ಗಂಗಾ ಚಕ್ರಸಾಲಿ ಅವರ ಕವಿತೆ-ಮುಖವಾಡ

ಅದೆಷ್ಟು ಸಲ ಮುಖವಾಡ ಹಾಕುವುದು
ಬಿರುಕಾದ ಸಂಸಾರಕೆ ತೇಪೆ ಹಚ್ಚಲು
ತೇಪೆ ಹಾಕುವುದು…
ಮಾನಿನಿಯರ ಜನ್ಮಸಿದ್ಧ ಹಕ್ಕೇ?

ಗಂಡಸೆಂಬ ಅಹಂಕಾರಕ್ಕೆ
ಅದೆಷ್ಟು ಸಲ ತಲೆಬಾಗುವದು
ಬಾಗಿ ಬಾಗಿ ವಯಸ್ಸು ಮಾಗಿದರೂ..
ಅವನಂತೂ ಬಗ್ಗಲೇ ಇಲ್ಲ…|

ಮತ್ತೆ ಅವಳೇ…..ನೋಡುಗರಿಗಾಗಿ
ತನ್ನದು” ಸುಂದರ ಸಂಸಾರ”ಎಂಬ ಶೀರ್ಷಿಕೆಯಲ್ಲಿ
ಒಲ್ಲದ ನಗುವ ತಂದು ತುಟಿ ಅಗಲಿಸುವದು
ವಾಟ್ಸಪ್ ಫೇಸ್ಬುಕ್ ಗೆ ಸ್ಟೇಟಸ್ ಇಡುವದು |

“ಮಕ್ಕಳಿಗೋಸ್ಕರ ಇದೆಲ್ಲ” ಎಂಬ ಸ್ವಯಂ ಪ್ರತಿಜ್ಞೆ
ಅದಕ್ಕಾಗಿಯೇ ಅವಳದು ಹತ್ತಾರು ಪಾತ್ರಗಳು
ಮಕ್ಕಳ ಮುಂದೆ, ದುಡಿಯುವಲ್ಲಿಯೊಂದು
ತವರುಮನೆಯಲ್ಲೊಂದು,ಮಂದಿಯೊಳಗೊಂದು..

ಹಗಲಿನ ನಟನೆಯಲ್ಲಿ ಕಳೆದು ಹೋದವಳಿಗೆ
ಅಂಧಕಾರದಲ್ಲಿ ತಾನಾಗುವ ಪಾತ್ರ..
ಕಂಗಳ ಹನಿಗಳು ಉರುಳಿ,ಉರುಳಿ ಸಂತೈಸುತ್ತವೆ,
ಬೆಳಕಿನ ನಟನೆಗೆ ಸಿದ್ಧವಾಗಲು

ಸಾಕುಬಿಡು ನಿನ್ನೀ ನಟನೆ
ಎಷ್ಟು ಹೇಳಿದರೇನು..
“ಸಹನಾಮಯಿ, ತ್ಯಾಗಮಯಿ”ಪದಗಳನ್ನು
ಅವಳಿಂದ ಕಳಚಲು ಸಾಧ್ಯವಾಗುತ್ತಲೇ ಇಲ್ಲ…


Leave a Reply

Back To Top