ಲೇಖನ ಸಂಗಾತಿ
ಕೆ. ಎನ್. ಚಿದಾನಂದ .
ತಪ್ಪು – ಕ್ಷಮೆ – ದಯಾಗುಣ
ತಪ್ಪು ಮಾಡುವುದು ಸಹಜ. ತಿದ್ದಿ ನಡೆಯೋನು ಮನುಜ. ಈ ಮಾತು ಅಕ್ಷರಶಃ ನಿಜ. ನಮಗೆ ಗೊತ್ತೋ ಗೊತ್ತಿಲ್ಲದೆಯೋ ಒಂದಿಲ್ಲೊಂದು ತಪ್ಪು ಮಾಡಿರುತ್ತೇವೆ. ಏಕೆಂದರೆ ನಾವು ಮನುಷ್ಯರು. ತಪ್ಪು ಮಾಡದೆ ಇರಲಿಕ್ಕೆ ನಾವು ದೇವರಂತೂ ಅಲ್ಲವೇ ಅಲ್ಲ. ಆದ್ದರಿಂದ ತಪ್ಪುಗಳನ್ನು ತಡೆಯೋದಕ್ಕೆ ಸಾಧ್ಯವಿಲ್ಲ. ತಪ್ಪುಗಳು ಸಂಭವಿಸುವುದು ನಿರಂತರ. ಈ ಭೂಮಿಯ ಮೇಲೆ ಎಷ್ಟೆಲ್ಲಾ ಜನರಿದ್ದಾರೋ ಅವರೆಲ್ಲಾ ಒಂದು ಕ್ಷಣವನ್ನು ಬಿಡದೇ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಒಬ್ಬರು ತಪ್ಪು ಮಾಡುವುದನ್ನು ನಿಲ್ಲಿಸಿ , ತಿದ್ದಿಕೊಳ್ಳುವಷ್ಟರಲ್ಲಿ ಮತ್ತೊಬ್ಬರಿಂದ ತಪ್ಪು ಸಂಭವಿಸುತ್ತಿರುತ್ತದೆ. ಹಾಗಾಗಿ ಇದು ನಿರಂತರ.
ನಮ್ಮಿಂದಾಗುವ ತಪ್ಪುಗಳು ನಮ್ಮನ್ನು ಎಚ್ಚರಿಸುತ್ತವೆ. ನಾವು ಮಾಡುವ ಕೆಲಸಗಳಲ್ಲಿ ಯಶಸ್ಸನ್ನೇ ಕಾಣುತ್ತಾ ಹೋದರೆ, ಆಗ ಸೋಲಿನ ಅನುಭವವೇ ನಮಗಾಗುವುದಿಲ್ಲ. ತಪ್ಪುಗಳು ಆದಾಗ, ಅದರಿಂದ ಮುಂದೆ ಹೀಗಾಗಬಾರದೆಂಬ ಪಾಠ ಕಲಿಯುತ್ತೇವೆ. ಇದೊಂದು ಒಳ್ಳೆಯ ಅನುಭವವೂ ಹೌದು. ಗೆದ್ದು ಸೋಲುವುದಕ್ಕಿಂತ ಸೋತು ಗೆಲ್ಲುವುದು ಹಲವು ಯಶಸ್ಸುಗಳಿಗೆ ಮಾರ್ಗದರ್ಶಿ ಸೂತ್ರಗಳಾಗುತ್ತವೆ. ತಪ್ಪುಗಳು ಜಾಗರೂಕತೆಯನ್ನು ಮೂಡಿಸುತ್ತವೆ.
ಇಂಗ್ಲಿಷ್ ನಲ್ಲಿ ಒಂದು ಒಳ್ಳೆಯ ಗಾದೆ ಮಾತಿದೆ. ” TO ERR IS HUMAN , TO FORGIVE IS DIVINE ” ಅರ್ಥಾತ್ ” ತಪ್ಪು ಮಾಡುವುದು ಮಾನವ, ಕ್ಷಮಿಸುವುದು ದೈವ ” ಗುಣಗಳಲ್ಲಿ ದೈವಗುಣ ಶ್ರೇಷ್ಠವಾದದ್ದು ಏಕೆಂದರೆ ಅದು ಕ್ಷಮಾಗುಣದೊಂದಿಗೆ ಬಿಗಿಯಾದ ಬಂಧನವನ್ನು ಬೆಸೆದುಕೊಂಡಿರುತ್ತದೆ. ಕೆಲವೊಮ್ಮೆ ನಾವು ಎಷ್ಟು ಕಷ್ಟಪಟ್ಟರೂ, ಎಷ್ಟೇ ಜಾಗೃತಿ ವಹಿಸಿದರೂ ತಪ್ಪುಗಳಾಗುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ನಾವಷ್ಟೇ ಅಲ್ಲ, ಮಹಾಪುರುಷರೂ ತಪ್ಪು ಮಾಡಿದ್ದಾರೆ. ಆದರೆ ಅವರು ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ದೈವ ಪರಿಕಲ್ಪನೆಯಲ್ಲಿ ಕ್ಷಮಿಸಲ್ಪಟ್ಟು ಮಹಾಪುರುಷರೆನಿಸಿದ್ದಾರೆ. ಈ ಹಿನ್ನಲೆಯಲ್ಲಿ ದೇವರು ಮಾತ್ರ ದೋಷರಹಿತ ಮತ್ತು ಕರುಣಾಮಯಿ ಎಂದು ವಿಶ್ವದ ಎಲ್ಲಾ ಧರ್ಮಗಳೂ ಮತ್ತು ಧರ್ಮಗ್ರಂಥಗಳೂ ಸಾರಿ ಹೇಳುತ್ತವೆ ಎಂಬುದನ್ನು ನಾವು ಓದುವ, ಕೇಳುವ, ನೋಡುವ, ಅರಿಯುವ, ಹಾಗೂ ಸ್ವಾನುಭವದ ಮೂಲಕ ತಿಳಿದಿದ್ದೇವೆ. ದೇವರು ಮಾತ್ರ ನಮ್ಮ ತಪ್ಪುಗಳನ್ನು ಕ್ಷಮಿಸಬಲ್ಲನು ಏಕೆಂದರೆ ದೇವರು ದೋಷರಹಿತನು. ನಾವು ಆಗಾಗ ದೇವರಲ್ಲಿ ಪ್ರಾರ್ಥಿಸುತ್ತೇವೆ, “ ನಮ್ಮ ತಪ್ಪುಗಳನ್ನು ಕ್ಷಮಿಸು ಎಂದು ಮೊರೆ ಹೋಗುತ್ತೇವೆ ”.
” ತಪ್ಪು ಮಾಡದೋರ್ ಯಾರವ್ರೆ? ತಪ್ಪೇ ಮಾಡದೋರ್ ಎಲ್ಲವ್ರೇ? ಅಪ್ಪಿ ತಪ್ಪಿ ತಪ್ಪಾಗತ್ತೆ , ಬಾಳೆ ಕೂಡ ಕಪ್ಪಾಗತ್ತೆ ,
ತಿದ್ದಿಕೊಳ್ಳೋದಕ್ಕೆ ದಾರಿ ಐತೇ ” ಎಂದು ಕನ್ನಡ ಸಿನೆಮಾವೊಂದರ ಹಾಡು ಬಹಳಷ್ಟು ಅರ್ಥಪೂರ್ಣವಾಗಿದೆ. ತಪ್ಪು ಮಾಡಿರುವುದು ಗೊತ್ತಾದ ಕೂಡಲೇ ತಿದ್ದಿಕೊಳ್ಳುವ ಪ್ರಯತ್ನವಾಗಬೇಕು ಏಕೆಂದರೆ ಒಂದು ಅವಕಾಶ ಆ ಕ್ಷಣಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಮನುಷ್ಯ ತಪ್ಪು ಮಾಡಿದರೆ ಕ್ಷಮಿಸಬೇಕು, ಕೆಲವೊಮ್ಮೆ ಮಾಡಿದ ತಪ್ಪಿಗೆ ಬಹಳ ಕಠಿಣವಾದ ಶಿಕ್ಷೆಯಾಗತ್ತದೆ. ಆ ಶಿಕ್ಷೆಯು ಮುಂದಿನ ದಿನಗಳಲ್ಲಿ ಮತ್ತೆ ಅಂತಹುದೇ ತಪ್ಪುಗಳಾಗದಂತೆ ತಡೆಯಬೇಕು. ವ್ಯಕ್ತಿಯಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲ ತಪ್ಪುಗಳಿಗೂ ಶಿತ್ತೆಯೊಂದೇ ಮಾರ್ಗವಲ್ಲ. ಏಕೆಂದರೆ ಕ್ಷಮಾಗುಣವೆಂಬ ಪರಿಕಲ್ಪನೆಯೊಂದು ತಪ್ಪುಗಳನ್ನು ಕ್ಷಮಿಸುವುಕ್ಕಾಗಿಯೇ ಇರುವಂತಹದ್ದಾಗಿದೆ. ಕ್ಷಮೆಯು ತಪ್ಪಿತಸ್ಥರ ಹೃದಯವನ್ನು ಗೆಲ್ಲುತ್ತದೆ. ಕ್ಷಮಿಸುವುದು ದೇವರಂತೆ. ಕ್ಷಮಿಸುವುದು ಎಂದರೆ ಸೋಲನ್ನು ಒಪ್ಪಿಕೊಂಡಂತೆ ಎಂದೆನಿಸಿದರೂ,
ಮುಂದಿನ ಬಹುತೇಕ ತಪ್ಪುಗಳನ್ನು, ಅಚಾತುರ್ಯಗಳನ್ನು ಆರಂಭದಲ್ಲಿಯೇ ತಡೆಯಲು ಅದು ಸಹಕಾರಿ. ಬಹಳಷ್ಟು ಜನ ಈ ತಪ್ಪನ್ನು ಮಾಡುತ್ತಾರೆ ಉತ್ತಮವಾದುದನ್ನು ಪಡೆಯುವ ಆತುರದಲ್ಲಿ ಅತ್ತ್ಯುತ್ತಮವಾದು ದನ್ನು ಕಳೆದುಕೊಳ್ಳುತ್ತಾರೆ. ಕೆಲವು ತಪ್ಪುಗಳು ಕಠಿಣ ಶಿಕ್ಷೆಗಳನ್ನು ಸ್ವೀಕರಿಸುತ್ತವೆ. ಆ ಮೂಲಕ ತಪ್ಪುಗಳನ್ನು ತಿದ್ದಿಕೊಳ್ಳಲು ಒಮ್ಮೊಮೆ ಅವಕಾಶ ನೀಡುತ್ತವೆ.
ಕ್ಷಮಾಗುಣದೊಂದಿಗೆ ದಯಾಗುಣವೂ ಬೆಸೆದುಕೊಂಡಿದೆ. ದಯೆ ಅಥವಾ ಕರುಣೆಯು ಅತ್ಯುನ್ನತ ಸ್ಥಾನದಲ್ಲಿರುವ ಗುಣಮೌಲ್ಯವಾಗಿದೆ. ಆದ್ದರಿಂದಲೇ ಹನ್ನೆರಡನೇ ಶತಮಾನದ ಶಿವಶರಣರಾದ ಜಗಜ್ಯೋತಿ ಬಸವೇಶ್ವರರು “ದಯವೇ ಧರ್ಮದ ಮೂಲವಯ್ಯ ” ಎಂದಿದ್ದಾರೆ. ದಯೆ ಎಂಬುದು ನಮ್ಮ ಮನಸ್ಸಿನ ಭಾವನೆಗೆ ಸಂಬಂಧಿಸಿದ ಮಾತಾಗಿದೆ. ಇದು ನಮ್ಮ ಮನೋಭಾವ ಮತ್ತು ಗುಣಸ್ವಭಾವ ಕ್ಕೆ ಸಂಬಂಧಿಸಿದೆ. ಇದನ್ನು ಕರುಣೆ, ಕನಿಕರ, ಕ್ಷಮೆ, ಮರುಕ, ಕಾರುಣ್ಯ, ಸಹಾನುಭೂತಿ, ಅನುಕಂಪ, ಮಾನವತೆ, ಉಪಕಾರ ಬುದ್ಧಿ, ವಾತ್ಸಲ್ಯ, ಮಮತೆ, ಮಮಕಾರ, ಪ್ರೀತಿ, ಮೃದುತ್ವ, ಸೌಮ್ಯತೆ, ಎಂಬ ಬೇರೆ ಬೇರೆ ಅರ್ಥಗಳಿಂದಲೂ ಗುರುತಿಸಲಾಗುತ್ತದೆ. ನಮ್ಮ ಮಾತು, ನಮ್ಮ ಮನಸ್ಸು ಮತ್ತು ನಮ್ಮ ಕೆಲಸ ಕಾರ್ಯಗಳಿಂದ ಯಾವ ವ್ಯಕ್ತಿ / ಪ್ರಾಣಿಗೂ ದುಃಖವನ್ನುಂಟು ಮಾಡದಿರುವುದು. ದುಃಖದಲ್ಲಿರುವವರ ದುಃಖವನ್ನು ಕಂಡು ಮರುಗುವುದಲ್ಲದೇ ಅವರ ದುಃಖಗಳನ್ನು ದೂರ ಮಾಡಲು ನಮ್ಮ ಶಕ್ತಿಯನ್ನು ಮೀರಿ ಪ್ರಯತ್ನಿಸುವುದು ‘ದಯೆ’ ಎಂದೆನಿಸುವುದು. ಇಂಥ ದಯಾಗುಣವು ಧರ್ಮಕ್ಕೆ ಆಧಾರ ಸ್ವರೂಪವಾಗಿದೆ. ಸರ್ವ ಧರ್ಮಗಳು ಪ್ರತಿಪಾದಿಸುವ ವಿಶಾಲವಾದ ಶಬ್ದವೆ ದಯೆ, ಎಲ್ಲಾ ಧರ್ಮಗಳ ಮೂಲಮಂತ್ರ ದಯೆ ಆಗಿದೆ, ದಯವೇ ಧರ್ಮದ ಮೂಲಾಂಶ ವಾಗಿದೆ. ಆದ್ದರಿಂದಲೇ ಬಸವಣ್ಣನವರು ದಯವಿಲ್ಲದ ಧರ್ಮ ಈ ಜಗದಲ್ಲಿ ಯಾವುದಿದೆ ಎಂದಿದ್ದಾರೆ. ಸಕಲ ಪ್ರಾಣಿ ಪಕ್ಷಿಗಳಲ್ಲಿ ದಯೆಯಿರಬೇಕು. ದಯೆ ಇಲ್ಲದ ಧರ್ಮವನ್ನು ಯಾವ ದೇವರೂ ಸೃಷ್ಟಿಸಿಲ್ಲ. ಜಗತ್ತಿನ ಸಮಷ್ಟಿಯ ಹಿತವನ್ನು ಸಾಧಿಸಬೇಕಾದರೆ ಅತೀ ಮುಖ್ಯವಾದ ಮನೋಭಾವ ಈ ದಯೆ. ದಯೆ ಇಲ್ಲದ ಜಾಗದಲ್ಲಿ ಯಾವ ಧರ್ಮವೂ ಉಳಿಯಲು ಸಾಧ್ಯವಿಲ್ಲ ಮತ್ತು ಧರ್ಮಕ್ಕೆ ಎಡೆಯಿಲ್ಲವೆಂದರೆ ದೇವರು ಅಲ್ಲಿ ಉಳಿಯಲಾರ ಎಂಬುದು ವಾಡಿಕೆ ಮತ್ತು ನಂಬಿಕೆ. ಏಕೆಂದರೆ ಧರ್ಮ ದೇವರನ್ನು ಹಾಗೂ ದೇವರು ದಯೆಯನ್ನು ಪ್ರತಿನಿಧಿಸುತ್ತದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಧರ್ಮ ಸಂಸ್ಥಾಪನೆಗಾಗಿಯೇ ಜನ್ಮವೆತ್ತಿದನು. ರಾವಣ, ದುರ್ಯೋಧನರಲ್ಲಿ ದಯೆ ಇಲ್ಲದ ಕಾರಣ, ಅಲ್ಲಿ ರಾಗ-ದ್ವೇಷಗಳು ವಿಜೃಂಭಿಸಿ ಮಹಾಭಾರತ ಯುದ್ಧಗಳೇ ಸಂಭವಿಸಿ ಸರ್ವನಾಶಕ್ಕೆ ಕಾರಣವಾದವು. ಇಂದು ಪರಿಸರ ಮಾಲಿನ್ಯ ವಾಗುತ್ತಿರುವಂತೆ ಮನೋ ಮಾಲಿನ್ಯವೂ ಆಗುತ್ತಿದೆ. ಬೇರೆಯವರ ದುಃಖಗಳನ್ನು ಕಂಡು ಆನಂದಿಸುವುದು ಮನಸ್ಸಿನ ಮಾಲಿನ್ಯದ ಸಂಕೇತವಾಗಿದೆ. ಈ ರೀತಿಯ ಮನಸ್ಥಿತಿ ಹೊಂದಿರುವ ಯಾವ ವ್ಯಕ್ತಿಯೂ ಮಾನಸಿಕವಾಗಿ ನೆಮ್ಮದಿ ಶಾಂತಿಯನ್ನು ಹೊಂದಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಯು ಎಲ್ಲರಿಂದಲೂ ನಿಂದನೆಗೆ ಒಳಗಾಗುತ್ತಾನೆ. ಮನೋ ಮಾಲಿನ್ಯದ ವ್ಯಕ್ತಿಯು ತನ್ನ ಸುತ್ತ ಮುತ್ತಲಿನ ವಾತಾವರಣವನ್ನು ಕಲುಷಿತಗೊಳಿಸುತ್ತಾನೆ. ಏಕೆಂದರೆ ಅವನೂ ಸುಖ ಶಾಂತಿಯಿಂದಿರಲಾರನು ಮತ್ತು ಇತರರ ಸುಖ ಶಾಂತಿಗಳನ್ನು ಹಾಳು ಮಾಡುತ್ತಾನೆ. ಕಾರಣ ಆತನಲ್ಲಿ ದಯೆ ಎಂಬ ಮನೋಭಾವ ಇರುವುದಿಲ್ಲ. ಇತರರ ಬೆಳವಣಿಗೆಯ ಕುರಿತು ಸದಾ ಕರುಬುತ್ತಾನೆ. ಆದ್ದರಿಂದ ಬದುಕಿನಲ್ಲಿ ಸುಖಶಾಂತಿಗಳನ್ನು ಬಯಸುವವರು ತಮ್ಮ ಹೃದಯವನ್ನು ದಯೆಯಿಂದ ತುಂಬಿಕೊಳ್ಳಬೇಕು. ಇತರರ ದುಃಖಗಳನ್ನು ಕಂಡು ಮನಸ್ಸು ಕರಗಬೇಕು ಮತ್ತು ಇತರರ ಸುಖವನ್ನು ಕಂಡು ಮನಸ್ಸು ಆನಂದಿಸಬೇಕು. ದಯಾಗುಣ ಪರಿಪಾಲನೆಯಿಂದ ವ್ಯಕ್ತಿಗೆ ಬಹಳಷ್ಟು ಅನು ಕೂಲವಾಗುತ್ತದೆ. ದಯಾಗುಣ ಹೊಂದಿದ ವ್ಯಕ್ತಿಯು ಎಲ್ಲರ ಪ್ರೀತಿ, ವಿಶ್ವಾಸ, ನಂಬಿಕೆಗೆ ಪಾತ್ರನಾಗುತ್ತಾನೆ. ಎಲ್ಲರ ಸ್ನೇಹವನ್ನು ಗಳಿಸಿ ಕೊಳ್ಳುತ್ತಾನೆ. ಎಲ್ಲರೊಂದಿಗೆ ಒಟನಾಟ ಭಾವ ಬಂಧಗಳ ಬಾಂಧವ್ಯ ಹೆಚ್ಚುತ್ತದೆ. ಸಾಮಾಜಿಕ ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಾನೆ. ನೆರೆಹೊರೆಯ ವಾತಾವರಣದಲ್ಲಿ ಗೌರವಾನ್ವಿತನಾಗಿ ಬಿಂಬಿತನಾಗುತ್ತನೆ. ದಯಾಗುಣವನ್ನು ಅಹಿಂಸೆಯು ಅನುಪಾಲನೆ ಮಾಡುತ್ತದೆ. ಆದ್ದರಿಂದಲೇ ಆಯಾ ಧರ್ಮ ಸ್ಥಾಪಕರು, ಪ್ರವರ್ತಕರು ದಯೆಗೆ ಪ್ರಥಮಸ್ಥಾನ ಕೊಟ್ಟಿರುವುದಲ್ಲದೆ ದಯವೇ ಧರ್ಮದ ಮೂಲಾಂಶವನ್ನಾಗಿಸಿದ್ದಾರೆ. ದಯೆ ಇಲ್ಲದಮೇಲೆ ಧರ್ಮ- ಅಧರ್ಮವಾಗುತ್ತದೆ. ಶಾಂತಿ- ಅಶಾಂತಿ ಯಾಗುತ್ತದೆ. ದಯೆ ಇಲ್ಲದ ಕಾರಣದಿಂದ ಇಂದು ವಿಶ್ವವು ಎರಡು ಮಹಾಯುದ್ಧಗಳನ್ನು ಕಂಡಿದೆ. ಒಂದು ವೇಳೆ ದಯೆಯ ತತ್ವವನ್ನು ಪಾಲಿಸಿದ್ದೇ ಆದರೆ ಮನಃಶ್ಯಾಂತಿಯಿಂದ ಹಿಡಿದು ವಿಶ್ವಶಾಂತಿ ಯವರೆಗೂ ಶಾಂತಿಯ ಸ್ಥಾಪನೆ ಮತ್ತು ಅಸ್ತಿತ್ವ ಲಭ್ಯವಾಗುತ್ತದೆ. ರಾಷ್ಟ್ರಕವಿ ಕುವೆಂಪುರವರ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿ ಈ ಎಲ್ಲಾ ವಿಶ್ವ ಮಾನವ ಸಂದೇಶಗಳಿಗೆ ದಯೆ ಆಧಾರಸ್ತಂಭವಾಗಿರುತ್ತದೆ. ನಾವು ಇಪ್ಪತ್ತೊಂದನೇ ಶತಮಾನದಲ್ಲೆ ಬದುಕುತ್ತಿರ ಬಹುದು. ಜ್ಞಾನ ವಿಜ್ಞಾನ ತಂತ್ರಜ್ಞಾನಗಳು ಶೀಘ್ರಗತಿಯ ವೇಗವನ್ನು ಪಡೆದಿರಲೂಬಹುದು, ಆಧುನಿಕತೆಯು ಬದುಕಿನ ಹಾಸುಹೊಕ್ಕಾಗಿರ ಬಹುದು. ಇಂದು ಅಂಗೈಯಲ್ಲಿ ವಿಶ್ವದ ನಾನಾ ಸ್ಥಳಗಳನ್ನು ದರ್ಶಿಸಿ, ನಾನಾ ವ್ಯಕ್ತಿಗಳನ್ನು
ಸಂದರ್ಶಿಸಲೂಬಹುದು. ಇಂದು ನಾವು ವೈಜ್ಞಾನಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿದ್ದೇವೆ ಎಂದುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಇಷ್ಟೆಲ್ಲಾ ಬೆಳವಣಿಗೆಗಳಲ್ಲಿ, ಯಾವುದೇ ಬೆಳವಣಿಗೆಯೂ ದಯೆ ತೋರಬೇಡಿ ಎಂದು ಹೇಳಿಲ್ಲ. ಆದ್ದರಿಂದ ದಯೆ ವಿವಿಧ ನೈತಿಕ, ಧಾರ್ಮಿಕ, ಸಾಮಾಜಿಕ ಮತ್ತು ಕಾನೂನಾತ್ಮಕ ಸಂದರ್ಭಗಳಲ್ಲಿ ತೋರುವ ಪರೋಪಕಾರ ಗುಣ, ಕ್ಷಮೆ ಮತ್ತು ಕರುಣೆಯನ್ನು ಸೂಚಿಸುವ ಒಂದು ವಿಶಾಲವಾದ ಪದ. ವ್ಯಕ್ತಿಯ ದಯಾಪರತೆಯ ಮನೋಭಾವವು ಕುಟುಂಬದಿಂದ ಹಿಡಿದು ಗ್ರಾಮ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸಹೋದರತೆಯ ಕಾಪಾಡಿ ಸುಭದ್ರತೆಯನ್ನು ಹೊಂದುವಲ್ಲಿ ನೆರವಾಗುತ್ತದೆ ಎಂಬುದು ಹಿರಿಯ ಅನುಭವಿಗಳ ಮಾತಾಗಿದೆ. ಆದ್ದರಿಂದ ನಾವೂ ದಯಾಪರತೆ ಯನ್ನು ಮೈಗೂಡಿಸಿಕೊಳ್ಳೋಣ. ಇತರರ ಸುಖ ದುಃಖಗಳಲ್ಲಿ ಭಾಗಿಗಳಾಗಬೇಕು. ದಯಾಗುಣದಿಂದ ಶಾಂತಿಯನ್ನು ಕಾಪಾಡುವುದು ಸಾಧ್ಯವಾಗುತ್ತದೆ. ಹಾಗೆಯೇ ಕ್ಷಮಾಗುಣ ಬಹಳಷ್ಟು ಮಾನವೀಯ ಮೌಲ್ಯಯುತ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳುವ ಅಗತ್ಯವಿರುತ್ತವೆ. ನಂಬಿಕೆ , ವಿಶ್ವಾಸ , ದಯೆ, ವಾತ್ಸಲ್ಯ, ಪ್ರೀತಿ, ಅನುಕಂಪ, ಸಹಾಯ, ಪರಸ್ಪರ ಗೌರವಿಸುವುದು, ಭ್ರಾತೃತ್ವ, ಮುಂತಾದವು. ಅಂತಹ ಗುಣಗಳಲ್ಲಿ ಬಹಳ ಪ್ರಮುಖ ಗುಣವೆಂದರೆ ಕ್ಷಮಾಗುಣ. ಯಾವುದೇ ಬಗೆಯ ಮನುಷ್ಯನ ಸಹಜ ತಪ್ಪುಗಳನ್ನು ಮನ್ನಿಸುವುದು ಕ್ಷಮಾಗುಣವಾಗಿದೆ. ಕ್ಷಮಾಗುಣವು ಸೌಹಾರ್ದಯುತವಾದ ಸ್ನೇಹ ಸಂಬಂಧಗಳನ್ನು ಬೆಸೆಯುವ ಮೂಲಕ ಎತ್ತರದಲ್ಲಿ ನಿಂತಿರುತ್ತದೆ. ಮನಸ್ಸು ಹೊಂದಿರುವ ಅದ್ವೀತಿಯ ಗುಣವೇ ಕ್ಷಮಾಗುಣ. ತಂದೆ ತಾಯಿಗಳು ತಮ್ಮ ಮಕ್ಕಳಿಗೆ ನೀಡುವ ಕ್ಷಮೆ, ಗುರು ತನ್ನ ವಿದ್ಯಾರ್ಥಿಗಳು ತಪ್ಪುಮಾಡಿದಾಗ ಅವರಿಗೆ ತಿದ್ದಿ ಬುದ್ಧಿ ಹೇಳುವ ಮೂಲಕ ನೀಡಿದ ಕ್ಷಮೆ ವಿಶ್ವದಲ್ಲಿ ಸದಾ ಸ್ಮರಣೀಯವೆನಿಸುತ್ತದೆ. ಕ್ಷಮಾಗುಣವನ್ನು ತೋರುವಲ್ಲಿ ಮೊದಲ ಸ್ಥಾನವನ್ನು ಪಡೆದವಳು ತಾಯಿ. ತಾಯಿ ತನ್ನ ಮಕ್ಕಳು ಎಷ್ಟೆಲ್ಲ ತಪ್ಪುಗಳನ್ನು ಮಾಡಿದ್ದರೂ ಅದನ್ನೆಲ್ಲಾ ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಕ್ಷಮಿಸಿ ಬಿಡುತ್ತಾಳೆ. ಏಕೆಂದರೆ ನಮ್ಮ ತಾಯಿಯು ಕರುಣೆಯ ಸಹನಾ ಮೂರ್ತಿಯೆನಿಸಿದ್ದಾಳೆ.
ನಮ್ಮ ಮುಖವನ್ನು ನಾವೇ ನೋಡಿಕೊಳ್ಳಲು ಸಾದ್ಯವಿಲ್ಲ. ಅದಕ್ಕೆ ದರ್ಪಣದ ಸಹಾಯ ಬೇಕು. ನಮ್ಮ ಸರಿ ತಪ್ಪುಗಳನ್ನು ನಾವೇ ತೀರ್ಮಾನಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ದರ್ಪಣದಂಥಹಾ ಮನಸ್ಸಿರೊ ಜನ ಬೇಕು ಎಂದು ಹಿರಿಯ ಅನುಭವಿಗಳು ಆಗಿಂದಾಗ್ಯೆ ಹೇಳುತ್ತಿರುವುದನ್ನು ನಾವು ಗಮನಿಸಿರುತ್ತೇವೆ.
ಪ್ರತೀ ವ್ಯಕ್ತಿಗೂ ತನ್ನ ಬೆನ್ನು ಹೇಗೆ ಕಾಣುವುದಿಲ್ಲವೋ ಹಾಗೆ ತನ್ನ ತಪ್ಪುಗಳು ಕಾಣುವುದಿಲ್ಲ. ಇತರರು ಆ ತಪ್ಪನ್ನು ಕಂಡು ಹಿಡಿದು ತಿದ್ದಿದಾಗ ಅದನ್ನು ಸರಿಪಡಿಸಿಕೊಂಡರೆ ಆ ವ್ಯಕ್ತಿಯ ವ್ಯಕ್ತಿತ್ವ ಪುಟಕ್ಕಿಟ್ಟ ಚಿನ್ನವಾಗುತ್ತದೆ ಎಂದೂ ಪ್ರಾಜ್ಞರು ಹೇಳುತ್ತಿರುತ್ತಾರೆ. ನಮಗೆ ಕಾಣದ ತಪ್ಪುಗಳಿಂದ ಅನೇಕ ವಿಧದಲ್ಲಿ ನಮಗೆ ಸೋಲುಗಳು ಉಂಟಾಗುತ್ತವೆ. ಅಂತಹ ಸಂದರ್ಭದಲ್ಲಿ ನಮಗೆ ನಾವು ಹೇಳಿಕೊಳ್ಳುಬೇಕಾದ ಮಾತೆಂದರೆ ” ಗೆಲುವು ನಮ್ಮ ಸಾಧನೆಯನ್ನು ಸೂಚಿಸಿದರೆ , ನಮ್ಮ ತಪ್ಪುಗಳಿಂದ ಉಂಟಾದ ಸೋಲುಗಳು ನಮಗೆ ಹೊಸ ಅನುಭವವನ್ನು, ಮತ್ತೊಂದು ಹೊಸ ಪಾಠವನ್ನು ಕಲಿಸುತ್ತವೆ.” ಹೀಗೆ ತಪ್ಪುಗಳು ಸಂಭವಿಸುತ್ತಲೇ ಇರುತ್ತವೆ. ತಕ್ಷಣ ಅರಿತು ತಿದ್ದಿಕೊಂಡರೆ ಮುಂದಿನ ಸುಖಕರವಾಗಿರುತ್ತದೆ. ಒಮ್ಮೆ ಮಾಡಿದ ತಪ್ಪುಗಳನ್ನು ಮತ್ತೊಮ್ಮೆ ಪುನರಾವರ್ತನೆಯಾಗದಂತೆ ನೋಡಿಕೊಂಡು ದೊರೆತ ಅವಕಾಶದಲ್ಲಿ ತಪ್ಪುಗಳನ್ನು ತಿದ್ದಿಕೊಂಡು ನೆಮ್ಮದಿಯ ಬದುಕು ಸಾಗಿಸೋಣ.
============================
ಕೆ. ಎನ್. ಚಿದಾನಂದ