ಗಝಲ್
ಪ್ರತಿಮಾ ಕೋಮಾರ
ಕಹಿಯೂರಲ್ಲೊಂದು ಸಿಹಿ ಗಿಡವ ನೆಡುವ ಸಹಕರಿಸು ಬಂದು
ನೆಟ್ಟ ಗಿಡಕೆ ಜೀವ ಜಲ ಕೊಟ್ಟು ಪೊರೆಯುವ ಸಹಕರಿಸು ಬಂದು
ಬಾಗಿ ಬಸವಳಿದು ಉರುಳಿದ ಜೀವಕೆ ಸಾಂತ್ವನವೇ ಮದ್ದು
ಮಾನವತೆಯ ನೆಲೆಯಲ್ಲಿ ಮಮತೆಯನು ಹನಿಸುವ ಸಹಕರಿಸು ಬಂದು
ಕೋಟೆಗಳ ಕಟ್ಟಿ ಹಕ್ಕಿಯೆಂದಾದರೂ ತನ್ನ ಬಂಧಿಸಿಕೊಂಡೀತೇ?
ಮನಗಳ ನಡುವೆ ಹಬ್ಬಿರುವ ಬೇಲಿಯನು ಕಡಿಯುವ ಸಹಕರಿಸು ಬಂದು
ಸ್ವಾಥ೯ದ ಮಾರುಕಟ್ಟೆಯಲ್ಲಿ ಬಿಕರಿಯಾಗುವವು ಬರೀ ಸ್ವಾಥ೯ಗಳೇ
ನಿಸ್ವಾಥ೯ತೆಯ ದೀಪ ಹಚ್ಚಿ ಬದುಕ ಬೆಳಗುವ ಸಹಕರಿಸು ಬಂದು
ಗಂಧಕ್ಕೆ ಮುಚ್ಚಿ,ಬಿಚ್ಚಿ,ಬೊಬ್ಬೆ ಹೊಡೆವ ಅವಶ್ಯಕತೆಯೇ ಇಲ್ಲ
ಒಳ್ಳೆಯತನದಿ ಒಮ್ಮೆ ಕುಸಿದ “ಪ್ರತಿ” ಹೃದಯ ತಟ್ಟಿ ಬರುವ ಸಹಕರಿಸು ಬಂದು
********