಧ ರೀತಿಯಲ್ಲಿ ದಾನ ಮಾಡಿದ ಜನರ ಹೆಸರುಗಳು ಆಯಾ ವಸ್ತುಗಳ ಮೇಲೆ ಇರುತ್ತವೆ. ಮತ್ತೆ ಕೆಲವೊಮ್ಮೆ ತಾವು ಕೊಟ್ಟಿರುವ ದಾನದ ಕುರಿತಾಗಿ ಯಾವುದೇ ರೀತಿ ಜನರಿಗೆ ಮಾಹಿತಿ ನೀಡದೆ, ಪತ್ರಿಕೆಗಳಲ್ಲಿ ಪ್ರಕಟಣೆ ಕೊಡದೆ ಇರುವುದರ ಕುರಿತು ತಾವು ದಾನ ನೀಡಿದ ಸಂಸ್ಥೆಗಳೊಂದಿಗೆ ಜಗಳವಾಡಿಕೊಂಡವರು ಇದ್ದಾರೆ, ಮುನಿಸಿಕೊಂಡವರು ಇರುತ್ತಾರೆ. ಸಾಮಾಜಿಕವಾಗಿ ಬೆಳಕಿಗೆ ಬರಬೇಕು ಎಂಬ ಅವರ ಅನಿಸಿಕೆ ತಪ್ಪಲ್ಲವಾದರೂ…. ಸರಿಯೂ ಅಲ್ಲ.
ಇಡೀ ಜಗತ್ತನ್ನು ಪಾಲಿಸುವ, ಬೆಳಕನ್ನು ಕೊಡುವ ಸಮಸ್ತ ಜೀವ ರಾಶಿಗಳನ್ನು ಕಾಯುವ ಸೂರ್ಯ, ನಾವು ಉಸಿರಾಡುವ ಗಾಳಿ ಕುಡಿಯುವ ನೀರು, ಅನ್ನ ನೀಡುವ ರೈತ ಇವರ್ಯಾರು ತಂತಮ್ಮ ತಮಟೆಯನ್ನು ಬಾರಿಸಿ ತಾವು ಜಗದ್ರಕ್ಷಕರು ಎಂದು ಹೇಳಿಕೊಳ್ಳುವುದಿಲ್ಲ ಅಷ್ಟೇ. ಹಲವಾರು ರೀತಿಯ ಹೊಗಳಿಕೆ ತೆಗಳಿಕೆಗಳು ನಮ್ಮಿಂದ ಅವರಿಗೆ ಉಂಟಾದರೂ ಚಕಾರ ಎತ್ತದೆ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.
ಹೀಗೆ ಉಚಿತವಾಗಿ ಗಾಳಿ, ಬೆಳಕು, ನೀರು, ಆಹಾರಗಳನ್ನು ಪಡೆಯುವ ನಾವು ಅವರಿಗೆ ಕೃತಜ್ಞರಾಗಿರಬೇಕಲ್ಲವೇ?
ಹಾಗಾದರೆ ನಾವೇನು ಮಾಡಬೇಕು??
ತಾಯಿ ತನ್ನ ಮಕ್ಕಳಿಗೆ ಉಣಿಸುವಾಗ ತೋರುವ ವಾತ್ಸಲ್ಯದಂತೆ, ತಂದೆ ತನ್ನ ಮಕ್ಕಳನ್ನು ಬೆಳೆಸುವಾಗ ತೋ ರುವ ಶಿಸ್ತಿನಂತೆ, ಗುರು ತನ್ನ ಶಿಷ್ಯರಿಗೆ ಕಲಿಸುವ ಜೀವನದ ಪಾಠದಂತೆ ನಾವು ಕೂಡ ನಮ್ಮ ಸಾಮಾಜಿಕ ಸೇವೆಗಳನ್ನು ಸೇವೆ ಎಂದು ಪರಿಗಣಿಸದೆ ಈ ಬದುಕನ್ನು ನಡೆಸಲು ಅನುವು ಮಾಡಿಕೊಟ್ಟಿರುವ ಸಮಾಜಕ್ಕೆ ಸ್ಪಂದಿಸುವ, ನೆರವಾಗುವ ಮತ್ತು ಆ ಮೂಲಕ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವ ಕಾರ್ಯ ನಮ್ಮಿಂದ ಆಗಬೇಕಿದೆ.
ಇಲ್ಲಿ ಕೊಟ್ಟವರಿಗೆ ಕೊಟ್ಟೆನೆಂಬ ಹಮ್ಮು
ಇರದ, ಪಡೆದುಕೊಂಡವರಿಗೆ ಸಂಕೋಚದ ದೈನ್ಯತೆಯ, ಅಳುಕಿರದ ಸ್ವಸ್ಥ ಸಮಾಜದ ನಿರ್ಮಾಣ ಆಗಬೇಕಿದೆ.
ಸಮಾಜ ಸೇವಕರೆಂಬ ಹೆಸರಿನಲ್ಲಿ ಪ್ರಚಾರ ಗಿಟ್ಟಿಸುವ, ಪ್ರಶಸ್ತಿ ಪುರಸ್ಕಾರಗಳಿಗೆ ದುಂಬಾಲು ಬೀಳುವ ಜನರು ಮಹಾಭಾರತದ ಕರ್ಣನನ್ನು, ಬಸವಣ್ಣನವರ ಕಾಲದ ದಾಸೋಹ ಪದ್ಧತಿಯನ್ನು ಒಮ್ಮೆ ನೆನೆಸಿಕೊಳ್ಳಬೇಕು.
ಇಡೀ ಜಗತ್ತಿನ ಯಾವುದೇ ಭಾಗದಲ್ಲಿ ನೋಡಿದರೂ ಆ ಸಾಮಾಜಿಕ ವ್ಯವಸ್ಥೆ ಹೇಳುವುದು ಇಷ್ಟೇ… ತನ್ನ ದುಡಿಮೆಯ ಒಂದು ಪಾಲನ್ನು ತನ್ನ ಕುಟುಂಬಕ್ಕಾಗಿಯೂ ಮತ್ತೊಂದು ಪಾಲನ್ನು ತನ್ನ ಭವಿಷ್ಯಕ್ಕಾಗಿಯೂ ಅಂದರೆ ತನ್ನ ಮಕ್ಕಳನ್ನು ಬೆಳೆಸಲು, ಒಂದು ಪಾಲನ್ನು ಸಮಾಜದ ಒಳಿತಿಗಾಗಿಯೂ ವಿನಿಯೋಗಿಸುವಂತೆ ಎಲ್ಲಾ ನಾಗರಿಕತೆಗಳು ಹೇಳುತ್ತಾ ಬಂದಿದೆ… ಬಸವಣ್ಣನವರ ಕಾಲದಲ್ಲಂತೂ ನನ್ನ ಮನೆಗೆ ಕಳ್ಳತನ ಮಾಡಲು ಕಳ್ಳ ಬಂದರೆ ಆತನಿಗೆ ಬೇಕಾದುದನ್ನು ಕೊಂಡೊಯ್ಯಲು ಕೇಳಿಕೊಂಡ ಉದಾಹರಣೆಗಳಿವೆ. ಕೇಳುವವರಿಲ್ಲದೆ ಬಡವಾದೆನಯ್ಯ ಎಂಬಂತಹ ಮುತ್ತಿನಂತ ಮಾತುಗಳಿವೆ.
ಆದ್ದರಿಂದ ಸ್ನೇಹಿತರೆ, ನಮಗೆ ಇದ್ದಾಗ ನಮಗೆ ಬೇಕಷ್ಟನ್ನು ಉಳಿಸಿಕೊಂಡು, ನಿಜವಾಗಿಯೂ ಅವಶ್ಯಕತೆ ಇರುವ ಜನರಿಗೆ ಸಹಾಯ ಮಾಡುವ ಸಾಮಾಜಿಕ ಸೇವೆಯನ್ನು!! ಅಲ್ಲಲ್ಲ…. ಸಾಮಾಜಿಕ ಜವಾಬ್ದಾರಿಯನ್ನು ನಾವೆಲ್ಲರೂ ಸಮರ್ಥವಾಗಿ ನಿರ್ವಹಿಸೋಣ. ಆ ಮೂಲಕ ಸ್ವಸ್ಥ ಸಮಾಜದ ನಾಗರಿಕರಾಗಿ ಬಾಳೋಣ ಎಂಬ ಆಶಯದೊಂದಿಗೆ
ವೀಣಾ ಹೇಮಂತ್ ಗೌಡ ಪಾಟೀಲ್