ಕಥಾಗುಚ್ಛ

ಹಬ್ಬ ಪ್ರೀತಿಯನ್ನು ಹಬ್ಬಿದರೆ

ಸುಮಂಗಳ ಮೂರ್ತಿ

ಬಾನುಮತಿ ಈ ಸಾರಿ ವಿಜಯದಶಮಿಯನ್ನು ವಿಶೇಷವಾಗಿ ಆಚರಿಸಬೇಕು, ಅದು ನಮ್ಮ ಕುಟುಂಬದವರಿಗೆ ಮತ್ತು ಬಂದ ಬಂಧು ಬಳಗದವರಿಗೆ ಖುಷಿ ಕೊಡುವ ಹಾಗೆ ಇರಬೇಕು,ಎಂದು ಯೋಚಿಸುತ್ತಿದ್ದ ಅವಳು,ಖರ್ಚಿನ ಬಗ್ಗೆಯೂ ನಿಗಾವಹಿಸಬೇಕಿತ್ತು. ಅವಳು ಒಂದು ಮಧ್ಯಮವರ್ಗದ ಕುಟುಂಬಸ್ಥೆ ಎನ್ನುವುದು ಮರಿಯೋ ಆಗಿಲ್ಲ .

         ಬಾನುಮತಿಗೆ ಮದುವೆಯಾದ ನಂತರದ ಮೊದಲನೇ ವಿಜಯದಶಮಿ, ಹಾಗಾಗಿ ಗಂಡನ ಮನೆಯ ಪದ್ಧತಿಗಳು ಅವಳಿಗೆ ಅಷ್ಟಾಗಿ ಏನು ತಿಳಿದಿರಲಿಲ್ಲ. ಆ ಕಾರಣದಿಂದ ಅವಳ ಅತ್ತೆಯ ಸಲಹೆ ಕೇಳಿ ಅವರ ಸಲಹೆಗಳನ್ನು ಪಾಲಿಸಿದರೆ ಮತ್ತಷ್ಟು ಚಂದ ಎಂದು ಯೋಚಿಸುತ್ತಾ,ಸಂಜೆಯ ಕಾಫಿ ತಯಾರಿಸಿ, ಯಾವುದೋ ನ್ಯೂಸ್ ಚಾನಲ್ ನೋಡುತ್ತಿದ್ದ ಮಾವನವರಿಗೆ,ಮೊಬೈಲ್ ನೋಡುತ್ತಿದ್ದ ಗಂಡನಿಗೆ,ಪೂಜೆಗೆಂದು ಹೂ ಕಟ್ಟುತಿದ್ದ ಅತ್ತೆಯವರಿಗೆ ಕೊಟ್ಟು,ತಾನು ಕುಡಿಯುತ್ತಾ ಅತ್ತೆಯ ಬಳಿ ಕೂತಳು.

          ಬಾನುಮತಿಯ ಕೆಲಸದ ವೈಖರಿ,ಅವಳ ಅತ್ತೆಗೆ ಬಹಳ ಇಷ್ಟವಾಗಿತ್ತು.ಬಾನುಮತಿ ಮನೆಗೆ ಬಂದ ಸ್ವಲ್ಪ ದಿನಗಳಲ್ಲಿಯೇ ಮನೆಯವರನ್ನೆಲ್ಲ ಬಹಳ ಚೆನ್ನಾಗಿ ಅರ್ಥಮಾಡಿಕೊಂಡು,ಹೊಂದಿಕೊಂಡಿದ್ದಳು. ಸಮಯ ಸಿಕ್ಕಾಗೆಲ್ಲ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಅವಳಿಗೆ, ಪುಸ್ತಕಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವಳು ಮೊದಲಿನಿಂದಲೂ ಯಾರಿಗಾದರೂ ಉಡುಗೊರೆ ಕೊಡಬೇಕಾದರೆ ಪುಸ್ತಕವನ್ನೇ ಕೊಡುವುದು ಅವಳ ರೂಢಿಯಾಗಿತ್ತು.ಈ ಬಾರಿ ಹಬ್ಬಕ್ಕೆ ತಾಂಬೂಲದೊಂದಿಗೆ ಪುಸ್ತಕಗಳನ್ನ ಕೊಡಬೇಕು,ಆದರೆ ಅತ್ತೆಯವರು ಏನೇಳುತ್ತಾರೋ ಎಂಬ ಯೋಚನೆಯಿಂದ,ಈ ಕುರಿತು ಅತ್ತೆಯ ಜೊತೆ ಮಾತನಾಡಬೇಕೆಂದು ಅವಳ ಮನಸ್ಸಿನಲ್ಲೇ ಆಲೋಚಿಸುತ್ತಿರುತ್ತಾಳೆ.ಅಷ್ಟರಲ್ಲಿಯೇ, ಬಾನು ನಿನ್ನ ತವರಲ್ಲಿ ವಿಜಯದಶಮಿ ಹಬ್ಬವನ್ನ ಹೇಗೆ ಆಚರಿಸುತ್ತಿದ್ದರು? ಎಂದ ಅತ್ತೆಯ ಪ್ರಶ್ನೆಗೆ ಬಾನುಮತಿ,ಹೀಗೆ ಇಲ್ಲಿಯ ರೀತಿಯೇ ಅತ್ತೆ ಶರನ್ನವರಾತ್ರಾರಂಭ ದಿಂದ ವಿಜಯದಶಮಿಯ ವರೆಗೆ ಒಂದೊಂದು ಶಕ್ತಿ ದೇವತೆಯ ಆರಾಧನೆ,ಮುತ್ತೈದೆಯರಿಗೆ ಕುಂಕುಮ ಪ್ರಸಾದ ಕೊಡುವುದು, ನಾನು ಪ್ರತೀ ಬಾರಿ ಕುಂಕುಮದೊಂದಿಗೆ ಕನ್ನಡ ಪುಸ್ತಕಗಳನ್ನು ಕೊಡುತ್ತಿದ್ದೆ.ಅತ್ತೆ ನೀವು ಒಪ್ಪುವುದಾದರೆ ಪುಸ್ತಕಕೊಡುವ ನನ್ನ ಅಭ್ಯಾಸವನ್ನ ಮುಂದುವರಿಸಲೇ ?ಎಂದ ಬಾನುಮತಿಯ ಮಾತಿಗೆ ಖಂಡಿತ ಬಾನು ಇದು ತುಂಬ ಒಳ್ಳೆಯ ಅಭ್ಯಾಸ ಮುಂದುವರೆಸು ಎನ್ನುತ್ತಾ ಮುಗುಳ್ನಗೆ ಬೀರಿದರು.

          ಅತ್ತೆಯ ಸಮ್ಮತಿಗೆ ಖುಷಿಯಾದ ಬಾನುಮತಿ,ಮನದಲ್ಲೇ ಅತ್ತೆಯೂ ಅಮ್ಮನಂತೆಯೇ ನೋಡು ಇದಕ್ಕೆ ಹೇಳುವುದು, “ಪ್ರೀತಿ ಹಂಚಬೇಕು ಯಾವುದೇ ನಿರೀಕ್ಷೆ ಇಲ್ಲದೆ,ಆಗ ಹಂಚಿದಕ್ಕಿಂತ ಹೆಚ್ಚಿನ ಪ್ರೀತಿಯೇ ದಕ್ಕುತದೆ ” ನನ್ನ ಈ ಹೊಸ ಬದುಕಿನಲ್ಲೂ ಅಮ್ಮ ಜೊತೆಗಿದ್ದಾಳೆ,ಹೀಗೆ ಮನಸ್ಸಿನಲ್ಲೇ ಖುಷಿಪಡುತ್ತಿದ್ದ ಬಾನುಮತಿಯ ಅರಳಿದ ಮುಖ  ಹೊಳೆಯುವ ಚಂದ್ರನೂ ನಾಚುವಂತೆ ಕಂಗೊಳಿಸುತ್ತಿತ್ತು.

             ಬಾಂಧವ್ಯ ಅಂದರೆ ಇದೇ ಅಲ್ಲವೇ,ಪರಸ್ಪರ ಹೊಂದಾಣಿಕೆ. ಬಾನುಮತಿಯ ಉತ್ತಮ ನಡುವಳಿಕೆ ಕನ್ನಡ ಸಾಹಿತ್ಯ ಓದುವುದರಿಂದ ಬಂದಿದೆ ಎಂದರೆ ತಪ್ಪಾಗಲಾರದು.

          ಸಾಮಾನ್ಯವಾಗಿ ಒಂದಿಬ್ಬರು ಮೂರು ಹೆಂಗಸರು ಮಾತನಾಡಲು ಶುರುಮಾಡಿದ್ರೆ,ಇಡೀ ಒಂದು ಬಡಾವಣೆಯ ವಿಚಾರಗಳು ಬಿತ್ತರಿಕೆಯಾಗುವುದನ್ನ ಕಾಣಬಹುದು,ಅದರಲ್ಲಿ ಬೇರೊಬ್ಬರ ಕಾಲೆಳೆಯೊ ವಿಷಯಗಳೇ ಹೆಚ್ಚಾನ್ಹೆಚ್ಚು.ಇಂತಹ ಮಾತುಗಳಿಗೆ ಅವಕಾಶ ನೀಡದಂತ ಸ್ವಭಾವದವಳು ಬಾನುಮತಿ.ಹಬ್ಬ ಪ್ರೀತಿಯನ್ನ ಹಬ್ಬಿಸಬೇಕು,ಮನಗಳನ್ನ ತಣಿಸಬೇಕು,ಎನ್ನುವುದಷ್ಟೆ ಇವಳ ಹರಿಕೆ.

       ಓ…ಹಬ್ಬದ ತಯಾರಿಯಲ್ಲಿ  ಮಗ್ನಳಾದ ಬಾನು,ಎಲ್ಲವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದಾಳೆ,ಆದರೆ ಚಾಪೆ ಇದ್ದಷ್ಟು ಕಾಲುಚಾಚು ಎಂಬ ಗಾದೆ ಮಾತಿಗೆ ವಿರುದ್ಧವೇನೂ ಅಲ್ಲ. ಮತ್ತು ಅತ್ತೆ ಸೊಸೆ ಇಬ್ಬರು ಹಬ್ಬಕ್ಕೆ ದೂರದ ಬಂಧು ಮಿತ್ರರನ್ನ,ಫೋನ್ ಮೂಲಕ ಕರೆಯುತ್ತಾರೆ,ಮನೆಯ ಅಕ್ಕಪಕ್ಕದವರನ್ನೆಲ್ಲ ಖುದ್ದಾಗಿ ಹೋಗಿ ಕರೆಯುತ್ತಾರೆ.ಇವರ ಪ್ರೀತಿಯ ಕರೆಗೆ ಯಾರು ಬಾರದೆ ಉಳಿಯಲಿಲ್ಲ.

          ಬಾನುಮತಿಯ ಮನೆ ಸಂಮೀಪಿಸುತ್ತಿದ್ದಂತೆ, ಅವಳ ಮನೆಯಂಗಳದ ಪುಟ್ಟ ಹಣತೆಗಳ ಬೆಳಗು ನಕ್ಷತ್ರಗಳ ಮಿಂಚಿನಂತೆ ಜಗಮಗಿಸುತ್ತಿರುವುದು ಕಣ್ಣಿಗೆ ದೇವಾಲಯದಂತೆ ಕಾಣುತ್ತದೆ.ಹಾಗೇ ಮನೆಯಂಗಳದ ಹೂವುಗಳರಳಿದ ಹಸಿರು ಕಾಶಿಗೆ ಇಬ್ಬನಿ ಮುತ್ತಿಕ್ಕಿದೆ, ಹಣತೆಗಳ ಬೆಳಗಿಗೆ,ಹೊಂಬಣ್ಣದ ಹನಿಗಳು ಪನ್ನೀರಿನಂತೆ ಜಿನುಗಿ ಮೈಮನ ಪುಳಕಗೊಂಡಂತೆ ಭಾಸವಾಯ್ತು.

          ಬಂದವರನ್ನ ಪ್ರೀತಿಯಿಂದ ಮಾತನಾಡಿಸಿ,  ‘ಬನ್ನಿ’ ಬೆಳಕಾಗಲಿ,ಪ್ರೀತಿ ಬದುಕಾಗಲಿ. ಎಂದು ನುಡಿಯುತ್ತಾ ,ಕುಂಕುಮ ಹಚ್ಚಿ, ಪ್ರಸಾದದ ಜೊತೆ ಕನ್ನಡ ಪುಸ್ತಕ ಕೊಟ್ಟು,ಬಿಡುವಿನ ಸಮಯದಲ್ಲಿ ಓದಿ ಎಂದು ಅಕ್ಕರೆ ಹರಿಸಿದ ಬಾನುಮತಿಯ ಮಾತು,ಮತ್ತಷ್ಟು ಹಿತವೆಸಿತ್ತು.

    ====================================

ಪರಿಚಯ:

Spoken English faculty ಆಗಿ 12 ವರ್ಷಗಳಿಂದ ಕೆಲಸಮಾಡುತ್ತಿದ್ದಾರೆ.ಬಾಲ್ಯದಿಂದಲೇ ಕನ್ನಡ ಸಾಹಿತ್ಯವನ್ನ ಬರೆಯುವ ಮತ್ತು ಓದುವುದು ಹವ್ಯಾಸ. ಕಥೆ, ಕವಿತೆ,ಗಜಲ್,ವಚನ,ಲೇಖನ ಬರಹಗಳನ್ನು ಬರೆಯುತ್ತಿರುತ್ತಾರೆ.2013 ರಲ್ಲಿ Kannada to English dictionary ಬರೆದಿರುವ ಇವರ ಕವನ ಸಂಕಲನ “ಖಾಲಿಹಾಳೆ”ಬಿಡುಗಡೆಗೆ ಸಿದ್ಧವಾಗಿದೆ

Leave a Reply

Back To Top