ಮತ್ತೊಮ್ಮೆ ನಿನ್ನ ಭೇಟಿಯಾಗುವೆ.
ಅಮೃತಾ ಪ್ರೀತಮ್
ಶೀಲಾ ಭಂಡಾರ್ಕರ್
मैं तैनू फ़िर मिलांगी.
ಅಮೃತಾ ಪ್ರೀತಂ ತಾನು ಸಾಯುವ ಮೊದಲು ಇಮ್ರೋಜ್‍ನಿಗಾಗಿ ಪಂಜಾಬಿಯಲ್ಲೊಂದು ಕವಿತೆ ಬರೆದಳು.
ಪ್ರತಿಯೊಂದು ಶಬ್ದವೂ ಪ್ರೀತಿಯನ್ನು ತುಂಬಿಸಿಕೊಂಡು ಕವಿತೆಯಾಗಿತ್ತು.
ಅಮೃತಾ ಒಂದು ವಿಶಿಷ್ಟ ವ್ಯಕ್ತಿತ್ವ.
ಹದಿನಾರನೆ ವಯಸ್ಸಿನಲ್ಲೇ ಮನೆಯವರು ನಿಶ್ಚಯಿಸಿ ಪ್ರೀತಮ್ ಸಿಂಗ್ ಜತೆ ಮದುವೆ ಮಾಡಿದ್ದರೂ ಆ ಮದುವೆ ಊರ್ಜಿತವಾಗಲಿಲ್ಲ.
ನಂತರದ ದಿನಗಳಲ್ಲಿ ಬರವಣಿಗೆಯಲ್ಲಿ ತನ್ನನ್ನು ವಿಶೇಷವಾಗಿ ಈ ಜಗತ್ತಿಗೆ ಪರಿಚಯಿಸಿಕೊಂಡ ಅಮೃತಾ ಲಾಹೋರ್ ವಿಭಜನೆಯ ಸಮಯದಲ್ಲಿ ಆ ಕಾಲದ ಪ್ರತಿಭಾವಂತ ಯುವ ಕವಿ ಸಾಹಿರ್ ಲುಧಿಯಾನ್ವಿಯಿಂದ ಆಕರ್ಷಿತಳಾಗಿ, ಅವನನ್ನೇ ಮನಸ್ಸಿನಲ್ಲಿ ಆರಾಧಿಸತೊಡಗಿದಳು.
ಅಮೃತಾ ಸಾಹಿರನನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತಿದ್ದಳು. ಆದರೆ ಅವಳಿಗೆ ಅವನಿಂದ ಅಂತಹ ಪ್ರೀತಿ ಸಿಗಲಿಲ್ಲ. ಸುಧಾ ಮಲ್ಹೋತ್ರಾ ಎಂಬ ಗಾಯಕಿಯ ಕಡೆಗೆ ಆಕರ್ಷಿತನಾದ ಸಾಹಿರ್ ಅಮೃತಾಳಿಂದ ವಿಮುಖನಾದ. ಸಾಹಿರ್ ಯಾರನ್ನೂ ಗಂಭೀರವಾಗಿ ಪ್ರೀತಿಸಲಿಲ್ಲವೆಂದೇ ಹೇಳಬಹುದು.
ಅವನೇ ಹೇಳಿದಂತೆ, ಪ್ರತೀ ಸಲ ಅವನ ಹೊಸ ಪ್ರೇಮ ಹುಟ್ಟಿದಾಗೆಲ್ಲ ಅದ್ಭುತ ಕವಿತೆಗಳ ರಚನೆಯಾದವು.
ಆದರೆ ಅಮೃತಾಳಿಂದ ಮಾತ್ರ ಅವನನ್ನು ಮರೆಯಲಾಗಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಮತ್ತೆ ಅವಳ ಜೀವನದಲ್ಲಿ ಬಂದವನು ಇಮ್ರೋಜ್, ಅವಳ ಬಾಲ್ಯದ ಗೆಳೆಯ. ಬಾಲ್ಯದಿಂದಲೇ ಅಮೃತಾಳನ್ನು ಅತೀವವಾಗಿ ಇಷ್ಟ ಪಡುತ್ತಿದ್ದ. ಅವನೊಬ್ಬ ಚಿತ್ರ ಕಲಾವಿದ.
ಅಮೃತಾಳನ್ನು ಅದ್ಯಾವ ಪರಿಯಲ್ಲಿ ಪ್ರೀತಿಸುತ್ತಿದ್ದನೆಂದರೆ, ಅವಳಿಂದ ಏನನ್ನೂ ಅಪೇಕ್ಷಿಸುತ್ತಿರಲಿಲ್ಲ.
40 ವರ್ಷಗಳ ಕಾಲ ಅವರಿಬ್ಬರೂ ಜತೆಯಲ್ಲೇ ಇದ್ದರು. ಹೆಸರಿಲ್ಲದ ಬಂಧದಲ್ಲಿ ಬಂಧಿತರಾಗಿ ಇದ್ದ ಅಮೃತಾ ಇಮ್ರೋಜರ ಜೋಡಿಯು ಎಲ್ಲರಿಗೂ ವಿಸ್ಮಯವಾಗಿತ್ತು.
ಖುಷ್‍ವಂತ್ ಸಿಂಗ್ ಅವರು ತಮ್ಮ ಮನೆಯಲ್ಲಿ ಆಗಾಗ ಚಿಕ್ಕ ಚಿಕ್ಕ ಬೈಠಕ್‍ಗಳಿಗಾಗಿ ಸ್ನೇಹಿತರನ್ನು ಕರೆಯುತಿದ್ದರು. ಅಮೃತಾ ಇಮ್ರೋಜರನ್ನೂ ಕರೆದರೂ ಅವರಿಬ್ಬರೂ ಬರುತ್ತಿರಲಿಲ್ಲ. ಒಮ್ಮೆ ದೂರವಾಣಿ ಕರೆಮಾಡಿ ಅಮೃತಾಳ ಬಳಿ, ” ಈಗೀಗ ಮನೆಯಿಂದ ಹೊರಗೆ ಹೋಗುವುದನ್ನೇ ನಿಲ್ಲಿಸಿರುವ ಹಾಗೆ ಕಾಣುತ್ತಿದೆ. ಅದೇನು ಮಾಡುತ್ತೀರಿ ಇಬ್ಬರೂ ಮನೆಯಲ್ಲಿ?”
ಆಗ ಅಮೃತಾ ಕೊಟ್ಟ ಉತ್ತರ ” ಮಾತಾಡುತ್ತೇವೆ”. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಮಾತುಗಳಲ್ಲಿ, ಅವಳು ಬರೆಯುವ ಕವಿತೆಗಳಲ್ಲಿ, ಅವನು ಬರೆಯುವ ಚಿತ್ರಗಳಲ್ಲಿ, ಅಥವಾ ಮೌನವಾಗಿಯೂ ಅವರಿಬ್ಬರೂ ಮಾತನಾಡುತಿದ್ದರು.
ಕೊನೆಯದಾಗಿ ಸಾಯುವ ಸಮಯ ಹತ್ತಿರ ಬರುತಿದ್ದಂತೆ ಅವಳೊಂದು ಕವಿತೆಯನ್ನು ಅವನಿಗಾಗಿ ಬರೆದಳು.
मैं तैनू फ़िर मिलांगी.
ಮತ್ತೊಮ್ಮೆ ನಿನ್ನ ಭೇಟಿಯಾಗುವೆ.
ಮತ್ತೊಮ್ಮೆ ನಿನ್ನ ಭೇಟಿಯಾಗುವೆ.
ಎಲ್ಲಿ ಹೇಗೆ ಎಂದು ತಿಳಿಯದು.
ಬಹುಶಃ ನಿನ್ನ ಕಲ್ಪನೆಗೆ ಪ್ರೇರಣೆಯಾಗಿ
ನಿನ್ನ ಕ್ಯಾನ್ವಾಸಿನ ಮೇಲೆ ಇಳಿಯುತ್ತೇನೆ
ಅಥವಾ ನಿನ್ನ ಕ್ಯಾನ್ವಾಸಿನಲ್ಲಿ
ಗುಟ್ಟಾಗಿ ಒಂದು ಗೆರೆಯಾಗಿ
ನಿನ್ನನ್ನೇ ನೋಡುತ್ತಾ ಮೌನವಾಗಿ
ಇದ್ದು ಬಿಡುತ್ತೇನೆ.
ಮತ್ತೊಮ್ಮೆ ನಿನ್ನ ಭೇಟಿಯಾಗುವೆ.
ಎಲ್ಲಿ, ಹೇಗೆ ? ಅದು ತಿಳಿಯದು.
ಸೂರ್ಯನ ಕಿರಣಗಳಾಗಿ
ಬೆಚ್ಚಗೆ ನಿನ್ನ ಬಣ್ಣಗಳೊಳಗೆ
ಸೇರಿಕೊಳ್ಳುತ್ತೇನೆ.
ಅಥವಾ ಬಣ್ಣಗಳ ತೋಳುಗಳ
ಮೇಲೆ ಕೂತು ನಿನ್ನ ಕ್ಯಾನ್ವಾಸಿನ
ಮೇಲೆ ಹರಡಿಕೊಳ್ಳುವೆ.
ಎಲ್ಲಿ ? ಹೇಗೆ? ಎಂದು ತಿಳಿಯದು
ಆದರೂ ಖಂಡಿತ ನಿನ್ನ ಮತ್ತೆ
ಭೇಟಿಯಾಗುವೆ.
ನೀರಿನ ಝರಿಗಳಿಂದ ಹನಿಯೊಂದು
ಚಿಮ್ಮಿದಂತೆ.. ನಿನ್ನ ದೇಹವನ್ನು
ಆವರಿಸಿ, ಹೃದಯದೊಳಗೊಂದು
ತಣ್ಣನೆಯ ಅನುಭವವನ್ನು
ನೀಡಲು ಬರುವೆ.
ನನಗಿನ್ನೇನೂ ತಿಳಿಯದು.
ತಿಳಿದಿರುವುದಿಷ್ಟೆ.
ಏನೇ ಆದರೂ ಈ ಜನ್ಮವು
ನನ್ನ ಜತೆಗೇ ಬರುವುದು.
ಈ ದೇಹದ ಜತೆಗೇ ಮುಗಿದುಹೋಗುವುದು.
ಎಲ್ಲವೂ ಮುಗಿದೇ ಹೋಗುವುದು.
ಆದರೆ ನೆನಪಿನ ದಾರಗಳು ಮತ್ತು
ಸೃಷ್ಟಿಯ ಅಮೂಲ್ಯ ಕಣಗಳು
ಉಳಿಯುವವು.
ಆ ಕಣಗಳನ್ನು ಹೆಕ್ಕಿಕೊಂಡು,
ನೆನಪಿನ ದಾರದೊಳಗೆ ಪೋಣಿಸಿಕೊಂಡು
ಮತ್ತೆ ನಿನ್ನನ್ನು ಭೇಟಿಯಾಗುವೆ.
ಎಲ್ಲಿ ಹೇಗೆಂದು ನಾನರಿಯೆ.
ಅಮೃತಾ ಮತ್ತು ಇಮ್ರೋಜ್ ಹತ್ತಿರ ಹತ್ತಿರ ಅರ್ಧ ಶತಕಗಳ ಕಾಲ ಒಟ್ಟಿಗೆ ಒಂದೇ ಮನೆಯಲ್ಲಿದ್ದರೂ ಬೇರೆ ಬೇರೆ ಕೊಠಡಿಗಳಲ್ಲಿ ವಾಸಿಸುತಿದ್ದರು. ಆಗಿನ ಕಾಲದಲ್ಲಿ ಮದುವೆಯಾಗದೆ ಗಂಡು ಹೆಣ್ಣು ಒಟ್ಟಿಗೆ ವಾಸಿಸುವುದು ಬಹಳ ದೊಡ್ಡ ತಪ್ಪು ಎಂದಿದ್ದರೂ ಅವರಿಬ್ಬರ ಸಂಬಂಧ ಯಾವ ರೀತಿಯದೆಂದು ಜನರ ಊಹೆಗೂ ಮೀರಿದ್ದಾಗಿತ್ತು.
ಇಮ್ರೋಜ್ ಒಬ್ಬ ಉತ್ಕಟ ಪ್ರೇಮದ ಪ್ರತೀಕ.
*************
ಚೆನ್ನಾಗಿದೆ .
ಸೊಗಸಾದ ಲಹರಿ ಶೀಲಾ
Chennagide