ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ-
ಚಿತ್ತವು ವಿಚಿತ್ರ
ಈಗೀಗ ಚಿತ್ತವು ವಿಚಿತ್ರವಾಗಿ ವರ್ತಿಸುತಿದೆ
ನನ್ನೊಳಗೂ ನಿನ್ನನೇ ಹುಡುಕುತಿದೆ
ನೋಡುತ ಕನ್ನಡಿಯನು ನಾಚುತಿರುವೆ
ನನ್ನ ಬಿಂಬದಲಿ ನಿನ್ನ ಛವಿಯನು ಕಾಣುತಿರುವೆ
ಕೈ ಹಿಡಿದು ಓಡಾಡಿದ ಕ್ಷಣಗಳೇ ಇಲ್ಲ
ಆದರೂ ನನ್ನೊಳಗೆ ನೀನಿರದ ದಿನವೇ ಇಲ್ಲ
ನೋಟಕೆ ನೋಟ ಬೆರೆತ ಕ್ಷಣವಿಲ್ಲ
ಆದರೂ ನೀನಿರದ ಕನಸು ನಾ ಕಂಡಿಲ್ಲ
ಮಾತಾಡಿ ಮಾತಿನಮನೆ ನಾವೆಂದೂ ಕಟ್ಟಿಲ್ಲ
ಮನದಲಿ ಕಟ್ಟಿದ ಒವಿನರಮನೆಗೆ ಇಟ್ಟಿಗೆ ಬೇಕಿಲ್ಲ
ನಾ ನಿನಗಾಗಿ , ನೀ ನನಗಾಗಿ ಹುಟ್ಟಿಲ್ಲ
ಆದರೂ ಒಲವಿನುಸಿರು ನಿನ್ಹೆಸರು ಹೇಳುವುದು ಬಿಟ್ಟಿಲ್ಲ
ಈಗೀಗ ಚಿತ್ತವು ವಿಚಿತ್ರವಾಗಿ ವರ್ತಿಸುತಿದೆ
ನನ್ನದಲ್ಲದ ಒಲವಿನೆಡೆಗೆ ಸೆಳೆಯುತಿದೆ
ನನ್ನದಲ್ಲದ ಕವಿತೆಯನು ಹಾಡುತಿದೆ
ನನ್ನದಲ್ಲದ ಭಾಗ್ಯವನು ಬಯಸುತಿದೆ…
—————————————
ವಾಣಿ ಯಡಹಳ್ಳಿಮಠ