ಪ್ರವಾಸ ಸಂಗಾತಿ
ಗುಳಿ ಗುಳಿ ಶಂಕರನ ವಿಸ್ಮಯ ಕೊಳ
ಜಿ. ಹರೀಶ್ ಬೇದ್ರೆ
ಗುಳಿ ಗುಳಿ ಶಂಕರ ಎಂದೊಡನೆ ಏನಿದು ಹೆಸರು ಹೀಗಿದೆ? ಇದು ಏನಿರಬಹುದು? ಎನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತದೆ ಅಲ್ಲವೇ. ಗುಳಿ ಗುಳಿ ಶಂಕರ ಒಂದು ದೇವಾಲಯದ ಹೆಸರು. ಇದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗುಬ್ಬಿ ಗ ಎನ್ನುವ ಪುಟ್ಟ ಗ್ರಾಮದಲ್ಲಿದೆ. ಸುತ್ತಲೂ ಅಡಿಕೆ ತೆಂಗಿನ ತೋಟಗಳಿದ್ದು ತಂಪಾದ ವಾತಾವರಣದಿಂದ ನೋಡುಗರ ಮನಸ್ಸಿಗೆ ಹಬ್ಬವನ್ನುಂಟು ಮಾಡುತ್ತದೆ. ದೇವರನ್ನು ನಂಬಿ ಹೋಗುವವರಿಗೆ ಇದೊಂದು ಪವಿತ್ರ ಯಾತ್ರಾಸ್ಥಳ.
ಇಲ್ಲಿ ಈಶ್ವರನ ದೇವಾಲಯವಿದ್ದು ಪಕ್ಕದಲ್ಲೇ ಜಟಾತೀರ್ಥ ಎಂಬ ನೀರಿನ ಕೊಳವು ಇದೆ. ಈ ಕೊಳವೇ ಇಲ್ಲಿಗೆ ಬರುವ ಜನರ ವಿಶೇಷ ಆಕರ್ಷಣೆ. ಇದರಲ್ಲಿ ವರ್ಷದ 365 ದಿನವೂ ನೀರು ಇರುತ್ತದೆ. ಇದರೊಳಗೆ ಇರುವ ನೀರಿನ ಸೆಲೆಯ ಹೊರತಾಗಿ ಬೇರಾವ ನೀರಿನ ಸಂಪರ್ಕವು ಇದಕ್ಕೆ ಇಲ್ಲ. ಈ ಕೊಳದ ಒಂದು ಭಾಗದಲ್ಲಿ ಈಶ್ವರನ ಲಿಂಗವಿದೆ. ಜೊತೆಗೆ ಹುತ್ತದ ಕೊಳವೆಗಳಂತೆ ಇದರಲ್ಲೂ ಪ್ರಾಕೃತಿಕವಾಗಿ ಬೆಳೆದ ಪಾಚಿಯ ಕೊಳವೆಗಳು ಇದೆ. ಈ ಕೊಳದ ಸುತ್ತಲೂ ನಿಂತು ಚಪ್ಪಾಳೆ ತಟ್ಟಿದರೆ ಅದರ ಶಬ್ದದಿಂದ ನೀರಿನಲ್ಲಿ ಕಂಪನ ಉಂಟಾಗಿ ನೀರಿನಾಳದಿಂದ ಗುಳ್ಳೆಗಳು ಸೃಷ್ಟಿಯಾಗುತ್ತದೆ. ಹೀಗೆ ಬುಳುಬುಳು ಎಂದು ಮೇಲೆ ಬರುವ ನೀರಿನ ಗುಳ್ಳೆಗಳೆ ಗುಳಿ ಗುಳಿ ಎಂದು ಪ್ರಸಿದ್ಧಿಯಾಗಿದೆ.
ಹಿಂದೆ ಬೇಲೂರು ಹಳೇಬೀಡಿನ ಮೇಲೆ ಶತ್ರುಗಳು ದಾಳಿ ನಡೆದಾಗ ಅಲ್ಲಿಂದ ಬಂದ ಕುಟುಂಬವೊಂದು ಇಲ್ಲಿ ನೆಲೆ ನಿಂತು ಈಶ್ವರನ ದೇವಸ್ಥಾನ ಕಟ್ಟಿದ ಪ್ರತೀತಿ ಇದೆ. ಈ ದೇವಸ್ಥಾನದಲ್ಲಿ ಭಕ್ತಿಯಿಂದ ಬೇಡಿಕೊಂಡು, ಪೂಜೆಯನ್ನು ಸಲ್ಲಿಸಿ ಪಕ್ಕದಲ್ಲೇ ಇರುವ ಜಟಾತೀರ್ಥಕ್ಕೆ ಬಂದು ತಮ್ಮ ಇಷ್ಟಾರ್ಥ ಸಿದ್ದಿಸಲಿ ಎಂದು ಬಿಲ್ವಪತ್ರೆಯನ್ನು ಮೂರು ಬಾರಿ ಕೊಳದ ನೀರಿನಲ್ಲಿ ಮುಳುಗಿಸಿ ನಂತರ ಆ ಕೊಳದಲ್ಲಿ ಹಾಕುತ್ತಾರೆ. ಹೀಗೆ ಹಾಕಿದ ಆ ಪತ್ರೆಯೂ ತಕ್ಷಣ ಮೇಲೆ ಬಂದರೆ ಅವರೆಂದುಕೊಂಡ ಕೆಲಸ ಖಂಡಿತಾ ಆಗುತ್ತದೆ ಎಂದು ನಂಬಿಕೆ. ಬಿಲ್ವಪತ್ರೆ ಬರುವುದು ತುಂಬಾ ತಡವಾಯಿತು, ಬರಲೇ ಇಲ್ಲ ಎಂದರೆ ಬಹುಶಃ ಅವರೆಂದುಕೊಂಡ ಕೆಲಸ ಆಗುವುದಿಲ್ಲ ಎನ್ನುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ ಇದೊಂದು ವಿಸ್ಮಯಕಾರಿ ಕೊಳ. ನಂಬಿ ಬಂದ ಭಕ್ತರ ಕೆಲಸ ಆಗುತ್ತದೆ ಅಥವಾ ಇಲ್ಲ ಎಂದು ಸಾಂಕೇತಿಕವಾಗಿ ತಿಳಿಸುವುದು ಒಂದು ರೀತಿಯಾದರೆ ಜನರ ಚಪ್ಪಾಳೆ ಸದ್ದಿಗೆ ನೀರಿನಲ್ಲಿ ತರಂಗಗಳು ಏರ್ಪಟ್ಟು ಗುಳ್ಳೆಗಳು ಬರುವುದು ಮತ್ತೊಂದು ಸೋಜಿಗ. ಹಾಗಾಗಿ ಮನದಲ್ಲಿ ಯಾವುದೇ ಭಾವನೆಗಳು ಇರದಿದ್ದರೂ ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟರೆ ಸುಂದರ ಮಲೆನಾಡಿನ ಸೊಬಗಿನಿಂದ ಮನಸ್ಸಿಗೆ ಹಿತವೆನಿಸುವುದು ಸುಳ್ಳಲ್ಲ.
ಜಿ. ಹರೀಶ್ ಬೇದ್ರೆ
ಒಮ್ಮೆ ಹೋಗಿ ನೋಡಿ ಬರಬೇಕು.. ಮಾಹಿತಿ ಚೆನ್ನಾಗಿದೆ.
ಸ್ಥಳ ಪರಿಚಯ ಬರಹ ತುಂಬಾ ಚೆನ್ನಾಗಿದೆ, ನೋಡಿ ಬರುವ ಆಸೆ ಮೂಡಿಸಿದೆ