“ಈ ಪೆದ್ದು ಅಮ್ಮನಿಗೆ ನೀನೇ ಜಗತ್ತು”ಇಂದಿರಾ.ಕೆ

ಈರೆಂಟು ವರುಷಗಳು ಕಳೆದವು
ನೀ ನನ್ನ ಮಡಿಲ ತುಂಬಿ
ಮತ್ತೊಮ್ಮೆ ಉಡುಗೊರೆಯಾಗಿ ನೀಡಿದೆ
ಈ “ಅಮ್ಮ ” ಎಂಬ ಪದವಿ

ಅಂದಿನಿಂದಲೇ ಜಾರಿಯಾಯಿತು
ಅಮ್ಮನಿಗೆ ಆ ನಿನ್ನ ಜವಾಬ್ದಾರಿ
ಬದುಕಿಸಿದೆ ನನ್ನೆಲ್ಲಾ ಕನಸಾಗಿ
ಭರವಸೆಯಾಗಿ ನೀ ನನ್ನ ಸೇರಿ
ಆರಂಭವಾಯಿತು ಈ ‘ ಅಮ್ಮನ ಪಯಣ …

ನನ್ನ ಕೈ ಬೆರಳು ಹಿಡಿದಿರುವ
ಆ ಪುಟ್ಟ ಕರಗಳಲಿ ಕರಗಿ ಹೋಗುತ್ತಾ, ನಿನ್ನ ಕಿರುಕಂಗಳ
ಸನ್ನೆಯಲಿ ಮಾತನಾಡುತ್ತಾ, ಬೆಚ್ಚಗಿನ ಸ್ಪರ್ಷವ ಆನಂದಿಸುತ್ತಾ, ನಿನ್ನ ತೊದಲ ನುಡಿಗೆ ಬೆರಗಾಗುತ್ತಾ, ನಿನ್ನ ಪುಟ್ಟ ಹೆಜ್ಜೆಗಳ ಸುತ್ತಾ ಅಲೆಯುತ್ತಾ, ನಿನ್ನ ನಿದಿರೆಗೆ ಜೋಗುಳವ ಹಾಡುತ್ತಾ, ನಿನ್ನ ಆಳುವ ಸಂತೈಸುತ್ತಾ, ನನ್ನೆಲ್ಲಾ ಖುಷಿಗಳನ್ನು ನಿನಗಾಗಿ ಕೂಡಿಡುತ್ತಾ, ನನ್ನೆಲ್ಲಾ ಸಂಭ್ರಮವನ್ನು ನಿನಗಾಗಿ ಸಂಗ್ರಹಿಸುತ್ತಾ, ನನ್ನೆಲ್ಲಾ ಆನಂದಗಳನ್ನು ನಿನ್ನಲ್ಲಿಗೆ ಆಹ್ವಾನಿಸುತ್ತಾ, ನನ್ನನ್ನೇ ಮರೆತು ಹೋದೆ
ನಿನ್ನದೇ ಲೋಕದಲಿ…
ನಿನ್ನದೇ ಪರಪಂಚದಲಿ…

ದಿನಗಳು ಉರುಳಿದಂತೆ
ಬೆಳೆದು ನಿಂತೆ
ಅಣ್ಣನ ಪ್ರತಿಸ್ಪರ್ಧಿಯಾಗಿ
ಅಪ್ಪನ ಪ್ರತಿರೂಪವಾಗಿ
ಅಮ್ಮನ ಪ್ರೀತಿಯಲಿ
ಪ್ರಥಮನಾಗಿ…
ಆದರೂ ನಿಮ್ಮಲ್ಲಿನ ಹಠಕ್ಕೆ ಪ್ರತಿಕ್ಷಣವೂ ಸೋತಿರುವ – ಸೋಲುತಿರುವ “

ಈ ಪೆದ್ದು ಅಮ್ಮನಿಗೆ ನೀನೇ ಜಗತ್ತು”…..


3 thoughts on ““ಈ ಪೆದ್ದು ಅಮ್ಮನಿಗೆ ನೀನೇ ಜಗತ್ತು”ಇಂದಿರಾ.ಕೆ

  1. ಅದ್ಭುತವಾಗಿದೆ, ಅಮ್ಮನ ಮನದಾಳದ ಕವಿತೆ. ಅಭಿನಂದನೆಗಳು ಮೇಡಂ

  2. ತಾಯಿಗೆ ಮಕ್ಕಳೇ ಸರ್ವಸ್ವ ಸುಂದರ ಕವಿತೆ

Leave a Reply

Back To Top