ಡಾ ಅನ್ನಪೂರ್ಣ ಹಿರೇಮಠ ಕವಿತೆ- ಬಿಸಿಲು

ಕೆಂಡದಂತಿದೆ ಈ ಬಿಸಿಲು
ಸುಡುತಿದೆ ನೋಡಿ ಹಗಲು
ಕಣ್ಣು ತೆರೆಯಲಾಗದು
ಹೋರಗೆ ಹೋಗಲಾಗದು
ನೋಡಲಾಗಲು ಮುಗಿಲು
ಜೀವಜಗವೆಲ್ಲಾ ಆಗಿದೆ ದಿಗಿಲು//

ಉರಿಯ ಜಳ ಬಡಿದಂತೆ
ಬೆಂಕಿ ಮೈಗೆ ತಾಗಿದಂತೆ
ನೀರೊಳಗಿನ ಮೀನು
ಹೊರಬಂದರೆ ಒದ್ದಾಡುವಂತೆ
ಬೇಗೆ ತಾಳಲಾರದೇ ವಿಲ ವಿಲ
ದಗೆ ಜಗವ ಬಿಡದೆ ಸುಟ್ಟಂತೆ //

ಕಾಡು ಮೇಡು ಕಂಗಾಲಾಗಿ
ಮರಗಿಡಗಳು ಬಾಡಿ ಬಳಲಿ
ಹಳ್ಳ ಕೊಳ್ಳ ಒಣಗಿ ಸೊರಗಿ
ಮರುಗುತಿದೆ ಈ ಧರೆ
ಒಡಲು ಸುಟ್ಟಂತೆ ಸುರೆ
ಮಡಿಲ ಹೊತ್ತಿಸುತ
ಕರಕಲಾಗಿಸುತಿದೆ ಎಲ್ಲಾ//

ಇದು ಯಾರ ಹುಚ್ಚುತನಕೆ ಸಾಕ್ಷಿ
ನೊಂದಿದೆ ಸಮ್ಮುಷ್ಠಿ ಈ ಸೃಷ್ಟಿ
ಮನುಜನಟ್ಟಹಾಸ ಮಿತಿಮೀರಿ
ನೆಮ್ಮದಿ ಶಾಂತಿ ತೂರಿ
ಅಂಧಕಾರ ಮೇರೆ ಮಿರಿ
ನೇಮ ನಿಷ್ಠೆ ನಿಯಮ ಜಾರಿ
ಆಗುತಿದೆ ಅಲ್ಲೊಲ ಕಲ್ಲೊಲ
ಎಲ್ಲ ಕೋಲಾಹಲ //

ಮರಗಳ ಮಾರಣಹೋಮ
ನೆಲ ಬಗೆದು ಅಗೆಅಗೆದು
ಸಿಕ್ಕಿದ್ದನ್ನೆಲ್ಲ ತೆಗೆ ತೆಗೆದು
ಬಡಿವಾರ ಬರೀ ಮೆರೆವ ತವಕದೇ
ಬರಿದು ಭುವಿ ಒಡಲು ಉಕ್ಕಿ ಕಡಲು
ಜೀವ ಜಗತ್ತಿಗೆ ಭಯ ಆತಂಕ
ಇಲ್ಲ ಯಾವುದಕ್ಕೂ ನಿರಾಂತಕ//

One thought on “ಡಾ ಅನ್ನಪೂರ್ಣ ಹಿರೇಮಠ ಕವಿತೆ- ಬಿಸಿಲು

  1. ಬಿಸಿಲ ಬೇಗೆಯನ್ನು ವರ್ಣಿಸಿ ರಚಿಸಿದ ಉತ್ತಮ ಕವನ

Leave a Reply

Back To Top