ಕಂಸ ಅವರ ಕವಿತೆ- ತಟಕು

ನಿತ್ಯ
ನಮ್ಮೂರಿನ ಕುರಿಗಾಹಿ
ಸಣ್ಣವ್ವನ ನೆಮ್ಮದಿಯ ಕಾಯಕ
ಕುರಿ ಮೇಯಿಸುವುದು

ಕುರಿಗಳು ನರಿಗಳಷ್ಟು
ಚಾಣಕ್ಯ
ಹೇಳಿದಂತೆ ಕೇಳುತಾವೆ
ಬ್ಯಾ ಟುರ್ ಎಂದರೆ ಸಾಕು
ಎಲ್ಲವೂ ಶಿರವೆತ್ತಿ ನೋಡುತ್ತವೆ

ಹೆಗಲ ಮೇಲೆ ಕಂಬಳಿ
ಕೈಯಲ್ಲಿ ಕೋಲು
ಹಿಡಿದು
ಶ್ ಶ್ ಶ್ ಶಬ್ದ ಮಾಡಿದರೆ
ರಸ್ತೆಯ ಒಂದು ಬದಿಯಿಂದ
ಮತ್ತೊಂದು ಬದಿಗೆ ಸರಿದು
ಹಾದಿ ಬಿಡುತ್ತವೆ

ಉರಿ ಬಿಸಿಲಲ್ಲಿ
ಅಪರಿಚಿತರ ಕಂಡ ಸಣ್ಣವ್ವ
ಒಂದ್ ತಟಕು ನೀರಾಕು ಮಗ
ಗಂಟಲೆಲ್ಲ ಒಣಗಿದೆ
ಎನ್ನುವಳು

ರಾತ್ರಿಯಾದರೆ
ಯಾರದ್ದೋ ಹೊಲದಲ್ಲಿ
ಮಂದೇ ಹಾಕಿ ತಲೆಗೆ ಕೈಕೊಟ್ಟು
ಶಿವಾ ಎಂದು ಮಲಗುವಳು
ಹಾಸಿಗೆ ಇಲ್ಲ ಹೊದಿಕೆ ಇಲ್ಲ  
ಆಕಾಶವೇ ಮೇಲುಸೆರಗು
ಭೂಮಿಯೇ ಗಾದಿ

—————————————————–

Leave a Reply

Back To Top