ಸಾಹಿತ್ಯದ ಸೆಳೆತವೂ ; ಬಾಳ ಅನುಭವಗಳ ಒಲವೂ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಎಷ್ಟೇ ಕಾವ್ಯ ಕಮ್ಮಟದಲ್ಲಿ ಭಾಗವಹಿಸಿ, ಕವಿತೆ ಬರೆಯುವುದು ಹೇಗೆ? ಕಾವ್ಯ ರಚಿಸುವುದು ಹೇಗೆ..? ಎಂದು ತಿಳಿದುಕೊಂಡರೂ, ಕಾವ್ಯ ರಚಿಸಲು ಒದ್ದಾಡುವ ನನ್ನಂತಹ ಅನೇಕ ಯುವ ಸ್ನೇಹಿತರನ್ನು ನೋಡುತ್ತೇವೆ.

 ಹಾಗೆಯೇ ಲೇಖನ ಬರೆಯುವುದು ಹೇಗೆ..? ಅಂಕಣಗಳನ್ನು ನಿರ್ವಹಿಸುವುದು ಹೇಗೆ…? ಎಂದು ಅನೇಕ ಉಪನ್ಯಾಸಗಳನ್ನು ಸಭೆ ಸಮಾರಂಭಗಳಲ್ಲಿ  ಕೇಳಿರುತ್ತೇವೆ. ಹಾಗೇಯೇ ಪಾಲ್ಗೊಳ್ಳುವ ನನ್ನಂತಹ  ಯುವ  ಬರಹಗಾರರು ಒಂದು ವಿಷಯವನ್ನು ಪ್ರಸ್ತಾವನೆ, ಮಂಡನೆ ಮಾಡುವಾಗ ಒದ್ದಾಡುವುದನ್ನು ನೋಡುತ್ತೇವೆ.

ಮೊನ್ನೆ  ಒಬ್ಬ ಗೆಳೆಯ ಫೋನ್ ಮಾಡಿ, “ಸರ್ ಕವಿತೆ ಹೇಗೆ ಬರೆಯೋದು..?”   ಎಂದು ವಿಚಾರಿಸಿದ.

ಇಂತಹ  ಸನ್ನಿವೇಶಗಳು, ಮಾತುಗಳು ಒಬ್ಬ ಯುವ ಬರಹಗಾರರನ್ನು, ಕವಿಯನ್ನು ಸೃಷ್ಟಿಸಲು ಸಾಧ್ಯವೇ..?  ಉಹ್ಞೂಂ ಯಾರೊಬ್ಬರಿಂದಲೂ ಸಾಧ್ಯವಿಲ್ಲ. ಅಂತಹ ಕಮ್ಮಟಗಳು, ಸಭೆ ಸಮಾರಂಭಗಳು ಕೇವಲ ಬರಹದ ಸಿದ್ಧತೆಗೆ ಪೂರಕವಾಗಬಲ್ಲವು ಅಷ್ಟೇ.

 ಕವಿ, ಸಾಹಿತಿ, ಬರಹಗಾರ ನಮ್ಮೊಳಗೆ ಮೊದಲು ಹುಟ್ಟಬೇಕು.  ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಬರಹಗಾರನ ಮುಖ್ಯ ಗುರಿ ಸಾಮಾಜಿಕ ಆರೋಗ್ಯವನ್ನು ಕಾಪಾಡಾವುದಾಗಿರಬೇಕು. ಹಾಗೆಯೇ  ಸಮಾಜವನ್ನು ವಿಭಿನ್ನ ದೃಷ್ಟಿಯಿಂದ ನೋಡಿ, ಹೃದಯವನ್ನು ಮಿಡಿಯುವಂತವನಾಗಿರಬೇಕು.

ಯಾವುದೇ ಒಬ್ಬ ಬರಹಗಾರ, ಅವರು,  ಇವರು ಬರೆದಿದ್ದಾರೆ, ಅವರ ಬರಹ ನನಗೆ ಇಷ್ಟ, ನಾನು ಕೂಡ ಅದೇ ರೀತಿ ಬರೆಯಬೇಕೆಂದುಕೊಂಡು ಹಪಾಹಪಿಸಿ, ಬರಹ ಬರೆಯಲು ಬರುವುದಿಲ್ಲ. ಮತ್ತು ಆ ರೀತಿಯಲ್ಲಿ ಬರೆಯಲುಬಾರದು.  ಅದು ಕೇವಲ ಸಾಹಿತ್ಯದ ಸೆಳೆತ ಮಾತ್ರ ಆಗುತ್ತದೆ.

 ಯಾವುದೇ ಒಂದು ಕ್ಷೇತ್ರದ ಸೆಳೆತ ಅದು ಕೇವಲ ಸಾಂಕೇತಿಕವಾಗಿರುತ್ತದೆ. ಆ ಸೆಳೆತದ ಜೊತೆ ಜೊತೆಗೆ ಅಭಿರುಚಿ, ಆಸಕ್ತಿ, ಅದಕ್ಕೆ ಪೂರಕವಾಗಿ, ಬೇಕಾಗಿರುವ ಸಿದ್ಧತೆ ಅವೆಲ್ಲವನ್ನು ಮಾಡಿಕೊಂಡಾಗ ಮಾತ್ರ ಆ ಕ್ಷೇತ್ರದ ಬಗ್ಗೆ  ವಿಶೇಷವಾಗಿ ಸಾಹಿತ್ಯ ಕ್ಷೇತ್ರದ ಕಡೆಗೆ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ.

ಒಬ್ಬ ಬರಹಗಾರನು ನಿರಂತರವಾಗಿ ಅಧ್ಯಯನ ಮಾಡಬೇಕು. ಹೊಸ ಹೊಸ ಪುಸ್ತಕಗಳನ್ನು ಓದುವಂತಾಗಬೇಕು. ಸಮಾಜದಲ್ಲಿ ನಡೆಯುವ ಎಲ್ಲಾ ಆಗುಹೋಗುಗಳನ್ನು ವಿಭಿನ್ನ ದೃಷ್ಟಿಯಿಂದ ನೋಡಿ, ವಿಮರ್ಶಾತ್ಮಕವಾಗಿ ಆಲೋಚಿಸಬೇಕು. ಬರಹವೆಂದರೆ… ಬದುಕಿನ ಅಂತರಂಗ ಮತ್ತು  ಬಹಿರಂಗ ಎಲ್ಲವನ್ನು ತೆರೆದಿಟ್ಟು, ಬರಹದಂತೆ ಬದುಕಿದಾಗ ಮಾತ್ರ ಆ ಬರಹ ಇನ್ನೊಬ್ಬರಿಗೆ ಹಿಡಿಸಬಲ್ಲದು. ಒಬ್ಬ ಬರಹಗಾರ ಪ್ರಬುದ್ಧನಾಗಿ ಬರೆಯಬೇಕು. ಬರಹಕ್ಕೆ ಇಂತಹದೊಂದು ವಿಷಯವಿರಬೇಕೆಂಬ ಚೌಕಟ್ಟಿಲ್ಲ, ನಿಯಮವಿಲ್ಲ. ಕವಿತೆ ಹೀಗೆ ಬರೆಯಬೇಕೆಂಬ ನಿಯಮಗಳಿಲ್ಲ.  ಆದರೆ ಬರೆದ ಕವಿತೆ, ಲೇಖನ, ಓದುಗರ, ಸಹೃದಯಿಗಳ ಮನಸ್ಸನ್ನು ಮುಟ್ಟಬೇಕು,  ತಟ್ಟಬೇಕು. ಬರಹದೊಳಗಿನ ಒಂದು ಸೆಳಕು ಅವರೊಳಗೆ ಮೂಡಿದರೆ ನಮ್ಮ ಬರಹವನ್ನು ಅವರು ಇಷ್ಟಪಡುತ್ತಾರೆ.  ಆಗ ಬರೆದ ಬದುಕಿಗೆ ಸಾರ್ಥಕತೆ ಮೂಡುತ್ತದೆ. ಯಾವುದೇ
ಬರಹವಾಗಲಿ ಅದಕ್ಕೊಂದು ಆಶಯ ಇರಲೇಬೇಕು.  ಪ್ರತಿ ಬರಹ ಕೇವಲ ಬಾಹ್ಯ ಅರ್ಥವನ್ನು ಕೊಡದೆ, ಆಂತರಿಕವಾದ, ಪರೋಕ್ಷವಾದ ಸಂದೇಶವನ್ನು ಸಾರಿದಾಗ ಅದಕ್ಕೊಂದು ವಿಶಿಷ್ಟವಾದ ಸ್ಥಾನ ಸಿಗುತ್ತದೆ.

 ಹಬ್ಬ ಹರಿದಿನಗಳ ಕುರಿತು, ನೋಡಿದ ಪರಿಸರದ ಕುರಿತು, ಕೇವಲ ಮೇಲ್ನೋಟಕ್ಕೆ ವರ್ಣಿಸಿದರೆ ಅದೊಂದು ಶಾಲಾ ಮಕ್ಕಳ ಪ್ರಬಂಧವಾದೀತು…!!ಅದನ್ನು ಹೊರತುಪಡಿಸಿ, ವಿಶಿಷ್ಟವಾಗಿ, ವಿಭಿನ್ನ ದೃಷ್ಟಿಕೋನದಿಂದ ಬರೆದಾಗ ಮಾತ್ರ ಸಾಹಿತ್ಯದ ಬರಹಗಾರನಾಗಲು ಸಾಧ್ಯ.

 “ಓದು ಮತ್ತು ಬಾಳಿನ ಅನುಭವಗಳಿಂದ ಗಟ್ಟಿಬರಹ ಬರೆಯಲು ಸಾಧ್ಯವಾಗುತ್ತವೆ”
 ಎನ್ನುವುದು ಹಿರಿಯರ ಮಾತು.  ಬಾಳಿನಲ್ಲಿ ಪ್ರತಿಯೊಂದು ಅನುಭವಿಸಿ ಅನುಭವಗಳನ್ನು ನಮ್ಮ ಎದೆಯೊಳಗೆ, ಹೃದಯದೊಳಗೆ ಕಟ್ಟಿಕೊಂಡಾಗ ಆ ಕಟ್ಟಿಕೊಂಡ ಅನುಭವಗಳನ್ನೇ ಲೇಖನಗಳಾಗಿ, ಕವಿತೆಯಾಗಿ, ಕಥೆಯಾಗಿ, ಕಾದಂಬರಿಯಾಗಿ ಬರೆದಾಗ ಓದುಗರು ಅದನ್ನು ಓದುತ್ತಾ ಓದುತ್ತಾ, “ಇದು ನನ್ನ ಬದುಕಿಗೂ ಅನ್ವಯವಾಗುತ್ತದೆ” ಎನ್ನುವ ಹೃದಯ ವೈಶಾಲ್ಯವನ್ನು ಬೆಳೆಸಿಕೊಂಡಾಗ ಮಾತ್ರ ನಾವು ಬರೆದ ಬರಹಗಳು ಸಾರ್ಥಕವಾಗುತ್ತವೆ.

ಶ್ರೀಮಂತನೊಬ್ಬನು ಹಸಿವಿನ ಬಗ್ಗೆ ಎಷ್ಟೇ ವರ್ಣಿಸಿ, ಬರೆದರೂ  ಅದು ಗಟ್ಟಿಬರಹ ಅನ್ನಿಸಿಕೊಳಲಾರದು. ಹಸಿವಿನ ರುಚಿಯನ್ನು ಅನುಭವಿಸಿ, ಬಡತನದ ಬೇಗುದಿಯಲ್ಲಿ ಬೆಂದು ನೊಂದು ಸ್ವಾನುಭವದ ಮೂಲಕ ಬರಹದ ಬದುಕಿನಲ್ಲಿ ಹೆಜ್ಜೆ ಹಾಕಿದಾಗ, ಮೂಡುವ ಬರಹಗಳು ಗಟ್ಟಿಯಾಗಿ ನಿಲ್ಲಬಲ್ಲವು.  ನಮ್ಮ ದಲಿತ ಸಂವೇದನೆಯ ಬರಹಗಳು ಸಾಮಾಜಿಕ ಬದುಕು ಮತ್ತು ವಯಕ್ತಿಕ ನೆಲೆಗಟ್ಟಿನ ಅನುಭವಗಳಿಂದ ಕೂಡಿದ ಬರಹಗಳಾಗಿವೆ. ನಾವು ಎಷ್ಟೇ ಸ್ಪಂದನಶೀಲ ವ್ಯಕ್ತಿಗಳಾದರೂ ಕೂಡ ಅನುಭವಗಳಿಗಿಂತ ದೊಡ್ಡಬರಹವನ್ನು ಕೊಡಲಾಗುವುದಿಲ್ಲ. ಅದೇ ರೀತಿ ಬಂಡಾಯ ಮನೋಧರ್ಮದ ಬರಹಗಳು ಒಬ್ಬ ಜೀವಂತಿಕೆಯ ಮಾನವೀಯ ಮೌಲ್ಯವುಳ್ಳ ಬರಹಗಾರನ ಬರಹಗಳಲ್ಲಿ ಅನುಭವದ ಜೊತೆ ಜೊತೆಗೆ ಕೇಳಿದ, ನೋಡಿ ತಿಳಿದುಕೊಂಡ ಅನುಭವಗಳನ್ನು ಕಟ್ಟಿಕೊಡಲು ಸಾಧ್ಯವಾಗುತ್ತದೆ. ಬರಹಗಾರನಿಗೆ ಇದನ್ನೇ ಬರೆಯಬೇಕೆಂಬ ಪ್ರಮೇಯೇ ಇಲ್ಲ.  ಆದರೆ ಇದನ್ನು ಬರೆದಾಗ ಮಾತ್ರ ಬರಹಗಾರನಿಗೆ ಬೆಲೆ ಬರುತ್ತದೆ ಎನ್ನುವ ದೃಷ್ಟಿಕೋನ ಸಾಹಿತಿಯಾದವನಿಗೆ ಇರಬೇಕು.  ಆಗ ಮಾತ್ರ ಸಾಹಿತ್ಯಕ್ಕೆ ಮತ್ತು ಸಾಹಿತಿಯಾದವನಿಗೆ ಮೌಲ್ಯ ದೊರಕಲು ಸಾಧ್ಯ.

 ಮೌಲ್ಯಯುತ ಬರಹಗಳು ಎಂದರೆ ಇನ್ನೊಬ್ಬರ ಬದುಕನ್ನು ಅರಳಿಸುವಂತಿರಬೇಕು, ಕೆರಳಿಸುವಂತಿರಬಾರದು. ಸಮಾಜದ ಆರೋಗ್ಯಕರ ಬೆಳವಣಿಗೆಗೆ, ವ್ಯಕ್ತಿಯ ಅಂತರಂಗದ ಧನಾತ್ಮಕ ಬದಲಾವಣೆಗಳಿಗೆ, ಸಾಹಿತ್ಯ ಬರಹಗಳು ಪೂರಕವಾಗಿರಬೇಕು. ಅಂತಹ ಬರಹಗಳನ್ನು ಬರೆದಾಗ ಓದುಗ ಅದನ್ನು ಆಪ್ತವಾಗಿ ಸ್ವೀಕರಿಸುತ್ತಾರೆ. ಇಲ್ಲದೇ ಹೋದರೆ ಹತ್ತರಲ್ಲಿ ಇದು ಕೂಡ ಹನ್ನೊಂದು ಎಂದು ಆ ಬರಹವನ್ನು ನಿರ್ಲಕ್ಷಿಸುತ್ತಾರೆ.

ಯುವ ಸ್ನೇಹಿತರೇ, ಬರಹಗಳನ್ನು ಬರೆಯುವಾಗ ಇದು ಪ್ರಕಟವಾಗಲೇಬೇಕು ಮತ್ತು ಈ ಬರಹವನ್ನು ಎಲ್ಲರೂ ಮೆಚ್ಚಲೇಬೇಕು ಎಂಬ ಧಾವಂತ ಒಳ್ಳೆಯದಲ್ಲ. ರಾಜ್ಯಮಟ್ಟದ ಪತ್ರಿಕೆಯಲ್ಲಿ ಬಂದ ಬರಹಗಳು ಮಾತ್ರ ಶ್ರೇಷ್ಠ,  ಸ್ಥಳೀಯ ಪತ್ರಿಕೆಗಳಲ್ಲಿ ಬರುವ ಬರಹಗಳು ಕನಿಷ್ಠ ಎನ್ನುವ ದೋಷಪೂರಿತ ಅಭಿಪ್ರಾಯವನ್ನು ತೊರೆಯಬೇಕು. ಅಂತಹ ಹಪಾಹಪಿಯಿಂದ ಹೊರಬಂದು ಬರೆದಿದ್ದೆಲ್ಲವೂ ಶ್ರೇಷ್ಠ, ಕನಿಷ್ಠ ಎನ್ನುವುದು ಇರುವುದಿಲ್ಲ. ಬರಹ ಅದು ಮಾನವೀಯ ಮೌಲ್ಯಗಳಿಗೆ ಜೀವಂತಿಕೆಯನ್ನು ನೀಡುವುದಾಗಿರಬೇಕು. ಆಗ ಮಾತ್ರ ಬರಹಕ್ಕೊಂದು ಅರ್ಥ ಬಂದೀತು.

 ಹಾಗಾದರೆ  ಇವೆಲ್ಲವನ್ನೂ ಮನಸಾರೆ ನಾವು ಅನುಭವಿಸಿ, ನಮ್ಮ ಬಾಳಿನಲ್ಲಿ ಅವುಗಳನ್ನು ಸ್ವೀಕರಿಸಬೇಕು, ಸ್ವೀಕರಿಸಿದ ಎಲ್ಲ ಮೌಲ್ಯಗಳನ್ನು ಬರಹ ರೂಪಕ್ಕೆ ತರುವಾಗ ನಾವು ಮೊದಲು ಯಾವ ತರಹದ ಬರಹಕ್ಕೆ ಈ ನಮ್ಮ  ಅನುಭವಗಳು ದಕ್ಕುತ್ತವೆ ಎನ್ನುವುದನ್ನು ಮನನ ಮಾಡಿಕೊಳ್ಳಬೇಕು.  ಆಗ ಮಾತ್ರ ಒಂದು ಸಾರ್ಥಕ ಬರಹ ನಮ್ಮಿಂದ ದೊರಕಬಲ್ಲದು.

ಸ್ನೇಹಿತರೇ, ನಮಗೆ ಗೊತ್ತಿರುತ್ತದೆ ನಮ್ಮ ಧನಾತ್ಮಕ ಅಂಶಗಳೇನು..? ಋಣಾತ್ಮಕ ಅಂಶಗಳೇನು..?  ನಾವು ಯಾವುದನ್ನು ಬರೆದರೆ ನಾವು  ಸಾಹಿತ್ಯ ಲೋಕಕ್ಕೆ ಕೊಡುಗೆಯನ್ನು ಕೊಡಬಲ್ಲೆವು ಎಂದು.  ನಮ್ಮ ಅಂತರಂಗದ ಮಾತುಗಳನ್ನು ಮೊದಲು ಕೇಳಬೇಕು, ಇಲ್ಲವಾದರೆ ಯಾರೋ ಬರೆಯುತ್ತಾರೆ ಅದನ್ನೂ ನಾನು ಬರೆಯಲೇಬೇಕು ಎನ್ನುವ ಹಠದಿಂದ  ಹೊರಬಂದು ಬಿಡಬೇಕು.  ನನ್ನ ಓದಿನ ತಿಳುವಳಿಕೆಗೆ ಮೂಡಿದ ಜ್ಞಾನವನ್ನು, ಅನುಭವಿಸಿದ ಅನುಭವಗಳನ್ನು, ನನ್ನ ಬರಹರೂಪಕ್ಕೆ ಇಳಿಸಿದಾಗ ಮಾತ್ರ. ಆ ಬರಹ ಇನ್ನೊಬ್ಬರಿಗೆ ಹಿಡಿಸಬಲ್ಲದು ಅಂತಹ ಬರಹವನ್ನು ಬರೆಯುತ್ತಾ  ಬರೆಯುತ್ತಾ ಸಾಮಾಜಿಕ ಮೌಲ್ಯವನ್ನು ಎತ್ತರಿಸುತ್ತಲೇ, ಸಮಾಜದಲ್ಲಿರುವ ಅಪಮೌಲ್ಯಗಳನ್ನು ಧಿಕ್ಕರಿಸಿ, ‘ಸಮ ಸಮಾಜ’ಕ್ಕಾಗಿ ನಾವೆಲ್ಲರೂ ಶ್ರಮಿಸಲು ಬರೆಯೋಣವೆಂದು ಆಶಿಸುವೆ.

7 thoughts on “ಸಾಹಿತ್ಯದ ಸೆಳೆತವೂ ; ಬಾಳ ಅನುಭವಗಳ ಒಲವೂ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ

    1. ಉತ್ತಮ ಮಾರ್ಗದರ್ಶಿ ಲೇಖನ ಸರ್ ಮಲ್ಲೇಶಪ್ಪ ಅಂಗಡಿ

  1. ಗೆಳೆಯರೇ, ಇದೊಂದು ಅದ್ಭುತವಾದ ಲೇಖನ. ನಿಮ್ಮ ಲೇಖನಿ ತುಂಬಾ ಹರಿತವಾದದ್ದು. ಸಾಹಿತ್ಯ ಹಾಗೇ ಹೊರಹೊಮ್ಮುವುದಿಲ್ಲ. ಸತತ ಅಧ್ಯಯನ ಬೇಕು. ತುಡಿತ ಬೇಕು. ಸಮಾಜದ ಒಳಹೊಕ್ಕು ಆಗು ಹೋಗುಗಳ ಬಗ್ಗೆ ಅಧ್ಯಯನ ಬೇಕು. ಎಲ್ಲಾ ವರ್ಗದ ಜನರ ರೀತಿ ರಿವಾಜುಗಳನ್ನು ಅಭ್ಯಸಿಸಲು ಪ್ರಯತ್ನಿಸಬೇಕು. ಸಮಾಜಕ್ಕೆ ಒಂದು ಸಕಾರಾತ್ಮಕ ಸಂದೇಶ ನೀಡುವಂತಿರಬೇಕು. ಬರೀ ಊಹಾ ಪೋಹಗಳನ್ನು ಬಿಂಬಿಸುವುದು ಬೇಡ. ಹೀಗೆ ಸಾಹಿತ್ಯ ರಚನೆಗೆ ಕೊನೆಯೇ ಇಲ್ಲ.
    ಅಭಿನಂದನೆಗಳು ರಮೇಶ್. ಶುಭವಾಗಲಿ.

    1. ತಮ್ಮ ಆಪ್ತವಾದ ಪ್ರತಿಕ್ರಿಯೆಗೆ ಧನ್ಯವಾದಗಳು..

Leave a Reply

Back To Top