ಹೆಣ್ಣು ಮಕ್ಕಳ ಪಾಲಿನ ಶಾಶ್ವತ ಬೆಳಕು ಡಾ ಭೀಮರಾವ್ ಅಂಬೇಡ್ಕರ್.ಸಿದ್ಧಾರ್ಥ ಟಿ ಮಿತ್ರಾ

ಭಕ್ತಿ ಚಳುವಳಿಯ ಕಾಲದಿಂದಲೂ ಮಹಿಳೆ ಧಾರ್ಮಿಕ ಸಮಾನತೆ ಕೇಳಲು ಶಕ್ತಳಾಗಿದ್ದಳೇ ಹೊರತು ಸಾಮಾಜಿಕ ಸ್ಥಾನಮಾನಗಳಲ್ಲಿ ಯಾವ ಬದಲಾವಣೆಯೂ ಸಾಧ್ಯವಾಗಿರಲಿಲ್ಲ. ಬ್ರಿಟಿಷರ ಆಗಮನವಾದ ನಂತರ ಸಮಾಜ ಸುಧಾರಕರು ಸ್ತ್ರೀ ಶೋಷಣೆಯ ವಿರುದ್ಧ ಜನಜಾಗೃತಿಗೆ ಶ್ರಮಿಸಿದರು. 1848ರಲ್ಲಿ ಮಹಾತ್ಮ ಜ್ಯೋತಿಬಾ ಫುಲೆಯವರು ವಿದ್ಯೆಯಿಂದ ವಂಚಿತರಾಗಿದ್ದ ಅಸ್ಪಶ್ಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಶಾಲೆ ಶುರು ಮಾಡಿದರು. ಬಾಲ್ಯವಿವಾಹ, ವಿಧವಾ ಪದ್ಧತಿ,ಸತಿ ಪದ್ಧತಿ, ಶಿಕ್ಷಣ ಹಕ್ಕು ನಿರಾಕರಣೆ,ಆಸ್ತಿ ಹಕ್ಕು ನಿರಾಕರಣೆಯಂತಹ ವಿಷಯಗಳನ್ನು ಸಮಾಜ ಸುಧಾರಕರು ಪರಿಗಣಿಸಿದರು. ಆದರೆ ಮಹಿಳಾ ಶೋಷಣೆಯ ವಿವಿಧ ಮಗ್ಗುಲುಗಳ ಬಗ್ಗೆ ಆಳವಾಗಿ ಚಿಂತಿಸಿ, ಧಾರ್ಮಿಕ-ಸಾಮಾಜಿಕ-ರಾಜಕೀಯ ಹಕ್ಕುಗಳನ್ನು ಸಂವಿಧಾನದತ್ತವಾಗಿ ನೀಡಲು ಶ್ರಮಿಸಿದ ಮೊದಲ ವ್ಯಕ್ತಿ  ಅಂದರೆ ಅದು ಡಾ.ಬೀಮರಾವ ಅಂಬೇಡ್ಕರ್. ‘ಯಾವುದೇ ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಪರಿಗಣಿಸಬೇಕು ಎಂದು ಮಹಿಳೆಯರ ಸ್ಥಿತಿಗತಿಯನ್ನು ಸಮಾಜದ ಏಳ್ಗೆಯ ಸೂಚ್ಯಂಕವಾಗಿ ಪರಿಗಣಿಸಿದ ಅಂಬೇಡ್ಕರ್  ಅವರು ಭಾರತದಲ್ಲಿ ಮಾನವ ಹಕ್ಕು ಹಾಗೂ ಮಹಿಳಾ ಹಕ್ಕು ಹೋರಾಟಗಳಿಗೆ ಕಾನೂನಿನ ಚೌಕಟ್ಟು ರೂಪಿಸಿಕೊಟ್ಟ  ಮೊದಲ ನಾಯಕರಾಗಿದ್ದಾರೆ.

‘ಹೆಣ್ಣು ಹಿಂದೂ ಸಮಾಜದ ಅತ್ಯಂತ ಶೋಷಿತಳು. ದಲಿತರು ಮತ್ತು ಮಹಿಳೆಯರ ಸ್ಥಿತಿಗತಿ ಒಂದೇ. ಭಾರತೀಯ ಸಮಾಜ ಒಂದು ಕೈಯಲ್ಲಿ ಅವಳನ್ನು ಪೂಜಿಸುತ್ತ, ಮತ್ತೊಂದು ಕೈಯಲ್ಲಿ ಬೆತ್ತಲೆ ಮಾಡಿ ದೇವರ ಹೆಸರಲ್ಲಿ ಮೆರವಣಿಗೆ ಮಾಡುತ್ತಾ ಮತ್ತೊಂದು ಕಡೆ ಬೆತ್ತ ಹಿಡಿದು ಲಕ್ಷ್ಮಣ ರೇಖೆಯನ್ನು  ದಾಟದಂತೆ ನಿರ್ಬಂಧ ವಿಧಿಸಿದೆ ಎಂಬುದನ್ನು ಅಂಬೇಡ್ಕರ್ ಅರಿತಿದ್ದರು. ವಿದೇಶೀ ವಿದ್ಯಾಭ್ಯಾಸ, ಅದರಲ್ಲೂ ಜರ್ಮನಿಯ ಬಾನ್‌ನಲ್ಲಿ ಕಳೆದ ದಿನಗಳು ಪಾಶ್ಚಾತ್ಯ ಸ್ತ್ರೀವಾದಿ ಚಿಂತನೆಗೆ ಅವರನ್ನು ಹತ್ತಿರ ತಂದವು. ಮೊದಲ ಅಲೆಯ ಮಹಿಳಾ ಚಳುವಳಿಯ ಪ್ರತಿಫಲವಾಗಿ 1918ರ ಹೊತ್ತಿಗೆ ಬ್ರಿಟನ್ ಹಾಗೂ 1920ರ ವೇಳೆಗೆ ಅಮೆರಿಕದೆಲ್ಲಡೆ ಮಹಿಳೆಯರಿಗೆ ಮತದಾನದ ಹಕ್ಕು ಕೊಡಲಾಯಿತು. ಸಮಾನ ವೇತನ, ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕು ಮೊದಲಾದವು ಅಲ್ಲಿ ಬಹುಚರ್ಚಿತ ವಿಷಯಗಳಾಗಿದ್ದವು. ಸಹಜವಾಗಿಯೇ ಮುಕ್ತ ಚಿಂತನೆಯ ಅಂಬೇಡ್ಕರರನ್ನು ಮಹಿಳಾಪರ ಚಿಂತನೆಗಳು ಸೆಳೆದವು. ರಾಜಕೀಯ ಅಧಿಕಾರ ಸಿಗದೇ ಯಾವುದೂ ಬದಲಾಗುವುದು  ಅದು ಅಷ್ಟು ಸುಲಭವಲ್ಲ ಎಂಬುದನ್ನು ಅವರು ಗುರುತಿಸಿದರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದುವಾಗ ತಮ್ಮ ಗೆಳೆಯನಿಗೆ ಬರೆದ ಪತ್ರವೊಂದರಲ್ಲಿ ಹಿಂದುಳಿದ ವರ್ಗಗಳ ವಿದ್ಯಾಭ್ಯಾಸ, ಅದರಲ್ಲೂ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಬಹುಮುಖ್ಯವೆಂದು, ‘ಸದ್ಯದಲ್ಲಿಯೇ ಒಳ್ಳೆಯ ದಿನಗಳನ್ನು ಕಾಣುತ್ತೇವೆ. ಆದರೆ ಅದಕ್ಕಾಗಿ ಪುರುಷರ ಜೊತೆಗೆ ಮಹಿಳೆಯರೂ ಒಟ್ಟೊಟ್ಟಿಗೆ ಶಿಕ್ಷಣ ಪಡೆಯುವುದು ಅತಿ ಅವಶ್ಯವಿದೆ ಎಂದೂ ಹೇಳಿದ್ದರು.

ಅವರು ಹೊರ ತರುತ್ತಿದ್ದ ‘ಮೂಕನಾಯಕ ಹಾಗೂ ‘ಬಹಿಷ್ಕೃತ ಭಾರತ’ ಪತ್ರಿಕೆಗಳಲ್ಲಿ ಮಹಿಳಾ ಸಮಸ್ಯೆ ಮುಖ್ಯವಾಗಿ ಚರ್ಚಿತವಾಗುತ್ತಿತ್ತು. ಮಹಾಡ್ ಸತ್ಯಾಗ್ರಹ ಮೆರವಣಿಗೆಯಲ್ಲಿ ಅಂದಿನ ಕಾಲಕ್ಕೆ 500 ಸ್ತ್ರೀಯರು ಪಾಲ್ಗೊಂಡಿದ್ದರು. ಕಾಳಾರಾಮ್ ದೇವಾಲಯ ಪ್ರವೇಶ ಸಂದರ್ಭದಲ್ಲಿ ಕೂಡಾ ಮಹಿಳೆಯರಿದ್ದರು 1927ರಲ್ಲಿ ಡಿಪ್ರೆಸ್ಡ್ ಕ್ಲಾಸ್ ವೂಮೆನ್ಸ್ ಅಸೋಸಿಯೇಷನ್ ಶುರುವಾಯಿತು. ಅದರ ಸಮಾವೇಶದಲ್ಲಿ 3000 ಹಿಂದುಳಿದ ಮಹಿಳೆಯರನ್ನುದ್ದೇಶಿಸಿ ಮಾತನಾಡುತ್ತಾ, ‘ನಿಮ್ಮ ಬಟ್ಟೆ ತೇಪೆಯಿಂದ ಕೂಡಿದ್ದರೇನಾಯಿತು? ಸ್ವಚ್ಛವಾಗಿರಿ. ನಿಮ್ಮನ್ನು ನೀವೇ ಮುಟ್ಟಿಸಿಕೊಳ್ಳದವರೆಂದು ಭಾವಿಸಬೇಡಿ. ನಿಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ. ಮಕ್ಕಳ ಮನಸ್ಸಿನ ಕೀಳರಿಮೆ ತೆಗೆದು ಅವರಲ್ಲಿ ಆತ್ಮಗೌರವ ತುಂಬಿ. ಮಹಾನ್ ವ್ಯಕ್ತಿಗಳಾಗಲು ಹುಟ್ಟಿದ್ದಾರೆಂದು ಅವರನ್ನು ನಂಬಿಸಿ ಮನವರಿಕೆ ಮಾಡಿ ಎಂದು ಕಿವಿಮಾತು ಹೇಳಿದ್ದರು. ಅಂಬೇಡ್ಕರರ ತಾತ್ವಿಕ ಬೆಂಬಲ ಹಾಗೂ ಸಂಘಟನೆಗಳ ಬಲದೊಂದಿಗೆ ಮಹಿಳಾ ಜಾಗೃತಿಯ ಹೊಸ ಅಧ್ಯಾಯವೇ ಶುರುವಾಯಿತು. 1928ರಲ್ಲಿ ಹಿಂದುಳಿದ ಮಹಿಳೆಯರ ಸಂಘಟನೆ ಆರಂಭವಾಯಿತು. ಅನೇಕ ಕಡೆಗಳಲ್ಲಿ ದಲಿತ ಮಹಿಳಾ ಸಮಾವೇಶಗಳು ಜರುಗಿದವು. ತುಳಸೀಬಾಯಿ ಬಣಸೋಡೆ ಅವರ ‘ಚೊಕ್ಕಮೇಲ’ ಎಂಬ ಪತ್ರಿಕೆ ಶುರುಮಾಡಿದರು. ಮಹಿಳಾ ಹಾಸ್ಟೆಲ್ಲುಗಳು, ಶಾಲೆಗಳನ್ನು ತೆರೆಯಲಾಯಿತು. ಹೆಣ್ಣುಮಕ್ಕಳು ಆತ್ಮಕತೆ, ನಾಟಕಗಳನ್ನು ಬರೆದರು. ಧರ್ಮಪ್ರಸಾರಕರಾದರು. 1931ರಲ್ಲಿ ರಾಧಾಬಾಯಿ ವಢಾಳೆ ಎಂಬಾಕೆ,ಮಹಿಳೇ ‘ಹಿಂದೂ ದೇವಸ್ಥಾನ ಪ್ರವೇಶಿಸಲು ಹಾಗೂ ಕುಡಿಯುವ ನೀರಿಗಾಗಿ ಸಾರ್ವಜನಿಕ ಜಲಮೂಲಗಳಿಗೆ ಹೋಗಲು ನಮಗೆ ಹಕ್ಕು ಬೇಕು. ಅಷ್ಟೇ ಅಲ್ಲ ವೈಸರಾಯ್ ಅವರೇ, ಸಾಮಾಜಿಕ ಹಕ್ಕುಗಳ ಜೊತೆ ನಮಗೆ ರಾಜಕೀಯ ಹಕ್ಕುಗಳೂ ಬೇಕು. ಕಠಿಣ ಶಿಕ್ಷೆಗೆಲ್ಲ ನಾವು ಹೆದರುವವರಲ್ಲ. ದೇಶದ ಎಲ್ಲ ಜೈಲುಗಳನ್ನೂ ಬೇಕಾದರೆ ತುಂಬಲು ಸಿದ್ಧರಿದ್ದೇವೆ. ಅವಮಾನಕರವಾಗಿ ಬದುಕುವುದಕ್ಕಿಂತ ನೂರು ಸಲವಾದರೂ ಹೋರಾಡಿ ಸಾಯಲು ನಾವು ಸಿದ್ಧರಿದ್ದೇವೆ ಎಂದು ಹೇಳಿದಳು.
ಮಹಿಳೆಯರು ಎದುರಿಸುವ ಜೈವಿಕ, ದೈಹಿಕ ಕಷ್ಟಗಳ ಕುರಿತು; ನಿಭಾಯಿಸಬೇಕಾದ ವಿಶೇಷ ಜವಾಬ್ದಾರಿಯ ಕುರಿತು ಅಂಬೇಡ್ಕರ್ ಮಾತನಾಡಿದರು. 1938ರಷ್ಟು ಹಿಂದೆಯೇ ಕುಟುಂಬ ಯೋಜನಾ ವಿಧಾನವನ್ನು ಸರ್ಕಾರ ಜನಪ್ರಿಯಗೊಳಿಸಬೇಕೆಂದು ಮುಂಬಯಿಯ ಶಾಸನಸಭೆಯಲ್ಲಿ ವಾದಿಸಿದರು ಒತ್ತಾಯಿಸಿದರು. ಹೆತ್ತುಹೆತ್ತು ಮಕ್ಕಳನ್ನು ಸಾಕುವುದರಲ್ಲೇ ಹೆಣ್ಣುಮಕ್ಕಳು ಹೈರಾಣಾಗುತ್ತಿದ್ದಾರೆಂದೂ, ಅವರ ಶಕ್ತಿ ಸಾಮರ್ಥ್ಯವನ್ನು ಸಮಾಜ ಉಪಯೋಗಿಸಿ ಕೊಳ್ಳಬೇಕೆಂದರೆ ಕುಟುಂಬ ಕಲ್ಯಾಣ ಯೋಜನೆ ಅವಶ್ಯವೆಂದೂ ಪ್ರತಿಪಾದಿಸಿದರು. 1942ರಲ್ಲಿ ದೆಹಲಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಹೆರಿಗೆ ಭತ್ಯೆ ನೀಡುವ ಬಗ್ಗೆ ಪ್ರಸ್ತಾಪಿಸಿದರು. ವೇತನ ಸಹಿತ ಹೆರಿಗೆ ಭತ್ಯೆ ರಜೆ ನೀಡುವುದು ಸರ್ಕಾರಕ್ಕೆ ಆರ್ಥಿಕ ಹೊರೆಯೆನಿಸಿದರೂ ಸಹ ಮನುಷ್ಯ ಸಮಾಜದ ನಾಳಿನ ಸಂತತಿಯನ್ನು ಹೆತ್ತು ಸಾಕುವ ಹೆಣ್ಣುಮಕ್ಕಳನ್ನು ಅಷ್ಟಾದರೂ ಗೌರವಿಸುವುದು, ಬೇಡವೆ ಅವರಿಗೆ ಅವಶ್ಯವಿರುವಷ್ಟು ವಿರಾಮ ನೀಡುವುದು ಉಳಿದ ಸಮಾಜದ ಕರ್ತವ್ಯ ಎಂದೂ, ಅದಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕೆಂದೂ ಸೂಚಿಸಿದರು.
ರಾಷ್ಟ್ರದ ಪ್ರಗತಿಗಾಗಿ ಅನೇಕ ಜನರು ಶ್ರಮಿಸಿದ್ದಾರೆ . ಭಾರತವು ಉಜ್ವಲವಾಗಿ ಬಾಳಿ ಬೆಳಗಲು ಭವ್ಯವಾದ ಭವಿಷ್ಯದತ್ತ ಹೆಜ್ಜೆಯನ್ನಿಡಲು ಅನೇಕ ಮಹನೀಯರ  ಕೈಗಳು ದುಡಿದಿವೆ ಆ ಪೈಕಿ.ಈ ರಾಷ್ಟ್ರ ನಿರ್ಮಾತೃಗಳಲ್ಲಿ ನಾನು ಡಾ ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಬಹಳವಾಗಿ ಮೆಚ್ಚುತ್ತೇನೆ ಅರಾಧಿಸುತ್ತೆನೆ.
 1950 ಜನವರಿ 26 ರಂದು ನಮ್ಮ ದೇಶಕ್ಕೆ ಸಂವಿಧಾನ ಜಾರಿಗೆ ಬಂದಾಗಿನಿಂದ ಇವತ್ತಿನ ವರೆಗೂ ಹೆಣ್ಣಿನ ಮೇಲೆ ದೌರ್ಜನ್ಯಗಳು ಕಡಿಮೆ ಆಗಿಲ್ಲ .ಶೊಷಣೆಗಳನ್ನು ಕಡಿಮೆ ಮಾಡಲು ಸಂವಿಧಾನದಲ್ಲಿ ಮಹಿಳೆಯರಿಗೆ  ಸಮಾನವಾಗಿ ಬದುಕಲು ಶಿಕ್ಷಣ ಪಡೆಯಲು ಅವಕಾಶ ಒದಗಿಸಿದವರು.      ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸಲು ಸಂಸತ್‌ನಲ್ಲಿ ಮಂಡಿಸಿದ್ದ ಹಿಂದೂ ಕೋಡ್ ಬಿಲ್‌ನ ಅನೇಕ ಅಂಶಗಳು ಇಂದು ಕಾಯ್ದೆಗಳಾಗಿ ಮಾರ್ಪಾಡಾಗಿರುವುದರಿಂದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಪುರುಷರಂತೆ ಸಾಧನೆ ಮಾಡಲು ಸಾಧ್ಯವಾಗಿದೆ.  
ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ದೊರೆಯಬೇಕು ಎಂಬ ಅಂಶವೂ ಸೇರಿದಂತೆ ಹಲವು ಮಹಿಳಾ ಪರ ಧೋರಣೆಗಳನ್ನು ಒಳಗೊಂಡಿದ್ದ ಹಿಂದೂ  ಕೋಡ್‌ ಬಿಲ್‌ ಪಟ್ಟಭದ್ರ ಹಿತಾಸಕ್ತಿಗಳಿಂದ ಬೆಂಬಲ ದೊರೆಯದೆ ಸದನದಲ್ಲಿ ಬಿದ್ದು ಹೋಗಿದ್ದರಿಂದ ಅಂಬೇಡ್ಕರ್‌ ಆವರು ಕಾನೂನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆದರೆ ಆ ಮಸೂದೆ ಇದುವರೆಗೂ ಸಂಸತ್ತಿನ ಅನುಮೋದನೆ ಪಡೆಯಲು ಸಾಧ್ಯವಾಗಿಲ್ಲವೆಂಬುದೇ ವಿಷಾದದ ಸಂಗತಿಯಾಗಿದೆ.
ಮಹಿಳೆಯರಿಗೆ ಇಂದು ಸಾಕಷ್ಟು ಹಕ್ಕುಗಳಿವೆ.ಆಯೋಗವಿದೆ, ದೌರ್ಜನ್ಯ ತಡೆಗೆ ರಕ್ಷಣೆ ಇದೆ, ಆಸ್ತಿಯಲ್ಲಿ ಪಾಲೂ ಇದೆ. ಆಶ್ಚರ್ಯವೆಂದರೆ ಇದನ್ನೆಲ್ಲ ಭಾರತೀಯ ಮಹಿಳೆಯರಿಗೆ ನೀಡಿದ್ದು? ಅದು ಬಾಬಾಸಾಹೇಬ್ ಅಂಬೇಡ್ಕರರಲ್ಲದೆ ಮತ್ಯಾರು ಅಲ್ಲ ನಮಗೆ ಇದು ಹೆಮ್ಮೆಯ ಸಂಗತಿಯಾಗಿದೆ. ಈ ದಿಸೆಯಲ್ಲಿ ಈ ದೇಶದ ಪ್ರಥಮ ಕಾನೂನು ಸಚಿವರಾಗಿ ಮಹಿಳೆಯರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಅಂಬೇಡ್ಕರ್ ಅಂದು ರೂಪಿಸಿದ ಮಸೂದೆ ಬಗ್ಗೆ ತಿಳಿಯುವುದಾದರೆ, ಅಂಬೇಡ್ಕರ ಅವರು ರಚಿಸಿದ ‘ಹಿಂದೂ ಕೋಡ್ ಬಿಲ್” ಮುಖ್ಯವಾಗಿ ದಲಿತ ಮಹಿಳೆಯರಿಗೆ  ಇರದೆ ಇಡಿ ಸ್ತ್ರೀ ಕುಲದ ಒಳಿತಿಗೆ ಪ್ರಗತಿಗೆ ಪೂರಕವಾಗಿತ್ತು.
 ಸಮುದಾಯವೊಂದರ ಬೆಳವಣಿಗೆಯನ್ನು  ಮಹಿಳೆಯರ ಸಾಧನೆ  ಪ್ರಗತಿ ಮೇಲೆ ಅಳೆಯಲಾಗುತ್ತದೆ
ಸ್ವಾತಂತ್ರ, ಸಮಾನತೆ, ಭಾತೃತ್ವವನ್ನು ಸಾರುವ ಧರ್ಮವನ್ನು ನಾವು  ಅನುಸರಿಸಬೇಕು ಎಲ್ಲಿಯವರೆಗೆ ಮಹಿಳಯರಿಗೆ ಸಾಮಾಜಿಕ ಸ್ವಾತಂತ್ರ ಸಿಗುವುದಿಲ್ಲವೋ ಅಲ್ಲಿಯವರೆಗೆ ಕಾನೂನಿನ ಮೂಲಕ ನೀಡಿರುವ ಎಲ್ಲ ಸ್ವಾತಂತ್ರ್ಯ ಮಹಳೆಯರಿಗೆ ದೊರಕಲು ಸಾಧ್ಯವಿಲ್ಲ.  ತಾರತಮ್ಯ ಧೋರಣೆ ಸಮಾಜದಿಂದ ಹೇಗೆ ಹೊರ ತರಬೇಕು ಎನ್ನುವ ಕುರಿತು ಅಂಬೇಡ್ಕರ್‌ ಅವರು ಆಲೋಚಿಸುವ ಮೂಲಕ ಜನಾಂಗದ ಅಭಿವೃದ್ಧಿಗೆ ಪ್ರಯತ್ನಿಸಿದ್ದರು. ಇಂತಹ ಅಂಬೇಡ್ಕರ್‌ನನ್ನು ಪ್ರತಿಯೊಬ್ಬರು ನೆನೆಯುವುದರಮೂಲಕ ಸ್ವಲ್ಪ ಋುಣಬಾರ ತೀರಿಸಿದಂತಾಗುತ್ತದೆ. ಅಂದಿನ ಕಾಲದಲ್ಲಿಯೇ ಮಹಿಳೆ ಮೇಲಿನ ತಾರತಮ್ಯ ಹೊಡೆದು ಹಾಕಲು ಪ್ರಯತ್ನಿಸಿದ್ದರು.ಮಹಿಳೆಯರು ಕೌಟುಂಬಿಕ ಕಲಹದಿಂದ ಹೊರಬಂದು ಬೌದ್ಧಿಕ ಸಾಮರ್ಥ್ಯ‌ ಮೂಡಿಸಿದ್ದರು. ಕೇವಲ ದಲಿತ ಜನಾಂಗದ ಮಹಿಳೆಯರು ಮಾತ್ರವಲ್ಲದೇ ಸರ್ವಣೀಯರು ಸಹ ಅಂಬೇಡ್ಕರ್‌ ಅವರನ್ನು ಸ್ಮರಿಸಬೇಕಾಗಿದೆ. ಹೆಣ್ಣು ಮಕ್ಕಳ ರಕ್ಷಣೆಗಾಗಿ ಅಂಬೇಡ್ಕರ್‌ ಹಿಂದೂ ಕೋಡ್‌ ಬಿಲ್‌ ಜಾರಿಗೆ ತರಲು ಪ್ರಯತ್ನಿಸಿದ್ದರು.
ಅಂಬೇಡ್ಕರ್‌ ಚಿಂತನೆ ಧಾರೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ.ದೇಶವು ಅಪಾಯದ ಸ್ಥಿತಿಯಲ್ಲಿದ್ದು ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಅಂಬೇಡ್ಕರ್‌ ನೀಡಿದ ಕೊಡುಗೆಯನ್ನು ಪ್ರಭುತ್ವ ನಾಶಪಡಿಸುತ್ತಿದೆ. ಸಹೋದರತೆ, ಸಹಬಾಳ್ವೆ ಬೇಡವಾಗಿದೆ. ದಲಿತರ ಮೇಲೆ ಹಿಂದುಳಿದವರನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ   ಈಗಿನ ಪ್ರಭುತ್ವ ಬರೀ ಹುಸಿ ಸುಳ್ಳು ಭರವಸೆ ನೀಡುತ್ತಿವೆ. ನಿರುದ್ಯೋಗ ತೋಡೆದಿಲ್ಲ. ಬೃಹತ್‌ ಪ್ರತಿಭೆ ಅನಾವರಣಕ್ಕೆ ಹಣ ವ್ಯಯ ಮಾಡಲಾಗುತ್ತಿದೆ   ಶೋಷಿತರ ಪರ ಹೋರಾಡಿದ ಅಂಬೇಡ್ಕರ್‌, ಬಸವಣ್ಣನ ಬುದ್ಧ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಅವರು ಕಂಡ ಸಮ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಬೆಕಾಗಿದೆ.



One thought on “ಹೆಣ್ಣು ಮಕ್ಕಳ ಪಾಲಿನ ಶಾಶ್ವತ ಬೆಳಕು ಡಾ ಭೀಮರಾವ್ ಅಂಬೇಡ್ಕರ್.ಸಿದ್ಧಾರ್ಥ ಟಿ ಮಿತ್ರಾ

  1. ತುಂಬಾ ವಿಷಯಗಳನ್ನು ಹೇಳಿದ್ದೀರಿ ಧನ್ಯವಾದಗಳು.ಅಂಬೇಡ್ಕರ್ ರಂತಹ ಮೇರು ವ್ಯಕ್ತಿತ್ವ ನಮ್ಮೆಲ್ಲರ ಸಂಪತ್ತು.
    ಎಚ್.ಮಂಜುಳಾ.

Leave a Reply

Back To Top