ಡಾ. ಸುಮಂಗಲಾ ಅತ್ತಿಗೇರಿ ಅವರ ಲೇಖನ-‘ಮನೆ ಎಂಬ ಬೆಚ್ಚಗಿನ ಗೂಡಿನಲ್ಲಿ….’

ಮನೆ ಎಂದರೆ ಯಾರಿಗೆ ಪ್ರೀತಿ, ಅಭಿಮಾನ, ಅಕ್ಕರೆಗಳಿರಲ್ಲ ಹೇಳಿ? ಎಲ್ಲರಿಗೂ ಅವರವರ ಮನೆ ಅವರಿಗೆ ಅಚ್ಚು ಮೆಚ್ಚು. ಎಲ್ಲಿಗೆ ಹೋಗಿರಲಿ ಮತ್ತೆ ಮರಳಿ ಮನೆಗೆ ಯಾವಾಗ ಹೋದೇನೊ ಎಂದು ಮನಸ್ಸು ಹಾತೊರೆಯುತ್ತಿರುತ್ತದೆ. ಮನೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ಬದುಕಿನ ಸುಂದರ ಆವರಣ. ಮನೆ ಎಂಬ ಬೆಚ್ಚಗಿನ ಗೂಡಿನಲ್ಲಿ ಅವ್ವನ ಪ್ರೀತಿ, ಅಪ್ಪನ ಅಕ್ಕರೆ, ಅಕ್ಕತಂಗಿಯರ ವಾತ್ಸಲ್ಯ, ಸಹೋದರರ ಸಲುಗೆ, ಹಿರಿಯರ ಹಾರೈಕೆ, ಪತಿಯ ಪ್ರೇಮ, ಸತಿಯ ಸಲ್ಲಾಪ, ಮಕ್ಕಳ ಮುದ್ದು… ಎಲ್ಲವೂ ಇರುತ್ತದೆ.
ಹೀಗೆ ಮನೆಯಲ್ಲಿದ್ದವರ ಮನಸ್ಸುಗಳು ಒಂದಾಗಿದ್ದರೆ, ಆ ಎಲ್ಲ ಮನಸ್ಸುಗಳಲ್ಲೂ ಮನೆಯವರ ಬಗೆಗೆ ಪರಸ್ಪರ ಪ್ರೀತಿ ವಾತ್ಸಲ್ಯಗಳಿದ್ದರೆ ಗುಡಿಸಲು ಕೂಡಾ ಅರಮನೆಯೇ ಆಗಿರುತ್ತದೆ. ಆದರೆ ಅರಮನೆಯಂತಹ ಮನೆಯಿದ್ದರೂ ಮನೆಯಲ್ಲಿರುವವರ ಮನಸ್ಸುಗಳು ಸರಿಯಿರದಿದ್ದರೆ ಏನಿದ್ದರೂ, ಏನು ಮಾಡಿದರೂ ಎಲ್ಲವೂ ವ್ಯರ್ಥ. ಮನೆ ಎಂದರೆ ಮನುಷ್ಯನಿಗೆ ನೆಮ್ಮದಿ ನೀಡುವ ತಾಣವಾಗಬೇಕೇ ಹೊರತು ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡುವ, ನೆಮ್ಮದಿ ಕೆಡಸುವಂತಿರಬಾರದು.
ಹಿಂದೆಲ್ಲ ಮೂರು ನಾಲ್ಕು ತಲೆಮಾರುಗಳ ಜನ ಒಂದೇ ಸೂರಿನಲ್ಲಿ ಬದುಕಿ ಬಾಳುತ್ತಿದ್ದರು. ಆಗ ಒಂದೇ ಮನೆಯಲ್ಲಿ ೩೦-೪೦ ಜನರಿದ್ದರೂ ಅರವಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತಿತ್ತು. ಆಗ ಅವರಾರು ಮನೆಯ ವಾಸ್ತುವಿನ ಬಗೆಗೆ ತಲೆಕೆಡೆಸಿಕೊಂಡವರಲ್ಲ. ಕೈ ತುಂಬಾ ಕೆಲಸಾ, ಹೊಟ್ಟೆ ತುಂಬಾ ಊಟಾ, ಕಣ್ಣ ತುಂಬಾ ನಿದ್ದೆ ಮಾಡುತ್ತಾ ನೆಮ್ಮದಿಯಿಂದ ಇರುತ್ತಿದ್ದರು. ಮನೆಯಲ್ಲಿ ಯಾವುದೇ ಹಬ್ಬ-ಹರಿದಿನಗಳಿರಲಿ, ಮದುವೆ ಮುಂಜುವಿಗಳಿರಲಿ, ಸೀಮಂತ-ನಾಮಕರಣಗಳಿರಲಿ ಎಲ್ಲರೂ ಒಟ್ಟಾಗಿ ಖುಷಿಯಿಂದ ಪಾಲ್ಗೊಂಡು ಆಚರಿಸಿ ಸಂಭ್ರಮಿಸುತ್ತಿದ್ದರು. ಸಾವು ನೋವಿನ ಸಂದರ್ಭಗಳನ್ನು ಜೊತೆಯಾಗಿ ಎದುರಿಸುತ್ತಿದ್ದರು. ಕಷ್ಟ ಬಂದರೂ ಎದೆಗುಂದದೆ ಬರ-ಬಡತನದ ಸಂದರ್ಭಗಳಲ್ಲೂ ಗಂಜಿ ಅಂಬಲಿ ಕುಡಿದಾದರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಅಂದು ಅವರಿಗೆಲ್ಲ ಕಾಡದ ವಾಸ್ತು ಸಮಸ್ಯೆ ಇಂದೇಕೆ ನಮ್ಮನ್ನು ಕಾಡುತ್ತಿದ್ದೆ?
ಇಂದು ಹಿಂದಿನಂತಿಲ್ಲ. ಎಲ್ಲವೂ ನಾಗಾಲೋಟದಿಂದ ಬದಲಾಗುತ್ತಿದ್ದೆ. ಹಿಂದಿನ ಮತ್ತು ಇಂದಿನ ತಲೆಮಾರಿನವರ ಜೀವನ ಶೈಲಿ ಬದಲಾಗಿದೆ. ಅಭಿರುಚಿ ಆಸಕ್ತಿಗಳು ಬದಲಾಗಿವೆ. ಅಂತರಂಗದ ಆನಂದಕ್ಕಿಂತ ಬಾಹ್ಯ ಆಡಂಬರ ವೈಭೋಗಕ್ಕೆ ಒತ್ತು ಕೊಟ್ಟು ತೋರಿಕೆಗೆ, ಒಣ ಪ್ರತಿಷ್ಠೆಗಾಗಿ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಧಾವಂತದಲ್ಲಿದ್ದೇವೆ. ಅದರಲ್ಲಿ ಮನೆ ನಿರ್ಮಾಣದ ಕನಸ್ಸೂ ಒಂದು.
ಪ್ರತಿ ವ್ಯಕ್ತಿಗೂ ತನ್ನ ಮನೆಯ ಬಗೆಗೆ ಒಂದು ಸುಂದರ ಕನಸಿರುತ್ತದೆ. ತಮ್ಮ ಮನೆ ಹಾಗಿರಬೇಕು, ಹೀಗಿರಬೇಕು ಎಂಬ ಕಲ್ಪನೆಗಳಿರುತ್ತವೆ. ಆ ಕನಸ್ಸಿನ ಮನೆ ನಿರ್ಮಾಣಕ್ಕಾಗಿ ಜೀವಿತಾವಧಿಯಲ್ಲಿ ದುಡಿದು ಗಳಿಸಿದ ಬಹುಪಾಲು ಹಣವನ್ನು ವ್ಯಯ ಮಾಡಿ ನಮ್ಮ ಕನಸ್ಸಿನ ಸುಂದರ ಮನೆಯನ್ನು ನಿರ್ಮಾಣ ಮಾಡುತ್ತೇವೆ. ಮನೆ ಕಟ್ಟುವ ಮೊದಲೇ ಯಾವ ದಿಕ್ಕಿಗೆ ಏನಿರಬೇಕು ಎಂದು ಅಳಿದು ತೂಗಿ ನೋಡಿ ಮನೆ ಕಟ್ಟುತ್ತೇವೆ.
ಮನೆ ಕಟ್ಟುವುದೇ ನಾವು ನೆಮ್ಮದಿಯಿದ ಆ ಮನೆಯಲ್ಲಿ ವಾಸಿಸಬೇಕೆಂದು. ಆದ್ದರಿಂದ ನಮ್ಮ ಇಚ್ಛೆಯ ಪ್ರಕಾರ ಮನೆ ಕಟ್ಟುವುದಾಗಲಿ, ವಾಸ್ತು ಪ್ರಕಾರ ಮನೆ ಕಟ್ಟುವುದಾಗಲಿ ತಪ್ಪಲ್ಲ. ಆದರೆ ನಮ್ಮ ಮನೆ ನಿರ್ಮಾಣದ ಕನಸ್ಸು ನಮ್ಮ ಬಜೆಟ್ಗೆ ಭಾರವಾಗದೆ ಅದಕ್ಕೆ ಸರಿದೂಗುವಂತಿರಬೇಕೇ ಹೊರತು ಮಿತಿ ಮೀರಿ ಸಾಲ ಮಾಡಿಕೊಳ್ಳುವ ಹಂತಕ್ಕೆ ಹೋಗಬಾರದು. ಹಾಗೆಯೇ “ಮನೆಕಟ್ಟಿ ನೋಡು, ಮದುವೆ ಮಾಡಿ ನೋಡು” ಎಂಬ ಗಾದೆ ಮಾತಿನಂತೆ ಒಮ್ಮೆ ಮನೆಕಟ್ಟುವುದೇ ದೊಡ್ಡ ಸಾಹಸದ ಕೆಲಸವಾಗಿರುತ್ತದೆ. ಹಾಗಾಗಿ ನಾವು ಇಚ್ಛೆಪಟ್ಟು ಕಟ್ಟಿದ ಮನೆಯನ್ನೊ ಅಥವಾ ನಮ್ಮ ಪೂರ್ವಿಕರು ಶ್ರಮ ಪಟ್ಟು ಕಟ್ಟಿದ ಮನೆಯನ್ನೊ ವಾಸ್ತು ಸರಿ ಇಲ್ಲವೆಂದು ಕಟ್ಟಿದ ಮನೆಯ ಗೋಡೆ ಒಡೆಯುವುದಾಗಲಿ, ಕಿಡಕಿ, ಬಾಗಿಲುಗಳನ್ನು ಕೀಳುವುದಾಗಲಿ ಎಷ್ಟು ಸರಿ? ಏಕೆಂದರೆ ಮನೆ ಕಟ್ಟಿದವರಿಗೆ ಗೊತ್ತು ಅದರ ಕಷ್ಟವೇನೆಂದು. ಒಮ್ಮೆ ಕಟ್ಟುವಾಗಲೇ ಅದಕ್ಕಾಗಿ ನಮ್ಮ ಸಾಕಷ್ಟು ಸಮಯ ಮತ್ತು ಹಣ ವ್ಯಯ ಮಾಡಿರುತ್ತೇವೆ. ಮತ್ತೆ ಯಾರೋ ಎನೋ ಹೇಳಿದರೆಂದು ಕಟ್ಟಿರುವ ಮನೆ ಕೆಡವಿ ಮತ್ತೆ ಕಟ್ಟುವುದು ನಮ್ಮ ಮೂರ್ಖತನವೇ ಸರಿ.


ವಾಸ್ತು ಪ್ರಕಾರ ಮನೆ ಕಟ್ಟಿದರೆ ಸಮಸ್ಯೆಗಳೇ ಬರುವುದಿಲ್ಲ ಎಂದೇನಿಲ್ಲ. “ಬಾರದು ಬಪ್ಪದು, ಬಪ್ಪುದು ತಪ್ಪದು” ಎಂಬಂತೆ ಮನೆ ಗುಡಿಸಲೇ ಇರಲಿ ಬಂಗಲೆಯೇ ಇರಲಿ ಬದುಕೆಂದರೆ ಒಂದಿಲ್ಲೊಂದು ತೊಂದರೆ, ಎಡರು ತೊಡರುಗಳು, ಸುಖ-ದುಃಖ, ನೋವು-ನಲಿವುಗಳು, ಸಮಸ್ಯೆ-ಸವಾಲುಗಳು ಬರುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಬಂದರೂ ಅದಕ್ಕೆಲ್ಲ ನಾವು ವಾಸಿಸುವ ಮನೆಯ ವಾಸ್ತುದೋಷವೇ ಕಾರಣವೆಂದು ಭ್ರಮಿಸುತ್ತೇವೆ. ಹಾಗಾಗಿ ಹಿಂದೆಂದಿಗಿಂತಲೂ ಇಂದು ನಾವೆಲ್ಲ ಮನೆಯ ವಾಸ್ತುವಿನ ಬಗೆಗೆ ಅತಿಯಾಗಿ ತಲೆ ಕೆಡಿಸಿಕೊಳ್ಳುತ್ತಿದ್ದೇವೆ. ಇಲ್ಲವೆ, ಇಲ್ಲ ಸಲ್ಲದ್ದೆಲ್ಲ ಹೇಳಿ ಹಾಗೆ ಮನೆಯ ವಾಸ್ತುವಿನ ಬಗ್ಗೆ ತಲೆ ಕೆಡಿಸಿಕೊಳ್ಳುವಂತೆ ಜನಸಾಮಾನ್ಯರನ್ನು ಪ್ರೇರೆಪಿಸುವ ಕೆಲಸವನ್ನು ನಮ್ಮ ಮಾಧ್ಯಮಗಳು, ಜಾಹಿರಾತುಗಳು, ಜ್ಯೋತಿಷಿಗಳು, ವಾಸ್ತು ಪಂಡಿತರು ಮಾಡುತ್ತಿದ್ದಾರೆ. ಅಮಾಯಕ ಜನರು ಕೂಡಾ ಅದನ್ನೆಲ್ಲ ನಂಬಿ ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ.
ಮನೆಯಲ್ಲಿರುವವರ ಮನಸ್ಸು ಸರಿಯಾಗಿರದಿದ್ದರೆ ಪಾಪ ಮನೆ ಏನು ಮಾಡೀತು? ಇತ್ತಿಚೀಗೆ ವಿಘಟಿತ ಚಿಕ್ಕ ಕುಟುಂಬಗಳಿದ್ದು ಮನೆಯಲ್ಲಿ ಇರುವವರೇ ಮೂರು ಮತ್ತೊಂದು ಎಂಬಂತೆ ಗಂಡ ಹೆಂಡತಿ ಮಕ್ಕಳು ಹೆಚ್ಚೆಂದರೆ ಒಬ್ಬಿಬ್ಬ ಹಿರಿಯ ಜೀವಿಗಳು ಮನೆಯಲ್ಲಿದ್ದರೆ ಹೆಚ್ಚು. ಆದರೂ ಇದ್ದ ಮೂರು ಮತ್ತೊಂದು ಜನರಲ್ಲಿಯೇ ಹೊಂದಾಣಿಕೆ ಇರದೆ ಜಗಳ, ಮನಸ್ತಾಪಗಳಂತಹ ಘಟನೆಗಳು ನಡೆಯುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಇಲ್ಲದಾಗುತ್ತದೆ. ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಿ ಅದರಲ್ಲೂ ಹಾನಿ ಉಂಟಾಗಬಹುದು. ಇದೆಲ್ಲದರಿಂದ ಬೇಸತ್ತ ಮನಸ್ಸಿಗೆ ಎಲ್ಲೊ ಒಂದು ಕಡೆ ನಮ್ಮ ಮನಸ್ಸಿನಲ್ಲಿ ಯಾರೋ ಬಿತ್ತಿದ ವಾಸ್ತು ದೋಷದ ವಿಚಾರಗಳು ನಿಜವೆನಿಸತೊಡಗುತ್ತವೆ. ಹಾಗಾಗಿ ಅವುಗಳನ್ನು ನಂಬುತ್ತೇವೆ. ಹೇಗಾದರೂ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲಸಿದರೆ ಸಾಕೆಂದು ನಮಗಾಗಿ ಪೂರ್ವಿಕರು ಕಟ್ಟಿದ ಸುಂದರ ಮನೆಯನ್ನೊ ಅಥವಾ ನಾವೇ ಇಚ್ಛೆಪಟ್ಟು ಕಟ್ಟಿಸಿದ ಮನೆಯ ಗೋಡೆ, ಕಿಡಿಕಿಗಳ ದಿಕ್ಕು ಸರಿ ಇಲ್ಲವೆಂದು ವಾಸ್ತು ಸರಿ ಪಡಿಸುವ ಉಮೇದಿನಲ್ಲಿ ಇದ್ದ ಮನೆಯನ್ನು ವಿರೂಪಗೊಳಿಸಿ ನಮಗೆ ಬೇಕಾದ ರೀತಿ ಹೊಸ ವಿನ್ಯಾಸಗೊಳಿಸುವ ಹಿನ್ನಲೆಯಲ್ಲಿ ನಮಗೆ ಗೊತ್ತಿಲ್ಲದೆ ಸಾಕಷ್ಟು ಹಣ ಕಳೆದು ಕೊಳ್ಳುತ್ತೇವೆ!


ವಾಸ್ತು ಹೆಸರಿನಲ್ಲಿ ಮನೆಯ ಇದ್ದ ಕಿಡಕಿ ಬಾಗಿಲುಗಳನ್ನು ಮುಚ್ಚುವ ಇಲ್ಲವೇ ಕೀಳುವ ಮುನ್ನ ನಾವು ಒಂದಿಷ್ಟು ಯೋಚಿಸಲೇಬೇಕು. ಬೆಳಗುವ ಬೆಳಕಿಗೆ, ಬೀಸುವ ಗಾಳಿಗೆ, ಹರಿಯುವ ನೀರಿಗೆ, ಉರಿಯುವ ಬೆಂಕಿಗೆ, ಬೆಳೆಯುವ ಗಿಡಮರಗಳಿಗೆ, ಅರಳುವ ಹೂವುಗಳಿಗೆ ವಾಸ್ತುವೆಲ್ಲಿ? ಇವುಗಳಿಗೆ ವಾಸ್ತುವಿನ ಹಂಗಿಲ್ಲ. ಇವು ನಿಸರ್ಗದಲ್ಲಿ ಎಲ್ಲರಿಗೂ ಎಲ್ಲಕಡೆಗೂ ಮುಕ್ತವಾಗಿ ಸಿಗುತ್ತವೆ. ಹಾಗೆಯೇ ಪ್ರಾಣಿಗಳಿಗೆ, ಹಕ್ಕಿಯ ಗೂಡುಗಳಿಗೆ, ಬಡವರ ಗುಡಿಸಲುಗಳಿಗೆ ವಾಸ್ತುವೆಲ್ಲಿ? ದೊಡ್ಡ ನಗರಗಳಲ್ಲಿ ದುಡಿವ ಜನರ ಪುಟ್ಟ ಬಾಡಿಗೆ ಮನೆಗಳಿಗೆ ವಾಸ್ತು ಎಲ್ಲಿ? ಬಿಸಿಲು ಚಳಿಮಳೆ ಎನ್ನದೆ ಊರೂರು ಸುತ್ತುವ ಅಲೆಮಾರಿಗಳು ನೆಲೆ ಸಿಕ್ಕ ನೆಲದಲ್ಲಿ ಬಿಡಾರ ಹೂಡುವ ಟೆಂಟುಗಳಿಗೆ ವಾಸ್ತುವೆಲ್ಲಿ? ಹಸಿವು ನೀಗಿಸಲು ಅನ್ನಕ್ಕಾಗಿ ಅಲೆಯುವ ಬಿಕ್ಷುಕರಿಗೆ, ಬೀದಿ ಬಳಿಯ ಅನಾಥರಿಗೆ ವಾಸ್ತುವೆಲ್ಲಿ? ಇವರೆಲ್ಲ ವಾಸ್ತು ಬಗ್ಗೆ ಯೋಚಿಸಿದರೆ ಬದುಕು ಸಾಗುಸುವುದಾದರು ಹೇಗೆ?
ಮನೆಯೆಂಬ ಬೆಚ್ಚಗಿನ ಗೂಡಿನಲ್ಲಿ ಮನೆ ಮಂದಿಯ ಮನಸ್ಸುಗಳು ಸರಿಯಾಗಿದ್ದರೆ ಮನೆಯ ವಾಸ್ತು ತಾನಾಗಿಯೇ ಸರಿಯಾಗುತ್ತದೆ. ಮೊದಲು ನಮ್ಮ ಮನದ ವಾಸ್ತು ಸರಿಯಾಗಬೇಕು. ಮನೆಯ ಗೋಡೆಗಳನ್ನು ಒಡೆಯುವ ಮೊದಲು ಮನಸ್ಸಿನಲ್ಲಿ ಎದ್ದ ಗೋಡೆಗಳನ್ನು ಒಮ್ಮೆ ಕೆಡುವಿಬಿಡಿ ಆಗ ವಾಸ್ತು ದೋಷವೆಲ್ಲ ತಾನಾಗಿಯೇ ಪರಿಹಾರವಾಗುತ್ತದೆ. ಜೊತೆಗೆ ಬದುಕನ್ನು ಉತ್ತಮವಾಗಿ ಸಾಗಿಸಲು ಮನೆಯ ವಾಸ್ತುವಿಗಿಂತ ವಾಸ್ತವವನ್ನು ಅರಿತು ನಡೆಯುವ ಮನಸ್ಥಿತಿ ಮುಖ್ಯ.

———————–

4 thoughts on “ಡಾ. ಸುಮಂಗಲಾ ಅತ್ತಿಗೇರಿ ಅವರ ಲೇಖನ-‘ಮನೆ ಎಂಬ ಬೆಚ್ಚಗಿನ ಗೂಡಿನಲ್ಲಿ….’

Leave a Reply

Back To Top