“ಎಳ್ಳ ಅಮವಾಸ್ಯೆ ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್ ಗೌಡ ಪಾಟೀಲ್ ಲೇಖನ

ಭಾರತ ದೇಶ ಕೃಷಿ ಪ್ರಧಾನವಾದದ್ದು. ನಾವು ದೇವರನ್ನು ಪೂಜಿಸುವಷ್ಟೇ ಸಹಜವಾಗಿ ಪಂಚಭೂತಗಳಾದ ಭೂಮಿ, ಅಗ್ನಿ, ವಾಯು, ನೀರು ಮತ್ತು ಆಕಾಶಗಳನ್ನು ಕೂಡ ಪೂಜಿಸುತ್ತೇವೆ. ಅದರಲ್ಲಿಯೂ ಭೂಮಿ ತಾಯಿ ನಮ್ಮನ್ನು ಹಡೆದ ತಾಯಿಗಿಂತಲೂ ಹೆಚ್ಚು. ತಾವು ಹುಟ್ಟಿದ ನಂತರ ನಾವು ನಡೆದಾಡುವ, ನಲಿಯುವ, ಮನೆ ಕಟ್ಟಿಕೊಳ್ಳುವ, ಬದುಕಿಗಾಗಿ ಹೊಲದಲ್ಲಿ ಉತ್ತುವ, ಬಿತ್ತುವ, ಬೆಳೆ ಬೆಳೆಯುವ, ಕೊನೆಗೆ ಸತ್ತಾಗ ಮಣ್ಣಲ್ಲಿ ಮಣ್ಣಾಗುವ ನಮ್ಮನ್ನು ತನ್ನ ಮಡಿಲಲ್ಲಿ ಸೇರಿಸಿಕೊಳ್ಳುವ ಭೂಮಿತಾಯಿ ನಮ್ಮೆಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿದ್ದಾಳೆ. ಭೂಮಿತಾಯಿಯೆಡೆಗಿನ ನಮ್ಮ ಶ್ರದ್ಧೆ ಅನನ್ಯ, ಅದ್ಭುತ.
ಶ್ರಾವಣ ಮಾಸದಿಂದ ದೀಪಾವಳಿಯವರೆಗೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳ ಸಾಲು ಸಾಲು ಮೆರವಣಿಗೆ ಹೊರಡುತ್ತದೆ. ದೀಪಾವಳಿಯ ನಂತರ ಬರುವ ಎಳ್ಳ ಅಮವಾಸ್ಯೆಯ ಸಮಯದಲ್ಲಿ ಚಳಿ ಕಮ್ಮಿಯಾಗಿ ಎಳ್ಳು ಕಾಳಿನಷ್ಟು ಹಿತವಾದ ಬಿಸಿಲು ಮೂಡುತ್ತದೆ. ಈ ಸಮಯದಲ್ಲಿಯೇ ಪ್ರತಿವರ್ಷಕ್ಕೆ ಮುಂಗಾರು ಮತ್ತು ಹಿಂಗಾರು ಬೆಳೆ ಎಂದು ಎರಡು ಬೆಳೆ ತೆಗೆಯುವ ರೈತನ ಶ್ರಮಕ್ಕೆ ಪ್ರತಿಫಲವಾಗಿ ತುಂಬಿ ನಿಂತ ಪೈರು ತೆನೆಗಳು ಕಣ್ಸಳೆಯುತ್ತಿರುತ್ತವೆ. ಹೊಲದ ಪ್ರತಿ ಮೂಲೆಯೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇನ್ನೇನು ಕೊಯ್ಲು ಮತ್ತು ರಾಶಿ ಮಾಡುವ ಕ್ರಿಯೆ ಆರಂಭವಾಗುವ ಕೆಲವೇ ದಿನಗಳ ಮುಂಚೆ ಈ ದಿನದಂದು ರೈತನು ಭೂಮಿತಾಯಿಗೆ ಪೂಜೆ ಸಲ್ಲಿಸಿ ಸೀಮಂತದ ಊಟವನ್ನು ಬಡಿಸುತ್ತಾನೆ, ಜೊತೆ ಜೊತೆಗೆ ತನ್ನ ಬಂಧು ಬಾಂಧವರೊಡಗೂಡಿ ಹಬ್ಬದ ಊಟ ಮಾಡಿ ಸಡಗರ ಪಡುತ್ತಾನೆ. ಇದನ್ನು ಉತ್ತರ ಕರ್ನಾಟಕದಲ್ಲಿ ‘ಚರಗ ಚೆಲ್ಲುವುದು’ ಎಂದು ಕರೆಯುತ್ತಾರೆ.

ಎಳ್ಳು ಅಮಾವಾಸ್ಯೆಗೆ ಹಲವಾರು ದಿನಗಳ ಮುಂಚೆಯೇ ಹಬ್ಬದ ತಯಾರಿ ಪ್ರಾರಂಭವಾಗುತ್ತದೆ. ರೈತರ ಮನೆ ಎಂದ ಮೇಲೆ, ಹೊಲಕ್ಕೆ ಹೋಗಿ ಬರುವ ಹಾದಿಯಲ್ಲಿ ದೊರೆಯುವ ಪ್ರತಿಯೊಬ್ಬರು ರೈತನಿಗೆ ಅತಿಥಿಗಳೇ.ಎಳ್ಳು ಹಚ್ಚಿದ ಜೋಳ ಮತ್ತು ಸಜ್ಜೆಯ ರೊಟ್ಟಿಗಳನ್ನು ತೆಳುವಾಗಿ ಬಡಿದು ಇಲ್ಲವೇ ಲಟ್ಟಿಸಿ ಬೇಯಿಸಿ ಖಡಕ್ ಎಂಬಂತೆ ಮಾಡಿ ಎತ್ತಿಟ್ಟಿರುತ್ತಾರೆ. ಹಲವಾರು ಬಗೆಯ ಚಟ್ನಿಪುಡಿಗಳು, ಕೆಂಪು ಹಿಂಡಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಎಣ್ಣೆ ಹೋಳಿಗೆ, ಕರ್ಚಿಕಾಯಿಗಳು ಒಂದೆರಡು ದಿನ ಮೊದಲೆ ತಯಾರಾದರೆ, ಹಬ್ಬದ ದಿನ ಎಣ್ಣೆಗಾಯಿ ಬದನೆಕಾಯಿ, ಮೊಳಕೆ ಬರಿಸಿದ ಕಾಳುಗಳ ಪಲ್ಯ, ಕುದಿಸಿದ ಮೆಣಸಿನ ಕಾಯಿಯ ಪಲ್ಯ, ಪುಂಡಿ ಪಲ್ಯ, ಹಿಟ್ಟಿನ ಪಲ್ಯ, ಹಲವಾರು ಬಗೆಯ ಹಸಿಯಾಗಿಯೇ ತಿನ್ನಬಹುದಾದ ಸೌತೆಕಾಯಿ, ಗಜ್ಜರಿ, ಹಸಿ ಈರುಳ್ಳಿ, ಮೆಂತೆ ಸೊಪ್ಪು ಕಲಸಿ ಅದಕ್ಕೆ ಎಣ್ಣೆ ಮತ್ತು ಗುರೆಳ್ಳು ಪುಡಿ ಕಲಸಿ ಮಾಡಿದ ಪಚ್ಚಡಿ, ಭೂಮಿತಾಯಿಯ ನೈವೇದ್ಯಕ್ಕಾಗಿ ಕುಚ್ಚಗಡಬು, ಸಜ್ಜೆ ಕಡುಬು, ಜೋಳದ ಕಡಬು, ಚಿತ್ರಾನ್ನ ಮೊಸರನ್ನಗಳ ಬುತ್ತಿ ಅದರ ಜೊತೆಜೊತೆಗೆ ಕರಿದ ಹಪ್ಪಳ ಸಂಡಿಗೆ ಮೆಣಸಿನಕಾಯಿ ಬಾಳಕಗಳು ಹೀಗೆ ಹಲವಾರು ಪದಾರ್ಥಗಳು ತಯಾರಾಗಿ ಡಬ್ಬಗಳಲ್ಲಿ ಶೇಖರಿಸಲ್ಪಡುತ್ತವೆ. ಎಲ್ಲ ಡಬ್ಬಗಳನ್ನು ತೇವದ ಅರಿವೆಯಿಂದ ಒರೆಸಿ ವಿಭೂತಿ ಪಟ್ಟಿಯನ್ನು ಬರೆದು ಟ್ರ್ಯಾಕ್ಟರ್, ಎತ್ತಿನಬಂಡಿಗಳಲ್ಲಿ ಹೇರಲಾಗುತ್ತದೆ. ಇನ್ನೂ ಕೆಲವರು ಬಿದಿರಿನ ಪುಟ್ಟಿಯಲ್ಲಿ ಎಲ್ಲ ವ್ಯಂಜನಗಳ ಪಾತ್ರೆಗಳನ್ನು ತುಂಬಿ ಅದರ ಮೇಲೆ ಬಿಳಿ ವಸ್ತ್ರವನ್ನು ಹೊದಿಸಿರುತ್ತಾರೆ.

 ಹೆಣ್ಣು ಮಕ್ಕಳು ಸಾಂಪ್ರದಾಯಿಕ ಇಲ್ಕಲ್ ಸೀರೆಗಳನ್ನು, ಗುಳೇದಗುಡ್ಡದ ಕುಪ್ಪಸದ ಜೊತೆಗೆ ಧರಿಸುತ್ತಾರೆ ಇಲ್ಲವೇ ರೇಷ್ಮೆ ಸೀರೆಗಳನ್ನು ಧರಿಸಿ ತಮ್ಮ ಹಿರಿಯರಿಂದ ಬಂದ ಸಾಂಪ್ರದಾಯಿಕ ಒಡವೆಗಳಾದ ಗುಂಡಿನ ಸರ, ಬೋರಮಾಳ ಸರ, ಗುಂಡ್ಹಚ್ಚಿನ ಸರ, ಪಾಟಲಿ, ಬಿಲ್ವಾರ, ಹಸಿರು ಮತ್ತು ಕೆಂಪು ಚುಕ್ಕಿಗಳ ಬಳೆಯ ಜೊತೆ ಧರಿಸಿ ಸೆರಗು ತಲೆಯ ಮೇಲೆ ಹೊದ್ದು ಪುಟ್ಟದೊಂದು ಅರಿವೆಯ ಪುಟ್ಟ ಸಿಂಬಿ ಗಂಟನ್ನು ತಲೆಯ ಮೇಲೆ ಇರಿಸಿಕೊಂಡು ಅದರ ಮೇಲೆ ಬಿದಿರು ಪುಟ್ಟಿಯನ್ನು ಹೊತ್ತು ಹೊಲದತ್ತನಡೆಯುತ್ತಾರೆ.ಚಿಕ್ಕ ಮಕ್ಕಳ ಕೈಯಲ್ಲಿ ಪೂಜೆಗೆ ಬೇಕಾಗುವ ಪರಿಕರಗಳು ಇರುತ್ತವೆ.

ಇನ್ನು ಮನೆಯ ಗಂಡಸರು, ಮಕ್ಕಳು ಮನೆಯಲ್ಲಿರುವ ದನ ಕರುಗಳನ್ನು ಹಳ್ಳಕ್ಕೆ ಕೊಂಡೊಯ್ದು ಸ್ನಾನ ಮಾಡಿಸಿ ಅವುಗಳ ಕೋಡುಗಳಿಗೆ ಬಣ್ಣ ಬಳಿದು ಅವುಗಳ ಬೆನ್ನ ಮೇಲೆ ಜರತಾರಿಯ ಸೀರೆಯಿಂದ ತಯಾರಾದ ಅಂಗವಸ್ತುಗಳನ್ನು ಹೊದ್ದಿಸಿ, ಜೂಲಾ,ಕೋಡಣಸು, ಕೊಂಬಿನ ಸರಗಳನ್ನು ಹಾಕಿ,ಕೊಂಬಿಗೆ ರಿಬ್ಬನ್ಗಳನ್ನು ಕಟ್ಟಿ ತಾವು ಕೂಡ ತಯಾರಾಗಿ ಹೊಲದತ್ತ ನಡೆಯುತ್ತಾರೆ.

 ಭೂತಾಯಿಯ ಪೂಜೆ ಮಾಡಲು ಸೀಗಿ ಹುಣ್ಣಿಮೆಯಲ್ಲಿ ಮಾಡುವಂತೆಯೇ ಹೊಲದಲ್ಲಿರುವ ಬನ್ನಿ ಗಿಡದ ಕೆಳಗೆ ಒಂದು ಅಚ್ಚುಕಟ್ಟಾದ ತಾವನ್ನು ಸ್ವಚ್ಛಗೊಳಿಸಿ ಅಲ್ಲಿಯೇ ಜಮಖಾನವನ್ನು ಹಾಸಿ ಬನ್ನಿ ಗಿಡದ ಕೆಳಗೆ ಪಂಚಪಾಂಡವರ ಹೆಸರಿನಲ್ಲಿ ಐದು ಮತ್ತು ಕರ್ಣನ ಹೆಸರಿನಲ್ಲಿ ಒಂದು ಕಲ್ಲನ್ನು ಪ್ರತಿಷ್ಠಾಪಿಸಿ ಭೂಮಿತಾಯಿಯನ್ನು ಬನ್ನಿ ಮರದಲ್ಲಿ ಆಹ್ವಾನಿಸಿ ಪೂಜಿಸಿ, ಮಂಗಳಾರತಿ ಮಾಡಿ ಕಾಯಿ ಒಡೆದು ನೈವೇದ್ಯವನ್ನು ಮಾಡುತ್ತಾರೆ. ಉತ್ತಮ ಇಳುವರಿಗಾಗಿ ಪ್ರಾರ್ಥಿಸುತ್ತಾರೆ. ನಂತರ ಎಲ್ಲಾ ಆಹಾರ ಪದಾರ್ಥಗಳನ್ನು ಒಂದು ತಟ್ಟೆಯಲ್ಲಿ ಹಾಕಿ ಹೊಲದ ಸುತ್ತಲೂ ಸಿಂಪಡಿಸುತ್ತಾ ಹುಲ್ಲುಲ್ಲಿಗೊ… ಚಳ್ಳಂಬ್ರಿಗೊ ಎಂದು ಕೂಗುತ್ತಾ ಹೊಲದ ಸುತ್ತಲೂ ಚೆಲ್ಲುತ್ತಾ ಹೋಗುತ್ತಾರೆ. ಹುಲ್ಲುಲ್ಲಿಗೆ ಅಂದರೆ ಪ್ರತಿಯೊಂದು ಹುಲ್ಲಿನ ಕಣಕ್ಕೂ ಚಳ್ಳಂಬರಿಗೋ ಎಂದರೆ ಪ್ರತಿಯೊಂದು ಸಸಿಯ ಬೇರಿಗೂ ಈ ಆಹಾರ ಮುಟ್ಟಲಿ ಎಂಬುದು ರೈತನ ಆಶಯ. ಇನ್ನು ಕೆಲವೆಡೆ ಈ ದಿನ ರೈತರು ತಮ್ಮ ಜಮೀನಿನಲ್ಲಿ ಎಳ್ಳು ಹಾಗೂ ಬೆಲ್ಲವನ್ನು ಕೂಡ ಚಿಮ್ಮುತ್ತಾರೆ. ಎಳ್ಳು ಹಾಗೂ ಬೆಲ್ಲಗಳು ಭೂಮಿಯ ಫಲವತ್ತತೆಯನ್ನು ಕಾಪಾಡುವ ಎರೆಹುಳುಗಳಿಗೆ ಆಹಾರವಾಗಲಿ ಎಂಬುದು ಈ ಕಾರ್ಯದ ಹಿಂದಿನ ಉದ್ದೇಶ. ಜೊತೆಗೆ ಹೊಲದಲ್ಲಿರುವ ಎಲ್ಲಾ ಕ್ರಿಮಿಕೀಟಗಳಿಗೂ ರೈತ ಚರಗ ಚೆಲುವ ಮೂಲಕ ಆಹಾರವನ್ನು ಸಲ್ಲಿಸುತ್ತಾನೆ. ತನ್ಮೂಲಕ ‘ವಸುದೈವ ಕುಟುಂಬಕಂ’ ಎಂದು ಜಗತ್ತಿಗೆ ಸಾರುತ್ತಾನೆ.

ಹೀಗೆ ಭೂತಾಯಿಗೆ ಚರಗ ಚೆಲ್ಲಿದ ನಂತರ ರೈತನ ಕುಟುಂಬ ತನ್ನ ಬಂಧು ಬಾಂಧವರೊಡಗೂಡಿ ಹಬ್ಬದ ಅಡುಗೆಯನ್ನು ಸವಿಯುತ್ತಾರೆ. ರೈತನ ಮನೆಯ ಅಡುಗೆ ಮೃಷ್ಟಾನ್ನಕ್ಕಿಂತಲೂ ಹೆಚ್ಚು. ಸವಿದಷ್ಟು ಸವಿ ಹೆಚ್ಚಾಗುವ ಮೊಗೆದಷ್ಟು ಬಸಿವ ನೀರಿನ ಊಟೆಯಂತೆ.

ಪೌರಾಣಿಕವಾಗಿ ಈ ದಿನದಂದು ಪಾಂಡವರು ಹಾಗೂ ಕೌರವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಎಲ್ಲಾ ಬಂಧು ಮಿತ್ರರಿಗೆ ಪಂಚಪಾಂಡವರು ಪಿಂಡ ಪ್ರಧಾನ ಮಾಡಿದ ದಿನವಿದು.
ಇನ್ನು ಕರ್ನಾಟಕದ ಮಲೆನಾಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಳ್ಳಮಾವಾಸ್ಯೆಯ ದಿನ ತೀರ್ಥ ಸ್ನಾನವೇ ಪ್ರಮುಖ. ಈ ದಿನ ತಮ್ಮ ಪಿತೃಗಳಿಗೆ ತರ್ಪಣ ಬಿಡುವ ಮೊದಲು ಜನರು ಸಮುದ್ರದಲ್ಲಿ ಮುಳುಗು ಹಾಕಿ ನಂತರ ಪಿತೃಗಳಲ್ಲಿ ಪ್ರಾರ್ಥಿಸುತ್ತಾರೆ ಇನ್ನು ಕೆಲವೆಡೆ ನದಿಗಳಲ್ಲಿ ತೀರ್ಥ ಸ್ನಾನ ಮಾಡಿ ಪಿತೃಗಳಿಗೆ ತರ್ಪಣ ಬಿಡುತ್ತಾರೆ. ಶ್ರಾದ್ಧ ಕಾರ್ಯಗಳನ್ನು ಮಾಡುವ ಮೂಲಕ ಬದುಕಿನಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದು ವಿಶೇಷವಾಗಿ ಎಳ್ಳನ್ನು ದಾನ ಮಾಡುತ್ತಾರೆ, ಕಾರಣ ಎಳ್ಳಿಗೆ ಪಾಪ ನಾಶ ಮಾಡುವ ಶಕ್ತಿ ಇದೆ ಎನ್ನುವ ನಂಬಿಕೆ ಜನರದು. ಸಂಕಷ್ಟವನ್ನು ಅನುಭವಿಸುತ್ತಿರುವ, ಸಾಡೇಸಾತಿ ಇದೆ ಎಂದು ನಂಬುವ ಜನರು ವಿಶೇಷವಾಗಿ ಶನಿ ದೇವರನ್ನು ಪೂಜಿಸುತ್ತಾರೆ.

ಒಟ್ಟಿನಲ್ಲಿ ಎಳ್ಳ ಅಮವಾಸೆ ಮನೆ ಮನಗಳನ್ನು ಬೆಸೆಯುವ ಭೂಮಿ ತಾಯಿ ಮತ್ತು ರೈತರ ನಡುವಿನ ತಾಯಿ ಮಕ್ಕಳ ಸಂಬಂಧವನ್ನು ವೈಭವೀಕರಿಸುವ ಹಬ್ಬ. ಉತ್ತರ ಕರ್ನಾಟಕದ ಈ ಚರಗ ಚೆಲುವ ಹಬ್ಬದ ದಿನ ಹತ್ತಿರದ ಊರುಗಳಿಗೆ ಭೇಟಿ ನೀಡಿ ಈ ಹಬ್ಬದ ಸಡಗರ ಸಂಭ್ರಮವನ್ನು ಕಣ್ತುಂಬಿಕೊಂಡು, ಹೊಟ್ಟೆ ತುಂಬ ಊಟವನ್ನು ಮಾಡಿ ಆನಂದಿಸಿ.


Leave a Reply

Back To Top