ಮಿನುಗುವ ನಕ್ಷತ್ರ
ಚೈತ್ರ ಶಿವಯೋಗಿಮಠ
ಅಗೋ….
ಅಲ್ಲಿ ಮಿನುಗುವ ನಕ್ಷತ್ರ
ನೀನೇ ಇರಬಹುದು ಅಪ್ಪ!
ಪ್ರತಿ ಇರುಳು ಕಾಯುವೆ
ನಿನ್ನ ಬಾಂದಳದಲಿ ಕಾಣಲು!
ಮಿಣುಗುವ ಚುಕ್ಕಿ ಸ್ಮೃತಿ
ಪಟಲವ ಕೆಣಕುವುದು!
ನೀ ನನ್ನ ಆಡಿಸಿದ್ದು,
ಟುವ್ವಿ ಟುವ್ವಿ ಎಂದು ಹಾಡಿದ್ದು
ಕಣ್ಮರೆಯಾಗಿ ಕಾಡಿದ್ದು
ಮುಂಜಾನೆಯ ವಿಹಾರಕ್ಕೆ ಹೋಗಿದ್ದು
ಸದ್ದು ಮಾಡುತ್ತಾ ಕಾಫಿ ಹೀರಿದ್ದು
ಎಲ್ಲವೂ ಕಾಡುವುದು ಅಪ್ಪ!
ಈ ನಕ್ಷತ್ರದಂತೆಯೇ ನೀನು
ಕತ್ತಲು ಕವಿದಾಗ ದಾರಿ ತೋರುವೆ
ಈ ಚುಕ್ಕಿಯಂತೆಯೇ ಆದೆ ನೀನು
ಹಗಲೆಂಬ ಸಂತಸದಲಿ ಮಾಯವಾದೆ
ಆದರೆ ಇರುಳೆಂಬ ಸಂಕಟದಲಿ ಆಸರೆಯಾಗುವೆ!
ಹಗಲಲಿ ಮಾಯವಾದಂತೆನಿಸಿದರೂ
ನೀ ಇಲ್ಲೇ ಇರುವೆ
ಕಣ್ಣಿಗೆ ಮಾತ್ರ ಕಾಣಲಾರೆ!
ನಿನ್ನಿರುವ ನಾ ಮಾತ್ರ ಗ್ರಹಿಸುವೆ!
ಅಪ್ಪ, ಈ ನಕ್ಷತ್ರದಂತೆಯೇ
ಸದಾ ಸಂತಸ ಕೊಡುವವ ನೀ!!
===================================
ಪರಿಚಯ:
ಮೂಲತಃ ಬಿಜಾಪುರ, ಬೆಂಗಳೂರಿನ ನಿವಾಸಿ.Mtech ಪದವಿಯನ್ನು VTU ವಿಶ್ವವಿದ್ಯಾಲಯದಿಂದ ಪಡೆದು, ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಕವಯಿತ್ರಿ.. ಕಾರ್ಯಕ್ರಮ ನಿರೂಪಣೆ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವರು. ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಕಾವ್ಯ ಪರೀಕ್ಷೆಯಲ್ಲಿ ಉತ್ತೀರ್ಣ. ಮುದ್ದೇಬಿಹಾಳ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಹಾಗೂ ಇನ್ನಿತರ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿರುವರು. ಅವಧಿ – ಡಿಜಿಟಲ್ ಮ್ಯಾಗಝಿನ್, ಸುಗಮ – ಬ್ಲಾಗ್ಸ್ಪಾಟ್, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಪ್ರಜಾಪ್ರಗತಿ, ವಾರ್ತಾಭಾರತಿ, ಕರ್ಮವೀರ ಹಾಗೂ ಜನತಾವಾಣಿ ಪತ್ರಿಕೆಗಳಲ್ಲಿ ಕವನಗಳು ಪ್ರಕಟವಾಗಿವೆ.
ಚೆನ್ನಾಗಿದೆ