ಕಾವ್ಯ ಸಂಗಾತಿ
ಶಿವಮ್ಮ ಎಸ್ ಜಿ
ಬಾಳ ನೊಗ
ಹುಚ್ಚು ಹೊಳೆಯಲಿ ತೇಲಿದ್ದೆ, ಅಂದು ನಿನ್ನ ರೂಪ ನೋಡದೆ.
ಗುಣಕ್ಕೆ ಮಾರು ಹೋಗಿದ್ದೆ ಅಂದು ನಿನ್ನ ಅಂದ ನೋಡದೆ.
ಸ್ವಭಾವಕ್ಕೆ ಬೆರಗಾಗಿದ್ದೆ,ಆಗ ನಿನ್ನ ಅಂತಸ್ತು ನೋಡದೆ.
ಗುಣಾವಗುಣಗಳ ಗೊಡವೆ ನನ್ನ ಬಾಧಿಸಲಿಲ್ಲ,ಆ ದಿನ.
ಪರಿಸ್ಥಿತಿ ನೋಡಿ ನಾನು ಹೌಹಾರಿದ್ದೆ,
ಬಾಳ ಓಟ ನೋಡಿ ಬಾಯಿ ಬಾಯಿ ಬಿಟ್ಟಿದ್ದೆ ,
ತಿಳಿಯಲು ಆಗಲಿಲ್ಲ ನಾನೆಲ್ಲಿ ಎಡವಿದ್ದೆ ಎಂದು.
ಆರು ಸಂವತ್ಸರದ ತಪಸ್ಸು ಹೀಗೆ ಫಲ ನೀಡಬೇಕೆ?
ಮಥಿಸಿ ಮಥನಗೈದು ಆಯ್ದುಕೊಂಡ ದಾರಿ ಹೀಗಾಗಬೇಕೆ?
ನಾನು ತಪಗೈದ ಆಯ್ಕೆಯೇ? ಇದು, ನನಗನುಮಾನ.
ತಪ್ಪಿದ್ದೆಲ್ಲಿ,
ಹುಡುಕುವುದು ಅಸಾಧ್ಯ.
ದುಷ್ಟ ಗುಣಗಳ ಒಡನಾಟದಿ.
ಬಾಳು ಬೆಸೆಯುವ ಹೊತ್ತಲ್ಲಿ ಹೊಸಕಿ ಹಾಕಲು ಹವಣಿಕೆ. ಸಂತೋಷದ ಕಾಲಕ್ಕೆ ಆಗಲು ಅದೇ ಕುಣಿಕೆ .
ಬಾಳ ಚಿಗುರುಗಳಿಗಾಯ್ತು ಹಳಹಳಿಕೆ.
ಏಕೆ ಹೀಗೆ, ಏಕೆ ಹೀಗೆ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಆಗದೆ,
ಮನದೊಳಗೆ ಬೇಸರ. ನೆರಳಿಗೆಹೆದರಿ ಬದುಕುವ ಅನಿವಾರ್ಯತೆ,
ಇದೇ ಇರಬೇಕು ಕತ್ತಲು ಬೆಳಕಿನಾಟ.
ಕೊನೆಗೆ ತಲೆಕೊಡವಿ ಮೇಲೆದ್ದೆ.
ಫೀನಿಕ್ಸ್ ನಂತೆ ಬಾಳ ದಾರಿ ಸವೆಸಲು ,ಬಂದದ್ದನ್ನು
ಬಂದಂತೆ ಸ್ವೀಕರಿಸಿ.
ನೆಳಲೋ, ಬೆಳಕೋ ನಿನ್ನದೇ ಎಂಬ ಭಾವದಲಿ.
ನಂಬಿದ ದೈವ ಕೈ ಬಿಡದೆ ಸೈ ಎನಲು ಬಾಳ ನೊಗ ಹಗುರಾದ ಭಾವ ಇಂದು ಎದೆಯಲಿ.
ಶಿವಮ್ಮ ಎಸ್ ಜಿ