ಗಝಲ್
ವೆಂಕಟೇಶ ಚಾಗಿ
ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ
ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ ||
ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು
ನಿನ್ನ ನನಸುಗಳ ಹೊತ್ತು ತರುವೆ ನೋಡುತಿರು ಅಪ್ಪ ||
ಹಸಿವಿನ ಆಟವನು ನೋಡಲು ನೆರೆಯುವರು ನಾಟಕದ ಮಂದಿ
ನಿನ್ನಾಟದ ಗತ್ತು ಗಮ್ಮತ್ತುಗಳ ತೋರಿಸುವುದ ಮರೆಯದಿರು ಅಪ್ಪ ||
ಚಂದ್ರಮನ ತೋರಿಸಿ ಅಮ್ಮ ತುತ್ತು ಉಣಿಸುವಳು ಅಷ್ಟೇ
ತುತ್ತುಗಳ ಕೂಡಿಡಲು ನನ್ನ ಎಂದಿಗೂ ಕಡೆಗಣಿಸದಿರು ಅಪ್ಪ ||
ಕಟ್ಟಿಗೆಯು ತುಂಬಾ ಗಟ್ಟಿಯಾಗಿದೆ ಗೊತ್ತೆ ನನ್ನ ನಂಬಿಕೆಯಂತೆ
‘ಚಾಗಿ’ಯ ಕವನಗಳಂತೆ ಬಡತನವ ಎಂದು ಮರೆಯದಿರು ಅಪ್ಪ ||
*************