ಕಲೆ, ಸಾಹಿತ್ಯ, ಹಾಗೂ ಪುಸ್ತಕಗಳು ಒಂದು ದೇಶದ ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ. ಅದರಲ್ಲೂ ಸಾಹಿತ್ಯ ಒಂದು ಅಮೂಲ್ಯವಾದ ರತ್ನ. ಅದು ತ್ರಿಕಾಲ ಸತ್ಯಗಳನ್ನು, ಕಲ್ಪನಾಲೋಕದ ಸಂತೋಷಗಳನ್ನು, ಬದುಕಿನ ನೋವು,ನಲಿವುಗಳನ್ನು ಸಾಹಿತ್ಯ ತೆರೆದಿಡುತ್ತದೆ.

ಇಂತಹ ಸಾಹಿತ್ಯವು ಕಥೆ, ಕಾದಂಬರಿ, ಕವಿತೆ ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಬರೆಯುವ ಹವ್ಯಾಸ ಕೆಲವರಿಗೆ ಮಾತ್ರ ದಕ್ಕುತ್ತದೆ. ಕವಿಯಾದವನು ಪುಸ್ತಕ ಪ್ರಕಟಿಸುವುದಿದೇಯಲ್ಲ ಅದೊಂದು ದೊಡ್ಡ ಸಾಹಸ…!  

ಇಂತಹ ಪುಸ್ತಕ ಪ್ರಕಟಣೆಯ ನೋವುಗಳು ಸಾಹಿತಿಗಳನ್ನು ಕಾಡುತ್ತದೆ. ಬರೆದಿದ್ದು ಪತ್ರಿಕೆಗಳಲ್ಲಿ ಪ್ರಕಟವಾದರೆ ಅವರಿಗಾಗುವ ಸಂತೋಷ ಹೇಳತೀರದಷ್ಟು.  ಬರಹಗಳನ್ನು ಸಂಗ್ರಹಿಸಿ ಒಂದು ಕಡೆ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂದರೆ, ಹಣದ ತೊಂದರೆ..!!  ಒಂದು ವೇಳೆ ಹೇಗೋ ಹಣವನ್ನು ಹೊಂದಿಸಿ, ಪುಸ್ತಕವನ್ನು ಪ್ರಕಟಿಸಿದರೆ ಪುಸ್ತಕಗಳನ್ನು ಮಾರುವ, ಹಂಚುವ, ಸಂಕಟಗಳು ಹಲವು‌‌..ಪುಸ್ತಕ ಕುರಿತ  ಒಂದು ದೃಷ್ಟಾಂತ ಹೀಗಿದೆ,
“ನೀವು ಬಸ್ ನಿಲ್ದಾಣದಲ್ಲಿಯಾಗಲಿ ಅಥವಾ ಸಾರ್ವಜನಿಕರು ಸೇರುವ ಸ್ಥಳದಲ್ಲಿಯಾಗಲಿ ಪುಸ್ತಕ ಮತ್ತು ಬಟ್ಟೆ ಅಥವಾ ಇತರ ವಸ್ತುಗಳನ್ನು ಬಿಟ್ಟು ಹೋದರೆ, ಜನರು ಅಲ್ಲಿರುವ ಬಟ್ಟೆಗಳನ್ನು ಬೇರೆ ಬೇರೆ ವಸ್ತುಗಳನ್ನು ಒಯ್ಯುತ್ತಾರೆಯೇ ಹೊರತು ಪುಸ್ತಕಗಳನ್ನಲ್ಲ..!!  ಪುಸ್ತಕಗಳನ್ನು ಹಾಗೆ ಬಿಟ್ಟು ಹೋಗುತ್ತಾರೆ” ಎನ್ನುವ ದೃಷ್ಟಾಂತ. ಇಂದಿನ ಜನರು ಪುಸ್ತಕಕ್ಕೆ ಕೊಡುವ ಮಹತ್ವದ, ಅಭಿರುಚಿ,ಅರಿವು ನಮಗಾಗುತ್ತದೆ.

 ಪುಸ್ತಕವೆಂದರೆ, ಅದು ನಮ್ಮ ಸ್ನೇಹಿತನಿದ್ದಂತೆ. ಇಂತಹ ಪುಸ್ತಕಗಳನ್ನು ಹೊರತರುವುದು ದೊಡ್ಡ ಸಾಹಸವೇ ಸರಿ. ದೊಡ್ಡ ದೊಡ್ಡ ಪ್ರಕಾಶಕರು ಪ್ರಕಟಿಸುವ ಸಾಕಷ್ಟು ಪುಸ್ತಕಗಳ ನಡುವೆ ಒಬ್ಬ ಯುವ ಸಾಹಿತಿ ಪುಸ್ತಕ ಪ್ರಕಟಿಸುವ ಸಾಹಸ ಮಾಡುವುದು ಅಷ್ಟು ಸುಲಭವಲ್ಲ. ಈಗಾಗಲೇ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರುವ ಕವಿ, ಕವಯತ್ರಿಯರ ಪುಸ್ತಕಗಳನ್ನು ಮಾತ್ರ ಪ್ರಕಾಶಕರು ಪ್ರಕಟಿಸುತ್ತಾರೆ. ಅವರಿಗೆ ಇಂತಿಷ್ಟು ಪ್ರತಿಗಳೆಂದು ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಆದರೆ ಸಾಹಿತ್ಯ ಲೋಕಕ್ಕೆ ಹೊಸ ಹೆಜ್ಜೆ ಇಡುವ ಯುವಬರಹಗಾರರನ್ನು ಪ್ರೋತ್ಸಾಹಿಸುವ ಸಾಹಸದ ಕೆಲಸವನ್ನು ಯಾವ ಪ್ರಕಾಶಕರು ತಾನೇ ಮಾಡುತ್ತಾರೆ ಹೇಳಿ..??   ಯುವ ಸಾಹಿತಿಗಳನ್ನು ಪರಿಚಯಿಸುವುದು  ಅಪರೂಪವಾಗಿದೆ.  ಹಾಗಾಗಿ ಕರ್ನಾಟಕ ಸರ್ಕಾರವು ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವರಿಗೆ ಪ್ರೋತ್ಸಾಹ ಧನವನ್ನು ನೀಡಿ ಪುಸ್ತಕ ಪ್ರಕಟಿಸಲು ಸಹಾಯ ಮಾಡುತ್ತದೆ. ಹೀಗೆ ಪುಸ್ತಕ ಪ್ರಕಟಿಸುವ ಸಂಕಟಗಳ ಅನಾವರಣ ನಮ್ಮ ವೈಯಕ್ತಿಕ ಬದುಕಿನಲ್ಲಿಯೂ ಅನೇಕ ಸಂಕಟಗಳನ್ನು ತರುತ್ತದೆ.

ಸಾಹಿತಿ, ಕವಿ, ಸೃಜನಶೀಲ ವ್ಯಕ್ತಿ  ಸಾಹಿತ್ಯದ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮನೆಯನ್ನು ಬಿಟ್ಟು, ಸಮಾಜದೊಂದಿಗೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಹೋಗುತ್ತಿರುತ್ತಾರೆ. ಇದು ಉತ್ತಮ ಬೆಳವಣಿಗೆಯಾದರೂ ಮನೆಯಲ್ಲಿ ಇದನ್ನು ಸದಾ ವಿರೋಧಿಸುತ್ತಾರೆ. ಕೆಲವು ಮನೆಯವರು ಪ್ರೋತ್ಸಾಹಿಸುತ್ತಾರೆಯಾದರೂ ಅಪರೂಪವಾಗಿದೆ. ಈ ಸಮಯದಲ್ಲಿ ಸುಮಾರು 80 ಪೇಜಿ ನ ಒಂದು ಪುಸ್ತಕ ಪ್ರಕಟಿಸಲು 30 ರಿಂದ 32 ಸಾವಿರ ರೂಪಾಯಿಯವರೆಗೂ ಹೊಂದಿಸಬೇಕು. ಪುಸ್ತಕ ಪ್ರಕಟಣೆಗೆ ಕೈ ಹಾಕಿದರೆ ಮನೆಯವರಿಂದ ಮೊದಲು ಬೈಗುಳ ಪ್ರಾರಂಭ..!!  ಹ್ಯಾಗೋ ಒಂದು ಪುಸ್ತಕ ಯುವ ಸಾಹಿತಿಯಿಂದ ಹೊರ ಬಂದರೆ ಆತನಿಗಾಗುವ ಸಂಭ್ರಮ, ಸಡಗರ ಹೇಗಿರುತ್ತದೆ ಎಂದರೆ, ಒಬ್ಬ ತುಂಬು ಗರ್ಭಿಣಿ ಮಹಿಳೆಗೆ ಹೆರಿಗೆಯಾಗಿ, ಸಂಕಟಪಡುವ ಸಮಯದಲ್ಲಿಯೂ ಮುಗುಳ್ನಗೆ ಬೀರುತ್ತಾ, ತನ್ನ ಮುದ್ದು ಮಗುವನ್ನು ಅಪ್ಪಿಕೊಂಡ ಸಂಭ್ರಮದಂತೆ…!!  ಅಂತಹ ಸಂಭ್ರಮದ ಸಂದರ್ಭ ಆ ಯುವ  ಸಾಹಿತಿಗೆ.  ಸಾಹಿತಿಯು ಪ್ರಕಟಿಸಿದ ಪುಸ್ತಕ ಕೊಳ್ಳುವವರು ಇಂದು ತುಂಬಾ ವಿರಳ.  ಇಂತಹ ಪುಸ್ತಕವನ್ನು ಸಾರ್ವಜನಿಕ ಗ್ರಂಥಾಲಯದವರು ಮೂರು ವರ್ಷಗಳ ನಂತರ ಖರೀದಿಸುತ್ತಿರುವುದು ಸೊಜಿಗ ಮತ್ತು ವಾಸ್ತವ ದುರಂತವೆಂದೇ ಹೇಳಬಹುದು..!!  

“ತಾನು ಹಾಕಿದ ಬಂಡವಾಳ ವಾಪಾಸ್ಸು ಬರಲ್ವಾ..?”  ಎನ್ನುವ ನೋವು ಒಂದು ಕಡೆಯಾದರೆ, ಹಿರಿಯ ಸಾಹಿತಿಗಳಿಂದ ತನ್ನ ಪುಸ್ತಕದ ಬಗ್ಗೆ ನಾಲ್ಕು ಹಿತನುಡಿಗಳನ್ನಾಡದೆ ವಿಮರ್ಶಾತ್ಮಕ ಕಟು ಟೀಕೆಗಳನ್ನು ಹೆದರಿಸುವ ನೋವು ಇನ್ನೊಂದೆಡೆ. ಅಲ್ಲದೆ ಮೂರು ವರ್ಷಗಳ ನಂತರ ಆ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಸಾಗಿಸಬೇಕೆಂದರೆ ಮನೆಯ ಮೂಲೆಯಲ್ಲಿ ಸಂಗ್ರಹಿಸಿದ ಪುಸ್ತಕಗಳು  ಇಲಿರಾಯನ ಹಲ್ಲಿಗೆ ಬಲಿಯಾಗಿ,ತುಂಡು ತುಂಡಾಗಿರುವುದು,  ಭಾಗಶಃ ಹರಿದು ಹೋದ ಪುಸ್ತಕಗಳ ದರ್ಶನ…!! ಇದನ್ನು ನೋಡಿದಾಗ ಎದೆ ಜಲ್ಲೆಂದು ಬಿಡುತ್ತದೆ.‌

ಹೀಗೆ ಒಬ್ಬ ಬರಹಗಾರನಿಗೆ ಪುಸ್ತಕ ಪ್ರಕಟಿಸುವ ಸಾಹಸ ಒಂದಲ್ಲ ಎರಡಲ್ಲ ಹೇಳತೀರದ ಸಂಕಟಗಳು  ಎದೆಯೊಳಗೆ ಉಳಿದುಬಿಡುತ್ತವೆ.  ಹಾಗೋ ಹಿಗೋ ಮಾಡಿ ಹೊಂದಿಸಿಕೊಂಡ ಪುಸ್ತಕಗಳು ಗ್ರಂಥಾಲಯಕ್ಕೆ ಕಳುಹಿಸುವ ಸಂಕಟಗಳು ಬೇರೆ, ಬಿಲ್ಲುಗಳನ್ನು ಹೊಂದಿಸುವ, ಪುಸ್ತಕಗಳನ್ನು ಕಟ್ಟಾಗಿ ಕಟ್ಟಿ ಒಂದು ಕಡೆ ಹೊಂದಿಸುವ, ಅವುಗಳನ್ನು ಅಂಚೆ ಕಚೇರಿಯ ಮೂಲಕ ಕಳುಹಿಸಿದರೆ ಮುಟ್ಟುತ್ತವೆಯೋ ಇಲ್ಲವೋ ಎನ್ನುವ ಆತಂಕ ಬೇರೆ..!!  ಬೆಂಗಳೂರಿಗೆ ಹೋಗಿ ಸರದಿ ಸಾರಿನಲ್ಲಿ ನಿಂತು ಪುಸ್ತಕಗಳನ್ನು ಕೊಟ್ಟು ಬರುವ ಸಾಹಸವಿದೆಯಲ್ಲ ; ಶ್ರಮಜೀವಿ ಹಮಾಲಿ ಅಣ್ಣನ ಬೆವರಿನ ಹನಿಗಳ ಮಹತ್ವ  ಆಗ ನಮಗೆ ಅನುಭವಕ್ಕೆ ಬಂದೇ ಬರುತ್ತವೆ.  ಆ ನೋವು ಅನುಭವಿಸಿದ ನನಗೂ  ಪುಸ್ತಕ ಪ್ರಕಟಿಸುವುದು ಬೇಡವೆನಿಸಿ, ಆ ಕ್ಷಣ ಒಂದು ರೀತಿಯ ವಿಷಾದ, ಶೂನ್ಯ, ಮನಸ್ಸು ಆವರಿಸಿಬಿಡುತ್ತದೆ. “ಇನ್ನು ಮುಂದೆ ಬರೆಯುವುದು ಬೇಡ ಎನಿಸುತ್ತದೆ” ಆದರೆ ಸಂಸಾರಿಯು ಸನ್ಯಾಸಿಯಾಗಬೇಕೆಂಬ  ನಿರ್ಧಾರ ತಾತ್ಕಾಲಿಕ..!!  ಕೆಲವೇ ಕ್ಷಣಗಳಲ್ಲಿ ಕರಗಿ ಹೋಗುತ್ತದೆ. ಮತ್ತೆ ಭಾವನೆಗಳು ಕಾಡಿ ಬರಹದ ಕಡೆಗೆ ವಾಲುವುದು ನಮ್ಮ ಬದುಕಿನ ಜೀವಂತಿಗೆ ಹಿಡಿದ ಕನ್ನಡಿ. ಹೀಗೆ ಪುಸ್ತಕ ಪ್ರಕಟಿಸುವ  ಯುವಕವಿಗಳು ಪಡುವ ಪಾಡು ಹೇಳುತಿರದು.

ಇನ್ನೂ ದೊಡ್ಡ ದೊಡ್ಡ ಪ್ರಕಾಶಕರು, ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸುತ್ತಾರೆ.  ಲಕ್ಷ ಲಕ್ಷ ಬಂಡವಾಳ ಹೂಡಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ ಕವಿಗಳನ್ನು, ಸಾಹಿತಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗಿಂತಿಷ್ಟು ಪ್ರತಿಗಳನ್ನು ಕೊಟ್ಟು ಪುಸ್ತಕಗಳನ್ನು ಪ್ರಕಟಿಸುತ್ತಾರೆ.  ಅನೇಕ ಪ್ರಕಾಶಕರು ಎರಡು ಮೂರು ವರ್ಷಗಳ ಕಾಲ ಪುಸ್ತಕವನ್ನು ಪ್ರಕಟಿಸುವುದಿಲ್ಲ,  ಕವಿಗಳಿಗೆ ಬೇಕಾದ ಕೇವಲ  ಪತ್ರಿಗಳನ್ನು ಕೊಟ್ಟು ನಂತರ ಸಾರ್ವಜನಿಕ ಗ್ರಂಥಾಲಯಕ್ಕೆ ಬೇಕಾದ ಪುಸ್ತಕದ  ಪ್ರತಿಗಳನ್ನು ತಮಗೆ ಬೇಕಾದಾಗ ಅಚ್ಚು ಹಾಕಿಸಿಕೊಳ್ಳುವುದನ್ನು ನಾವು  ಕೇಳಿಸಿಕೊಂಡಿರುವುದು ದುರಂತವೆನಿಸುತ್ತದೆ.

 ಒಂದು ಕಾಲದಲ್ಲಿ ಪುಸ್ತಕ ಲೋಕವೆಂದರೆ ಅದೊಂದು ಶುದ್ಧ ಸತ್ಯ  ಲೋಕವೆಂದು ಭಾವಿಸಿಕೊಂಡ ನನ್ನಂತಹವನಿಗೆ ಹೀಗೂ ಉಂಟೆ..? ಎಂದು ಆಶ್ಚರ್ಯಚಿಕಿತವಾಗಿ ಮೈಮನ ನಡುಗುತ್ತದೆ.  ಅಲ್ಲಿ ನಡೆಯುವ ದುರಾಚಾರಗಳು, ಕಮಿಷನ್ ವ್ಯವಹಾರಗಳು, ಹೊಸ ಬರಹಗಾರನಿಗೆ ಗೊತ್ತೇಯಾಗುವುದಿಲ್ಲ. ಇವೆಲ್ಲವನ್ನು ಮೀರಿ ದೊಡ್ಡ ದೊಡ್ಡ ಪ್ರಕಾಶಕರು ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಕ್ಕೆ ಪೂರೈಸುತ್ತಾರೆ. ಒಂದು ಪುಸ್ತಕ ಪ್ರಕಟಿಸಿದ ನಂತರ ಮೂರು ವರ್ಷಗಳಿಗೆ ಕಾಯುವದಿದೆಯಲ್ಲ, ಹಾಕಿದ ಬಂಡವಾಳವೂ ಬರಲಿಲ್ಲ ಎನ್ನುವ ನೋವು ಕಾಡದೇ ಇರುವುದಿಲ್ಲ. ಲೇಖಕರನ್ನು ನೆಚ್ಚಿ ಪ್ರಕಾಶಕರು, ಪ್ರಕಾಶಕರನ್ನು ನೆಚ್ಚಿ ಲೇಖಕರು, ಗ್ರಂಥಾಲಯದ ಅಧಿಕಾರಿಗಳನ್ನು ನೆಚ್ಚಿ, ಪ್ರಕಾಶಕರು… ಹೀಗೆ ಹಲವಾರು ದ್ವಂದ್ವ ಗೊಂದಲಗಳ ಸಂಬಂಧಗಳೇ  ಪುಸ್ತಕ ಪ್ರಕಟಣೆಯ ಹೆದ್ದಾರಿಯಾಗಿದೆ.

ಇದಕ್ಕೆ ಪ್ರಜಸತ್ತಾತ್ಮಕ ಸರಕಾರಗಳು ನೇರವಾಗಿ  ಪುಸ್ತಕಗಳನ್ನು ಪ್ರಕಟಿಸುವ ಹೊಣೆಗಾರಿಕೆ ಹೊರಬೇಕು. ಯಾವಾಗ ಹೊಸ ಬರಹಗಾರರನ್ನು ಗುರುತಿಸಿ, ಅವರ ಸಾಹಿತ್ಯವನ್ನು ಪ್ರಕಟಿಸುವ ಸರ್ಕಾರದ ಕೆಲಸವಾದರೆ ಎಷ್ಟೊಂದು ಸುಲಭವಲ್ಲವೇ..?  ಯಾರದೋ ಮರ್ಜಿಗೆ ಬಿದ್ದು ಸಾಹಿತ್ಯವನ್ನು, ಬರಹಗಳನ್ನು ಅವರಿಗೆ ಕೊಟ್ಟು ವರ್ಷಾನುಗಟ್ಟಲೆ ಕಾದು ಪುಸ್ತಕ ಬರದಿದ್ದಾಗ ಸಂಕಟಪಟ್ಟವರು ಉಂಟು…!!  ಪುಸ್ತಕ ಪ್ರಕಟಿಸುವ ಯೋಜನೆಗಳು ಪರಿಷ್ಕರಿಸಬೇಕಾದ ಅಗತ್ಯ ಇಂದು ಸಾಕಷ್ಟಿದೆ. ಸರ್ಕಾರ ಗಮನಹರಿಸಬೇಕು. ಹೊಸ ಸಮಿತಿಗಳನ್ನು ರಚಿಸಿ, ಪುಸ್ತಕ ಪ್ರಕಾಶನ ಮಾಡಿಸುವುದಾದರೇ ಪುಸ್ತಕ ಪ್ರಕಟಿಸುವ ಒಲವು ಮಾಡಬಲ್ಲದು. ಪುಸ್ತಕದ ಬಗ್ಗೆ ನಾವು ಒಲವಧಾರೆಯನ್ನು ಹರಿಸಬೇಕಾಗಿದೆ.


One thought on “

  1. ಸ್ವರಚನೆಯ ಪುಸ್ತಕ ಪ್ರಕಟಿಸುವವರ ಬವಣೆಯ ಚಿತ್ರಣ ಸೊಗಸಾಗಿ ಮೂಡಿಬಂದಿದೆ. ಅಭಿನಂದನೆಗಳು.

Leave a Reply

Back To Top