“ಸರಿ ತಪ್ಪುಗಳ ನಿರ್ಣಯ”ವೀಣಾ ಹೇಮಂತ್ ಗೌಡ ಪಾಟೀಲ್ ರವರ ಲೇಖನ

Little hikers walking on a tree trunks in a forest.

ನನ್ನ ಚರ್ಮದ ಬಣ್ಣ ಬಿಳಿಯಾಗಿರಲಿ ಕಪ್ಪಾಗಿರಲಿ ಅದರ ನಿರ್ಣಯ ನನ್ನದಲ್ಲ… ನನ್ನ ವಂಶವಾಹಿಗಳದು.
ನಾನು ಧರಿಸುವ ಬಟ್ಟೆ ಕೆಲವರಿಗೆ ಗಾಢವೆನಿಸಿದರೆ ಮತ್ತೆ ಕೆಲವರಿಗೆ ತೀರ ಪೇಲವ ಎನಿಸಬಹುದು. ಹಾಗಾದರೆ ಯಾವುದು ಸರಿ ಯಾವುದು ತಪ್ಪು ನನಗೆ ಸರಿ ಅನ್ನಿಸಿದ್ದು ಬೇರೆಯವರಿಗೆ ತಪ್ಪೇಕೆ ಅನಿಸಬೇಕು ಬೇರೆಯವರಿಗೆ ಸರಿ ಅನಿಸಿದ್ದು ನನಗೆ ತಪ್ಪೇಕೆ ಕಾಣಿಸುತ್ತದೆ .. ಈ ಸರಿ ತಪ್ಪುಗಳ ನಿರ್ಣಯ ಮಾಡುವವರಾರು?

ಕೆಲವರಿಗೆ ನಾನು ತುಸು ದಪ್ಪವೆನಿಸಿದರೆ ಮತ್ತೆ ಕೆಲವರಿಗೆ ತೆಳುಕಾಯದವಳೆನಿಸುವೆ… ಇದರಲ್ಲಿ ಸರಿ ಯಾವುದು ಮತ್ತು ತಪ್ಪು ಯಾವುದು…. ಈ ಸರಿ ತಪ್ಪುಗಳ ನಡುವೆ ಇರುವುದು ಏನು. ಯಾವುದು ಸರಿಯಲ್ಲವೋ ಅದು ಸರಿಯಲ್ಲವೇಕೆ ಯಾವುದು ತಪ್ಪೋ ಅದು ಸರಿ ಏಕೆ ಅನ್ನಿಸುತ್ತದೆ…. ಅಂತಿಮವಾಗಿ ಸರಿ ತಪ್ಪುಗಳ ನಿರ್ಣಯ ಮಾಡುವವರು ಯಾರು??

ಎರಡು ವಿಭಿನ್ನ ಕುಟುಂಬಗಳಲ್ಲಿ ಹುಟ್ಟಿ ಬೆಳೆದ ಗಂಡು ಹೆಣ್ಣುಗಳು ಮದುವೆ ಎಂಬ ಬಂಧನದಲ್ಲಿ  ಒಂದಾಗಿ ಸಂಸಾರ ಹೂಡಿದಾಗ ಗಂಡಿಗೆ ತನ್ನ ಕುಟುಂಬದ ರೀತಿ ನೀತಿಗಳು ಸಂಪ್ರದಾಯಗಳು ಸರಿ ಎನ್ನಿಸಿದರೆ, ತನ್ನ ತವರಿನ ರೀತಿ ನೀತಿಗಳಿಗೆ ಒಗ್ಗಿ ಹೋಗಿರುವ ಹೆಂಡತಿಗೆ ಗಂಡನ ಮನೆಯ ಪದ್ಧತಿಗಳು ವಿಪರೀತವೂ, ರೇಜಿಗೆಯನ್ನು ಹುಟ್ಟಿಸುವಂಥವು ಅನ್ನಿಸಬಹುದು. ಇದರಲ್ಲಿ ಸರಿ ಯಾವುದು ತಪ್ಪು ಯಾರದು ಎಂಬುದನ್ನು ನಿರ್ಣಯಿಸುವವರು ಯಾರು??

ಮುಂದೆ ಮಕ್ಕಳನ್ನು ಬೆಳೆಸುವಾಗಲು ಈ ಸರಿ ತಪ್ಪುಗಳ ನಿರ್ಣಯ ತುಸು ಕಷ್ಟ. ” ಎತ್ತು ಏರಿಗೆಳೆದರೆ ಕೋಣ ಕೆರೆಗೆ ಎಳೆದಂತೆ” ಪತಿ-ಪತ್ನಿಯರು ಮಕ್ಕಳನ್ನು ಬೆಳೆಸುವಾಗ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರೆ, ಆ ಅಭಿಪ್ರಾಯಗಳು ಮಕ್ಕಳ ಬೆಳವಣಿಗೆಗೆ ಪೂರಕವಾಗದೆ ಮಾರಕವಾದರೆ ತಾವು ಮಾಡುತ್ತಿರುವುದೇ ಸರಿ ಎಂಬ ಮಾತಿಗೆ ಅವರಿಬ್ಬರೂ ಬದ್ಧರಾದಾಗ ಯಾರು ಸರಿ? ಮತ್ತು ಯಾರು ತಪ್ಪು ಎಂಬ ನಿರ್ಣಯ ಮಾಡುವವರು ಯಾರು??

ಅತ್ತೆ ಹೇಳುವುದು ಸರಿ ಎಂದು ಸೊಸೆಗೆ ತೋರುವುದಿಲ್ಲ, ಸೊಸೆ ಮಾಡುತ್ತಿರುವುದು ಸರಿ ಎಂದು ಅತ್ತೆಗೆ ಅನ್ನಿಸುವುದಿಲ್ಲ. ಅತ್ತೆ ಸೊಸೆಯರ ನಡುವೆ ನಡೆಯುವ ಸರಿ ತಪ್ಪುಗಳ ಮುಸುಕಿನ ಗುದ್ದಾಟದಲ್ಲಿ ಸರಿ ಯಾವುದು ತಪ್ಪು ಯಾವುದು ಎಂದು ನಿರ್ಣಯಿಸುವುದು ಅಷ್ಟು ಸರಳವಲ್ಲ.

ಮುಂದೆ ಮಕ್ಕಳು ಬೆಳೆದು ದೊಡ್ಡವರಾದಾಗ ತಮ್ಮ ಪಾಲಕರೇ ತಪ್ಪು ಎಂಬಂತೆ ಬಿಂಬಿಸಿದಾಗ ಯಾರು ಸರಿ ಯಾರು ತಪ್ಪು ಎಂಬ ಪ್ರಶ್ನೆ ಏಳುತ್ತದೆ. ಆಗ ಹಿರಿಯರು ತಮ್ಮ ಮಕ್ಕಳು ತಮಗೆ ತಪ್ಪೆಂದು ಹೇಳಿದಾಗ ನಸುನಕ್ಕು ಸುಮ್ಮನಾಗುತ್ತಾರೆ. ಕಾರಣ ಈ ತಪ್ಪನ್ನು ಅವರು ಕೂಡ ಮಾಡಿರುತ್ತಾರೆ. ಈ ವಾಸ್ತವದ ಅರಿವಾಗುವಾಗ  ಮತ್ತು ಆವರಿಸಿಕೊಂಡಿರುತ್ತದೆ, ಇನ್ನು ಅವರ ಮಕ್ಕಳಿಗೆ ಅರಿವಾಗುವುದು ಅವರು ಮಕ್ಕಳು ತಮ್ಮ ಹಂತವನ್ನು ತಲುಪಿದಾಗ ಮಾತ್ರ ಎಂಬುದು ಹೆತ್ತವರಿಗೆ ಗೊತ್ತಿರುತ್ತದೆ . ಪಾಲಕರು ಮಾತ್ರ ತಪ್ಪೇ, ಮಕ್ಕಳದು ಏನು ತಪ್ಪಿರುವುದಿಲ್ಲವೇ ಪಾಲಕರದು ತಪ್ಪಲ್ಲ ಎಂದಾದರೆ ಮಕ್ಕಳದು ಸರಿ ಎಂದಾಗಬೇಕಲ್ಲವೇ, ಪಾಲಕರು ಸರಿ ಎಂದಾದರೆ ಮಕ್ಕಳು ತಪ್ಪಾಗಬೇಕಲ್ಲವೇ … ಹಾಗಾದರೆ ಯಾರು ಸರಿ ಯಾರು ತಪ್ಪು ಎಂಬ ನಿರ್ಣಯ ಮಾಡುವವರು ಯಾರು??

 ಹೀಗೆ ವ್ಯಕ್ತಿ ವ್ಯಕ್ತಿಗಳಲ್ಲಿ, ಮನೆ ಮನೆಗಳಲ್ಲಿ, ವಿವಿಧ ಧರ್ಮಗಳಲ್ಲಿ ಕೋಮುಗಳಲ್ಲಿ ಸಮುದಾಯಗಳಲ್ಲಿ ವ್ಯಕ್ತಿಗತ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ.ಅಲ್ಲಿ ಎಲ್ಲರೂ ತಮ್ಮದೇ ಸರಿ ಎಂಬಂತೆ ಪ್ರತಿಪಾದಿಸುತ್ತಾ  ಸಂಘರ್ಷಕ್ಕೆ ಎಳಸುತ್ತಾರೆ. ತಾನು ಸರಿ ಎಂದು ವಾದಿಸುವ ಮನುಷ್ಯ ಮತ್ತೊಬ್ಬರ ದೃಷ್ಟಿಕೋನದಲ್ಲಿ  ಎಂದೂ ಯೋಚಿಸುವುದಿಲ್ಲ. ಹಾಗೂ ಏಕೆ ಯೋಚಿಸಬೇಕು ಎಂದು  ಅಂದುಕೊಳ್ಳುತ್ತಾನೆ. ಇಲ್ಲಿಯೂ ಕೂಡ ಸರಿ ತಪ್ಪುಗಳ ಪರಾಮರ್ಶೆಯನ್ನು ನಡೆಸುವುದು ತನ್ನ ಘನತೆಗೆ, ಅಹಮ್ಮಿಗೆ ತಕ್ಕದಲ್ಲ ಎಂಬ ಭಾವ ಅವರಲ್ಲಿ ಮನೆ ಮಾಡಿರುತ್ತದೆ. ಇದು ನಮ್ಮ ಹಳ್ಳಿಗರ ಭಾಷೆಯಲ್ಲಿ ‘ಮದ್ದಿಲ್ಲದ ಬ್ಯಾನಿ ಇದ್ದಂತೆ’. ರೋಗದ ಮೂಲ ಅರಿಯದೆ ಔಷಧಿ ಕೊಡಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ತೊಂದರೆಯ ಮೂಲದ ಅರಿವಿಲ್ಲದೆ ನಿವಾರಣೆ ಸಾಧ್ಯವಿಲ್ಲ.

 ಇಲ್ಲಿರುವುದೇ ನಿಜವಾದ ತೊಂದರೆ.., “ಬಹುಜನ ಹಿತಾಯ ಬಹುಜನ ಸುಖಾಯ” ಎಂಬ ಉಕ್ತಿಯಂತೆ ಸಮುದಾಯದ ಹಿತ ಮುಖ್ಯವಾಗಿ ಇರಬೇಕು. ಹತ್ತು ಜನರಿಗೆ ಅನುಕೂಲವಾಗುವದಾದರೆ  ಅದನ್ನೇ ಮಾಡಬೇಕು. ಆದರೆ ವೈಯುಕ್ತಿಕ ನೆಲೆಯಲ್ಲಿ ಬಂದಾಗ, ಮನುಷ್ಯನ ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಬೆಲೆ ಇರಬೇಕು ನಿಜ ಆದರೆ ಮನುಷ್ಯ ಸಂಘಜೀವಿ, ಸಮಾಜ ಜೀವಿ ಎಂಬುದನ್ನು ಮರೆಯಬಾರದು. ಸಮುದಾಯದ ಹಿತದೃಷ್ಟಿಯಿಂದ ಹಲವಷ್ಟು ಬಾರಿ ನಾವು ಹೊಂದಾಣಿಕೆ ಮಾಡಿಕೊಳ್ಳಲೇಬೇಕಾದ ಪ್ರಸಂಗ ಇರುತ್ತದೆ.

 ಇನ್ನು ಬಹುತೇಕ ಹದಿಹರೆಯದ ಮಕ್ಕಳಲ್ಲಿ ಬರುವ ತೊಂದರೆ ಎಂದರೆ ಅವರ ಬಟ್ಟೆ ಬರೆ ಮತ್ತು ಜೀವನ ಶೈಲಿ. ನನ್ನ ಜೀವನ ನನ್ನ ರೂಲುಗಳು ಎಂಬ ಭಾವದಿಂದ ಅವರೇನೋ ವರ್ತಿಸುತ್ತಾರೆ ನಿಜ. ಖಂಡಿತವಾಗಿಯೂ ಇದು ಅವರ ಜೀವನವೇ, ಅವರ ರೂಲುಗಳನ್ನೇ ಅವರು ಪಾಲಿಸಬೇಕು. ಆದರೆ ಅವರು ಸಮುದಾಯದಲ್ಲಿ ಇದ್ದಾಗ ಇದು ಒಪ್ಪಿತವಾಗುವ ಮಾತಲ್ಲ. ಅತ್ಯಂತ ಒರಟಾಗಿ ಹೇಳಬೇಕೆಂದರೆ “ಸತ್ತಾಗ ನಮ್ಮ ಹೆಣವನ್ನು ನಾವೇ ಹೊರುವುದಿಲ್ಲ” ಅದು ಸಮುದಾಯದ ಕೆಲಸ. ಅಂತೆಯೇ ನಮ್ಮ ಜೀವನ ನಮ್ಮದಲ್ಲ, ನಾವು ಸಮುದಾಯದ ಶಿಶುಗಳು.

 ಜಾತ್ರೆ ಉತ್ಸವಗಳಲ್ಲಿ ಲಂಗ ದಾವಣಿ ಪುಟ್ಟ ಫ್ರಾಕುಗಳನ್ನು ತೊಡುವ ಮಕ್ಕಳನ್ನು ನೋಡಿದಾಗ ಸಂತೋಷವಾಗುವುದಿಲ್ಲವೇ..ಅಂತಹ ಸಮಯದಲ್ಲಿ ಫ್ಯಾಶನ್  ಹೆಸರಿನಲ್ಲಿ ಪಾಶ್ಚಾತ್ಯ ದಿರಿಸುಗಳನ್ನು ಧರಿಸಿದರೆ
 ಇರಿಸುಮುರಿಸಿಗೊಳಗಾಗುವುದು ಖಂಡಿತ. ತಮ್ಮ ದೈನಂದಿನ ಜೀವನದಲ್ಲಿ ಮನೆಯಲ್ಲಿ, ತಾವು ಹೋಗುವ ಪಿಕ್ನಿಕ್ ಮತ್ತಿತರ ಕಡೆಗಳಲ್ಲಿ ಅವರು ತಮಗೆ ತೋಚಿದ ರೀತಿ ಇರಬಹುದು ಆದರೆ ಒಂದು ಸಮುದಾಯ, ಸಾಂಪ್ರದಾಯಿಕ, ಸಾಮಾಜಿಕ ಕಾರ್ಯಕ್ರಮದಲ್ಲಿ ಮಾತ್ರ ಅವರು ವಸ್ತ್ರ ಸಂಹಿತೆಯನ್ನು ಅನುಸರಿಸಲೇಬೇಕು. ಹಿರಿಯರು ತಿಳಿ ಹೇಳಿದರೆ ತಪ್ಪು ಅವಮಾನ ಎಂದುಕೊಳ್ಳುವ ಅವರುಗಳು ಸ್ವತಹ ಆ ಅವಮಾನಗಳನ್ನು ಅನುಭವಿಸಿದಾಗ ಅವರಿಗೆ ಅರಿವಾಗುತ್ತದೆ. ಬತ್ತಲೆ ಇರುವ ಸಾಮ್ರಾಜ್ಯದಲ್ಲಿ ಬಟ್ಟೆ ಹಾಕಿದವನಿಗೆ ಅವಮಾನವಾದಂತೆ…. ಎಲ್ಲರೂ ಸಾಂಪ್ರದಾಯಿಕ ವಸ್ತ್ರ ಸಂಹಿತೆಯನ್ನು ಅನುಸರಿಸಿದಾಗ, ಅದನ್ನು ಮೀರಿದ ವಿರುದ್ಧ ರೀತಿಯ ಬಟ್ಟೆ ಬರೆ ಧರಿಸಿದವರು ಮುಜುಗರಕ್ಕೆ ಒಳಗಾಗುವುದು ಸಹಜವಲ್ಲವೇ?? ಇದನ್ನೇ ಪಾಲಕರು, ಹಿರಿಯರು, ಸಮಾಜ ಹೇಳುವುದು. ಹೀಗೆ ನಾವು ಇರುವ ಸಮಾಜದ ಕೆಲ ವಿಷಯಗಳನ್ನು ನಾವು ಪಾಲಿಸಲೇಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಅದೇ ಸಾಮಾಜಿಕ ಸ್ವಾಸ್ಥ್ಯವೂ ಕೂಡ. ಇಲ್ಲಿ ತಪ್ಪು ಸರಿಯಾಗಲಾರದು, ಕೇವಲ ಸರಿಯಾದದ್ದು ಮಾತ್ರ ಸರಿ ಆಗಲು ಸಾಧ್ಯ. ಇದು ಕೇವಲ ಒಂದು ಉದಾಹರಣೆ ಮಾತ್ರ.

ಆದ್ದರಿಂದ ಸ್ನೇಹಿತರೆ, ಸರಿಯೆಂದು ತೋರಿದ್ದು ತಪ್ಪಾಗಿದ್ದು ತಪ್ಪು ಎಂದು ತೋರಿದ್ದು ಸರಿಯಾಗಿರಬಹುದು. ಇದನ್ನೇ  ಕೋಡಿಕೊಪ್ಪದ ವೀರಪ್ಪಜ್ಜ ಎಂಬ ಮಹಾನ್ ಜ್ಞಾನಿಗಳು “ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲ ಅದು ಹೌದು” ಎಂದು ಸಾರಿದ್ದಾರೆ. ಅತ್ಯಂತ ಮಾರ್ಮಿಕವಾಗಿರುವ ಈ ನುಡಿಗಳನ್ನು ಅರಿತು ಸಾಗಿದರೆ ಬದುಕು ಸುರಳೀತ.


Leave a Reply

Back To Top